ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಗಳ ಆವಾಸ ಸ್ಥಾನಕ್ಕೆ ಕುತ್ತು

ಕಲಾಸಿಪಾಳ್ಯದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣ
Last Updated 25 ಡಿಸೆಂಬರ್ 2016, 20:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಲಾಸಿಪಾಳ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಸಜ್ಜಿತ ಬಸ್‌ ನಿಲ್ದಾಣಕ್ಕಾಗಿ 24 ಮರಗಳನ್ನು ಕಡಿಯಲು ಬಿಎಂಟಿಸಿ ಮುಂದಾಗಿದೆ. ಇದರಿಂದ ಪಕ್ಷಿ ಸಂಕುಲದ ಆವಾಸ ಸ್ಥಾನಕ್ಕೆ ಕುತ್ತು ಒದಗಿಬಂದಿದೆ.

ಕಲಾಸಿಪಾಳ್ಯದ 4 ಎಕರೆ 3 ಗುಂಟೆ ಜಾಗದಲ್ಲಿ ಬಸ್‌ ನಿಲ್ದಾಣ ನಿರ್ಮಿಸಲಿದ್ದು, ಇದಕ್ಕಾಗಿ ಆಲದ ಮರ, ರೈನ್‌ ಟ್ರೀ, ಜಕರಂದ, ಗುಲ್‌ಮೊಹರ್‌ ಮರಗಳನ್ನು ಕಡಿಯಲಾಗುತ್ತಿದೆ. ಬಿಎಂಟಿಸಿ ಸಿಬ್ಬಂದಿ ಡಿ.19ರಂದು ಮರಗಳಿಗೆ ಗುರುತು ಮಾಡಿ ಹೋಗಿದ್ದಾರೆ.

ಮರಗಳ ಹನನದಿಂದ ಸುಮಾರು 8 ಸಾವಿರ ಗಿಳಿಗಳು ಹಾಗೂ ನೂರಾರು ಸಂಖ್ಯೆಯ ಅಳಿಲು, ಗಿಡುಗ, ಗೂಬೆ, ಮೈನಾ, ಪಾರಿವಾಳ, ಕಾಗೆ, ಬಾವಲಿಗಳು ತಮ್ಮ ಆವಾಸ ಸ್ಥಾನ ಕಳೆದುಕೊಳ್ಳಲಿವೆ.

ಮರ ಉಳಿಸುವಂತೆ ಪತ್ರ: ಬಸ್‌ ನಿಲ್ದಾಣದಲ್ಲಿರುವ ಮರಗಳನ್ನು ಉಳಿಸುವಂತೆ ಲೋಕಮತ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಜಿ.ಡಿ. ಕುಮಾರ್‌ ಅವರು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಬಿಬಿಎಂಪಿಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಹಾಗೂ ಬಿಎಂಟಿಸಿ  ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ  ಬರೆದಿದ್ದಾರೆ.

‘ಬಸ್‌ ನಿಲ್ದಾಣದಲ್ಲಿ 50ರಿಂದ 80 ವರ್ಷಗಳ ಹಳೆಯ ಮರಗಳಿವೆ. ಮೂರು ಸಾಲಿನಲ್ಲಿ ಮರಗಳಿದ್ದು, ಎಲ್ಲ ಮರಗಳನ್ನು ಕಡಿಯಲು ಬಿಎಂಟಿಸಿ ಮುಂದಾಗಿದೆ. ಇದರಿಂದ ಪಕ್ಷಿ ಸಂಕುಲಕ್ಕೆ ತೊಂದರೆ ಉಂಟಾಗಲಿದೆ. ದೇವಸ್ಥಾನದ ಹಿಂಬದಿಯಲ್ಲಿರುವ ಮರಗಳನ್ನಾದರೂ ಉಳಿಸಬೇಕು’ ಎಂದು ಜಿ.ಡಿ.ಕುಮಾರ್‌ ಆಗ್ರಹಿಸಿದರು.

‘ವಿಕ್ಟೋರಿಯಾ ಆಸ್ಪತ್ರೆಯ ಆವರಣದ ಮರಗಳಲ್ಲಿ ವಾಸಿಸುವ ಪಕ್ಷಿಗಳು ಸಹ ಕಲಾಸಿಪಾಳ್ಯ ಬಸ್‌ ನಿಲ್ದಾಣದ ಕಡೆಗೆ ಬರುತ್ತವೆ.ಬೆಳಿಗ್ಗೆ ಮತ್ತು ಸಂಜೆ 6 ಗಂಟೆಗೆ ಪಕ್ಷಿಗಳ ಕಲರವ ಕೇಳುವುದೇ ಆನಂದ. ಹೀಗಾಗಿ ಬಸ್‌ ನಿಲ್ದಾಣದ ವಿನ್ಯಾಸದಲ್ಲಿ ಬದಲಾವಣೆ ಮಾಡಿ, ಮರಗಳನ್ನು ಉಳಿಸಬೇಕು’ ಎಂದು ಒತ್ತಾಯಿಸಿದರು.

ವಾಯುಮಾಲಿನ್ಯ ಹೆಚ್ಚಳ
‘ನಗರದ ಜನಸಂದಣಿ ಇರುವ ಪ್ರದೇಶಗಳಲ್ಲಿ ಗಿಳಿಗಳ ಸಂಕುಲ ಕಾಣಸಿಗುವುದು ಅಪರೂಪ. ಮರಗಳನ್ನು ಕಡೆಯುವುದರಿಂದ ಈ ಸಂಕುಲಕ್ಕೆ ಧಕ್ಕೆ ಉಂಟಾಗಲಿದೆ. ಅಲ್ಲದೆ, ಮಾರುಕಟ್ಟೆ ಪ್ರದೇಶದಲ್ಲಿ ಮತ್ತಷ್ಟು ವಾಯುಮಾಲಿನ್ಯ ಉಂಟಾಗುವ ಸಾಧ್ಯತೆ ಇದೆ’ ಎಂದು ಬಿಬಿಎಂಪಿಯ ವನ್ಯಜೀವಿ ವಾರ್ಡನ್‌ ಶರತ್‌ ಬಾಬು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT