ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದ ಹೊನಲಿನಲ್ಲಿ ಸಂವಾದಗಳ ಹಾಯಿದೋಣಿ!

ಬೆಂಗಳೂರು ಸಾಹಿತ್ಯೋತ್ಸವಕ್ಕೆ ಭರದ ಸಿದ್ಧತೆ: ಸಮಕಾಲೀನ ವಿದ್ಯಮಾನಗಳೊಂದಿಗೆ ಮುಖಾಮುಖಿ
Last Updated 8 ಡಿಸೆಂಬರ್ 2016, 19:56 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕು ವರ್ಷಗಳಿಂದ ನಗರದ ಸಂಸ್ಕೃತಿಯೊಳಗೆ ಹಾಸುಹೊಕ್ಕಾಗಿರುವ ಬೆಂಗಳೂರು ಸಾಹಿತ್ಯೋತ್ಸವ (ಬಿಎಲ್‌
ಎಫ್‌) ಡಿಸೆಂಬರ್‌ನ ಈ ಮಾಗಿ ಚಳಿಯಲ್ಲಿ ಸಾಹಿತ್ಯಾಸಕ್ತ ಮನಸ್ಸುಗಳನ್ನು   ಬೆಚ್ಚಗಾಗಿಸಲು ಮತ್ತೆ ಬಂದಿದೆ.

ಎರಡು ದಿನಗಳ ಈ ಸಾಹಿತ್ಯದ ಹೊನಲಿನಲ್ಲಿ ಸಂವಾದಗಳ ಹಲವು ಹಾಯಿದೋಣಿಗಳು ತೇಲಿ ಬರಲಿವೆ. ಈ ಸಲ ಯಾವುದೇ ವಾದಕ್ಕೆ ಅಂಟಿಕೊಳ್ಳದೆ ಎಲ್ಲ ವಿಚಾರಧಾರೆ, ಸಿದ್ಧಾಂತಗಳಿಗೂ ವೇದಿಕೆ ಕಲ್ಪಿಸುವುದು ಸಂಘಟಕರ ಆಶಯವಾಗಿದೆ.

ಯಾವುದೇ ಕಾರ್ಪೊರೇಟ್‌ ಸಂಸ್ಥೆಯ ಬೆಂಬಲವಿಲ್ಲದೆ ಜನ ಸಮುದಾಯವೇ ಹಣ ಕಲೆಹಾಕಿ ನಡೆಸುತ್ತಿರುವ ಉತ್ಸವ ಇದಾಗಿದೆ. ಇದುವರೆಗೆ ನಾಲ್ಕು ಉತ್ಸವ ಸಂಘಟಿಸಿರುವ ‘ಬಿಎಲ್‌ಫ್‌ ಸಂಘಟನಾ ತಂಡ’ ಐದನೇ ಉತ್ಸವದ ಆತಿಥ್ಯಕ್ಕಾಗಿ ಸಜ್ಜಾಗಿದೆ. ಹಳೆಯ ವಿಮಾನ ರಸ್ತೆಯ ಹೋಟೆಲ್‌ ರಾಯಲ್‌ ಆರ್ಕಿಡ್‌ನಲ್ಲಿ ಡಿ. 17 ಹಾಗೂ 18ರಂದು ಈ ಉತ್ಸವ ನಡೆಯಲಿದೆ.

ಗುಲ್ಜಾರ್‌, ಶುಭಾ ಮುದ್ಗಲ್‌, ರಾಮಚಂದ್ರ ಗುಹಾ, ಅರುಣ್‌ ಶೌರಿ, ಚಂದ್ರಶೇಖರ ಕಂಬಾರ ಅವರಂತಹ ಹಿರಿಯರಿಂದ ಹಿಡಿದು ರಾಣಿ ಮುಖರ್ಜಿ, ಚೇತನ್‌ ಭಗತ್‌, ಎನ್.ವಸುಧೇಂದ್ರ, ಎಂ.ವಿಶ್ವಾಸ್‌ ಅವರಂತಹ ಯುವಕರ ವರೆಗೆ ಎಲ್ಲ ವಯೋಮಾನದ ಸಾಧಕರನ್ನು ಪ್ರೀತಿಯಿಂದ ಕರೆದು, ಕೈಗೆ ಮೈಕ್‌ ಕೊಟ್ಟ ಉತ್ಸವ ಇದು.

‘ಸಾಹಿತ್ಯ, ಸಿನಿಮಾ, ಉದ್ಯಮ, ಭಾಷೆ... ಹೀಗೆ ನಾನಾ ಆಯಾಮಗಳಿಂದ ನಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳುವ  ಪ್ರಯತ್ನ ಈ ಉತ್ಸವದಲ್ಲಿ ನಡೆಯಲಿದೆ’ ಎನ್ನುತ್ತಾರೆ ಸಂಘಟನಾ ತಂಡದ ಸಲಹೆಗಾರ ವಿ.ರವಿಚಂದರ್‌.

 ಹಿಂದಿನ ನಾಲ್ಕು ಆವೃತ್ತಿಗಳಿಗಿಂತ ಈ ಸಲದ ಉತ್ಸವವನ್ನು ವಿಭಿನ್ನವಾಗಿ ನಡೆಸಲು ಉದ್ದೇಶಿಸಿರುವ ಸಂಘಟಕರು ಹಲವು ವಿಶಿಷ್ಟ ವೇದಿಕೆಗಳನ್ನು ಸೃಷ್ಟಿಸುತ್ತಿದ್ದಾರೆ. ಮಕ್ಕಳಿಗೂ ಉತ್ಸವದಲ್ಲಿ ಅವಕಾಶ ಒದಗಿಸಲು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮಕ್ಕಳ ಗೋಷ್ಠಿಗಾಗಿ ಪ್ರತ್ಯೇಕವಾದ ವೇದಿಕೆಯನ್ನೂ ವ್ಯವಸ್ಥೆ ಮಾಡಲಾಗಿದೆ. ಕೌಟುಂಬಿಕ ಉತ್ಸವ ಇದಾಗಬೇಕು ಎನ್ನುವುದು ಸಂಘಟಕರ ಆಶಯವಾಗಿದೆ.

ಹೊಸ ಲೇಖಕರನ್ನು ಪ್ರಕಾಶಕರು, ಸಾಹಿತ್ಯ ಕೃತಿಗಳ ಸಂಪಾದಕರು ಹಾಗೂ ಏಜೆಂಟರಿಗೆ ನೇರವಾಗಿ ಪರಿಚಯಿಸುವ ಲಿಟ್‌ಮಾರ್ಟ್‌ನಲ್ಲಿ ಅವಕಾಶ ಗಿಟ್ಟಿಸಲು ಈ ಸಲ ಭಾರಿ ಪೈಪೋಟಿ ಕಂಡುಬಂದಿದೆ. ಸುಮಾರು 250ಕ್ಕೂ ಅಧಿಕ ಯುವ ಲೇಖಕರು ತಮ್ಮ ಪರಿಕಲ್ಪನೆಯನ್ನು ಸಂಘಟಕರಿಗೆ ಕಳುಹಿಸಿ ಕೊಟ್ಟಿದ್ದರು. ಅಶೋಕ ಚೋಪ್ರಾ, ಮಿಲಿ ಐಶ್ವರ್ಯಾ, ದೀಪ್ತಿ ತಲ್ವಾರ್‌, ಜಿ.ಎಸ್‌. ಅಜಿತಾ, ರಷ್ಮಿ ಮೆನನ್‌, ತ್ರಿಷಾ ಬೋರಾ, ಸುಮಂತ್‌ ಬಾತ್ರಾ, ಸೆಲ್ಲಿ ಬ್ರೀನ್‌ ಅವರಿದ್ದ ತೀರ್ಪುಗಾರರ ಮಂಡಳಿ ಅವುಗಳಲ್ಲಿ 25 ಪರಿಕಲ್ಪನೆಗಳನ್ನು ಹೆಕ್ಕಿ ತೆಗೆದಿದೆ. ಈ ಪರಿಕಲ್ಪನೆಗಳ ಲೇಖಕರಿಗೆ ಉತ್ಸವದಲ್ಲಿ ಪ್ರಕಾಶಕರ ಜತೆ ಚರ್ಚಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಉತ್ಸವದಲ್ಲಿ ಬಿಡುಗಡೆ ಆಗಲಿರುವ ಕೃತಿಗಳ ಲೇಖಕರ ಜತೆ ಓದುಗರು ಸಂವಾದ ನಡೆಸಲು ಸಹ ವೇದಿಕೆ ಕಲ್ಪಿಸಲಾಗುತ್ತದೆ. ಸಣ್ಣ–ಸಣ್ಣ ಗುಂಪುಗಳು ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ಆ ಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ಹೇಳುತ್ತಾರೆ. ಸಭಿಕರಿಗೂ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಒದಗಿಸುವ ಉದ್ದೇಶದಿಂದ ಅವರ ಟ್ವೀಟ್‌ಗಳನ್ನು ದೊಡ್ಡ ಪರದೆ ಗಳ ಮೇಲೆ ಪ್ರದರ್ಶಿಸಲಾಗುತ್ತದೆ ಎಂದು ವಿವರಿಸುತ್ತಾರೆ.

ಮಲೆಯಾಳಿಗರು, ತಮಿಳರು ಮತ್ತು ಕನ್ನಡಿಗರು ಜತೆಯಾಗಿ ನಡೆಸುತ್ತಿರುವ ಉತ್ಸವವಿದು.  ಭಾಷಾ ವೈವಿಧ್ಯ ತುಂಬಿದೆ. ಎರಡೂ ದಿನಗಳಲ್ಲಿ ಇಂಗ್ಲಿಷ್‌ ಜತೆಗೆ ಕನ್ನಡದ ಗೋಷ್ಠಿಗಳು ನಡೆಯಲಿವೆ.

ಕನ್ನಡದ ಗೋಷ್ಠಿಗಳು
ಉತ್ಸವದ ಎರಡೂ ದಿನ ಕನ್ನಡದ ಗೋಷ್ಠಿಗಳು ನಡೆಯಲಿವೆ. ಗೋಷ್ಠಿಗಳ ವಿಷಯ ಹಾಗೂ ವಿಷಯ ಮಂಡನೆ ಮಾಡುವವರ ಹೆಸರು ಅಂತಿಮಗೊಳಿಸಲಾಗಿದೆ. ಆದರೆ, ಎಲ್ಲ ಗೋಷ್ಠಿಗಳ ದಿನ ಮತ್ತು ಸಮಯ ಇನ್ನೂ ನಿಗದಿಯಾಗಬೇಕಿದೆ.
ಗೋಷ್ಠಿ–1: ಸಾಹಿತ್ಯ ಮತ್ತು ಪ್ರಜಾಪ್ರಭುತ್ವ ಪರಿಕಲ್ಪನೆ: ಯು.ಆರ್‌. ಅನಂತಮೂರ್ತಿ ಅವರ ‘ಬರ’ ಕೃತಿ ಮೇಲೆ ಚರ್ಚೆ: ಶಿವ ವಿಶ್ವನಾಥನ್‌, ಸೈಕತ್‌ ಮಜುಂದಾರ್‌, ಶಂಕರ್‌ ರಾಮಸ್ವಾಮಿ, ಪ್ರಶಾಂತ್‌ ಕೇಶವಮೂರ್ತಿ, ಚಂದನ್‌ ಗೌಡ
ಗೋಷ್ಠಿ–2: ಅನುವಾದ ಸಾಹಿತ್ಯ: ಪೃಥ್ವಿದತ್ತ ಚಂದ್ರ ಶೋಭಿ, ಸವಿತಾ ಕೊರಗ, ಶ್ರೀಧರ್‌ ಗೌಡ
ಗೋಷ್ಠಿ–3: ಹಾಸ್ಯ ಸಂಜೆ: ಅಚ್ಯುತ ರಾವ್‌ ಪದಕಿ
ಗೋಷ್ಠಿ–4: ದೇಶ–ಕಾಲದಲ್ಲಿ ಕಾವ್ಯ: ಪ್ರತಿಭಾ ನಂದಕುಮಾರ್‌ ಅವರೊಂದಿಗೆ ವಿವೇಕ ಶಾನಭಾಗ ಸಂವಾದ
ಗೋಷ್ಠಿ–5: ಕಥಾ ಸಾಗರ: ಎಸ್‌.ದಿವಾಕರ್‌ ಜತೆ ಎಂ.ಎಸ್‌. ಶ್ರೀರಾಮ್‌ ಸಂವಾದ
ಗೋಷ್ಠಿ–6: ಇಂಗ್ಲಿಷ್‌ನಲ್ಲಿ ಸ್ಥಳೀಯ ಭಾಷೆಗಳ ಬದುಕು: ಸೈಕತ್‌ ಮಜುಂದಾರ್‌ ಅವರೊಂದಿಗೆ ವಿವೇಕ ಶಾನಭಾಗ ಸಂವಾದ

ಅಡೂರು ಅವರಿಂದ ಕನ್ಹಯ್ಯವರೆಗೆ
ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಈ ಸಲ ಲೇಖಕರು ಹಾಗೂ ವರ್ಷದುದ್ದಕ್ಕೂ ಸುದ್ದಿಯಲ್ಲಿದ್ದವರ ದೊಡ್ಡ ಪಡೆಯೇ ಸೇರಲಿದೆ. ಅದರಲ್ಲಿ ಕನ್ಹಯ್ಯ ಕುಮಾರ್‌, ಬೆಜವಾಡ ವಿಲ್ಸ್‌ನ್‌, ಮಾರ್ಗರೇಟ್‌ ಆಳ್ವಾ, ರಮ್ಯಾ ಸಹ ಇದ್ದಾರೆ. ಉತ್ಸವದ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವವರ ವಿವರ ಹೀಗಿದೆ: ಅಡೂರು ಗೋಪಾಲಕೃಷ್ಣ, ಆಕಾರ್‌ ಪಟೇಲ್‌, ರಾಮಚಂದ್ರ ಗುಹಾ, ಗುರುಚರಣ್‌ ದಾಸ್‌, ಕಲ್ಯಾಣರಾಮನ್‌ ದುರ್ಗಾದಾಸ್, ಆನಂದ್‌ ನೀಲಕಂಠನ್‌, ಬೆಜವಾಡ ವಿಲ್ಸನ್‌, ಮಿಹಿರ್‌ ಶರ್ಮಾ, ಎಂ.ಎಸ್‌. ಶ್ರೀರಾಮ್‌, ನಂದಿತಾ ಬೋಸ್‌, ಮನ್ವೀರ್‌ ಭಾಟಿಯಾ, ಮಾರ್ಗರೇಟ್‌ ಆಳ್ವಾ, ಕನ್ಹಯ್ಯ ಕುಮಾರ್‌, ರಘು ಕಾರ್ನಾಡ, ರಾಜೀವ್‌ ಮಲ್ಹೋತ್ರಾ, ರಜತಿ ಸಲ್ಮಾ, ಪ್ರತಿಭಾ ನಂದಕುಮಾರ್‌, ಪ್ರಸನ್ನ ವಿಶ್ವನಾಥನ್‌, ಶಿವ ವಿಶ್ವನಾಥನ್‌, ಸುರೇಶ್‌ ಹಿಂದುಜಾ, ವಾಸಂತಿ ಹರಿಪ್ರಕಾಶ್‌, ವಿವೇಕ ಶಾನಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT