ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡ–ಬಲದ ನಡುವೆ ‘ಬಿಎಲ್‌ಎಫ್‌’ ಸೇತುವೆ

Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಬದಲಾದ ಕಾಲಮಾನಕ್ಕೆ ತಕ್ಕಂತೆ ಸಾಹಿತ್ಯದ ರೂಪು ರೇಷೆ ಬದಲಾದಂತೆ, ಸಾಹಿತ್ಯವನ್ನು ಗ್ರಹಿಸುವ ಕ್ರಮಗಳೂ ಬದಲಾಗುತ್ತವೆ. ಹಾಗೆಯೇ ಅದನ್ನು ಚರ್ಚಿಸುವ ಪರಿ, ಸಂವಾದಗಳ ಪರಿಕಲ್ಪನೆ, ಗೋಷ್ಠಿ–ಉತ್ಸವಗಳ ಸ್ವರೂಪಗಳೂ ಬದಲಾಗುತ್ತಲೇ ಇರುತ್ತವೆ. ಸಾಹಿತ್ಯ–ಸಂಸ್ಕೃತಿಗೆ ಮುಖಾಮುಖಿಯಾಗುವ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ‘ಸಾಹಿತ್ಯ ಉತ್ಸವ’ಗಳು ಇಂಥದ್ದೊಂದು ಕ್ರಮ. 
 
ಕಳೆದ ಕೆಲವು ವರ್ಷಗಳಿಂದ ದೇಶದ ಹಲವು ಮಹಾನಗರಗಳಲ್ಲಿ ‘ಸಾಹಿತ್ಯ ಉತ್ಸವ’ಗಳು ಒಂದು ಸಂಸ್ಕೃತಿಯಾಗಿ ಬೆಳೆಯುತ್ತಿವೆ. ‘ಜೈಪುರ ಸಾಹಿತ್ಯ ಉತ್ಸವ’, ‘ಮುಂಬೈ ಲಿಟ್‌ ಓ ಫೆಸ್ಟ್‌’, ‘ಗೋವಾ ಕಲಾ ಮತ್ತು ಸಾಹಿತ್ಯ ಉತ್ಸವ’ ಹೀಗೆ ಹಲವು ಉದಾಹರಣೆಗಳನ್ನು ನೀಡಬಹುದು. ಇಂಥದ್ದೇ ಇನ್ನೊಂದು ಸಾಹಿತ್ಯ ಉತ್ಸವ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆದುಕೊಂಡು ಬರುತ್ತಿದೆ. 
‘ಬೆಂಗಳೂರು ಸಾಹಿತ್ಯ ಉತ್ಸವ’ದ (ಬಿಎಲ್‌ಎಫ್‌) ಐದನೇ ಆವೃತ್ತಿ ಇದೇ ತಿಂಗಳ 17 ಮತ್ತು 18ರಂದು ರಾಯಲ್‌ ಆರ್ಕಿಡ್‌ ಹೊಟೇಲ್‌ನಲ್ಲಿ  ನಡೆಯಲಿದೆ.
‘ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ’ ಎನ್ನುವ ಹಿನ್ನೆಲೆಯಲ್ಲಿ ಲೇಖಕರು ತಮಗೆ ಸಂದ ಪ್ರಶಸ್ತಿಗಳನ್ನು ಹಿಂತಿರುಗಿಸುವ ಒಂದು ಚಳವಳಿ ಕಳೆದ ವರ್ಷ ದೇಶದಾದ್ಯಂತ ಸುದ್ದಿ ಮಾಡಿತ್ತು. ಅಸಹಿಷ್ಣುತೆ ಕುರಿತಂತೆ,  ‘ಬಿಎಲ್‌ಎಫ್‌’ ಆಯೋಜಕರಲ್ಲಿ ಒಬ್ಬರಾಗಿದ್ದ ವಿಕ್ರಂ ಸಂಪತ್‌ ತಳೆದ ನಿಲುವನ್ನು ಕನ್ನಡದ ಕೆಲವು ಲೇಖಕರು ವಿರೋಧಿಸಿದ್ದರು. ಹಾಗಾಗಿ, ಕಳೆದ ವರ್ಷದ ಈ ಸಾಹಿತ್ಯ ಉತ್ಸವ ಸಾಕಷ್ಟು ಸುದ್ದಿಯಾಗಿತ್ತು. ‘ಈ ವರ್ಷ ತೊಡಕುಗಳನ್ನು ನಿವಾರಿಸಿಕೊಂಡು, ಎಲ್ಲ ವಿಧದ ಆಲೋಚನಾಕ್ರಮಗಳಿಗೂ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಸಾಹಿತ್ಯ ಉತ್ಸವವನ್ನು ರೂಪಿಸಲಾಗಿದೆ’ ಎನ್ನುತ್ತಾರೆ ಆಯೋಜಕರಲ್ಲಿ ಒಬ್ಬರಾದ ವಿ. ರವಿಚಂದರ್‌.
‘ಹಿಂದಿನ ವರ್ಷ ಎಡ–ಬಲ ಪಂಥಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದ ಎದ್ದಿತ್ತು. ಆದರೆ ಈ ವರ್ಷ ಆ ರೀತಿಯ ವಿವಾದಗಳಿಗೆ ಎಡೆಮಾಡಿಕೊಡದೇ, ತಟಸ್ಥ ವೇದಿಕೆಯನ್ನಾಗಿ ಈ ಉತ್ಸವವನ್ನು ರೂಪಿಸುತ್ತಿದ್ದೇವೆ. ಎಡ ಮತ್ತು ಬಲ – ಎರಡು ಪಂಥಗಳಿಂದಲೂ ಸಂಪನ್ಮೂಲ ವ್ಯಕ್ತಿಗಳನ್ನು ಈ ಉತ್ಸವಕ್ಕೆ ಆಹ್ವಾನಿಸಲಾಗಿದೆ’ ಎನ್ನುತ್ತಾರೆ ಅವರು.
 
ಯಾವುದೋ ಒಂದು ವಿಷಯದ ಸುತ್ತಲೂ ಗೋಷ್ಠಿಗಳನ್ನು ಆಯೋಜಿಸದೆ ವಸ್ತು–ವಿಷಯ, ಕಾರ್ಯಕ್ರಮಗಳಲ್ಲಿ ವೈವಿಧ್ಯ ಕಾಪಾಡಿಕೊಳ್ಳಬೇಕು ಎನ್ನುವ ಎಚ್ಚರ ಈ ಸಲದ ಉತ್ಸವದ ಆಯೋಜನೆಯಲ್ಲಿ ಎದ್ದು ಕಾಣುತ್ತದೆ. ಈ ವೈವಿಧ್ಯವನ್ನು ರವಿಚಂದರ್‌ ಉದಾಹರಣೆ ಸಮೇತ ವಿವರಿಸುತ್ತಾರೆ.
 
‘ಮೊದಲ ಗೋಷ್ಠಿಯಲ್ಲಿ ಶಶಿ ತರೂರ್‌ ಅವರು ವಸಾಹತುಶಾಹಿ ಯುಗ, ಬ್ರಿಟಿಷ್‌ ಯುಗದ ಕುರಿತು ಮಾತನಾಡುತ್ತಾರೆ. ಅದೇ ದಿನ ಸಂಜೆ ಇತಿಹಾಸಕಾರ ರಾಮಚಂದ್ರ ಗುಹಾ ಕ್ರಿಕೆಟ್‌ ಕುರಿತು ಮಾತನಾಡಲಿದ್ದಾರೆ. 
 
ಎರಡು ಗೋಷ್ಠಿಗಳಲ್ಲಿ ಮಹಿಳಾಸಂಬಂಧಿ ವಿಷಯಗಳ ಚರ್ಚೆ ನಡೆಯಲಿದೆ. ಒಂದು ಗೋಷ್ಠಿಯಲ್ಲಿ ಚೇತನ್‌ ಭಗತ್‌ ಅವರು ಸುಧಾ ಮೂರ್ತಿ ಅವರ ಜತೆ ಸಂವಾದ ನಡೆಸಿದರೆ, ಇನ್ನೊಂದು ಗೋಷ್ಠಿಯಲ್ಲಿ – ವೃತ್ತಿಜೀವನ ಮತ್ತು ಕುಟುಂಬ ಪೋಷಣೆ ಎರಡನ್ನೂ ನಿರ್ವಹಿಸುತ್ತಿರುವ ಮಹಿಳೆಯರ ಸಮಸ್ಯೆ–ಸವಾಲುಗಳ ಕುರಿತಾಗಿ ಚರ್ಚಿಸಲಾಗುತ್ತದೆ’.
 
ಐದು ಗೋಷ್ಠಿಗಳನ್ನು ಕನ್ನಡ ಲೇಖಕರಿಗಾಗಿ ಇರಿಸಲಾಗಿದೆ. ವಿವೇಕ ಶಾನಭಾಗ, ಎಂ.ಎಸ್‌. ಶ್ರೀರಾಮ್‌, ಪ್ರತಿಭಾ ನಂದಕುಮಾರ್‌, ಎಸ್‌. ದಿವಾಕರ್‌ ಸೇರಿದಂತೆ ಹಲವು ಕನ್ನಡ ಲೇಖಕರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಚಂದನ್‌ ಗೌಡ ಅವರು ಅನಂತಮೂರ್ತಿ ಅವರ ‘ಬರ’ ಕಥೆಯ ಇಂಗ್ಲಿಷ್‌ ಅನುವಾದದ ಕುರಿತು ಮಾತನಾಡಲಿದ್ದಾರೆ.
 
ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ
ಈ ಸಲದ ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ಮಕ್ಕಳಿಗಾಗಿ ಸಾಕಷ್ಟು ಕಾರ್ಯಕ್ರಮಗಳಿವೆ. ‘ಮುಖ್ಯ ವಾಹಿನಿಯಲ್ಲಿ ಸಾಹಿತ್ಯದ ಚರ್ಚೆ ನಡೆಯುತ್ತಿರುವಂತೆಯೇ ಅದಕ್ಕೆ ಸಮಾನಾಂತರವಾಗಿ ಮಕ್ಕಳ ಸಾಹಿತ್ಯದ ಕುರಿತಾದ ಚರ್ಚೆ–ಚಟುವಟಿಕೆಗಳೂ ನಡೆಯುತ್ತಿರುತ್ತವೆ. ಇದೊಂದು ರೀತಿಯಲ್ಲಿ ಮಕ್ಕಳ ಸಾಹಿತ್ಯ ಉತ್ಸವವೂ ಹೌದು’ ಎನ್ನುತ್ತಾರೆ ರವಿಚಂದರ್‌.
(ರವಿಚಂದರ್‌)
ಸಾಮಾನ್ಯವಾಗಿ ಜನಪ್ರಿಯ ಲೇಖಕರು ಓದುಗರಿಗೆ ಹೆಚ್ಚೆಂದರೆ ಹಸ್ತಾಕ್ಷರ ತೆಗೆದುಕೊಳ್ಳಲಿಕ್ಕಷ್ಟೇ ಸಿಗುತ್ತಾರೆ. ಆದರೆ ಈ ಸಲ ಆಯ್ದ ಪುಸ್ತಕ ಮಳಿಗೆಗಳಲ್ಲಿ ಕೆಲವು ಲೇಖಕರೊಂದಿಗೆ  ಅರ್ಧ ಗಂಟೆ ಓದುಗರು ಸಂವಾದ ನಡೆಸುವ ಅವಕಾಶವನ್ನೂ ಕಲ್ಪಿಸಲಾಗಿದೆ. 
 
ಸಿನಿಮಾ ಕ್ಷೇತ್ರದಿಂದ ಅಡೂರ ಗೋಪಾಲಕೃಷ್ಣನ್‌, ರಜನೀಕಾಂತ್‌ ಅವರ ಪುತ್ರಿ ಐಶ್ವರ್ಯಾ ರಜನೀಕಾಂತ್‌, ಆಶೀಶ್‌ ವಿದ್ಯಾರ್ಥಿ, ಶತ್ರುಘ್ನ ಸಿನ್ಹಾ ಮುಂತಾದವರು ಭಾಗವಹಿಸುತ್ತಿದ್ದಾರೆ. ಕೊನೆಯ ಗೋಷ್ಠಿಯಲ್ಲಿ ಕನ್ಹಯ್ಯ ಕುಮಾರ್‌ ಅವರು ವಾಕ್‌ ಸ್ವಾತಂತ್ರ್ಯದ ಶಕ್ತಿ–ಮಿತಿಗಳ ಕುರಿತು ಮಾತನಾಡಲಿದ್ದಾರೆ. ಆಕಾರ್‌ ಪಟೇಲ್‌ ಮತ್ತು ನಟಿ ರಮ್ಯಾ ಕೂಡ ಉತ್ಸವದಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿದ್ದಾರೆ. 
 
ಬಹುತ್ವದ ಸಂಭ್ರಮಾಚರಣೆ
‘ಬಿಎಲ್‌ಎಫ್’ನ ಪ್ರಮುಖ ಉದ್ದೇಶಗಳನ್ನು ರವಿಚಂದರ್ ವಿವರಿಸುವುದು ಹೀಗೆ: ‘ಸಾಹಿತ್ಯ ಮತ್ತು ಕಲೆಯಲ್ಲಿ ಇರುವ ಬಹುತ್ವವನ್ನು ನಾವು ಈ ಉತ್ಸವದ ಮೂಲಕ ಸಂಭ್ರಮಿಸುತ್ತಿದ್ದೇವೆ. ವೈವಿಧ್ಯ ಮತ್ತು ಬಹುತ್ವ ಈ ಉತ್ಸವದ ಮುಖ್ಯ ಸಂಗತಿಗಳು.  ನಮ್ಮ ಸಮಾಜ ಇಂದು ಪರ–ವಿರೋಧ ಈ ಎರಡು ಭಾಗಗಳಲ್ಲಿ ಹಂಚಿಹೋಗಿದೆ. ಆ ಎರಡರಲ್ಲಿ ಯಾವುದೋ ಒಂದು ಭಾಗದಲ್ಲಿ ನಿಂತು ಮಾತ್ರ ಮಾತನಾಡಬೇಕು ಎಂಬ ಪರಿಸ್ಥಿತಿ ಇದೆ. ನಾವು ಆ ಎರಡರ ನಡುವೆಯೂ ನಿಂತು ಮಾತನಾಡಬಹುದಾದ ಅವಕಾಶ ಇದೆ ಎಂಬುದನ್ನು ತೋರಿಸಲು ಉದ್ದೇಶಿಸಿದ್ದೇವೆ. ಹಾಗೆಯೇ ಆ ಅವಕಾಶದಲ್ಲಿ ಎರಡೂ ಕಡೆಗಳ ಜನರಿಗೂ ಸಮಾನವಾಗಿ ಅವಕಾಶ ನೀಡುತ್ತೇವೆ. ಬೆಂಗಳೂರನ್ನು ಇನ್ನಷ್ಟು ಸಾಂಸ್ಕೃತಿಕ ಶ್ರೀಮಂತ ನಗರವನ್ನಾಗಿಸುವ ಉದ್ದೇಶವೂ ಈ ಉತ್ಸವಕ್ಕಿದೆ’ ಎನ್ನುವ ಅವರು, ‘ಬೆಂಗಳೂರು ಕರಗದ ಹಾಗೆಯೇ ಸಾಹಿತ್ಯ ಉತ್ಸವವೂ ಒಂದು ಸಂಭ್ರಮದ ಆಚರಣೆ’ ಎನ್ನುತ್ತಾರೆ.
ಕನ್ನಡದ ಸ್ಥಾನಮಾನ
ಬೆಂಗಳೂರು ಸಾಹಿತ್ಯ ಉತ್ಸವಗಳಲ್ಲಿ ಕನ್ನಡಕ್ಕೆ ಮಹತ್ವ ನೀಡಲಾಗುತ್ತಿಲ್ಲ ಎಂಬ ಆರೋಪ ಕಳೆದ ವರ್ಷ ಬಲವಾಗಿಯೇ ಕೇಳಿಬಂದಿತ್ತು. ಈ ಬಗ್ಗೆ ಕೇಳಿದರೆ ಅವರು ಅಂಕಿ ಅಂಶಗಳ ಮೂಲಕವೇ ಸಮರ್ಥಿಸಿಕೊಳ್ಳುತ್ತಾರೆ. 
 
‘ನಮ್ಮ ಉತ್ಸವದಲ್ಲಿ ಕನ್ನಡಕ್ಕಾಗಿ ಐದು ಗೋಷ್ಠಿಗಳಿವೆ. ‘ಜೈಪುರ ಸಾಹಿತ್ಯ ಉತ್ಸವ’ದಲ್ಲಿ ರಾಜಸ್ತಾನಿ ಭಾಷೆಯ ಗೋಷ್ಠಿ ಇರುವುದಿಲ್ಲ. ‘ಮುಂಬೈ ಉತ್ಸವ’ದಲ್ಲಿ ಮರಾಠಿ ಭಾಷೆಗೆ ಸ್ಥಾನ ಇರುವುದಿಲ್ಲ. ಆ ಎಲ್ಲ ಉತ್ಸವಗಳಿಗೆ ಹೋಲಿಸಿದರೆ, ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕನ್ನಡಕ್ಕೆ ಸಾಕಷ್ಟು ಅವಕಾಶ ನೀಡಲಾಗಿದೆ. ಈ ವಿಷಯದಲ್ಲಿ ನಾವು ಉಳಿದ ಸಾಹಿತ್ಯ ಉತ್ಸವಗಳಿಗಿಂತಲೂ ಹೆಚ್ಚು ಸಂವೇದನಾಶೀಲರಾಗಿದ್ದೇವೆ’ ಎಂಬುದು ಅವರ ವಾದ.
 
‘ಕನ್ನಡ ಮತ್ತು ಇಂಗ್ಲಿಷ್‌ ಪ್ರೇಕ್ಷಕರಿಬ್ಬರ ಮನಃಸ್ಥಿತಿಗಳು ಭಿನ್ನವಾಗಿರುತ್ತವೆ. ನಾವು ಆ ಎರಡೂ ಮನಃಸ್ಥಿತಿಗಳನ್ನು ಒಂದೆಡೆ  ಸೇರಿಸಿ ಅನುಸಂಧಾನ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎನ್ನುವ ಅವರು, ‘ತಮ್ಮ ಈ ನಿಲುವು ತಪ್ಪು ಎಂದಾದಲ್ಲಿ ಚರ್ಚೆಗೆ ಯಾವಾಗಲೂ ಸಿದ್ಧ. ಬೇಕಾದರೆ ಯಾರಾದರೂ ಕನ್ನಡದ್ದೇ ಒಂದು ಸಾಹಿತ್ಯ ಉತ್ಸವವನ್ನು ಆಯೋಜಿಸಲಿ’ ಎಂದೂ ಸಲಹೆ ನೀಡುತ್ತಾರೆ. 
 
ಈ ವರ್ಷದ ಉತ್ಸವದಲ್ಲಿ 110 ಸಂಪನ್ಮೂಲ ವ್ಯಕ್ತಿಗಳು ಭಾಗಿಯಾಗಲಿದ್ದಾರೆ. ಇವರಲ್ಲಿ 55 ಜನರು ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ಬೇರೆ ಬೇರೆ ಕಡೆಗಳ ಸಾಹಿತಿಗಳು ಬರುತ್ತಿದ್ದಾರೆ. ಹಲವು ಅನಿವಾಸಿ ಭಾರತೀಯರೂ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಬೆಳಿಗ್ಗೆ 9.30ರಿಂದ ರಾತ್ರಿ 8.30ರವರೆಗೆ ಚಟುವಟಿಕೆಗಳು ನಡೆಯಲಿವೆ. 
 
ಎರಡು ದಿನಗಳ ಈ ಉತ್ಸವಕ್ಕೆ ಸುಮಾರು 65 ಲಕ್ಷ ರೂಪಾಯಿ ಹಣ ವ್ಯಯಿಸಲಾಗುತ್ತಿದೆ. ಯಾವುದೇ ಕಾರ್ಪೊರೇಟ್‌ ಕಂಪೆನಿಗಳಿಂದ ಹಣ ಪಡೆದುಕೊಳ್ಳದೆ, ಜನರಿಂದಲೇ ಹಣ ಸಂಗ್ರಹಿಸಿರುವುದು ವಿಶೇಷ. 40ರಿಂದ 45 ಬೆಂಗಳೂರಿಗರು ಈ ಉತ್ಸವದ ವೆಚ್ಚವನ್ನು ಭರಿಸುತ್ತಿದ್ದಾರೆ. ಹಾಗೆಯೇ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದಲೂ ಧನಸಹಾಯ ದೊರೆಯುತ್ತಿದೆ.
 
ಈ ಉತ್ಸವಕ್ಕೆ ಪ್ರವೇಶ ಉಚಿತ. bangaloreliteraturefestival.org ಜಾಲತಾಣದಲ್ಲಿ ಹೆಸರು ನೋಂದಾಯಿಸಿಕೊಂಡರೆ ಕಾರ್ಯಕ್ರಮಗಳ ವೇಳಾಪಟ್ಟಿ ಪಡೆಯಬಹುದು.
 
**
ಭಿನ್ನ ಜನ ಸೇರುವ ಹಬ್ಬ
ಎಲ್ಲ ಸಾಹಿತ್ಯ ಉತ್ಸವಗಳಿಗೂ ಅವುಗಳದ್ದೇ ಆದ ಲಕ್ಷಣ ಇರುತ್ತದೆ. ಅಲ್ಲಿ ನಡೆಯುವ ಕೆಲವು ಗೋಷ್ಠಿಗಳು ಚೆನ್ನಾಗಿರುತ್ತವೆ. ಕೆಲವು ಚೆನ್ನಾಗಿರುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ಹಲವು ಹಿನ್ನೆಲೆಯ ಸಾಹಿತ್ಯಾಸಕ್ತರು, ಲೇಖಕರು ಒಂದೆಡೆ ಸೇರುವುದಕ್ಕೆ, ಪುಸ್ತಕಗಳನ್ನು ತೆಗೆದುಕೊಳ್ಳುವುದಕ್ಕೆ, ಹರಟೆ ಹೊಡೆಯುವುದಕ್ಕೆ ಈ ಉತ್ಸವಗಳು ಒಳ್ಳೆಯ ನೆಪ. ಅದು ನಾವು ಪರಸ್ಪರ ಜೊತೆಗಿದ್ದೇವೆ ಅನ್ನೋ ಭಾವನೆ ಕೊಡುತ್ತದೆ. ನಾವು ಮಾಡುತ್ತಿರುವ ಕೆಲಸ ಮಹತ್ವದ್ದು ಎನ್ನುವ ನಂಬಿಕೆ ಹುಟ್ಟಿಸುವ ವಾತಾವರಣ ಇರುವುದು ಯಾವಾಗಲೂ ಒಳ್ಳೆಯದು. 
 
‘ಬೆಂಗಳೂರು ಸಾಹಿತ್ಯ ಉತ್ಸವ’ ಒಂದೇ ಅಲ್ಲ – ‘ಧಾರವಾಡ ಸಾಹಿತ್ಯ ಸಂಭ್ರಮ’, ‘ಕನ್ನಡ ಸಾಹಿತ್ಯ ಸಮ್ಮೇಳನ’, ಎಲ್ಲ ಉತ್ಸವಗಳಿಗೂ ಈ ಗುಣ ಇದೆ. 
–ವಿವೇಕ ಶಾನಭಾಗ, ಕಥೆಗಾರ
 
 
**
ಕನ್ನಡ–ಇಂಗ್ಲಿಷ್‌ ನಡುವಿನ ಸೇತುವೆ
ಬೆಂಗಳೂರಿನಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಬೇರೆ ಬೇರೆಯದೇ ಜಗತ್ತು. ಆ ಎರಡು ಜಗತ್ತುಗಳ ನಡುವೆ ಈಗ ನಿಧಾನವಾಗಿ ಸೇತುವೆಗಳು ರೂಪುಗೊಳ್ಳುತ್ತಿವೆ. ಬೆಂಗಳೂರು ಸಾಹಿತ್ಯ ಉತ್ಸವಗಳಂಥವು ಇಂಥ ಸೇತುವೆ ರೂಪಿಸುವ ವೇದಿಕೆಗಳಾಗುತ್ತವೆ. 
 
ಕನ್ನಡ ಸಾಹಿತ್ಯ ಗೋಷ್ಠಿಗಳು ವರ್ಷದುದ್ದಕ್ಕೂ ನಡೆಯುತ್ತಲೇ ಇರುತ್ತವೆ. ಅಲ್ಲಿ ನಾವು  ಇಂಗ್ಲಿಷ್‌ ಸಾಹಿತಿಗಳನ್ನು ಕರೆಯುವುದೇ ಇಲ್ಲ. ನಾವು ಬಹುಸಂಖ್ಯಾತರು ಎಂಬ ಕಾರಣಕ್ಕೆ, ನಾವಷ್ಟೇ ಸಾಕು ಬೇರೆಯವರು ಬೇಡ ಎಂಬ ಮನಃಸ್ಥಿತಿ ಇತ್ತು. ಈಗಲೂ ಅದು ಪೂರ್ತಿ ಹೋಗಿಲ್ಲ. ಹಾಗಾಗಿ ಇಂಗ್ಲಿಷ್‌ ಜಗತ್ತಿಗೆ ಕನ್ನಡದ ಸಾಹಿತ್ಯ–ಸಾಹಿತಿಗಳು ತಲುಪುತ್ತಲೇ ಇರಲಿಲ್ಲ. ಭಾಷಾ ಪಾಲಿಟಿಕ್ಸ್‌ನ ವಿವಿಧ ಮುಖಗಳು ಇವು. ಬೆಂಗಳೂರು ಸಾಹಿತ್ಯ ಉತ್ಸವದಂಥ ಕಾರ್ಯಕ್ರಮಗಳು ಕನ್ನಡ ಮತ್ತು ಇಂಗ್ಲಿಷ್‌ ಜಗತ್ತಿನ ನಡುವಿನ ಅಂತರವನ್ನು ತುಂಬಿಕೊಡುತ್ತವೆ. 
-ಪ್ರತಿಭಾ ನಂದಕುಮಾರ್‌, ಕವಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT