ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನ ಅಪಹರಣ: ವಾಮಾಚಾರಕ್ಕೆ ಬಲಿ ಯತ್ನ?

Last Updated 19 ಡಿಸೆಂಬರ್ 2016, 6:47 IST
ಅಕ್ಷರ ಗಾತ್ರ
ಅಥಣಿ: ಮನೆಯಂಗಳದಲ್ಲಿ ಆಟವಾಡು ತ್ತಿದ್ದ ಒಂಬತ್ತು ವರ್ಷದ ಬಾಲಕನನ್ನು ಶನಿವಾರ ಅಪಹರಿಸಿ, ಎದೆ, ಕಣ್ಣು, ಕುತ್ತಿಗೆಗೆ ಸಲಾಕೆಯಿಂದ ಚುಚ್ಚಿ ಗಾಯಗೊಳಿಸಿ, ಕಲ್ಲುಗುಂಡಿಯಲ್ಲಿ ಹೂತು ಹಾಕಿದ್ದ ಪ್ರಕರಣ ತಾಲ್ಲೂಕಿನ ಕೊಕಟನೂರು ಗ್ರಾಮದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ವಾಮಾಚಾರಕ್ಕೆ ಬಲಿಕೊಡುವ ಉದ್ದೇಶದಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
 
ಬೆಳಿಗ್ಗೆ ಬಹಿರ್ದೆಸೆಗೆಂದು ತೆರಳಿದ್ದ ಗ್ರಾಮಸ್ಥರು ಬಾಲಕನ ನರಳಾಟ ಕೇಳಿ, ಆತನನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದ ಬಾಲಕನನ್ನು ಗ್ರಾಮದ ರಾಜಕುಮಾರ ಮಾರುತಿ ತುಪ್ಪಸಮುದ್ರ ಎಂದು ಗುರುತಿಸಲಾಗಿದ್ದು, ಮಹಾರಾಷ್ಟ್ರದ ಮಿರಜ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.
 
‘ಅಪರಿಚಿತರಿಬ್ಬರು ಶನಿವಾರ ಸಂಜೆ ಬಾಲಕನನ್ನು ಪುಸಲಾಯಿಸಿ ಕರೆದು ಕೊಂಡು ಹೋಗಿದ್ದಾರೆ. ಗ್ರಾಮದ ಹೊರ ವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಹಲ್ಲೆ ನಡೆಸಿ, ಕಲ್ಲಿನ ಗುಂಡಿಯಲ್ಲಿ ಹೂತು ಹಾಕಿದ್ದಾರೆ. ಬಾಲಕ ನಾಪತ್ತೆಯಾಗಿದ್ದರಿಂದ ಪಾಲ ಕರು ಹಾಗೂ ಸ್ಥಳೀಯರು ರಾತ್ರಿಯಿಡೀ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದ್ದರು. ಈ ಕುರಿತು ಪೊಲೀಸ ರಿಗೂ ಮಾಹಿತಿ ನೀಡಿದ್ದರು’ ಎಂದು ಗ್ರಾಮಸ್ಥರು ತಿಳಿಸಿದರು.
 
‘ಮೂರನೇ ತರಗತಿಯಲ್ಲಿ ಓದುತ್ತಿದ್ದ ನಮ್ಮ ಮಗನನ್ನು ದುಷ್ಕರ್ಮಿಗಳು ಅಪಹರಿಸಿ ವಾಮಾಚಾರಕ್ಕೆ ಬಲಿ ಕೊಡಲು ಯತ್ನಿಸಿದ್ದಾರೆ. ಅವನ ಮುಖದ ಬಲ ಭಾಗ, ದೇಹದ ವಿವಿಧೆಡೆ ಕಲ್ಲಿನಿಂದ ಜಜ್ಜಲಾಗಿದೆ. ಕಣ್ಣಿಗೂ ಸಲಾಕೆಯಿಂದ ಚುಚ್ಚಲಾಗಿದ್ದು, ಆತ ಮಾತನಾಡುವ ಸ್ಥಿತಿಯಲ್ಲಿ ಇಲ್ಲ’ ಎಂದು ತಂದೆ ಮಾರುತಿ ಮತ್ತು ತಾಯಿ ಸಾವಿತ್ರಿ ಹೇಳಿದರು.
 
ಬಾಲಕನನ್ನು ಗುಂಡಿಯಲ್ಲಿ ಹಾಕಿ ಕಲ್ಲುಗಳಿಂದ ಮುಚ್ಚಲಾಗಿತ್ತು. ಆದರೆ, ಆ ಸ್ಥಳದಲ್ಲಿ ವಾಮಾಚಾರ ನಡೆಸಿದ ಕುರುಹುಗಳಿರಲಿಲ್ಲ. ಆಸ್ಪತ್ರೆಯಿಂದ ಮರಳಿದ ಕೂಡಲೇ ಐಗಳಿ ಪೊಲೀಸ್‌ ಠಾಣೆಗೆ ದೂರು ನೀಡುವುದಾಗಿ ಬಾಲಕನ ತಂದೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
‘ಪ್ರಕರಣ ಗಮನಕ್ಕೆ ಬಂದಿದೆ. ಬಾಲಕನ ಮೇಲೆ ಹಲ್ಲೆ ನಡೆಸಿದವರ ಕುರಿತು ಕೆಲವರ ಮೇಲೆ ಅನುಮಾನ ವಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ’ ಎಂದು ಜಿಲ್ಲಾ ಎಸ್‌ಪಿ. ಬಿ.ಆರ್. ರವಿಕಾಂತೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT