ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಬುತ್ತಿಯನ್ನು ಗಟ್ಟಿಗೊಳಿಸೋಣ

Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಮಕ್ಕಳಲ್ಲಿ ಜ್ಞಾಪಕಶಕ್ತಿಯ ಕೊರತೆ ಅವರ ಶಿಕ್ಷಣ ಮತ್ತು ವೈಯಕ್ತಿಕ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಜ್ಞಾಪಕಶಕ್ತಿಯ ಕೊರತೆ ಮಕ್ಕಳ ಆತ್ಮವಿಶ್ವಾಸವನ್ನೂ ಕಸಿದುಕೊಳ್ಳುತ್ತದೆ.  ನಮ್ಮ ಮೆದುಳು ತನ್ನದೇ ಆದ ನಿರ್ದಿಷ್ಟ ರೀತಿಯ ಕಾರ್ಯವೈಖರಿಯನ್ನು ಹೊಂದಿದೆ. ಕಲಿಕೆ ಮತ್ತು ಕಲಿತದ್ದು ಉಳಿಯುವಿಕೆ – ವಿಶೇಷ ಪ್ರಕಿಯೆಗಳು. ಜ್ಞಾಪಕಶಕ್ತಿಯು ನೊಂದಣಿ, ಮುದ್ರಣ, ಸ್ಮರಣೆ – ಈ ಮೂರು ಹಂತಗಳಲ್ಲಿ ನಡೆಯುತ್ತದೆ. ಇವು ಜ್ಞಾಪಕಶಕ್ತಿ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. 
 
ನೆನಪಿನ ಶಕ್ತಿ ಕಡಿಮೆಗೆ ಕಾರಣಗಳು
ಮನೋರಂಜನಗೆ ಮಾತ್ರ ಆದ್ಯತೆ: ದೂರದರ್ಶನ, ಮೊಬೈಲ್, ಕಂಪ್ಯೂಟರ್ ಮುಂತಾದವು ಮಕ್ಕಳನ್ನು ಹೆಚ್ಚು ಹಿಡಿದಿಡುತ್ತಿವೆ. ಮಕ್ಕಳು ಈ ಯಂತ್ರಗಳ ದಾಸರಾಗಿ ಗೇಮ್‌ಗಳಲ್ಲಿ ಮುಳುಗಿಹೋಗುತ್ತಾರೆ. ಇವು ಓದಿನ ಆಸಕ್ತಿಯನ್ನು ಕಡಿಮೆಗೊಳಿಸುತ್ತವೆ. ಹಾಗೆಂದು ಇವುಗಳಿಂದ ಸಂಪೂರ್ಣ ದೂರವಿರುವುದು ಒಳ್ಳೆಯದಲ್ಲ.  ಎಷ್ಟು ಅವಶ್ಯಕವೋ ಅಷ್ಟನ್ನು ಮಾತ್ರ ಬಳಸುವಂತೆ ಮಕ್ಕಳನ್ನು ಪ್ರೇರೇಪಿಸಬೇಕಿದೆ.
 
ಮೆದುಳಿಗೆ ಮೇವು ಹಾಕುತ್ತಿಲ್ಲ: ನಾವು ನಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸುವ ಬದಲು ಪ್ರತಿಯೊಂದು ವಿಷಯಕ್ಕೂ ಕ್ಯಾಲ್ಕುಲೇಟರ್, ಮೊಬೈಲ್‌ಗಳನ್ನು ಬಳಸುವುದು ಜಾಸ್ತಿಯಾಗಿದೆ. ಯಾವುದಾದರು ಮಾಹಿತಿ ಬಗ್ಗೆ ತಿಳಿಯಲು ತಕ್ಷಣ ಅಂತರ್ಜಾಲದ ಮೊರೆಹೋಗುವುದು, ಸಣ್ಣ ಪುಟ್ಟ ಲೆಕ್ಕಚಾರಕ್ಕೆ ಎಲ್ಲರೂ ಕ್ಯಾಲ್ಕುಲೇಟರ್ ಬಳಸುವುದು ಸಾಮಾನ್ಯವಾಗಿದೆ. ನಾವು ನಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸದೆ ಅದು ಜಡವಾಗುತ್ತದೆ. 
 
ಅನವಶ್ಯಕ ಗೊಂದಲಗಳು: ಬಹುತೇಕ ಮಕ್ಕಳು ಬಹಳ ಚೆನ್ನಾಗಿ ಓದಿದ್ದರೂ ಪರೀಕ್ಷಾ ಸಮಯದಲ್ಲಿ ಒತ್ತಡಕ್ಕೆ ಒಳಗಾಗಿ ಗೊಂದಲ ಮಾಡಿಕೊಂಡು ಸರಿಯಾಗಿ ಉತ್ತರಿಸುವಲ್ಲಿ ವಿಫಲರಾಗುತ್ತಾರೆ. ಆ ವಿಷಯ, ಪಾಠ, ಪರೀಕ್ಷೆಗಳ ಬಗ್ಗೆ ಮಕ್ಕಳು ಮೊದಲೇ ಪೂರ್ವಗ್ರಹ ಪೀಡಿತರಾಗಿ ಮಾನಸಿಕವಾಗಿ ಕುಸಿದುಹೋಗಿರುತ್ತಾರೆ.  ಇಂತಹ ಗೊಂದಲಗಳು ಜ್ಞಾಪಕಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. 
 
ಅನಾರೋಗ್ಯ;  ಮಕ್ಕಳು ಸದಾ ಅಸ್ವಸ್ಥರಾಗುವುದು, ದೀರ್ಘ ಕಾಲದ ಕಾಯಿಲೆಗಳಿಂದ ಬಳಲುತ್ತಿರುವಾಗ ಆರೋಗ್ಯಸಮಸ್ಯೆ ಇದ್ದಾಗ ಓದುವುದು ಒಳ್ಳೆಯದಲ್ಲ. ಓದಿದರೂ ಅದು ಹೆಚ್ಚು ಪ್ರಯೋಜನವಾಗುವುದಿಲ್ಲ. ಸಾಧ್ಯವಾದಷ್ಟು ಆ ಸಮಸ್ಯೆಯಿಂದ ಮುಕ್ತವಾಗಿ ಕಲಿಕೆಯಲ್ಲಿ ತೊಡಗಿಕೊಂಡರೆ ಅದು ನಿರೀಕ್ಷಿತ ಫಲ ಕೊಡುವುದರಲ್ಲಿ ಅನುಮಾನವಿಲ್ಲ. 
 
ಸಾಮಾಜಿಕ ಸಮಸ್ಯೆಗಳು: ಆರ್ಥಿಕ, ಸಾಮಾಜಿಕ, ಕುಟುಂಬದ ಸಮಸ್ಯೆಗಳು ಮನಸ್ಸಿಗೆ ಘಾಸಿ ಮಾಡಿ ಮಕ್ಕಳ ಮನಸ್ಸನ್ನು ಕುಗ್ಗಿಸುತ್ತವೆ. ದುಃಖದಿಂದ ಮಕ್ಕಳ  ಉತ್ಸಾಹ ಮತ್ತು ಲವಲವಿಕೆ ಕುಂಠಿತವಾಗುತ್ತದೆ. ಬೇಸರ, ಸಿಟ್ಟುಗಳು ವಿದ್ಯಾರ್ಥಿಗಳ ಅಂತಃಶಕ್ತಿಯನ್ನು ನಾಶಪಡಿಸುತ್ತವೆ. ಇದರಿಂದಾಗಿ ಮಕ್ಕಳು ದುಃಖಕ್ಕೆ ಒಳಗಾಗಿ ಚಿಂತೆ ಮಾಡುತ್ತಾ, ಸರಿಯಾದ ಮಾರ್ಗದರ್ಶನ ಸಿಗದೆ, ಏಕಾಗ್ರತೆಯನ್ನು ಸಾಧಿಸಲು ಅಸಮರ್ಥರಾಗುತ್ತಾರೆ. ಇಂಥ ಸಮಸ್ಯೆಗಳು ಮಕ್ಕಳ ನೆನಪಿನ ಬುತ್ತಿ ಗಟ್ಟಿಯಾಗಲು ಬಹುದೊಡ್ಡ ಅಡ್ಡಗಾಲು ಹಾಕುವುದರಲ್ಲಿ ಅನುಮಾನವಿಲ್ಲ. 
 
ಜ್ಞಾಪಕಶಕ್ತಿ ಹೆಚ್ಚಳಕ್ಕೆ ಸರಳ ಉಪಾಯಗಳು
ಶೇ. 100ರಷ್ಟು ಓದು: ಓದುವಾಗ ನೂರಕ್ಕೆ ನೂರರಷ್ಟು ಗಮನಕೊಟ್ಟು ಓದಬೇಕು. 30ರಿಂದ 45 ನಿಮಿಷ ಓದಿ ನಂತರ ಅದನ್ನು ಅರ್ಥಮಾಡಿಕೊಳ್ಳುತ್ತಾ, ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಮುಖ್ಯಾಂಶಗಳನ್ನು ಬರೆಯುವುದರಿಂದ ಅದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ. ಮಕ್ಕಳು ತರಗತಿ ವಿಷಯ/ಪಾಠಗಳನ್ನು  ಪ್ರೀತಿಸುವುದನ್ನು ಕಲಿಯಬೇಕು. ಸಮಸ್ಯೆಗಳಿದ್ದರೆ ಶಿಕ್ಷಕರ ಜೊತೆ ಚರ್ಚೆ ಮಾಡಿ ಅದನ್ನು ತಕ್ಷಣ ಪರಿಹರಿಸಿಕೊಳ್ಳಬೇಕು. ಪರೀಕ್ಷಾ ಸಮಯದಲ್ಲಷ್ಟೆ ಓದುವ ಅಭ್ಯಾಸ ಒಳ್ಳೆಯದಲ್ಲ.  ಓದಿದ್ದರ ಕುರಿತು ಗೆಳೆಯರೊಂದಿಗೆ ಚರ್ಚೆ ನಡೆಸುವುದು ಉತ್ತಮ. 
 
ಧನಾತ್ಮಕ ಧೋರಣೆ: ನನ್ನ ಜ್ಞಾಪಕಶಕ್ತಿ ಹೆಚ್ಚಾಗುತ್ತಿದೆ ಎಂದು ಮಕ್ಕಳು ತಮ್ಮಷ್ಟಕ್ಕೆ ತಾವೇ ಹೇಳಿಕೊಳ್ಳಬೇಕು.  ‘ಈ ಪಾಠಗಳು ಯಾವಾಗಲೂ ನನಗೆ ನೆನಪಿಗೆ ಬರುವುದಿಲ್ಲ’ ಎಂಬ ನಕಾರಾತ್ಮಕ ಧೋರಣೆಯನ್ನು ಮೊದಲು ತಲೆಯಿಂದ ಕಿತ್ತು ಹಾಕಬೇಕು.  
 
ಮಾತ್ರೆಗಳು ಪವಾಡ ಮಾಡುವುದಿಲ್ಲ: ನೆನಪಿನ ಸಮಸ್ಯೆಯಲ್ಲಿ ಎರಡು ವಿಧ ಕಾಣುತ್ತೇವೆ. ಒಂದು ಏಕಾಗ್ರತೆಯ ಕೊರತೆ; ಮತ್ತೊಂದು ಆರೋಗ್ಯ ಸಮಸ್ಯೆ. ಆರೋಗ್ಯಸುಧಾರಣೆಗೆ ಔಷಧಗಳನ್ನು ಬಳಸಬಹುದು.  ಸ್ವತಃ ಮಾತ್ರೆಗಳನ್ನು ತೆಗೆದುಕೊಳ್ಳದೇ ನುರಿತ ವೈದ್ಯರ ಸಲಹೆ ಪಡೆದು ಬಳಸಬೇಕು. ಏಕಾಗ್ರತೆಯ ಕೊರತೆಗೆ ಮುಖ್ಯವಾಗಿ ಪೋಷಕರು ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಬಹಳ ಮುಖ್ಯ. ಪೋಷಕರು ಮಕ್ಕಳ ನೆನಪಿನ ಶಕ್ತಿಗೆ ಎಂದು ಮಾತ್ರೆಗಳನ್ನು ನೀಡುವ ಬದಲು ಅವರ ಜೀವನಶೈಲಿಯನ್ನು ಬದಲಾಯಿಸಬೇಕು. 
 
ಓದು ನಿಮ್ಮ ಕೈಲಿ:  ಮಾನಸಿಕ ನೆಮ್ಮದಿ ಮತ್ತು ಸತತ ಅಧ್ಯಯನದಿಂದ ಮಾತ್ರ ಯಶಸ್ಸು ಸಿಗುತ್ತದೆ. ಓದಿದ್ದನ್ನು ಮನನ ಹಾಗೂ ಪುನಃಸ್ಮರಣೆಯಿಂದ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ಪ್ರಶಾಂತವಾದ ವಾತಾವರಣದಲ್ಲಿ ಓದಬೇಕು. ಮಕ್ಕಳು ತಲೆಗೆ ಕೆಲಸ ಕೊಡುವಂತಹ ಆಟಗಳನ್ನು ಆಡುವುದು ಸೂಕ್ತ. ಪದಬಂಧ, ಚೆಸ್, ಮೋಜಿನ ಗಣಿತ, ವಿನೋದವಿಜ್ಞಾನ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ.
 
ನೆನಪಿನ ತಂತ್ರಗಳು: ಮಕ್ಕಳು ವಿಚಾರಗಳನ್ನು ನೆನಪಿಟ್ಟುಕೊಳ್ಳಲು ತಮ್ಮವೇ ತಂತ್ರಗಳನ್ನು ರೂಢಿಸಿಕೊಳ್ಳಬೇಕು. ಮಕ್ಕಳು ಪಾಠ, ಪದ್ಯ, ಸೂತ್ರ ಇತ್ಯಾದಿಗಳನ್ನು ನೆನಪಿಟ್ಟುಕೊಳ್ಳಲು ತಮ್ಮದೇ ಆದ ಕೌಶಲಗಳನ್ನು ಬಳಸುತ್ತಿರುತ್ತಾರೆ. ಕೆಲವು ಅವರ ಅರಿವಿಗೆ ಬಂದರೆ ಕೆಲವು ಅರಿವಿಲ್ಲದೆ ಬಳಸುತ್ತಾರೆ. ಮಕ್ಕಳ ಎಷ್ಟು ಕೌಶಲಗಳನ್ನು ಬಳಸುತ್ತಾರೋ ಅಷ್ಟು ಹೆಚ್ಚು ನೆನಪಿಡಬಹುದು. 
 
ಮೈಂಡ್-ಚಿತ್ರ: ಮಕ್ಕಳು ತಮ್ಮ ನೋಟ್ಸ್‌ನ್ನು ಹೆಚ್ಚು ಕಾಲ ನೆನಪಿಟ್ಟುಕೊಳ್ಳಬೇಕಾದರೆ, ಅದರಲ್ಲಿ ಹೆಚ್ಚಿನ ಸಂಖ್ಯೆಯ ಆಕೃತಿ, ಚಿತ್ರಗಳು, ಬಣ್ಣ, ಸಂಕೇತಗಳನ್ನು ಬಳಸುವಂತೆ ಮಾಡಬೇಕು. ಇದಕ್ಕೆ ಒಂದು ಸರಳವಾದ ಉದಾಹರಣೆ ನೀಡಬಹುದಾದರೆ, ನೋಟ್ಸ್ ಬರೆಯುವಾಗ ವಿಷಯ/ಶೀರ್ಷಿಕೆಯ ಚಿತ್ರವು ಪುಟದ ಮಧ್ಯದಲ್ಲಿರಲಿ. ನಂತರ ಅದಕ್ಕೆ ಪೂರಕವಾದ ಅತ್ಯಂತ ಮುಖ್ಯಪದಗಳನ್ನು ಸುತ್ತಲೂ ಬೇರೆ ಬೇರೆ ಬಣ್ಣಗಳಿಂದ ಬರೆಯಬೇಕು. ಅಲ್ಲಿ ವಿವರಣಾತ್ಮಕ ವಾಕ್ಯಗಳಿಗೆ ಅವಕಾಶವೇ ಇಲ್ಲ.  ಅತ್ಯಂತ ಪ್ರಮುಖ ಪದಗಳನ್ನು ಗುರುತು ಮಾಡುವುದು, ಬಾಣದ ಗೆರೆ ಎಳೆಯುವುದು, ಇಲ್ಲವೇ ಯಾವುದೇ ರೀತಿಯಲ್ಲಿ ಒತ್ತು ನೀಡಿ ತಕ್ಷಣ ಎದ್ದುಕಾಣುವಂತಿರಬೇಕು. ಅದರ ಕುರಿತು ಹೊಸ ಆಲೋಚನೆಗಳು ಬಂದರೆ ಸಂಗ್ರಹಿಸಿ ಅವನ್ನೂ ಗುರುತು ಹಾಕಿಕೊಳ್ಳಬೇಕು. ನಂತರ ಆ ಚಿತ್ರ ನೋಡಿದ ತಕ್ಷಣ ಎಲ್ಲವೂ ನೆನಪಿಗೆ ಬರುತ್ತದೆ. 
 
ಸನ್ನಿವೇಶಗಳನ್ನು ಬಳಸಿ: ಗೆಳೆಯನೊಬ್ಬ ಶಾಲೆಯಲ್ಲಿ ನೋಟ್ಸ್ ಕೇಳಿ ಪಡೆದುಕೊಂಡ ಎಂದಿಟ್ಟುಕೊಳ್ಳೋಣ. ಸ್ವಲ್ಪ ಸಮಯದ ನಂತರ ನೋಟ್ಸ್ ಕೊಟ್ಟಿರುವುದು ನೆನಪಿರುತ್ತದೆ. ಆದರೆ ಯಾರಿಗೆ ಕೊಟ್ಟೆ, ಎಲ್ಲಿ ಎಂದು – ನೆನಪೇ ಆಗುವುದಿಲ್ಲ. ಆಗ ಮಕ್ಕಳು ಅದನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ? ‘ನಾನು ಮನೆಯಲ್ಲಿ ನೋಟ್ಸ್‌ನ್ನು ಬ್ಯಾಗಿನಲ್ಲಿ ಹಾಕಿಕೊಂಡೆ, ಶಾಲೆಗೆ ಹೋದಾಗ ಇತ್ತು, ಮತ್ತೆ ನನ್ನ ಡೆಸ್ಕ್‌ನಲ್ಲಿ ಕುಳಿತಾಗ ಇತ್ತು. ಅಲ್ಲಿ ಪ್ರಶ್ನೋತ್ತರ ಬರೆದೆ, ಶಿಕ್ಷಕರಿಗೆ ತೋರಿಸಿ ಸಹಿ ಮಾಡಿಸಿದ್ದೆ ... ಆನಂತರ .....’ ಹೀಗೆ ತಮ್ಮ  ನೋಟ್ಸ್ ಸಂಬಂಧಿಸಿದ ಎಲ್ಲ ಘಟನೆಗಳನ್ನು ನೆನಪಿಸುತ್ತಾ ಹೋಗುತ್ತಾರೆ. ಅಂದರೆ ನಮ್ಮ ನೆನಪು ಸನ್ನಿವೇಶಗಳಾಗಿ ಉಳಿಸಿ ಕೊಂಡಿರುತ್ತೇವೆ. ನಾವು ನಮ್ಮ ಒಳಗಣ್ಣಿನಿಂದ ನೋಡುತ್ತಾ, ಅನುಭವಿಸುತ್ತೇವೆ. ಆಗ ನಮ್ಮ ಆ ಘಟನೆಯಲ್ಲಿ ಬರುವ ಎಲ್ಲ ವಿಚಾರಗಳನ್ನು ಗುರುತಿಸಲು ಒಳಗಣ್ಣಿನಿಂದ ಕಾಣಲು ಶ್ರಮಿಸುತ್ತೇವೆ. ಅಂದರೆ ನೆನಪು ಘಟನೆಯ ರೂಪದಲ್ಲಿದ್ದರೆ ಜ್ಞಾಪಕದಲ್ಲಿಟ್ಟುಕೊಳ್ಳುವುದು ಸರಳವಾಗುತ್ತದೆ. ಮಕ್ಕಳಿಗೆ ಈ ಸ್ವಭಾವ ಸಹಜವಾಗಿರುತ್ತದೆ; ಅದನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸಿ.
 
ಘಟನೆಗಳಾಗಿ ಬದಲಾಯಿಸಿಕೊಳ್ಳಿ: ಮಕ್ಕಳು ಪಠ್ಯದ ಪಾಠಗಳನ್ನೂ ಓದುತ್ತಾರೆ, ಅದೇ ರೀತಿ ಕಥಾಪುಸ್ತಕಗಳನ್ನೂ ಓದುತ್ತಾರೆ. ಅವುಗಳಲ್ಲಿ ಕಥೆಗಳೇ ಹೆಚ್ಚು ನೆನಪಿನಲ್ಲಿರುತ್ತವೆ. ಏಕೆ ಅಂದರೆ, ಕಥೆಗಳನ್ನು ಮಕ್ಕಳು ಘಟನೆಗಳಾಗಿ ನೆನಪಿಟ್ಟುಕೊಳ್ಳುತ್ತಾರೆ. ಅಂದರೆ ಕಥೆಯಲ್ಲಿ ಬರುವ ಸ್ಥಳಗಳು ಅವರಿಗೆ ತಿಳಿದಿರುವ ಮತ್ತು ನೋಡಿರುವ ಸ್ಥಳಗಳಾಗಿ ಕಲ್ಪಿಸಿಕೊಳ್ಳುತ್ತಾರೆ. ಜೊತೆಗೆ ಪಾತ್ರಗಳು ಮಕ್ಕಳು ತಿಳಿದಿರುವ ವ್ಯಕ್ತಿಗಳೊಂದಿಗೆ ಹೋಲಿಸಿಕೊಳ್ಳುತ್ತಾರೆ. ಆದ್ದರಿಂದ ಮಕ್ಕಳು ಅನುಭವಿಸಿದ ಒಂದು ಘಟನೆಯಾಗಿ ಅದು ಅವರ ಮನಸ್ಸಲ್ಲಿರುತ್ತದೆ. ಆದರೆ ಪಾಠ ಹಾಗಿರುವುದಿಲ್ಲ. ಇನ್ನು ಕೆಲವರಿಗೆ ಕೆಲವು ಪಾಠಗಳು ನೆನಪಿರಬಹುದು. ಅಲ್ಲೂ ‘ಘಟನೆ’ ಎಂಬ ವಿಚಾರ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬಹುದು.
 
ಒಳ್ಳೆಯ ಆಹಾರವನ್ನು ನೀಡಿ: ಮಕ್ಕಳಿಗೆ ಹಸಿ ಸೊಪ್ಪು, ತರಕಾರಿಯಂಥ ಆರೋಗ್ಯಭರಿತ ಆಹಾರ ಅತ್ಯಂತ ಅಗತ್ಯ. ಧಾರಾಳವಾಗಿ ನೀರು ಕುಡಿಯಬೇಕು ಮತ್ತು  ತಾಜಾ ಹಣ್ಣುಗಳನ್ನು ಸೇವಿಸುವುದು ಉತ್ತಮ. ಸಮತೋಲನ ಆಹಾರಶೈಲಿಯನ್ನು ಅಳವಡಿಸಿಕೊಂಡರೆ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೇ ಜ್ಞಾಪಕಶಕ್ತಿಯೂ ಹೆಚ್ಚುತ್ತದೆ. ಆದರೆ ಮಕ್ಕಳು ಹೆಚ್ಚು ಇಷ್ಟ ಪಡುವ ಜಂಕ್ ಫುಡ್, ಮಸಾಲೆ ಪದಾರ್ಥ, ಕರಿದ ತಿಂಡಿ, ಬೇಕರಿ ಪದಾರ್ಥ, ಕೂಲ್ ಡ್ರಿಂಕ್ಸ್‌ಗಳಿಂದ ಸಾಧ್ಯವಿದ್ದಷ್ಟು ಅವರನ್ನು ದೂರವಿರಬೇಕು. ಅಗತ್ಯಕ್ಕಿಂತ ಹೆಚ್ಚು ಯಾವುದನ್ನೂ ತಿನ್ನುವುದು ಒಳಿತಲ್ಲ. ಪ್ರತಿದಿನ ಮಕ್ಕಳು ತಮ್ಮ ವಯೋಮಾನಕ್ಕೆ ಸರಿಹೊಂದುವ ವ್ಯಾಯಾಮ/ಯೋಗಾಭ್ಯಾಸವನ್ನು ಮಾಡಬೇಕು. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಆಮ್ಲಜನಕ ಹೆಚ್ಚು ಪೂರೈಕೆಯಾಗಿ, ಬುದ್ಧಿಶಕ್ತಿ ಮತ್ತು ಜ್ಞಾಪಕಶಕ್ತಿಗಳು ವೃದ್ಧಿಸುತ್ತವೆ.
(ಲೇಖಕರು ಶಿಕ್ಷಕರು)                                                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT