ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಪಾಲು ಸಮಸ್ಯೆಗೆ ಪರಿಹಾರ

ಅಂಗವಿಕಲರ ಹಕ್ಕುಗಳು
Last Updated 24 ಡಿಸೆಂಬರ್ 2016, 3:13 IST
ಅಕ್ಷರ ಗಾತ್ರ

1995ರ ಅಂಗವಿಕಲರ ಕಾಯ್ದೆ ‘ಹಲ್ಲಿಲ್ಲದ ಹುಲಿ’ಯಂತಿತ್ತು. ಅಂತಹ ಕಾಯ್ದೆ ಒಂದು ಇದೆ ಎಂಬುದು ಅಂಗವಿಕಲರಿಗೆ, ಪೋಷಕರಿಗೇ ಗೊತ್ತಿರಲಿಲ್ಲ. 1995ರ ಕಾಯ್ದೆಯಲ್ಲಿದ್ದ ಹೆಚ್ಚಿನ ಕೊರತೆಗಳನ್ನು ಹೊಸ ಮಸೂದೆಯಲ್ಲಿ ನಿವಾರಿಸಲಾಗಿದೆ. ಅಂಗವಿಕಲರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಸಂಸತ್‌ ಈ ಮಸೂದೆಯನ್ನು ಅಂಗೀಕರಿಸಿರುವುದು ಚರಿತ್ರಾರ್ಹ ಘಟನೆ.

ಅಂಗವೈಕಲ್ಯ ಎನ್ನುವುದು ಜಾತಿ ಆಧಾರಿತ,  ಧರ್ಮ, ಲಿಂಗ ಹಾಗೂ ಹಣಕಾಸಿನ ಸ್ಥಿತಿ ಆಧಾರಿತವಾಗಿಲ್ಲ. ಯಾರಿಗೆ ಬೇಕಾದರೂ ಅದು ಕಾಡಬಹುದು. ಅವರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ವೈದ್ಯಕೀಯವಾಗಿ (ಆರೋಗ್ಯ) ಪುನಶ್ಚೇತನಗೊಳಿಸಿ ಮುಖ್ಯವಾಹಿನಿಗೆ ತರುವ ಅವಶ್ಯಕತೆ ಇದೆ. ಇದಕ್ಕಾಗಿ ಸರ್ಕಾರದ ಎಲ್ಲ ಇಲಾಖೆಗಳ ನೆರವು ಬೇಕು. ಅವುಗಳ ನಡುವೆ ಸಮನ್ವಯ ಇರಬೇಕು. ಸಾಮಾನ್ಯರಿಗೆ ಇರುವ ಎಲ್ಲ ಹಕ್ಕುಗಳು ಅಂಗವಿಕಲರಿಗೂ ಇವೆ ಎಂದು ಇತ್ತೀಚಿನವರೆಗೆ ಯಾರೂ ಪರಿಗಣಿಸಿರಲಿಲ್ಲ. ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ಜನರಲ್ಲಿ ಅರಿವಿರಲಿಲ್ಲ. ಅಂಗವಿಕಲರಿಗಾಗಿ ಇರುವ ಆಧುನಿಕ ಪರಿಕರಗಳು ಮತ್ತು ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಬಹುದು ಎಂಬುದರ ಬಗ್ಗೆಯೂ ಚಿಂತಿಸಿರಲಿಲ್ಲ. ಕಾಲಿಲ್ಲದವನಿಗೆ ಮತ್ತು ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿದ್ದವನಿಗೆ ವಿತರಿಸುತ್ತಿದ್ದ  ಗಾಲಿ ಕುರ್ಚಿಗಳು ಒಂದೇ ರೀತಿಯಿದ್ದವು!

2010ರವರೆಗೂ ಈ ಚಿತ್ರಣ ಬದಲಾಗಿರಲಿಲ್ಲ. ಆ ನಂತರ ಅಂಗವೈಕಲ್ಯದ ಬಗ್ಗೆ ಹೆಚ್ಚು ಜಾಗೃತಿ ಮೂಡುವ ಕೆಲಸ ನಡೆಯಿತು. ಅಂಗವಿಕಲರನ್ನು ಪುನಶ್ಚೇತನಗೊಳಿಸುವುದು ಹಕ್ಕು ಆಧಾರಿತ, ಅಭಿವೃದ್ಧಿ ಆಧಾರಿತ ಕೆಲಸ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭವಾಯಿತು. ಇದರ ಮುಂದುವರಿದ ಹೆಜ್ಜೆಯೇ ಹೊಸ ಮಸೂದೆ. ಇದು ಅಂಗವಿಕಲರ ಹಕ್ಕುಗಳ ರಕ್ಷಣೆಯನ್ನು ಹೊಸ ಮಜಲಿಗೆ ಕೊಂಡೊಯ್ದಿದೆ. ಆದರೆ ಈ ಮಸೂದೆಯಲ್ಲಿ ಇರುವುದು ಒಂದೇ ಒಂದು ಕೊರತೆ. ಉಳಿದವೆಲ್ಲವೂ ಸಕಾರಾತ್ಮಕ ಅಂಶಗಳೆ.

ಹಣಕಾಸಿನ ಇತಿಮಿತಿಗಳಲ್ಲಿ, ಸಂಪನ್ಮೂಲಗಳ ಲಭ್ಯತೆ ನೋಡಿಕೊಂಡು ರಾಜ್ಯ ಸರ್ಕಾರಗಳು ಅಂಗವಿಕಲರಿಗಾಗಿ ಯೋಜನೆಗಳನ್ನು ರೂಪಿಸಬೇಕು ಎಂಬ ಒಂದು ಅಂಶ ಮಸೂದೆಯಲ್ಲಿದೆ. ಆದರೆ, ಇದು ಸರಿಯಾದ ನಿರ್ಧಾರವಲ್ಲ. ಮೆಟ್ರೊ ಸೇರಿದಂತೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಬೃಹತ್‌ ಯೋಜನೆಗಳಿಗೆ ಭಾರಿ ದುಡ್ಡನ್ನು ವ್ಯಯಿಸುವ ಸರ್ಕಾರಗಳಿಗೆ ಅಂಗವಿಕಲರಿಗೆ ಬೇಕಾದಷ್ಟು ಸಂಪನ್ಮೂಲ ಕ್ರೋಡೀಕರಿಸುವುದು  ಸಾಧ್ಯವಿಲ್ಲವೇ?

ಇದರ ಹೊರತಾಗಿ, ಅಂಗವಿಕಲರ ಪುನಶ್ಚೇತನ, ಅವರನ್ನು ಮುಖ್ಯವಾಹಿನಿಗೆ ತರಲು ಪೂರಕವಾಗುವಂತಹ ಹಲವಾರು ಅಂಶಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ವಿವಿಧ ಬಗೆಯ ಕಾಯಿಲೆಗಳನ್ನು ಅಂಗವೈಕಲ್ಯದ ಪಟ್ಟಿಗೆ ಸೇರಿಸಿರುವುದರಿಂದ ಈ ರೋಗಿಗಳಿಗೆ ವೈದ್ಯಕೀಯ ಪುನಶ್ಚೇತನ ಸಿಗಲಿದೆ. 21 ನ್ಯೂನತೆಗಳ ಜೊತೆಗೆ, ಬೇರೆ ಯಾವುದಾದರೂ ಅಂಗವೈಕಲ್ಯ ಇದ್ದರೆ ಕೇಂದ್ರ ಸರ್ಕಾರ ಅವುಗಳನ್ನು ಪಟ್ಟಿಗೆ ಸೇರಿಸಲು ಅವಕಾಶವೂ ಇದೆ.

ಇನ್ನೊಂದು ಮಹತ್ವದ ವಿಷಯ ಎಂದರೆ ಉತ್ತರದಾಯಿತ್ವದ ಹಂಚಿಕೆ. ಇಲ್ಲಿ ಜವಾಬ್ದಾರಿಗಳನ್ನು ವಿಕೇಂದ್ರೀಕರಣಗೊಳಿಸಲಾಗಿದೆ. ಇದುವರೆಗೂ, ಅಂಗವಿಕಲರ ವಿಷಯ ರಾಜ್ಯಗಳಿಗೆ ಬಿಟ್ಟಿದ್ದು ಎಂದು ಕೇಂದ್ರ ಸರ್ಕಾರ ಹೇಳುತ್ತಾ ಬಂದಿತ್ತು. ಆದರೆ, ಈ ಮಸೂದೆಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಜೊತೆಗೆ ಸ್ಥಳೀಯ ಆಡಳಿತಗಳಿಗೂ ಹೊಣೆ ಹೊರಿಸಲಾಗಿದೆ.

ಅಂಗವಿಕಲರಿಗಾಗಿಯೇ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರತ್ಯೇಕ ಪೀಠವನ್ನು ಸ್ಥಾಪಿಸಬೇಕು ಎಂದೂ ಮಸೂದೆ ಹೇಳುತ್ತದೆ. ಏಳು ವರ್ಷ ಅನುಭವ ಹೊಂದಿರುವ ವಕೀಲರೊಬ್ಬರನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ನೇಮಕ ಮಾಡುವುದಕ್ಕೂ ಅವಕಾಶ ಇದೆ.

ಆಸ್ತಿ ಹಂಚಿಕೆಯಲ್ಲಿ ಅನ್ಯಾಯ ಆದರೆ, ಹಣಕಾಸಿನ ವಿಚಾರದಲ್ಲಿ ಮೋಸ ಆದರೆ ಆಯುಕ್ತರಿಗೆ ದೂರು ಸಲ್ಲಿಸಲು ಅಥವಾ ಆಯುಕ್ತರೇ ಸ್ವಯಂ ದೂರು ದಾಖಲಿಸಿಕೊಳ್ಳಲು ಅವಕಾಶ ಇದೆ. ಅಂಗವಿಕಲರಿಗೆ ವಿಮಾ ಸೌಲಭ್ಯ ಪಡೆಯುವುದಕ್ಕೆ ಅನುವು ಮಾಡಲಾಗಿದೆ. ಬ್ಯಾಂಕ್‌, ಅಂಚೆ ಕಚೇರಿಗಳು ಸಾಲ ಸೌಲಭ್ಯ ಕಲ್ಪಿಸಬೇಕು ಎಂದೂ ಮಸೂದೆ ಹೇಳುತ್ತದೆ.

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅಂಗವಿಕಲರ ಆಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದುವರೆಗೂ ಆಯುಕ್ತರಿಗೆ ಅರೆ ನ್ಯಾಯಿಕ  ಅಧಿಕಾರ ಇತ್ತು. ಈ ಮಸೂದೆಯಲ್ಲಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರವನ್ನು ಕೊಡಲಾಗಿದೆ.

ಕೇಂದ್ರ ಮಟ್ಟದಲ್ಲಿ ಮುಖ್ಯ ಆಯುಕ್ತರಿಗೆ ಸಹಾಯಕರಾಗಿ ಇಬ್ಬರು ಕಮಿಷನರ್‌ಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ (ಇವರಲ್ಲಿ ಒಬ್ಬರು ಅಂಗವಿಕಲರು ಆಗಿರಬೇಕು ಎಂಬ ಷರತ್ತು ಇದೆ). ಜೊತೆಗೆ, 11 ಸದಸ್ಯರನ್ನೊಳಗೊಂಡ ಸಲಹಾ ಮಂಡಳಿ ರಚನೆಗೆ ಶಿಫಾರಸು ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಐವರು ಸದಸ್ಯರನ್ನೊಳಗೊಂಡ ಸಲಹಾ ಮಂಡಳಿಯ ಸ್ಥಾಪನೆಗೆ ಅವಕಾಶ ಇದೆ (ಈ ಮಂಡಳಿಗಳ ಸದಸ್ಯರ ಅರ್ಹತೆಗೂ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ).

ಕೇಂದ್ರ ಸರ್ಕಾರ ಅಂಗವಿಕಲರಿಗಾಗಿ ಪ್ರತಿ ವರ್ಷ ಯೋಜನೆಗಳನ್ನು ರೂಪಿಸುವಾಗ ಮುಖ್ಯ ಆಯುಕ್ತರನ್ನು, ರಾಜ್ಯ ಸರ್ಕಾರಗಳು ರಾಜ್ಯದ ಆಯುಕ್ತರನ್ನು ಸಂಪರ್ಕಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಂಗವಿಕಲರ ಸಮಸ್ಯೆಯನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಸದ್ಯ, ಅಂಗವಿಕಲರು ತಮ್ಮ ದೂರುಗಳನ್ನು ನೇರವಾಗಿ ಆಯುಕ್ತರಿಗೆ ನೀಡುವ ವ್ಯವಸ್ಥೆ ಇದೆ. ಆದರೆ, ಹೊಸ ಕಾಯ್ದೆ ಜಾರಿಗೆ ಬಂದರೆ ದೂರು ನೀಡಲು ಅಂಗವಿಕಲರಿಗೆ ಹಲವು ಆಯ್ಕೆಗಳು ಲಭ್ಯವಿರಲಿವೆ. ಬೇರೆಯವರಿಂದ ಅನ್ಯಾಯ ಆದರೆ, ಸ್ಥಳೀಯ ಠಾಣೆಯಲ್ಲಿ ದೂರು ನೀಡಬಹುದು. ಪೊಲೀಸರು  ಅದನ್ನು ಸ್ವೀಕರಿಸಿ, ಸಮಸ್ಯೆ ಬಗೆಹರಿಸಲು ಯತ್ನಿಸಬೇಕು. ಒಂದು ವೇಳೆ ಅಲ್ಲಿ ಆಗಲಿಲ್ಲ ಎಂದಾದರೆ, ಸ್ಥಳೀಯ ಮ್ಯಾಜಿಸ್ಟ್ರೇಟ್‌ ಗಮನಕ್ಕೆ ತರಬೇಕು. ಅಲ್ಲೂ ಸಮಸ್ಯೆ ಇತ್ಯರ್ಥ ಆಗದಿದ್ದರೆ ನಂತರ ಆಯುಕ್ತರ ಹತ್ತಿರ ಬರಬಹುದು.

ಮಸೂದೆಯಲ್ಲಿನ ಮತ್ತೊಂದು ವೈಶಿಷ್ಟ್ಯ ಎಂದರೆ ಕಾಲಮಿತಿ ನಿಗದಿಪಡಿಸಿರುವುದು. ಮುಖ್ಯ ಆಯುಕ್ತರು ಅಥವಾ ಆಯುಕ್ತರು ಯಾವುದೇ ಆದೇಶ ಹೊರಡಿಸಿದರೆ, 3 ತಿಂಗಳೊಳಗೆ ಆದೇಶ ಒಪ್ಪಿಕೊಂಡು ಅನುಷ್ಠಾನಗೊಳಿಸಿ ವರದಿ ನೀಡಬೇಕು. ಒಂದು ವೇಳೆ ಆದೇಶವನ್ನು ಒಪ್ಪದಿದ್ದರೆ ಅದಕ್ಕೆ ವಿವರಣೆಯನ್ನೂ ನೀಡಬೇಕು. ಮಸೂದೆ ಅಂಗೀಕಾರ ಆದ ತಕ್ಷಣ ಎರಡು ವರ್ಷಗಳಲ್ಲಿ ದೇಶದಲ್ಲಿರುವ ಅಂಗವಿಕಲರ ಬಗ್ಗೆ ಸಮೀಕ್ಷೆ ನಡೆಸಬೇಕು ಎಂಬ ಅಂಶವೂ ಇದರಲ್ಲಿದೆ. ಮೀಸಲಾತಿ ಪ್ರಮಾಣವನ್ನು ಶೇ 3ರಿಂದ ಶೇ 4ಕ್ಕೆ ಹೆಚ್ಚಿಸಲಾಗಿದೆ.

ಇವೆಲ್ಲ ಮಸೂದೆಯಲ್ಲಿ ಕಂಡ ಕೆಲವು ಸಕಾರಾತ್ಮಕ ಅಂಶಗಳು. ಮುಂದಿನ ದಿನಗಳಲ್ಲಿ ಇದು ಕಾಯ್ದೆಯಾಗಿ ಅನುಷ್ಠಾನಗೊಂಡರೆ, ಅಂಗವಿಕಲರು ಎದುರಿಸುತ್ತಿರುವ ಬಹುಪಾಲು ಸಮಸ್ಯೆಗಳು ಬಗೆಹರಿಯಲಿವೆ. ಅವರನ್ನು ಮುಖ್ಯವಾಹಿನಿಗೆ ಸೇರಿಸುವ ಪ್ರಯತ್ನ ಮತ್ತಷ್ಟು ಸುಲಭವಾಗಲಿದೆ.

ಪ್ರತ್ಯೇಕ ಸಚಿವಾಲಯ ಬೇಕಿಲ್ಲ; ಕಾರ್ಯದರ್ಶಿ ಬೇಕು

ಅಂಗವಿಕಲರ ಸಬಲೀಕರಣ ಯೋಜನೆಗಳ ಅನುಷ್ಠಾನದಲ್ಲಿ ಸತತವಾಗಿ ಹಲವು ವರ್ಷಗಳಿಂದ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅಂಗವಿಕಲರ ಇಲಾಖೆಯು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯೊಂದಿಗೆ ಸೇರಿಕೊಂಡಿದೆ. ಆದರೆ, ಅಂಗವಿಕಲರಿಗಾಗಿ ಪ್ರತ್ಯೇಕ ನಿರ್ದೇಶನಾಲಯವಿದೆ.

ಸಚಿವಾಲಯ ಅದೇ ಇರಲಿ; ಪ್ರತ್ಯೇಕ ಕಾರ್ಯದರ್ಶಿಯೊಬ್ಬರನ್ನು ಸರ್ಕಾರ ನೇಮಕ ಮಾಡಬೇಕು ಎಂಬುದು ನಮ್ಮ ಬಹುದಿನಗಳ ಬೇಡಿಕೆ. ಕಾರಣ ಇಷ್ಟೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅವರೇ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಚಿವಾಲಯದ ಕಾರ್ಯದರ್ಶಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿ ತುಂಬಾ ವಿಸ್ತಾರವಾದುದು. ಅಲ್ಲಿ ಕೆಲಸದ ಹೊರೆ ಹೆಚ್ಚಿರುತ್ತದೆ. ಮಹಿಳೆಯರು, ಮಕ್ಕಳಿಗೆ ಸಂಬಂಧಿಸಿದ ವಿಷಯಗಳೇ ಸಾಕಷ್ಟು ಇರುತ್ತವೆ. ನಿರ್ಲಕ್ಷ್ಯಕ್ಕೆ ಒಳಗಾಗಿರುವ  ನಾಲ್ಕು ವರ್ಗಗಳಿಗೆ (ಮಹಿಳೆ, ಮಕ್ಕಳು, ಅಂಗವಿಕಲರು ಮತ್ತು ಹಿರಿಯ ನಾಗರಿಕರು) ಸಂಬಂಧಿಸಿದ ಎಲ್ಲ ಸಮಿತಿಗಳಿಗೆ ಕಾರ್ಯದರ್ಶಿಯಾದವರು ಒಂದೋ ಮುಖ್ಯಸ್ಥರಾಗಿರುತ್ತಾರೆ ಇಲ್ಲವೇ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಎಲ್ಲವನ್ನೂ ನಿರ್ವಹಿಸುವುದು ಒಬ್ಬರಿಗೆ ಕಷ್ಟ. ಇದರಿಂದಾಗಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದು. ಉದಾಹರಣೆಗೆ, ಅಂಗವಿಕಲರನ್ನು ಶಿಕ್ಷಣದ ಮುಖ್ಯವಾಹಿನಿಗೆ ಸೇರಿಸಲು 2004ರಲ್ಲಿ ‘ಸಮನ್ವಯ ಶಿಕ್ಷಣ ನೀತಿ’ ಕರಡನ್ನು ಸಿದ್ಧಪಡಿಸಲಾಗಿದೆ. ಆ ನೀತಿ ಇನ್ನೂ ಹಾಗೆಯೇ ಇದೆ. ಸಂಪುಟ ಸಭೆಯಲ್ಲಿ ಅದು ಇದುವರೆಗೆ ಪ್ರಸ್ತಾಪವಾಗಿಲ್ಲ.

ಇಲಾಖೆಯ ಕಾರ್ಯದರ್ಶಿಯಾದವರು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜೊತೆ  ಚರ್ಚಿಸಿ ನೀತಿಗೆ ಒಪ್ಪಿಗೆ ಪಡೆಯಲು ಕ್ರಮ ಕೈಗೊಳ್ಳಬೇಕು. ಆದರೆ, ಇದುವರೆಗೆ ಆ ಬೆಳವಣಿಗೆ ನಡೆದಿಲ್ಲ.

ನಮ್ಮಲ್ಲಿ ಅಂಗವಿಕಲರ ನಿರ್ದೇಶನಾಲಯ ಇದೆ. ಆದರೆ, ನಿರ್ದೇಶಕರ ಹುದ್ದೆ ಕೆಎಎಸ್‌ ಶ್ರೇಣಿಯದ್ದು. ಬೇರೆ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳೆಲ್ಲ ಐಎಎಸ್‌ ಅಧಿಕಾರಿಗಳು. ಕೆಎಎಸ್ ಅಧಿಕಾರಿಯೊಬ್ಬ, ಐಎಎಸ್‌ ಅಧಿಕಾರಿಗಳಿಗೆ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಆದೇಶ ಹೊರಡಿಸಲು ಸಾಧ್ಯವೇ? ಕನಿಷ್ಠ ಪಕ್ಷ  ನಿರ್ದೇಶಕರ ಹುದ್ದೆ ಮೇಲ್ದರ್ಜೆಗೆ ಏರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
ಅಂಗವಿಕಲರ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನೋಡಲ್‌ ಅಧಿಕಾರಿಯಾದರೆ, ಜಿಲ್ಲಾ ಮಟ್ಟದಲ್ಲಿ ಅದೇ ಇಲಾಖೆ ಉಪನಿರ್ದೇಶಕರು  ನೋಡಲ್‌ ಅಧಿಕಾರಿಗಳು. ಪ್ರತಿ ಜಿಲ್ಲೆಯಲ್ಲಿ ಅಂಗವಿಕಲರ ಕಲ್ಯಾಣ ಅಧಿಕಾರಿ ಇರುತ್ತಾರೆ. ‘ಬಿ’ ಗುಂಪಿನ (ಕ್ಲಾಸ್‌ 2) ಅಧಿಕಾರಿಯಾಗಿರುವ ಇವರಿಗೆ ಯಾವ ಅಧಿಕಾರವೂ ಇಲ್ಲ! ಕನಿಷ್ಠ ಈ ಹುದ್ದೆಗಳನ್ನು ‘ಎ’ ಗುಂಪಿಗೆ ಮೇಲ್ದರ್ಜೆಗೆ ಏರಿಸಿ, ಸ್ವಲ್ಪ ಅಧಿಕಾರ ಕೊಟ್ಟರೆ ಅಂಗವಿಕಲರ ಯೋಜನೆಗಳ ಅನುಷ್ಠಾನ ಇನ್ನಷ್ಟು ಪರಿಣಾಮಕಾರಿಯಾಗಬಹುದು.

ನಮ್ಮಲ್ಲಿ ಗ್ರಾಮೀಣ ಅಂಗವಿಕಲರ ಪುನಶ್ಚೇತನ ಯೋಜನೆ ಎಂಬ ಕಾರ್ಯಕ್ರಮ ಇದೆ. ಇದರ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪುನಶ್ಚೇತನ ಕಾರ್ಯಕರ್ತರು (ವಿಆರ್‌ಡಬ್ಲ್ಯು) ತಾಲ್ಲೂಕು ಮಟ್ಟದಲ್ಲಿ ಬಹು–ಪುನಶ್ಚೇತನ ಕಾರ್ಯಕರ್ತರು (ಎಂಆರ್‌ಡಬ್ಲ್ಯು) ಸೇವೆ ಸಲ್ಲಿಸುತ್ತಿದ್ದಾರೆ.

ಪ್ರತಿ ಜಿಲ್ಲೆಯಲ್ಲಿರುವ ಜಿಲ್ಲಾ ಅಂಗವಿಕಲರ ಪುನಶ್ಚೇತನ ಕೇಂದ್ರಗಳಲ್ಲಿ (ಡಿಡಿಆರ್‌ಸಿ) ತಲಾ 19 ತಾಂತ್ರಿಕ ಸಿಬ್ಬಂದಿ ಇದ್ದಾರೆ. ಇದಲ್ಲದೆ ಸಾಕಷ್ಟು ಹಣವೂ ಇದೆ (ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆ ಅಡಿಯಲ್ಲಿ ಬಡತನ ನಿರ್ಮೂಲನೆ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ವಿವಿಧ ಯೋಜನೆಗಳಿಗೆ ನಿಗದಿಪಡಿಸಿರುವ ಅನುದಾನದಲ್ಲಿ ಶೇ 3ರಷ್ಟು ಅಂಗವಿಕಲರಿಗೆ ಮೀಸಲು (ಹೊಸ ಮಸೂದೆಯಲ್ಲಿ ಇದನ್ನು ಶೇ 5ಕ್ಕೆ ಹೆಚ್ಚಿಸಲಾಗಿದೆ). ಈ ಮೊತ್ತ ₹ 100 ಕೋಟಿಗಳಷ್ಟಿದೆ. ಇದಲ್ಲದೆ ಸಂಸದರ ನಿಧಿಯಿಂದ ತಲಾ ₹ 10 ಲಕ್ಷ ರಾಜ್ಯದ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರ ನಿಧಿಯಿಂದ ತಲಾ ₹ 10 ಲಕ್ಷ ಲಭ್ಯವಿದೆ).

ಇಷ್ಟೆಲ್ಲ ಇದ್ದರೂ ಯೋಜನೆಗಳ ಜಾರಿ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಇದಕ್ಕಾಗಿ ಇಲಾಖೆಯನ್ನು ಇನ್ನಷ್ಟು ಬಲಪಡಿಸಬೇಕು.

ಸರ್ಕಾರ ಅಳವಡಿಸಬಹುದಾದ ಒಂದು ಸರಳ ಸೂತ್ರದಿಂದ ಅಂಗವಿಕಲರ ಮೊಗದಲ್ಲಿ ಶಾಶ್ವತವಾಗಿ ನಗು ಕಾಣುವಂತೆ ಮಾಡಬಹುದು...
* ರಾಜ್ಯ ಮಟ್ಟದಲ್ಲಿ ಯೋಜನೆಗಳು, ನೀತಿಗಳ ನಿರೂಪಣೆ
* ಜಿಲ್ಲಾ ಮಟ್ಟದಲ್ಲಿ ಸೂಕ್ತ ನಿರ್ದೇಶನ ಮತ್ತು ಮಾರ್ಗದರ್ಶನ
* ತಾಲ್ಲೂಕು ಮಟ್ಟದಲ್ಲಿ ಯೋಜನೆಗಳ ಮೇಲ್ವಿಚಾರಣೆ
* ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅವುಗಳ ಅನುಷ್ಠಾನ

ನಿರೂಪಣೆ: ಸೂರ್ಯನಾರಾಯಣ ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT