ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ. 20ರಿಂದ ಧಾರವಾಡ ಸಾಹಿತ್ಯ ಸಂಭ್ರಮ

Last Updated 21 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಧಾರವಾಡ: ‘ಧಾರವಾಡ ಸಾಹಿತ್ಯ ಸಂಭ್ರಮ’ದ ಐದನೇ ಆವೃತ್ತಿ ಜನವರಿ 20ರಿಂದ 3 ದಿನ ನಡೆಯಲಿದೆ. ಸಾಹಿತ್ಯ ಚರ್ಚೆಯ ಜತೆಗೆ ರಾಷ್ಟ್ರೀಯ ಜಲನೀತಿ ಹಾಗೂ ‘ಎಡ–ಬಲಗಳ ನಡುವೆ’ ಎಂಬ ರಾಷ್ಟ್ರೀಯ ಜ್ವಲಂತ ಸಮಸ್ಯೆಗಳ ಕುರಿತು ಎರಡು ವಿಶೇಷ ಗೋಷ್ಠಿಗಳನ್ನು ಈ ಬಾರಿ ಆಯೋಜಿಸಲಾಗಿದೆ.

‘ಪ್ರಜಾವಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿರುವ ಈ ಬಾರಿಯ ಸಂಭ್ರಮದಲ್ಲಿ 15 ಗೋಷ್ಠಿಗಳು, ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ನ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಅವರು ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ವಿಮರ್ಶಕ ಜಿ.ಎಚ್. ನಾಯಕ ಆಶಯ ಭಾಷಣ ಮಾಡಲಿದ್ದಾರೆ. ಗುರುಲಿಂಗ ಕಾಪಸೆ ಸಮಾರೋಪ ಭಾಷಣ ಮಾಡಲಿದ್ದು,  ಪ್ರಸಿದ್ಧ ಪುರಾಣಶಾಸ್ತ್ರಜ್ಞ ಮುಂಬೈನ ದೇವದತ್ತ ಪಟ್ಟನಾಯಕ ಈ ಬಾರಿ ಸಂಭ್ರಮದ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುಮತೀಂದ್ರ ನಾಡಿಗ, ಸುಂದರ ಸಾರುಕ್ಕೈ, ಲಕ್ಷ್ಮೀಶ ತೋಳ್ಪಾಡಿ, ವೈದೇಹಿ, ನಾ. ಡಿಸೋಜಾ, ಮಲ್ಲಿಕಾ ಘಂಟಿ, ಕೆ. ಸತ್ಯನಾರಾಯಣ. ನಟರಾಜ್‌ ಹುಳಿಯಾರ್‌, ಓ.ಎಲ್‌. ನಾಗಭೂಷಣಸ್ವಾಮಿ, ಇತರ ಲೇಖಕರು ಸಂವಾದದಲ್ಲಿ ಭಾಗವಹಿಸುತ್ತಿದ್ದಾರೆ. ಜತೆಗೆ 200 ಸಾಹಿತಿಗಳನ್ನು ಟ್ರಸ್ಟ್‌ ಆಹ್ವಾನಿಸಿದೆ’ ಎಂದರು.

‘ಸಾಹಿತ್ಯ ಸಂಭ್ರಮ ಯಾವುದೇ ಒಂದು ಪಂಥ ಹಾಗೂ ಸಿದ್ಧಾಂತಕ್ಕೆ ಸೀಮಿತವಲ್ಲ. ಇಲ್ಲಿ ಎಲ್ಲ ರೀತಿಯ ವಿಚಾರಗಳ ಅಭಿವ್ಯಕ್ತಿಗೂ ಅವಕಾಶವಿದೆ. ಬೇರೆ ಬೇರೆ ಸಿದ್ಧಾಂತಗಳ ಜನ ಇಲ್ಲಿ ಸೇರಿ ಮುಕ್ತ ಪರಿಸರದಲ್ಲಿ ಮುಖ್ಯ ವಿಷಯಗಳನ್ನು ಚರ್ಚಿಸುತ್ತಾರೆ. ವಿವಿಧ ಸಿದ್ಧಾಂತಗಳ ನಡುವೆ ಸಂವಾದ ನಡೆಯಬೇಕು ಎಂಬುದು ಸಂಭ್ರಮದ ಉದ್ದೇಶ’ ಎಂದರು.

‘ಸಾಹಿತ್ಯ ಸದಾ ಜನಪರವೇ?, ಭಕ್ತಿಪರಂಪರೆ ಮತ್ತು ಕನ್ನಡ ಕಾವ್ಯ, ವಚನ ಸಾಹಿತ್ಯ ಮತ್ತು ಜಾತಿ ನಿರಸನ, ಸಾಹಿತ್ಯ ಮತ್ತು ತತ್ವಜ್ಞಾನ ಮೊದಲಾದ ಚರ್ಚಾಗೋಷ್ಠಿಗಳು ನಡೆಯಲಿವೆ. ಸಾಹಿತಿಗಳು ಬರೆದ ಪತ್ರಗಳ ವಾಚನಗೋಷ್ಠಿಯೂ ಇರಲಿದೆ. ಚಿತ್ರಕಲೆ ಕುರಿತು ಒಂದು ಪ್ರಾತ್ಯಕ್ಷಿಕೆಯೂ ನಡೆಯಲಿದೆ. ಜಿ.ಪಿ. ರಾಜರತ್ನಂ ಮತ್ತು ವಿ.ಜಿ. ಭಟ್ಟರ ಕವಿತೆಗಳ ವಾಚನ, ಆಯ್ದ ಕನ್ನಡ ಕವಿತೆಗಳನ್ನು ಆಧರಿಸಿದ ವಿಡಿಯೊ, ಗೊಂದಲಿಗರ ಹಾಡಿನ ಪ್ರಾತ್ಯಕ್ಷಿಕೆ, ಸಾಹಿತ್ಯಿಕ ಪ್ರಸಂಗಗಳ ನಿರೂಪಣೆ ಇರಲಿದೆ’ ಎಂದು ಅವರು ಗೋಷ್ಠಿಗಳ ವಿವರ ನೀಡಿದರು.

‘ಇದರೊಂದಿಗೆ ಮೊದಲ ದಿನ ಪೂರ್ಣಿಮಾ ಭಟ್‌ ಕುಲಕರ್ಣಿ ಅವರಿಂದ ಶಾಸ್ತ್ರೀಯ ಗಾಯನ, 2ನೇ ದಿನ ಧಾರವಾಡ ರಂಗಾಯಣ ತಂಡ ಪ್ರಸ್ತುತಪಡಿಸುವ ‘ತಮಾಷಾ’ ನಾಟಕ ಪ್ರದರ್ಶನ, 3ನೇ ದಿನ ಟಿ.ಎಸ್‌. ನಾಗಾಭರಣ ನಿರ್ದೇಶನದ ಇನ್ನೂ ಬಿಡುಗಡೆಯಾಗದ ‘ಅಲ್ಲಮ’ ಚಲನಚಿತ್ರ ಪ್ರದರ್ಶನ ನಡೆಯಲಿದೆ’ ಎಂದರು.

‘ಈ ಬಾರಿಯೂ vividlipi.com ಅಂತರಜಾಲ ತಾಣದ ಮೂಲಕ ಸಂಭ್ರಮದ ನೇರ ಪ್ರಸಾರಕ್ಕೆ ಟ್ರಸ್ಟ್‌ ಯೋಜನೆ ರೂಪಿಸಿದೆ. ಆಸಕ್ತರು ತಾವು ಇರುವಲ್ಲಿಯೇ ಕಂಪ್ಯೂಟರ್‌ ಅಥವಾ ಗ್ಯಾಜೆಟ್‌ಗಳ ಮೂಲಕ ಸಂಭ್ರಮದ ಕಲಾಪಗಳನ್ನು ಆಸ್ವಾದಿಸಬಹುದಾಗಿದೆ. ಪುಸ್ತಕ ಮಳಿಗೆಗಳೂ ಇರಲಿವೆ. ಈ ಬಾರಿ ಪ್ರಸಿದ್ಧ ಸಾಹಿತಿಗಳು ಬರೆದ ಪತ್ರಗಳ ಪ್ರದರ್ಶನವೂ ಇರುತ್ತದೆ’ ಎಂದರು.

‘ಧಾರವಾಡ ಸಾಹಿತ್ಯ ಸಂಭ್ರಮ ಕುರಿತ ಮಾಹಿತಿಗೆ ಟ್ರಸ್ಟ್‌ನ ಅಂತರಜಾಲ ತಾಣವನ್ನು ಅಥವಾ ಮೊಬೈಲ್‌ ಸಂಖ್ಯೆ 98454–47002 ಸಂಪರ್ಕಿಸಬಹುದು’ ಎಂದು ಗಿರಡ್ಡಿ ತಿಳಿಸಿದರು.

ಡಿ.24ರಿಂದ ಆನ್‌ಲೈನ್‌ ನೋಂದಣಿ
ಸಂಭ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತರಿಗೆ ಆನ್‌ಲೈನ್‌ ನೋಂದಣಿ ಇದೇ ತಿಂಗಳ (ಡಿಸೆಂಬರ್‌) 24ರ ಬೆಳಿಗ್ಗೆ 10ಕ್ಕೆ ಆರಂಭವಾಗಲಿದೆ. www.dharwadsahityasambhrama.com ಜಾಲತಾಣದ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.

ನೋಂದಣಿ 300 ಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗಿದ್ದು, ಪ್ರವೇಶ ಶುಲ್ಕ ₹ 750ಕ್ಕೆ ನಿಗದಿಪಡಿಸಲಾಗಿದೆ. ಪ್ರವೇಶ ಸಿಗದವರಿಗೆ ಸಭಾಂಗಣದ ಹೊರಗೆ ಎಲ್‌.ಇ.ಡಿ ಪರದೆ ಅಳವಡಿಸಲಾಗುತ್ತಿದ್ದು, ಅಲ್ಲಿ 400 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT