ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಡವಾಟಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯಲಿ’

ಪಂಡಿತ ಸಿದ್ದರಾಮ ಜಂಬಲದಿನ್ನಿ 28ನೇ ವರ್ಷದ ಪುಣ್ಯಸ್ಮರಣೆ
Last Updated 26 ಡಿಸೆಂಬರ್ 2016, 6:58 IST
ಅಕ್ಷರ ಗಾತ್ರ

ರಾಯಚೂರು:  ಶುಭ ಕಾರ್ಯದಲ್ಲಿ ನುಡಿಸುವ ಮಂಗಳವಾದ್ಯ ಕ್ಲಾರಿಯೋನೆಟ್‌ಗೆ ವಿಶ್ವಮಾನ್ಯತೆ ತಂದುಕೊಟ್ಟ ಪಂಡಿತ ನರಸಿಂಹಲು ವಡವಾಟಿ ಸಂಗೀತವನ್ನು ಜೀವನ ಮಾಡಿಕೊಂಡವರು. ಅವರಿಗೆ ಪದ್ಮಶ್ರೀ ನೀಡುವುದರಿಂದ ಆ ಪ್ರಶಸ್ತಿಗೆ ಗೌರವ ಬರುತ್ತದೆ. ಹಾಗಾಗಿ ಅವರಿಗೆ ಆ ಪ್ರಶಸ್ತಿ ದೊರೆಯಲಿ ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹಾರೈಸಿದರು.

ನಗರದ  ಸ್ವರಸಂಗಮ ಸಂಗೀತ ಮಹಾವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ  ಪಂಡಿತ ಸಿದ್ದರಾಮ ಜಂಬಲದಿನ್ನಿ ಅವರ 28ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ರಾತ್ರಿ ನಡೆದ ಸಂಗೀತ ಸಮ್ಮೇಳನದಲ್ಲಿ ಅವರು ಆಶೀರ್ವಚನ ನೀಡಿದರು.

ಅಲ್ಪವಿದ್ಯೆ ಕಲಿತವರಿಗೆ ಕೋಡು ಮೂಡುವ ಕಾಲ ಇದು. ಆದರೆ, ದಶಕಗಳ ಕಾಲ ಸಾಧನೆ ಮಾಡಿರುವ ವಡವಾಟಿ ಅವರಿಗೆ 75ರ ಇಳಿವಯಸ್ಸಿನಲ್ಲೂ ವಿನಯವಿದೆ. 25ರ ಹರೆಯದವರಂತೆ ಉತ್ಸಾಹ ಇದೆ. ಪಂಡಿತ ಸಿದ್ದರಾಮ ಜಂಬಲದಿನ್ನಿ ಅವರಿಗೂ ಮತ್ತು ವಡವಾಟಿ ಅವರಿಗೂ ಆಪ್ತಭಾವದ ಗುರು– ಶಿಷ್ಯ ಸಂಬಂಧ ಇದೆ. ಗುರುವಿನ ಹೆಸರನ್ನು ಚಿರಸ್ಥಾಯಿ ಅಂಗುವಂತಹ ಕೆಲಸಗಳನ್ನು ವಡವಾಟಿ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಎಸ್‌.ಶಿವರಾಜ ಪಾಟೀಲ್‌ ಮಾತನಾಡಿ, ಸಿದ್ದರಾಮ ಜಂಬಲದಿನ್ನಿ ಅವರ ಹೆಸರಿನಲ್ಲಿ ಟ್ರಸ್ಟ್‌ವೊಂದನ್ನು ಸ್ಥಾಪಿಸುವ ಅಗತ್ಯವಿದೆ.   ವಡವಾಟಿ ಅವರು  ರಾಯಚೂರಿನ ಸಾಂಸ್ಕೃತಿಕ ರಾಯಭಾರಿ ಎಂದು ಶ್ಲಾಘಿಸಿದರು.

ಹಿಂದೂಸ್ತಾನ ಸಂಗೀತ ಗಾಯಕ ನರೇಶ ಮಲ್ಹೋತ್ರ ಅವರು ಸಿದ್ದರಾಮ ಜಂಬಲದಿನ್ನಿ ಅವರ ಗಾನಮುದ್ರಿಕೆ (ಸಿ.ಡಿ.) ‘ವಚನಾಮೃತ’ವನ್ನು ಬಿಡುಗಡೆ ಮಾಡಿದರು. ನಂತರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಜಿಲ್ಲಾ ವಾಣಿಜ್ಯೋದ್ಯಮದ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಮಾತನಾಡಿ, ನರಸಿಂಹಲು ವಡವಾಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಜೊತೆಗೆ ತಾವು ಸಹ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.

ಸಿದ್ದರಾಮ ಜಂಬಲದಿನ್ನಿ ಅವರ ಪತ್ನಿ ಅನಸೂಯಮ್ಮ, ಅವರ ಪುತ್ರ ಶಿವಪ್ರಸಾದ್‌, ಹಿರಿಯ ಸಾಹಿತಿ ಅಯ್ಯಪ್ಪ ತುಕ್ಕಾಯಿ, ಸ್ವರ ಸಂಗಮ ಸಂಗೀತ ವಿದ್ಯಾಲಯದ ಡಿ.ಸಿದ್ದಪ್ಪ, ಅಂತರ ರಾಷ್ಟ್ರೀಯ ಕ್ಲಾರಿಯೋನೆಟ್‌ ವಾದಕ ನರಸಿಂಹಲು ವಡವಾಟಿ ಇನ್ನಿತರ ಹೆಸರಾಂತ ಸಂಗೀತಗಾರರು ಭಾಗವಹಿಸಿದ್ದರು.

ಅಹೋರಾತ್ರಿ ಸಂಗೀತ: ಪಂಡಿತ ಸಿದ್ದರಾಮ ಜಂಬಲದಿನ್ನಿ  ಸ್ಮರಣಾರ್ಥ ನಡೆದ ಸಂಗೀತ ಮಹೋತ್ಸವದಲ್ಲಿ ತಿರುವಣ್ಣಾಮಲೈನ ಕಾಶಿವಿಶ್ವೇಶ್ವರನ್‌ ಅವರ ವಯಲಿನ್‌ ವಾದನ, ಮೈಸೂರಿನ ಪಂಡಿತ ಬಾಲಕೃಷ್ಣ ಅವರ ವೀಣಾವಾದನ, ರಾಜೇಂದ್ರ ಪ್ರಸನ್ನ ಅವರ ಕೊಳಲು, ಶಾರದಾ ವಡವಾಟಿ, ತಾರಕೇಶ್ವರಿ ಎಂ. ಪಾಟೀಲ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ, ನರಸಿಂಹಲು ವಡವಾಟಿ  ಕಾರ್ಯಕ್ರಮ ಚಳಿಯಲ್ಲೂ ಮುದ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT