ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ವರ್ಗ ಅನಗತ್ಯ

ಅಂಗವಿಕಲರ ಹಕ್ಕುಗಳು
Last Updated 23 ಡಿಸೆಂಬರ್ 2016, 20:24 IST
ಅಕ್ಷರ ಗಾತ್ರ

ಮಸೂದೆಯಲ್ಲಿ 21 ವರ್ಗಗಳನ್ನು ಗುರುತಿಸುವ ಅಗತ್ಯವಿರಲಿಲ್ಲ. ಮೊದಲಿದ್ದ ಮೂರು ವರ್ಗಗಳನ್ನೇ ಮುಂದುವರಿಸಬಹುದಿತ್ತು. ಅಂಧರಲ್ಲಿ ಮತ್ತೆ ಮೂರು ವಿಭಾಗಗಳನ್ನು ಮಾಡಲಾಗಿದೆ. ಇದು ಕೂಡ ಅನಗತ್ಯವಾಗಿತ್ತು. ಈ ಮೊದಲು ಅಂಧರಿಗೆ ಶೇ 1 ಮೀಸಲಾತಿ ನೀಡಲಾಗಿತ್ತು. ನೂತನ ಮಸೂದೆಯಲ್ಲಿ ಮತ್ತೆ ಶೇ 1ರಷ್ಟು ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಇದರಿಂದ  ಅಂಧರಿಗೇ ಶೇ 2ರಷ್ಟು ಮೀಸಲಾತಿ ದೊರೆತಿದೆ. ಹೊಸ ಮಸೂದೆಯಲ್ಲಿ ನ್ಯಾಯಾಂಗ ಅಧಿಕಾರ, ಸಮಾನ ಆಸ್ತಿ ಹಕ್ಕುಗಳನ್ನು ಸೇರಿಸಿರುವುದರಿಂದ ಅಂಗವಿಕಲರಿಗೆ ಶಕ್ತಿ ತುಂಬಿದಂತಾಗಿದೆ. ಪುನರ್ವಸತಿ, ಚಿಕಿತ್ಸೆ, ವಸತಿ ಶಾಲೆಗಳ ನಿರ್ವಹಣೆ, ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಅಂಗವಿಕಲರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ಮಸೂದೆ ಸಹಾಯಕವಾಗಲಿದೆ.
- ಸಿದ್ಧರಾಜು, ಪ್ರಧಾನ ಕಾರ್ಯದರ್ಶಿ, ರಾಜ್ಯ ಸರ್ಕಾರಿ ಹಾಗೂ ಅಂಗಸಂಸ್ಥೆಗಳ ಅಂಧ ನೌಕರರ ಸಂಘ

ಮಹಿಳೆಯರಿಗೆ ಭದ್ರತೆ
ಮಸೂದೆಯಲ್ಲಿ ಮಹಿಳೆಯರ ಭದ್ರತೆಗೆ ಹೆಚ್ಚು ಒತ್ತು ನೀಡಿರುವುದು ಸಂತಸದ ವಿಚಾರ. ಮೀಸಲಾತಿ ಮತ್ತು ಪುನರ್ವಸತಿ ಅವಕಾಶಗಳನ್ನು ಹೆಚ್ಚಿಸಿರುವುದರಿಂದ ಅವಕಾಶವಂಚಿತ ಯುವತಿಯರು ಮತ್ತು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ ಎಂಬ ನಂಬಿಕೆ ಇದೆ.
ಭದ್ರತೆ, ಶಿಕ್ಷಣ ಮತ್ತು ಕ್ರೀಡೆಗೆ ಸಂಬಂಧಿಸಿದಂತೆ ಮಸೂದೆಯಲ್ಲಿ ಹೊಸ ಅಂಶಗಳನ್ನು ಸೇರಿಸಲಾಗಿದೆ. ಕ್ರೀಡಾ ಪ್ರಾಧಿಕಾರದ ಸಹಯೋಗದಲ್ಲಿ ತರಬೇತಿ ಸೌಲಭ್ಯಗಳು ಮತ್ತು ಸಹಾಯಧನ ನೀಡುವ ಅಂಶ ಇರುವುದರಿಂದ ಯುವ ಕ್ರೀಡಾಪಟುಗಳ ಹುಮ್ಮಸ್ಸು ಹೆಚ್ಚಾಗಿದ್ದು ಹೊಸ ಭರವಸೆ ಮೂಡಿದೆ.
- ಮಾಲತಿ ಹೊಳ್ಳ, ಕ್ರೀಡಾಪಟು

ದೃಷ್ಟಿಕೋನ ಬದಲಾಗಲಿ
ಅಂಗವಿಕಲರ  ಬಗ್ಗೆ ಇರುವ ಸಾಮಾಜಿಕ ದೃಷ್ಟಿಕೋನಗಳೂ ಬದಲಾಗಬೇಕಿದೆ. ಅಂಗವಿಕಲರನ್ನು ಭೇದಭಾವದಿಂದ ನೋಡಿದರೆ ಶಿಕ್ಷೆ ವಿಧಿಸುವುದನ್ನು ಮಸೂದೆಯಲ್ಲಿ ಸೇರಿಸಿರುವುದರಿಂದ ಆ ಸಮುದಾಯದವರಿಗೆ ಬಲ ಸಿಕ್ಕಂತಾಗಿದೆ.

ಅಂಗವಿಕಲರಿಗೆ ಪುನರ್ವಸತಿ ಮತ್ತು ಮೀಸಲಾತಿ ಕಲ್ಪಿಸುವುದು ಒಳ್ಳೆಯದು. ಆದರೆ ಅವರನ್ನು  ಪ್ರತ್ಯೇಕಿಸುವುದು ಯಾಕೆ? ಉದಾಹರಣೆಗೆ, ಸಮಾಜದಲ್ಲಿ ಅಂಗವಿಕಲರ ಶಾಲೆ, ಅಂಧರ ಶಾಲೆ ಎಂದು ಗುರುತಿಸುವುದು ಏಕೆ? ಅದೇ ಸಾಮಾನ್ಯರ ಶಾಲಾ ಕಾಲೇಜುಗಳನ್ನು ಅಂಗವಿಕಲರು ಇಲ್ಲದ ಶಾಲೆಗಳು, ಅಂಧರು ಇಲ್ಲದ ಕಾಲೇಜುಗಳು ಎಂದು ಗುರುತಿಸಲಾಗುತ್ತದೆಯೇ, ಇಲ್ಲ! ಹಾಗಾಗಿ ಜನರ ಮನಸ್ಸು, ದೃಷ್ಟಿಕೋನ ಬದಲಾದಾಗ ಮಾತ್ರ ತಾರತಮ್ಯ ಹೋಗಲಾಡಿಸಲು ಸಾಧ್ಯ. ಕಾನೂನು ಪರಿಪಾಲನೆಯಲ್ಲಿ ಸರ್ಕಾರಿ ಸಿಬ್ಬಂದಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಮಾತ್ರ ಕಾಯ್ದೆ ಉಪಯೋಗಕ್ಕೆ ಬರುತ್ತದೆ.

-ಎಂ.ಕೆ.ಶ್ರೀಧರ್, ಪ್ರಾಧ್ಯಾಪಕ

ಸ್ಪಷ್ಟತೆ ಇಲ್ಲ
ಶ್ರವಣದೋಷ ಉಳ್ಳವರು ಮತ್ತು ಮಾತನಾಡದವರಿಗೆ (ಮೂಗರು) ಈ ನೂತನ ಮಸೂದೆಯಲ್ಲಿ ಯಾವ ರೀತಿ ಮೀಸಲಾತಿ ಮತ್ತು ಪುನರ್ವಸತಿ ಕಲ್ಪಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಕಾಣುತ್ತಿಲ್ಲ. ಶ್ರವಣ ಚಿಕಿತ್ಸೆ ಮತ್ತು ಉಪಕರಣಗಳ ನೀಡಿಕೆ ಸಂಬಂಧವೂ ಮಾಹಿತಿ ಇಲ್ಲ. ವಸತಿ ಶಾಲೆಗಳನ್ನು ನಡೆಸುವವರಿಗೆ  ಅನುಕೂಲ ಮಾಡಿಕೊಟ್ಟಿರುವ ಬಗ್ಗೆ ಮಸೂದೆಯಲ್ಲಿ ಸ್ಪಷ್ಟವಾಗಿ ಹೇಳಿಲ್ಲ. 1995ರ ಮಸೂದೆಯಲ್ಲಿದ್ದ ತಾರತಮ್ಯವನ್ನು ಇದರಲ್ಲೂ ಮುಂದುವರಿಸಲಾಗಿದೆ. ಉದಾಹರಣೆಗೆ, ಚಲನವಲನ ವೈಕಲ್ಯ ಇರುವವರಿಗೆ ಮತ್ತು ಅಂಧರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಆದರೆ ಮಾತನಾಡಲು ಬರದವರಿಗೆ ಈ ಸವಲತ್ತನ್ನು ನೀಡಿಲ್ಲ.
ಅಂಗವೈಕಲ್ಯದ ವರ್ಗಗಳನ್ನು 21ಕ್ಕೆ ಹೆಚ್ಚಿಸಿರುವುದರಿಂದ ಶ್ರಮಣದೋಷ ಉಳ್ಳವರಿಗೆ ಮತ್ತು ಮಾತನಾಡಲು ಬರದವರಿಗೆ ಮೀಸಲಾತಿಯಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ.
- ರತ್ನಾ ಬಿ. ಶೆಟ್ಟಿ, ಶ್ರವಣದೋಷವುಳ್ಳ ಮಕ್ಕಳು ಮತ್ತು ಅವರ ತಾಯಂದಿರ ತರಬೇತಿ ಸಂಸ್ಥೆ, ಬೆಂಗಳೂರು

ಮೀಸಲಾತಿ ಹೆಚ್ಚಿಸಬೇಕಿತ್ತು
ಉದ್ದೇಶಿತ ಮಸೂದೆಯಲ್ಲಿ ಶೇ 5ರಷ್ಟು ಮೀಸಲಾತಿ ನೀಡುವ ಬಗ್ಗೆ ಉಲ್ಲೇಖವಾಗಿತ್ತು. ಆದರೆ ಶೇ 1ರಷ್ಟನ್ನು ಕಡಿಮೆ ಮಾಡಿ ಶೇ 4ಕ್ಕೆ ನಿಗದಿ ಮಾಡಲಾಗಿದೆ. ಇದರಿಂದ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ವಿವಿಧ ಬಗೆಯ ಅಂಗವೈಕಲ್ಯ ಹೊಂದಿರುವ 21 ವರ್ಗಗಳನ್ನು ಸೇರ್ಪಡೆ  ಮಾಡಿರುವುದರಿಂದ ಸಹಜವಾಗಿಯೇ ಅಂಗವಿಕಲರ ಸಂಖ್ಯೆ ಹೆಚ್ಚುತ್ತದೆ. ಈ ಹೆಚ್ಚಳಕ್ಕೆ  ಅನುಗುಣವಾಗಿ ಉದ್ದೇಶಿತ ಮಸೂದೆಯಲ್ಲಿ ನೀಡಲಾಗಿದ್ದ ಶೇ 5ರಷ್ಟು ಮೀಸಲಾತಿಯನ್ನು ನೀಡಿದ್ದರೆ ಅನುಕೂಲವಾಗುತ್ತಿತ್ತು.

-ಶಿವಪ್ರಸಾದ್, ಅಂಗವಿಕಲರ ವಾಹನ ವಿನ್ಯಾಸಕ

ಸ್ವಾವಲಂಬನೆಗೆ ನಾಂದಿ
ಆ್ಯಸಿಡ್ ದಾಳಿಗೆ ಒಳಗಾಗಿ ಮುಖದ ಸೌಂದರ್ಯವನ್ನು ಕಳೆದುಕೊಂಡವರಿಗೆ ಚಿಕಿತ್ಸೆ ವೆಚ್ಚವಾಗಿ ಸ್ವಲ್ಪ ಹಣ ನೀಡಲಾಗುತ್ತಿತ್ತು. ಅದು ಬಿಟ್ಟರೆ ಸರ್ಕಾರದ ವತಿಯಿಂದ ಯಾವುದೇ ಸೌಲಭ್ಯ ಸಿಗುತ್ತಿರಲಿಲ್ಲ. ಈಗ ಮಸೂದೆಯಲ್ಲಿ ಅವರನ್ನೂ ಅಂಗವಿಕಲರು ಎಂದು ಪರಿಗಣಿಸಿರುವುದರಿಂದ ಅಂಗವಿಕಲರಿಗೆ ಲಭ್ಯವಿರುವ ಮೀಸಲಾತಿ, ಪುನರ್ವಸತಿ ಸೌಕರ್ಯ ಸೇರಿದಂತೆ ಎಲ್ಲಾ ಅವಕಾಶಗಳು ಲಭ್ಯವಾಗುವುದರಿಂದ ಆ್ಯಸಿಡ್ ದಾಳಿ ಸಂತ್ರಸ್ತರು ಕೂಡ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ.
ಮಲ್ಲಿಗೆ,
- ಆ್ಯಸಿಡ್ ದಾಳಿ ಸಂತ್ರಸ್ತರ ಪರ ಹೋರಾಟಗಾರ್ತಿ

(ಅಭಿಪ್ರಾಯ ಸಂಗ್ರಹ: ಪೃಥ್ವಿರಾಜ ಎಂ.ಎಚ್‌.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT