ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದ ಕೋಣೆಗೂ ಬೇಕು ಬಾಗಿಲು

Last Updated 20 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮನೆಗೊಂದು ಬಾಗಿಲು ಅನಿವಾರ್ಯ. ಸಿರಿವಂತ ಮನೆಯಾಗಲಿ, ಬಡವನ ಮನೆಯಾಗಲಿ; ಗುಡಿಸಲಾಗಲಿ, ಅರಮನೆಯಾಗಲಿ ಬಾಗಿಲೊಂದು ಇದ್ದೇ ಇರುತ್ತದೆ.ಪರಿಚಿತರನ್ನು ಬರಮಾಡಿಕೊಳ್ಳುವುದು, ಆತ್ಮೀಯರಿಗೆ ವಿದಾಯ ಹೇಳುವುದೂ ಈ ಬಾಗಿಲ ಬಳಿಯೇ. ಅಪರಿಚಿತರನ್ನು, ಆಗಂತುಕರನ್ನು ತಡೆಗಟ್ಟುವುದೂ ಇಲ್ಲಿಯೇ. ಗೃಹದ, ಗೃಹವಾಸಿಗಳ ರಕ್ಷಣೆ ಬಾಗಿಲಿನ ಮುಖ್ಯಕಾರ್ಯ.

ಮನೆಯೊಳಕ್ಕೆ ಸ್ನೇಹಿತರು, ಬಂಧುಗಳು ಸರಾಗವಾಗಿ ಬರುತ್ತಾರೆ. ಅಪರಿಚಿತರು ಹಿಂದುಮುಂದೆ ನೋಡುತ್ತ ಅಳುಕಿನಿಂದ ಒಳಗೆ ಅಡಿಯಿರಿಸುತ್ತಾರೆ. ಠಕ್ಕರಂತೂ ಕುಟಿಲತೆಯಿಂದ ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಬಾಗಿಲು ಹೇಗೆ ಪ್ರವೇಶಕ್ಕೆ ಮಾರ್ಗವೋ ಹಾಗೇ ನಿರ್ಗಮನಕ್ಕೂ ಅದು ದ್ವಾರ. ಅಂದರೆ ಬಂದವರು ತಮ್ಮ ಕೆಲಸ ಮುಗಿಸಿ ಹೊರಡುವಾಗ ಅದೇ ಬಾಗಿಲನ್ನು ದಾಟಬೇಕು.

ಕೋಟೆ ಬಾಗಿಲುಗಳು, ಗಡಿಯ ಪ್ರವೇಶದ್ವಾರಗಳು ಕತ್ತಲಾಗುತ್ತಿದ್ದಂತೆಯೇ ಮುಚ್ಚಲ್ಪಡುತ್ತವೆ. ಕಾರಣವಿಷ್ಟೆ. ದೇಶ ಅಥವಾ ಮನೆಗಳಿಗೆ ಹಾನಿಮಾಡಬಹುದಾದ ಜನರು ಪ್ರವೇಶಿಸಬಾರದೆಂಬ ಮುನ್ನೆಚ್ಚರಿಕೆ. ಮತ್ತೆ ಮರುದಿನ ಹಗಲು ಹರಿದ ಬಳಿಕ ದಿಡ್ಡಿ ಬಾಗಿಲುಗಳು, ಗಡಿಯ ಗೇಟುಗಳು ತೆರೆದುಕೊಳ್ಳುತ್ತವೆ, ಜನರ ಓಡಾಟ ಆರಂಭವಾಗುತ್ತವೆ.

ಈ ಜಗತ್ತಿನ ನಮ್ಮ ಅನುಭವಗಳು ಕೂಡ ಹೀಗೇ ಪ್ರವೇಶಿಸಿ ನಿರ್ಗಮಿಸುತ್ತವೆ. ದ.ರಾ. ಬೇಂದ್ರೆಯವರು ಆವರಣ, ಮನೆ ಮತ್ತು ಊರಿನ ಬಾಗಿಲುಗಳು ಹೇಗಿರಬೇಕು, ಮನುಷ್ಯನ ಗ್ರಹಿಕೆಯ ನೋಟ ಎಂತಿರಬೇಕು ಎಂಬುದನ್ನು ಸೂಚಿಸುತ್ತಾರೆ; ಮನೆಯ ಬಾಗಿಲು ಒಬ್ಬರು ಒಳಗೆ ಹೋಗಿ ಮತ್ತೊಬ್ಬರು ಬರುವಷ್ಟು ಅಗಲ ಇರಬೇಕು, ಮನೆಯ ಗೇಟು ಒಂದು ಕಾರು ಅಥವಾ ಚಕ್ಕಡಿ ಒಳಗೆ ಹೋಗಿ ಬರುವಷ್ಟು ಅಗಲವಿರಬೇಕು, ಒಂದು ಕೋಟೆಯ ಬಾಗಿಲು ಒಂದು ತುಕಡಿ ಹೋಗಿ ಬರುವಷ್ಟು ಅಗಲವಿರಬೇಕು, ಆದರೆ ನಮ್ಮ ಕಣ್ಣು ಇಡಿಯ ಜಗತ್ತು ಒಳಗೆ ಹೋಗಿ ಬರುವಷ್ಟು ಅಗಲವಿರಬೇಕು ಎನ್ನುತ್ತಾರೆ. ಅಂದರೆ ನಮ್ಮ ದೃಷ್ಟಿ ಅಷ್ಟು ವಿಶಾಲವೂ ವ್ಯಾಪಕವೂ ಆಗಿರಬೇಕು ಎನ್ನುತ್ತಾರೆ.

ಮನೆಗೆ ಬಾಗಿಲು ಇದ್ದಂತೆ ಮನಕೆ ಒಂದು ಬಾಗಿಲು ಬೇಡವೆ? ದೇಹವೆಂಬ ಮನೆಗೆ ಆತ್ಮನೆಂಬುವನೇ ಮನೆಯೊಡೆಯ, ಮನಸ್ಸೇ ಪ್ರವೇಶದ್ವಾರ. ಇಂದ್ರಿಯಗಳೆಂಬವರು ಮನೆಯ ಸದಸ್ಯರು. ಮನಸ್ಸಿಗೆ ವಿವೇಕವೆಂಬ ಬಾಗಿಲು ಇರಬೇಕು. ಅದಕ್ಕೆ ವಿವೇಚನೆ ಎಂಬ ಅಗುಳಿ ತಗಲಿಸಬೇಕು. ಬೇಕಾದವರನ್ನು ಬರಮಾಡಿಕೊಂಡಂತೆ ಹಿತವಾದ ಅನುಭವಗಳನ್ನು, ಚಿಂತನೆಗಳನ್ನು ಮನಸ್ಸಿನ ಮೂಲಕ ಬರಮಾಡಿಕೊಳ್ಳುವ ಅಭ್ಯಾಸವಾಗಬೇಕು. ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಪುಷ್ಟಿಕರವಾದ ಚಿಂತನೆಗಳು ಬೇಕು.

ಅಹಿತ ಚಿಂತನೆಗಳನ್ನು, ಅಪ್ರಯೋಜಕ ಆಲೋಚನೆಗಳನ್ನು ಮನಸ್ಸಿನಾಚೆಯೇ ನಿಲ್ಲಿಸುವ ಸಂಕಲ್ಪ ಬೆಳೆಸಿಕೊಳ್ಳಬೇಕು. ಇಲ್ಲಿ ಹಿತ-ಅಹಿತಗಳನ್ನು ನಿರ್ಧರಿಸುವುದು ಸೂಕ್ಷ್ಮಕಾರ್ಯ. ಕೆಲವೊಮ್ಮೆ ಸುಖವೆಂದು ತೋರಿದ್ದು ಅಹಿತವಾಗಬಹುದು, ಹಾಗೆಯೇ ಹಿತವೆಂದು ತೋರಿದ್ದು ಅಸುಖಕ್ಕೆ ಕಾರಣವಾಗಬಹುದು. ದೇಹ-ಮನಸ್ಸುಗಳಿಗೆ ‘ಸುಖ’ ಕೊಡುವುದು ಬೇರೆ, ‘ಹಿತ’ ಕೊಡುವುದು ಬೇರೆ. ಸುಖ ಸ್ವಾರ್ಥಮುಖವೋ ಅಥವಾ ನಿಃಸ್ವಾರ್ಥಮುಖವೋ ಎಂಬ ಇನ್ನೊಂದು ಮಾನದಂಡವಿದೆ.

ಕೇವಲ ನಮಗೆ ಸುಖ ಕೊಡುವುದು ಸ್ವಾರ್ಥ. ಪರರಿಗೂ ಹಿತವನ್ನು ನೀಡುವ ಸುಖವಾವುದಿದೆಯೋ ಅದು ನಿಃಸ್ವಾರ್ಥ ಸುಖ. ಸುಖವನ್ನಷ್ಟೆ ಬಯಸಿದವರು ಪುರಾಣದ ಅಸುರರು; ಹೀಗಾಗಿ ಕಷ್ಟ ಪಟ್ಟು ಸಮುದ್ರಮಥನ ಮಾಡಿದರೂ ಪಾಲು ದಕ್ಕಿಸಕೊಳ್ಳುವಲ್ಲಿ ಸೋತರು. ಮೋಹಿನಿಯ ಸಂಗ ಬಯಸಿ ಅಸುರರು ಮಾಡಿದ ತಪಸ್ಸು ಅತ್ಯಂತ ನಿಷ್ಠವೂ ಕಷ್ಟವೂ ಆಗಿರುತಿತ್ತು, ನಿಜ;  ಆದರೆ ಅವರು ಬೇಡಿದ ವರಗಳು ಮಾತ್ರ ಸುಖದ ಸುತ್ತ ಗಿರಕಿ ಹೊಡೆದು ತಪದ ಫಲವನ್ನೇ ನಷ್ಟಮಾಡಿಬಿಡುತ್ತಿದ್ದವು.

ಕುಂಭಕರ್ಣ ಬೇಡಿದ್ದು ನಿದ್ದೆಯನ್ನು, ಎಚ್ಚರವನ್ನಲ್ಲ! ಹಿರಣ್ಯಕಶಿಪು ಬೇಡಿದ್ದು ಅಸಂಭಾವ್ಯವೆನಿಸುವ ಸಾವಿನ ರೀತಿಯನ್ನು. ಇವರ ಬಯಕೆಗಳೆಲ್ಲ ದೇಹ-ಇಂದ್ರಿಯ, ಅರ್ಥಾತ್ ಭೌತಿಕ ಶರೀರದ ಪರಿಮಿತಿಯ ಒಳಗೇ ಇರುತ್ತಿದ್ದವು. ಕೀರ್ತಿಶರೀರದ, ಆತ್ಮದ ಆಲೋಚನೆಯೇ ಇವರ ಮನದ ಬಾಗಿಲೊಳಗೆ ಪ್ರವೇಶಿಸಲಿಲ್ಲ. ಅಸುರರು ಕಟ್ಟಕಡೆಗೆ ವಿನಾಶದ ಹಾದಿಗೆ ಬಿದ್ದದ್ದನ್ನು ಪುರಾಣದುದ್ದಕ್ಕೂ ಕೇಳುತ್ತೇವೆ. ಇನ್ನು ಹಿತವನ್ನು ಬಯಸಿ ಕಷ್ಟಕ್ಕೊಳಗಾದರೂ ವಿಕಾಸದ ಹಾದಿ ಹಿಡಿದವರು ಸತ್ಪುರುಷರು, ದೇವತೆಗಳು.

ಸತ್ಯದ ಹಾದಿ ಹಿಡಿದ ಹರಿಶ್ಚಂದ್ರ. ಯಮನ ಮನೆಯ ಬಾಗಿಲು ತಟ್ಟಿ ಆತ್ಮವಿದ್ಯೆಯನ್ನು ಪಡೆದುಕೊಂಡ ನಚಿಕೇತ. ಮಡದಿಯೊಡನೆ ಕಾಡಿಗೆ ನಡೆದ ಶ್ರೀರಾಮ ಕಷ್ಟಪರಂಪರೆಗಳನ್ನು ಎದುರಿಸಿಯೂ ದುಷ್ಟ ಆಲೋಚನೆಗಳನ್ನು ಶೂರ್ಪನಖಿಯನ್ನು ಅಟ್ಟಿದಂತೆ ಅಟ್ಟಿಬಿಟ್ಟ. ಹೀಗೆ ದೇವ-ಅಸುರರ ಉದಾಹರಣೆಗಳು ಮನುಷ್ಯರ ಮುಂದಿದೆ.

ಸರಿಯಾದುದನ್ನು ಆಯ್ದುಕೊಳ್ಳಬೇಕಾದುದಷ್ಟೇ ನಾವು ಮಾಡಬೇಕಾದ ಕಾರ್ಯ. ಹೊರಗಿನ ಕಳ್ಳಕಾಕರಂತೆ ಒಳಗಿದ್ದೂ ಬಾಧಕವಾಗಬಲ್ಲದು ಇಂದ್ರಿಯ ಚಾಪಲ್ಯ. ಮನೆಯ ಒಬ್ಬ ಸದಸ್ಯನ ಹದ್ದು ಮೀರಿದ ವರ್ತನೆ ಇತರರಿಗೂ, ಒಡೆಯನಿಗೂ ಆತಂಕ ಉಂಟುಮಾಡಬಹುದು.  ಇದು ರಾವಣನ ಲಂಪಟತನ ಲಂಕೆಗೆ ಮುಳುವಾದಂತೆ, ತಮ್ಮಂದಿರನ್ನೂ ಬಂಧುಬಾಂಧವರನ್ನೂ ಬಲಿಪಡೆದಂತೆ ಆಗುತ್ತದೆ. ಆದುದರಿಂದ ಪಂಚೇಂದ್ರಿಯಗಳು ಕಟ್ಟು ಮೀರಿ ಹೋಗದಂತೆ, ಮನೆಯೊಡೆಯನು ತನ್ನ ಬಲವಾದ ಹಿಡಿತದಿಂದ ನಿಗ್ರಹಿಸಬೇಕು, ಮನದ ಬಾಗಿಲುಗಳನ್ನು ಗಟ್ಟಿಗೊಳಿಸಬೇಕು.

ಬಾಗಿಲು ಮನೆಯೊಡೆಯನನ್ನು ರಕ್ಷಿಸಿದಂತೆ ಮನೆಯೊಡೆಯ ಬಾಗಿಲನ್ನೂ ರಕ್ಷಿಸಬೇಕು. ಬಾಗಿಲು ತಟಸ್ಥ; ಮೂಕಸಾಕ್ಷಿ. ಅದು ಮನೆಯೊಡೆಯ ಹಾಕಿದಾಗ ಮುಚ್ಚಿಕೊಳ್ಳುತ್ತದೆ, ತೆರೆದಾಗ ಬರಮಾಡಿಕೊಳ್ಳುತ್ತದೆ. ಹಾಗಾಗಿ ಮನೆಯೊಡೆಯನ ಜವಾಬ್ದಾರಿ ಹೆಚ್ಚಿನದು. ಅವನು ಉಕ್ಕಿನ ಬಾಗಿಲನ್ನೂ ಇಟ್ಟುಕೊಳ್ಳಬಹುದು ಅಥವಾ ತಗಡಿನ ಬಾಗಿಲನ್ನೂ ಇಟ್ಟುಕೊಳ್ಳಬಹುದು. ಅದನ್ನು ನಿರ್ಮಿಸಿಕೊಂಡು ಬಳಸುವ ಪೂರ್ಣ ಜವಾಬ್ದಾರಿ ಮತ್ತು ಸ್ವಾತಂತ್ರ್ಯ ಅವನದೇ. ಅವನ ಮನೆಯೆಷ್ಟು ಗಟ್ಟಿಯಿರಬೇಕೆಂದು ಬಯಸುವನೋ ಅಷ್ಟು ಬಲವಾದ ಬಾಗಿಲನ್ನು ಅವನು ಇಟ್ಟುಕೊಳ್ಳಬೇಕು. ಆ ಬಾಗಿಲು ಪ್ರಕೃತಿಯ ಪ್ರಕೋಪಕ್ಕೆ ಒಳಗಾಗದಂತೆ ಬಣ್ಣ ಬಳಿಯಬೇಕು, ಗೆದ್ದಲು ಹತ್ತದಂತೆ ನೋಡಿಕೊಳ್ಳಬೇಕು.

ಮನದ ಬಾಗಿಲಿಗೂ ಅಷ್ಟೇ, ಬಾಹ್ಯ ಪರಿಸರದ ಒತ್ತಡಗಳಿಗೆ ಮಣಿಯದಂತೆ ಶ್ರದ್ಧೆಯ ಲೇಪವಾಗಬೇಕು. ಇಂದ್ರಿಯಗಳು ಹದ್ದುಮೀರಿದ ಆಸೆಗಳನ್ನು ಕಾಯದೊಳಗೆ ಹೊತ್ತು ತರದಂತೆ ನಿಯಂತ್ರಿಸಬೇಕು. ಅಶ್ಲೀಲ, ಅನಿಷ್ಟ, ಅಶುದ್ಧ, ವಿಚಾರಗಳು ಗುಪ್ತವಾಗಿ ಪ್ರವೇಶಿಸದಂತೆ ಎಚ್ಚರವಹಿಸಬೇಕು. ಅಶ್ರದ್ಧಾಭಾವದ ಗೆದ್ದಲು ಹತ್ತದಂತೆ ಎಚ್ಚರವಹಿಸಬೇಕು. ಕಾಯ-ಕರಣಗಳು ಸದಾ ಪ್ರಜ್ಞೆಯ ಪರಿಮಿತಿಯೊಳಗೆ ಕಾರ್ಯನಿರ್ವಹಿಸುತ್ತಿರಬೇಕು.

ಇಷ್ಟಾದರೂ ಎಲ್ಲೋ ಅದರ ಕೀಲು ಸಡಿಲಗೊಂಡರೆ ಬಿದ್ದ ಕೋಟೆಗೆ ಲಗ್ಗೆ ಹಾಕುವ ಶತ್ರುಸೈನ್ಯದಂತೆ ಮನದೊಳಗಣ ಸಂಪತ್ತನ್ನೆಲ್ಲ ಲೂಟಿಗೈಯುವ ಚೋರಪ್ರಪಂಚವು ಜೀವನದ ಉತ್ತಮಿಕೆಯ ಪ್ರಯತ್ನಗಳನ್ನೆಲ್ಲ ನಿಷ್ಫಲಗೊಳಿಸಿಬಿಡುತ್ತದೆ. ಆದುದರಿಂದ ನಮ್ಮ ಮನದ ಬಾಗಿಲನ್ನು ಬಲಪಡಿಸುವ ಪ್ರಯತ್ನ ನಿರಂತರವಾಗಿ ಸಾಗುತ್ತಿರಬೇಕು, ಆಗಲೇ ಮನೆಯೂ ಮನೆಯೊಡೆಯನೂ ಬಾಗಿಲೂ ಸುಭದ್ರ, ಸುಕ್ಷೇಮ.

(ಲೇಖಕರು ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT