ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಸಿನ ಮನೆ’ಯ ಗುಂಗಿನ ಆಚೆ ಈಚೆ

Last Updated 22 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಪ್ರಥಮ್‌
ಗಗನಚುಂಬಿ ಕಟ್ಟಡಗಳಿಗೆ ಸಾಥ್‌ ಕೊಡುವಂತೆ ಬೃಹತ್‌ ಪರದೆಗಳಲ್ಲಿ, ಹೋರ್ಡಿಂಗ್‌ಗಳಲ್ಲಿ ಪ್ರಕಟಿಸಿದ ಜಾಹೀರಾತುಗಳು ಪ್ರತಿಯೊಬ್ಬರ ಕಣ್ಣಿಗೆ  ಬಿದ್ದಿರುತ್ತದೆ. ಬೀಳಲೇಬೇಕು ಅನ್ನಿ. ನಾನು ಮೇಲೆ, ನಾನೇ ಮೇಲೆ ಎಂಬಂತಹ ಪೈಪೋಟಿಯ ಅಣಿಮುತ್ತುಗಳನ್ನು ಓದಿದಾಗ ಗೃಹ ಸಾಲ, ಇಎಂಐ, ಬಡ್ಡಿ, ಚಕ್ರಬಡ್ಡಿಗಳು ಎಷ್ಟೊಂದು ಲೀಲಾಜಾಲ ಎಂದು ಭಾಸವಾಗುತ್ತದೆ.

ಮನೆ ಅಥವಾ ಗೃಹ ಸಾಲಕ್ಕೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಎಲ್ಲರನ್ನೂ ಹಿಡಿದಿಡುವ ಪದ ‘ಕನಸಿನ ಮನೆ’. ಸ್ವಂತ ಮನೆ ಎಂಬ ಮಾಯಾಜಾಲ ಬೀಸಿ ಜನರನ್ನು ತಮ್ಮ ಗ್ರಾಹಕರನ್ನಾಗಿಸುವ ಮಂತ್ರದಂಡ ಈ ಪದ. ಇವೆಲ್ಲವೂ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಮಾರುಕಟ್ಟೆ ತಂತ್ರ.

ಅಸಲಿಗೆ, ಸ್ವಂತ ಮನೆ ಹೊಂದುವುದು ರಾತ್ರಿ ಬೆಳಗಾಗುವುದರೊಳಗೆ ಕೈಗೊಳ್ಳುವ ನಿರ್ಧಾರವಲ್ಲ. ಇದು ಗಂಭೀರವಾಗಿ ಯೋಚಿಸಿ ಕೈಗೊಳ್ಳುವ ‘ಲೈಫ್‌ಟೈಮ್‌’ ನಿರ್ಧಾರ. ಬದುಕಿನಷ್ಟೇ ತೂಕದ ನಿರ್ಣಯ.

ನಗರದ ಕೇಂದ್ರಭಾಗದಲ್ಲಿ ಐಷಾರಾಮಿ ಮನೆ ಹೊಂದುವುದು ತಮ್ಮ ಕೈಗೆಟಕುತ್ತದೆಯೇ ಎಂಬುದನ್ನು ತಮ್ಮ ತಮ್ಮ ಆದಾಯದ ನೆಲೆಯಲ್ಲಿ ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡಿರುತ್ತಾರೆ. ಆವರಣ ಗೋಡೆಯುದ್ದಗಲಕ್ಕೆ ಗಿಡ ಮರ ಇರುವ ಹಸಿರು ರಾಶಿಯ ನಡುವೆ ಸುಂದರ ಬಂಗ್ಲೆ ನಿರ್ಮಿಸುವ ಬಗ್ಗೆಯಾಗಲಿ, ವಿಲಾಸಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಖರೀದಿಸುವ ಇತಿಮಿತಿಯಾಗಲಿ ಅವರವರೇ ಬಲ್ಲರು.

ಶಿಕ್ಷಣ ಮುಗಿಸಿ ನೌಕರಿ ಪಡೆದು ಗೃಹ ಸಾಲಕ್ಕೆ ಡೌನ್‌ ಪೇಮೆಂಟ್‌ ಮಾಡುವಷ್ಟು ಕೂಡಿಟ್ಟುಕೊಳ್ಳುವ ಹೊತ್ತಿಗೆ ಅಷ್ಟು ದಿನ ಸ್ವಂತ ಮನೆ ಖರೀದಿಸುವ ಕುರಿತಾದ ಕನಸಿಗೆ ಬೇರೆಯೇ ಒಂದು ರೂಪ ಸಿಕ್ಕಿರುತ್ತದೆ. ನಿಜವಾಗಿಯೂ ಎಷ್ಟು ಹಣ ವ್ಯಯಿಸಲು ತಾವು ಸಮರ್ಥರು ಎಂಬ ವಾಸ್ತವದ ಅರಿವು ಮೊದಲ ವೇತನ ಬರುತ್ತಲೇ ತಮಗಾಗಿರುವುದೇ ಇದಕ್ಕೆ ಕಾರಣ.

ಇಷ್ಟರಲ್ಲಿ ಕನಸಿನ ಮನೆ ಹೊಂದುವ ಯೋಚನೆ ಮುಂದೋಡತೊಡಗುತ್ತದೆ. ಮತ್ತು ಬಹುತೇಕ ಸಂದರ್ಭಗಳಲ್ಲಿ ಮನೆ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚಿನವರು ಗಂಭೀರ ಪ್ರಮಾದಗಳನ್ನು ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ, ಮರುಮಾರಾಟದ ಸಂದರ್ಭದಲ್ಲಿ ಹೆಚ್ಚಿನವರು ಎಡವುತ್ತಾರೆ.

ಖರೀದಿಸುವ ಅಥವಾ ಆಯ್ಕೆ ಮಾಡಿಕೊಂಡ ಮನೆ ತಮ್ಮ ಕನಸಿನ ಮನೆ ಮನಸ್ಸಿನಲ್ಲಿರುವ ಮನೆಯ ಪಡಿಯಚ್ಚು ಆಗಿರಬೇಕಾಗಿಲ್ಲ. ಉದಾಹರಣೆಗೆ ಮಜಬೂತಾದ ಒಳಾಂಗಣ ವಿನ್ಯಾಸ, ವೆಸ್ಟರ್ನ್‌ ಮಾಡ್ಯುಲರ್‌ ಕಿಚನ್ ಇರಲೇಬೇಕಾಗಿಲ್ಲ. ಯಾಕೆಂದರೆ ಇವೆಲ್ಲವೂ ಒಟ್ಟಾರೆ ಬಜೆಟ್‌ ಹೆಚ್ಚಿಸುವ ಬಾಬತ್ತುಗಳು. ಹಳೆಯ ಮನೆಯನ್ನು ಖರೀದಿಸಿದರೆ ಹಿಂದಿನ ಮಾಲೀಕ ಮನೆಗೆ ವಿಲಾಸಿ ಮತ್ತು ಐಷಾರಾಮಿ ಸ್ಪರ್ಶ ನೀಡಿದ್ದ ಅನ್ನುವುದಕ್ಕಿಂತ ತಮ್ಮ ಸಾಮರ್ಥ್ಯಕ್ಕೆ ಯಾವುದು ನಿಲುಕುತ್ತದೆ ಎಂಬ ವಾಸ್ತವದ ಲೆಕ್ಕಾಚಾರವೇ ಮುಖ್ಯವಾಗುತ್ತದೆ.

ಇಷ್ಟಕ್ಕೂ, ಮನೆ ಖರೀದಿಸುವಾಗ ಗಮನಿಸಲೇಬೇಕಾದ ಕೆಲವು ಅಂಶಗಳಿವೆ: ಬೆಲೆ ನಮ್ಮ ಕೈಗೆಟುಕುವುದೇ, ಮಾರುಕಟ್ಟೆ ದರದನ್ವಯ ನಿಮಗೆ ಆ ಆಸ್ತಿ ಸಿಕ್ಕಿದೆಯೇ, ಲೆಕ್ಕಕ್ಕೆ ಸಿಗದ ಮೊತ್ತವನ್ನು ಪರಿಗಣಿಸಿದ್ದೀರಾ, ಖರೀದಿಸಿರುವ ಮನೆ ನಿಮಗೆ ಮತ್ತು ನಿಮ್ಮ ಭವಿಷ್ಯದ ಬದಲಾವಣೆಗಳಿಗೆ ಪೂರಕವಾಗಿದೆಯೇ, ಪ್ರದೇಶ ಸುರಕ್ಷಿತವಾಗಿದೆಯೇ, ಕಚೇರಿಗೂ ಮಕ್ಕಳ ಶಾಲೆಗೂ ಸುಲಭವಾಗಿ ಸಂಪರ್ಕ ಸಾಧಿಸಲು ಅನುಕೂಲಕರವಾಗಿದೆಯೇ, ಮುಂದಿನ ದಿನಗಳಲ್ಲಿ ಅನಿವಾರ್ಯವಾದರೆ ಮಾರಾಟ ಮಾಡಲು ಸಾಧ್ಯವೇ, ಕಟ್ಟಡದ  ವಯಸ್ಸಿನ ಬಗ್ಗೆ ನಿಮಗೆ ಸಿಕ್ಕಿರುವ ಮಾಹಿತಿ ನಿಖರವಾದುದೇ... ಹೀಗೆ.

ಸಾಮಾನ್ಯವಾಗಿ ಪ್ರತಿಷ್ಠಿತ ಡೆವಲಪರ್‌ಗಳು ಮಾರಾಟ ಮಾಡುವ ಹೊಸ ಗೃಹ ಯೋಜನೆಗಳನ್ನು ‘ನೀವೇನು ನೋಡುತ್ತಿದ್ದೀರೋ ಅದನ್ನೇ ಪಡೆಯುತ್ತಿದ್ದೀರಿ’ ಎಂಬ ಟ್ಯಾಗ್‌ಲೈನ್‌ನಡಿ  ಗ್ರಾಹಕರನ್ನು ಆಕರ್ಷಿಸುತ್ತವೆ. ಅಲ್ಲದೆ, ಸೆಕೆಂಡ್‌ಹ್ಯಾಂಡ್‌ ಆಸ್ತಿ ಮಾರಾಟದ ಸಂದರ್ಭದಲ್ಲಂತೂ ಯಾರದೋ ಕನಸುಗಳನ್ನು ನಿಮ್ಮದೆನ್ನುವಂತೆ ಬಿಂಬಿಸಲು ಯತ್ನಿಸುತ್ತಾರೆ.

ಬದುಕಿಗೊಂದು ಕನಸು... ನನಸಾಗಿಸುವ ಮನಸು... ಇವೆರಡಿದ್ದರೆ ಸಾಧನೆಗೊಂದು ಗುರಿ ಸಿಕ್ಕಿದಂತೆ. ಆದರೆ  ಮಾರುಕಟ್ಟೆಯಲ್ಲಿನ ವ್ಯತ್ಯಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಸರಿಯಾದ ನಿರ್ಧಾರ ಕೈಗೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು ಅಷ್ಟೇ.

(ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT