ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿ ಗರಿ ನೋಟಿನ ಕಥೆ!

ಹಣ: ಅಂದಿನಿಂದ ಇಂದಿನವರೆಗೆ
Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅದು ಕ್ರಿ.ಶ 100ರ ಸಮಯ. ಕಾಗದವನ್ನು ತಯಾರಿಸುವ ಬಗೆಯನ್ನು ಮಾನವ ಅರಿತಿದ್ದ. ನಾರು, ಜೊಂಡು ಹುಲ್ಲು, ಬಿದಿರಿನಿಂದ ಕಚ್ಚಾ ಕಾಗದ ತಯಾರಿಸುವುದರಲ್ಲಿ ಪರಿಣತಿಯನ್ನೂ ಸಾಧಿಸಿದ್ದ. ಚಿನ್ನ, ಬೆಳ್ಳಿ ಹಾಗೂ ವಿವಿಧ ಲೋಹಗಳಿಂದ ಮಾಡಿದ ನಾಣ್ಯಗಳು ಹೆಚ್ಚಾಗಿ ಚಲಾವಣೆಯಲ್ಲಿದ್ದ ಕಾಲ ಅದು.

ದೂರದ ಊರುಗಳಿಗೆ ವ್ಯಾಪಾರಕ್ಕಾಗಿ ನಾಣ್ಯಗಳನ್ನು ತೆಗೆದುಕೊಂಡು ಹೋಗುವುದು ವ್ಯಾಪಾರಿಗಳಿಗೆ ಸಮಸ್ಯೆಯಾಗಿ ಕಾಡುತ್ತಿತ್ತು. ಇದಕ್ಕೆ ಕಾರಣ ಇಷ್ಟೇ. ಒಂದು, ನಾಣ್ಯಗಳು ಭಾರವಾಗಿದ್ದುದರಿಂದ ವ್ಯಾಪಾರಿಗಳಿಗೆ ಹೊರೆಯಾಗುತ್ತಿತ್ತು. ಇನ್ನೊಂದು, ನಾಣ್ಯದ ರೂಪದಲ್ಲಿ ದೊಡ್ಡ ಮೊತ್ತವನ್ನು ಸಾಗಾಟ ಮಾಡುವುದು ಸುರಕ್ಷಿತವೂ ಆಗಿರಲಿಲ್ಲ.

ಈ ಸಮಸ್ಯೆಗೆ ಚೀನೀಯರ ಬಳಿ ಒಂದು ಪರಿಹಾರ ಇತ್ತು. ಏನೆಂದರೆ, ಕಾಗದ ಅಥವಾ ಸಾಕು ಪ್ರಾಣಿಗಳ ಚರ್ಮದ ತುಂಡಿನಲ್ಲಿ ಹಣ ಸಾಲ ನೀಡುವ ಬಗ್ಗೆ ಖಾತರಿ ಟಿಪ್ಪಣಿ ಬರೆಯುವುದು! ಈ ಟಿಪ್ಪಣಿಯನ್ನು ತೋರಿಸಿ ವ್ಯಾಪಾರ ಮಾಡಬಹುದಿತ್ತು. ಇದನ್ನು ಕಾಗದ ನೋಟಿನ ಕಚ್ಚಾರೂಪ ಎನ್ನಬಹುದು. ಹಾಗಾಗಿ, ಹಣದ ಇತಿಹಾಸದಲ್ಲಿ ಕಾಗದದ ಕರೆನ್ಸಿ ಬಳಸಿದ ಮೊದಲ ರಾಷ್ಟ್ರ ಎಂಬ ಕೀರ್ತಿಯ ಮುಕುಟ ಚೀನಾದ ಮುಡಿಯೇರಿದೆ.

ಏಳನೇ ಶತಮಾನದಲ್ಲಿ ಚೀನಾದ ಟಾಂಗ್‌ ಆಡಳಿತದಲ್ಲಿ ಕಾಗದ ರಸೀದಿಗಳ ಬಳಕೆ ಹಾಂಗ್‌ ಹೇ (ಹಳದಿ ನದಿ) ನದಿ ಕಣಿವೆಯಲ್ಲಿ ಆರಂಭವಾಯಿತು. ಕಾಗದ ಕರೆನ್ಸಿ ಅಧಿಕೃತವಾಗಿ ಚೀನಾದಲ್ಲಿ ಜಾರಿಗೆ ಬಂದಿದ್ದು 11ನೇ ಶತಮಾನದಲ್ಲಿ. ಕಾಗದ ಕರೆನ್ಸಿಗಳ ಬಳಕೆಯಿಂದ ವ್ಯಾಪಾರ ವಹಿವಾಟು ಮತ್ತಷ್ಟು ಸುಲಭವಾಯಿತು. ಬೇರೆ ಬೇರೆ ಪ್ರದೇಶಗಳಲ್ಲಿ ದೊಡ್ಡ ಮಟ್ಟಿನ ವ್ಯವಹಾರಕ್ಕಾಗಿ ದೊಡ್ಡ ಪ್ರಮಾಣದಲ್ಲಿ ನಾಣ್ಯಗಳನ್ನು ಹೊತ್ತೊಯ್ಯಬೇಕಾದ ಅನಿವಾರ್ಯತೆ ತಪ್ಪಿತು.

ಸರ್ಕಾರಕ್ಕೆ ನಾಣ್ಯಗಳನ್ನು ನೀಡಿ ಕಾಗದ ಕರೆನ್ಸಿಯನ್ನು ಪಡೆಯಲು ಚೀನಾ ಆಡಳಿತ ಜನರಿಗೆ ಅವಕಾಶವನ್ನೂ ಕಲ್ಪಿಸಿತು. 960ರ ಅವಧಿಯಲ್ಲಿ ಸಾಂಗ್‌ ಆಡಳಿತದಲ್ಲಿ ಕಾಗದದ ಕರೆನ್ಸಿಗಳ ಬಳಕೆಯನ್ನು ವ್ಯವಸ್ಥಿತವಾಗಿ ಜಾರಿಗೆ ತರಲಾಯಿತು. ಈ ಕರೆನ್ಸಿಗಳನ್ನು ‘ಜಿಯಾಒಜಿ’ ಎಂದು ಕರೆಯಲಾಗುತ್ತಿತ್ತು.

ಕಾಗದ ಕರೆನ್ಸಿಯ ಅನುಕೂಲತೆಗಳ ಬಗ್ಗೆ ಚೀನಾ ಆಡಳಿತಕ್ಕೆ ಮನವರಿಕೆ ಆಗುತ್ತಿದ್ದಂತೆಯೇ, ಈ ಕರೆನ್ಸಿಗಳ ಮುದ್ರಣಕ್ಕೆ ಹೆಚ್ಚು ಒತ್ತು ನೀಡಿತು. 12ನೇ ಶತಮಾನದ ಹೊತ್ತಿಗೆ ಹೆಚ್ಚು ಕಾಗದದ ಹಣವನ್ನೇ ಚಲಾವಣೆಗೆ ಬಿಡಲು ಚೀನಾ ಆಡಳಿತ ಆರಂಭಿಸಿತು. ಆ ಕಾಲದಲ್ಲಿ ವ್ಯಾಪಾರದ ಪ್ರಮುಖ ಕೇಂದ್ರವಾಗಿದ್ದ ಯುರೋಪ್‌ನಲ್ಲಿ ಕಾಗದ ಕರೆನ್ಸಿಗಳ ಬಗ್ಗೆ ಜನರಿಗೆ ಅರಿವಿರಲಿಲ್ಲ. ಚೀನಾದಾದ್ಯಂತ ಪ್ರವಾಸ ಮಾಡಿದ್ದ ಮಾರ್ಕೊ ಪೋಲೋ ಮತ್ತು ರುಬ್ರಕ್‌ ವಿಲಿಯಂನಂತಹ ಪ್ರವಾಸಿಗರು ಕಾಗದ ಕರೆನ್ಸಿಯ ಬಳಕೆಯ ಬಗ್ಗೆ ಯುರೋಪಿಯನ್ನರಿಗೆ ತಿಳಿಸಿದರು. ಆದರೆ, ಕಾಗದ ಕರೆನ್ಸಿ ತಯಾರಿಸಲು ಬೇಕಾದ ಅಗತ್ಯ ಸೌಕರ್ಯಗಳು ಅಲ್ಲಿರಲಿಲ್ಲ.

ಯುರೋಪ್‌ನ ಪುನರುಜ್ಜೀವನದ ಆರಂಭದ ಕಾಲದಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಭಾರಿ ಪ್ರಮಾಣದ ಬೆಲೆಬಾಳುವ ಲೋಹಗಳ ಸಾಗಾಟ ಮಾಡುವುದು ಅಪಾಯಕಾರಿ ಎಂಬುದನ್ನು ಅಲ್ಲಿನ ಸರ್ಕಾರ, ವ್ಯಾಪಾರಿಗಳು ಕಂಡು ಕೊಂಡಿದ್ದರು. ಇದಕ್ಕೆ ಅವರು ಪರ್ಯಾಯ ದಾರಿಯ ಹುಡುಕಾಟ ನಡೆಸಿದ್ದರು. ಆಗ ಅವರಿಗೆ ಹೊಳೆದಿದ್ದೇ ಕೈಬರಹ ಹೊಂದಿದ ‘ಭರವಸೆಯ ನೋಟು’. ವ್ಯಕ್ತಿಯನ್ನು ಉಲ್ಲೇಖಿಸಿ, ಆತನಿಗೆ ನೀಡಬೇಕಾದ ಮೊತ್ತದ ವಿವರಗಳನ್ನು ಕಾಗದದಲ್ಲಿ ಬರೆಯಲಾಗುತ್ತಿತ್ತು.

ಸುಧಾರಿತ ಕಾಗದದ ಕರೆನ್ಸಿಗಳು ಯುರೋಪ್‌ನಲ್ಲಿ ಚಲಾವಣೆಗೆ ಬರಲು 1500ರವರೆಗೆ ಕಾಯಬೇಕಾಯಿತು. ಈ ಅವಧಿಯಲ್ಲಿ ಅಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ ಪ್ರವರ್ಧಮಾನಕ್ಕೆ ಬಂತು. ಜನರು ಇಟ್ಟ ಕರೆನ್ಸಿ ಠೇವಣಿಗೆ ರಸೀದಿ ಕೊಡುವ ಪದ್ಧತಿಯನ್ನು ಬ್ಯಾಂಕುಗಳು ಆರಂಭಿಸಿದವು. ಜನರ ಅಗತ್ಯಕ್ಕೆ ತಕ್ಕಂತೆ ರಸೀದಿ ತೋರಿಸಿ ಬ್ಯಾಂಕುಗಳಿಂದ ಹಣ ಪಡೆದುಕೊಳ್ಳಬಹುದಿತ್ತು. ರಸೀದಿಯನ್ನು ಮತ್ತೊಬ್ಬರ ಮೂಲಕ ಕಳುಹಿಸಿ, ಬ್ಯಾಂಕುಗಳಿಂದ  ಪಡೆಯಬಹುದಾದ ವ್ಯವಸ್ಥೆಯೂ ಇತ್ತು.

1661ರಲ್ಲಿ ಸ್ವೀಡನ್‌ ಸರ್ಕಾರದ ಪರವಾಗಿ ಸ್ಟಾಕ್‌ಹೋಮ್ಸ್‌ ಬ್ಯಾಂಕೊ ಎಂಬ ಬ್ಯಾಂಕ್‌ ಯುರೋಪ್‌ನಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕೃತವಾಗಿ ಬ್ಯಾಂಕ್‌ ನೋಟುಗಳನ್ನು ಚಲಾವಣೆಗೆ ಬಿಟ್ಟಿತು. 1694ರ ಹೊತ್ತಿಗೆ ಇಂಗ್ಲೆಂಡ್‌ನ ರಾಜ ಮೂರನೇ ವಿಲಿಯಂನ ಮುತುವರ್ಜಿಯಿಂದಾಗಿ ಇಂಗ್ಲೆಂಡ್‌ನಲ್ಲಿ ಕಾಗದ ಕರೆನ್ಸಿ ಬಳಕೆ ಚಾಲ್ತಿಗೆ ಬಂತು.

ಯುರೋಪ್‌ನಾದ್ಯಂತ ನೋಟುಗಳ ಚಲಾವಣೆ ಹೆಚ್ಚುತ್ತಲೇ, ನಕಲಿ ನೋಟುಗಳ ಹಾವಳಿಯೂ ಮಿತಿಮೀರಿತು. ಇವುಗಳ ತಡೆಗೆ ವಾಟರ್‌ ಮಾರ್ಕ್‌ (ಜಲ ಗುರುತು-ಕಾಗದದ ಹಾಳೆಯನ್ನು ಬೆಳಕಿಗೆ ಹಿಡಿದಾಗ ನೋಟುಗಳನ್ನು ತಯಾರಿಸುವ ಅಧಿಕೃತ ಸಂಸ್ಥೆಯ ವಿವರಗಳು ಮಸುಕು ಮಸುಕಾಗಿ ಕಾಣುತ್ತದೆ) ಸೇರಿದಂತೆ ವಿವಿಧ ತಂತ್ರಜ್ಞಾನ ಅಳವಡಿಸಿ ನೋಟುಗಳನ್ನು ತಯಾರಿಸುವ ವಿಧಾನ ಜಾರಿಗೆ ಬಂತು.

ಅಮೆರಿಕದಲ್ಲಿ ನೋಟುಗಳು ಚಲಾವಣೆಗೆ ಬಂದದ್ದು ತೀರಾ ಇತ್ತೀಚೆಗೆ, ಅಂದರೆ 18ನೇ ಶತಮಾನದಲ್ಲಿ. ಅಮೆರಿಕದಲ್ಲಿದ್ದ ವಸಾಹತುಗಳ ಜನರು ಅಲ್ಲಿವರೆಗೂ ಅಲ್ಲಿನ ಮೂಲ ನಿವಾಸಿಗಳೊಂದಿಗೆ ವ್ಯವಹಾರ ನಡೆಸಲು ವಸ್ತುಗಳ ವಿನಿಮಯ ಪದ್ಧತಿಯನ್ನೇ ಅನುಸರಿಸುತ್ತಿದ್ದರು. 1775ರ ವೇಳೆಗೆ ಇಂಗ್ಲೆಂಡ್‌ನಿಂದ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಯುದ್ಧ ಆರಂಭವಾಗುವ ಹೊತ್ತಿಗೆ ಅಮೆರಿಕ ಖಂಡದ ಕಾಂಗ್ರೆಸ್‌ ಆಡಳಿತ, ‘ದ ಕಾಂಟಿನೆಂಟಲ್‌’ ಎಂಬ ಕಾಗದ ಕರೆನ್ಸಿಯನ್ನು ಚಲಾವಣೆಗೊಳಿಸಿತ್ತು.

ಈ ಕರೆನ್ಸಿ ಡಾಲರ್‌ನಲ್ಲಿತ್ತು. 1786ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಅಮೆರಿಕ ಸರ್ಕಾರ ಅಧಿಕೃತವಾಗಿ ನಾಣ್ಯಗಳ ತಯಾರಿಕೆ ಮತ್ತು ಚಲಾವಣೆ ಮಾಡಲು ಆರಂಭಿಸಿತು. 1861ರಲ್ಲಿ ನಾಗರಿಕ ಯುದ್ಧ ಆರಂಭವಾಗುವ ಹೊತ್ತಿಗೆ ಅಲ್ಲಿನ ಸರ್ಕಾರ ಅಮೆರಿಕ ಡಾಲರ್‌ ನೋಟುಗಳನ್ನು ಚಲಾವಣೆಗೆ ಬಿಟ್ಟಿತ್ತು.

ಆ ವೇಳೆಗಾಗಲೇ ಜಗತ್ತಿನಲ್ಲಿ ಮುದ್ರಣ ತಂತ್ರಜ್ಞಾನ ಸಾಕಷ್ಟು ಸುಧಾರಿಸಿತ್ತು. ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ವಿವಿಧ ರಾಷ್ಟ್ರಗಳು, ಹೆಚ್ಚು ಸುರಕ್ಷತಾ ಗುಣಲಕ್ಷಣಗಳನ್ನು ಹೊಂದಿದ್ದ ಹೊಸ ಹೊಸ ವಿನ್ಯಾಸದ ನೋಟುಗಳನ್ನು ಚಲಾವಣೆಗೆ ತಂದವು. 20ನೇ ಶತಮಾನದಲ್ಲಿ, ಮಾಹಿತಿ ತಂತ್ರಜ್ಞಾನ ಮುನ್ನೆಲೆಗೆ ಬಂದಾಗ ಡಿಜಿಟಲ್‌ ಕರೆನ್ಸಿಯ ಪರಿಕಲ್ಪನೆ ಮೊಳಕೆಯೊಡೆಯಿತು. ಅದಕ್ಕೆ ಪೂರಕವಾಗುವಂತೆ ಬ್ಯಾಂಕುಗಳು ಡೆಬಿಟ್‌/ ಕ್ರೆಡಿಟ್‌ಗಳನ್ನು ವಿತರಿಸಲು ಆರಂಭಿಸಿದವು. ಮುಂದುವರಿದ ರಾಷ್ಟ್ರಗಳು ಈಗ ಹೆಚ್ಚು ಡಿಜಿಟಲ್‌ ಕರೆನ್ಸಿಯತ್ತ ಮುಖಮಾಡುತ್ತಿವೆ. ನಗದು ಅರ್ಥ ವ್ಯವಸ್ಥೆಯ ಬದಲಾಗಿ ಡಿಜಿಟಲ್‌ ಅರ್ಥ ವ್ಯವಸ್ಥೆ ಸ್ಥಾಪಿಸಲು ಪ್ರಯತ್ನಿಸುತ್ತಿವೆ.

₹500,₹1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ನಮ್ಮ ದೇಶದಲ್ಲೂ ಡಿಜಿಟಲ್‌ ಅರ್ಥವ್ಯವಸ್ಥೆಯ ಬಗ್ಗೆ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ. ಇದು ಈಗಿನ ಕಾಲದ ಹಣ ಆಯಿತು. ನಮ್ಮಲ್ಲಿ ಹಿಂದೆ ಹಣದ ಚಲಾವಣೆ ಹೇಗಿತ್ತು? ಬಹುತೇಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ನಮ್ಮ ರೂಪಾಯಿಯ ಚರಿತ್ರೆ ದೊಡ್ಡದು. ಅದು ಬೆಳೆದು ಬಂದ ಹಾದಿಯತ್ತ ಒಮ್ಮೆ ಕಣ್ಣು ಹಾಯಿಸದಿದ್ದರೆ ಹಣದ ಬಗೆಗಿನ ಬರಹ ಅಪೂರ್ಣ...

(ಮುಂದುವರಿಯುವುದು...)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT