ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಹೆಚ್ಚಿದ ಚಳಿಯ ಕೊರೆತ

ನಸುಕಿನಲ್ಲಿ ಮಂದಗತಿಯಾದ ಜನರ ಚಟುವಟಿಕೆ; ಅಲ್ಲಲ್ಲಿ ಬೆಂಕಿ ಕಾಯುವ ಬಾಲಕರು
Last Updated 26 ಡಿಸೆಂಬರ್ 2016, 7:04 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರಿನಲ್ಲಿ ಒಂದು ವಾರದಿಂದ ಚಳಿಯ ಕೊರೆತ ಜೋರಾಗಿದೆ. ಬೆಳಿಗ್ಗೆ ಮತ್ತು ರಾತ್ರಿ ವೇಳೆ ಮೈಕೊರೆಯುವ ಚಳಿಯಿಂದಾಗಿ ಜನರ ಚಟುವಟಿಕೆ ಮಂದಗತಿ ಕಂಡಿದೆ. ಮನೆಯ ಮೂಲೆ ಸೇರಿದ್ದ ಸ್ವೆಟರ್‌, ಜರ್ಕಿನ್‌ ಟೋಪಿಗಳು ಹೊರಬಂದಿವೆ.

ಮುಂಜಾನೆ ಪತ್ರಿಕೆ ಹಾಕುವವರು, ನಗರದ ರಸ್ತೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು, ಹೂವು– ತರಕಾರಿ ಮಾರಾಟ ಮಾಡುವವರು, ಮುಂಜಾನೆ ಮನೆಪಾಠಕ್ಕೆ ಹೋಗುವ ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಬೇಗ ಹಾಸಿಗೆಯಿಂದ ಏಳಬೇಕಿದೆ.

ನಗರದ ಕನಿಷ್ಠ ತಾಪಮಾನ 11 ರಿಂದ 14ರ ಆಸುಪಾಸಿನಲ್ಲಿದೆ. ಗರಿಷ್ಠ ತಾಪಮಾನ 30ರಿಂದ 32ರಷ್ಟಿರುವ ಕಾರಣ ಹೊತ್ತು ಏರಿದಂತೆ ಬಿಸಿಲೂ ಜೋರಾಗಿದೆ. ಡಿಸೆಂಬರ್‌ ಎರಡನೇ ವಾರದಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿಗೆ ಇಳಿದು ರಾಜ್ಯದಲ್ಲಿ ಅತಿ ಕಡಿಮೆ ತಾಪಮಾನವೂ ನಗರದಲ್ಲಿ ದಾಖಲಾಗಿತ್ತು.

ಶಬರಿಮಲೆ ಅಯ್ಯಪ್ಪ ಮಾಲೆ ಧರಸಿದ ಭಕ್ತರು ಕೊರೆಯುವ ಚಳಿಯಲ್ಲೆ ತಣ್ಣೀರು ಸ್ನಾನ ಮಾಡಿ ದೇವಾಲಯಗಳು, ಭಜನೆ ಸ್ಥಳಗಳಿಗೆ ಗುಂಪುಗುಂಪಾಗಿ ಅಯ್ಯಪ್ಪ ಭಕ್ತರು ಮೈದುಡಿಕೊಂಡು ಸರಸರನೆ ಹೆಜ್ಜೆಹಾಕುವ ದೃಶ್ಯಗಳು ಕಾಣುತ್ತವೆ.

ಎಪಿಎಂಸಿ ಆವರಣ, ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಚಳಿಯಿಂದ ರಕ್ಷಣೆ ಪಡೆಯಲು ಬೆಂಕಿ ಕಾಯಿಸಿಕೊಳ್ಳುವ ದೃಶ್ಯ  ಮಾಮೂಲಾಗಿದೆ.
ಚಳಿಯಿಂದ ಚಹಾ ಸೇವನೆ ಹೆಚ್ಚಾಗಿದೆ. ಬೆಳಿಗ್ಗೆ ಹೊತ್ತು ಪ್ರಮುಖ ವೃತ್ತ, ಬಸ್‌ ಮತ್ತು ರೈಲು ನಿಲ್ದಾಣಗಳಲ್ಲಿ ಚಹ ಮಾರಾಟದ ಬಂಡಿಗಳಲ್ಲಿ ವ್ಯಾಪಾರ ದ್ವಿಗುಣಗೊಂಡಿದೆ.
ವಿವಿಧ ಉದ್ದಿಮೆಗಳಲ್ಲಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ದುಡಿಯುವ ಕಾರ್ಮಿಕರಿಗೂ ಚಳಿಯ ಕೊರೆತ ತಟ್ಟಿದೆ. ಮುಂಜಾನೆ ವಾಯುವಿಹಾರಕ್ಕೆ ಹೋಗುವವರು ಈಗ ಮೈತುಂಬ ಬಟ್ಟೆ, ತಲೆಗೆ ಟೋಪಿ ಹಾಕಿಕೊಂಡು ತೆರಳುತ್ತಿದ್ದಾರೆ.

‘ಮಗಳು ಎಸ್ಸೆಸ್ಸೆಲ್ಸಿಯಲ್ಲಿದ್ದಾಳೆ. ಮುಂಜಾನೆ ಮತ್ತು ಸಂಜೆ ಟ್ಯೂಷನ್‌ಗೆ ಹೋಗುತ್ತಾಳೆ. ಚಳಿ ಜಾಸ್ತಿ ಇದೆ. ಸವಿನಿದ್ದೆಯಿಂದ ಎಬ್ಬಿಸಲು ಮನಸ್ಸಿಲ್ಲ. ಆದರೆ, ಟ್ಯೂಷನ್‌ ತಪ್ಪಿಸುವಂತಿಲ್ಲ ಹಾಗಾಗಿ ದಿನಾ ಗೊಣಿಗಿಕೊಂಡೆ ಹಾಸಿಗೆಯಿಂದ ಏಳುತ್ತಾಳೆ’ ಗೃಹಿಣಿ ವಾಣಿ ಹೇಳಿದರು.

‘ಅಯ್ಯಪ್ಪ ಮಾಲಾಧಾರಿಗಳಿಗೆ ದಿನಾ ಎರಡು ಹೊತ್ತು ತಣ್ಣೀರು ಸ್ನಾನ ಕಡ್ಡಾಯ. ಜೊತೆಗೆ ಮಲವಿಸರ್ಜನೆ ಮಾಡಿದರೆ ಅಥವಾ ದಾರಿಯಲ್ಲಿ ಹೆಣ ಎದುರಾದರೆ ಸ್ನಾನ ಮಾಡಬೇಕು. ಚಳಿ ಹೆಚ್ಚಾಗಿದೆ ಆದರೆ, ಅಯ್ಯಪ್ಪನ ಭಜನೆಯಿಂದ ಇವೆಲ್ಲ ಅಷ್ಟಾಗಿ ಭಾದಿಸುವುದಿಲ್ಲ’ ಎಂದು ಗಾಜಗಾರಪೇಟೆಯ ವಿನೋದ್‌ಸ್ವಾಮಿ ನುಡಿದರು.

‘ಚಳಿಯಿಂದ ಕೈಮರಗಟ್ಟುತ್ತದೆ. ಪೇಪರ್‌ ಬಂಡಲ್‌ ಹಿಡತಕ್ಕೆ ಸಿಗುವುದಿಲ್ಲ. ಮಹಡಿ ಮನೆಗಳಿಗೆ ಕೆಳಗಿನಿಂದಲೇ ಪೇಪರ್‌ ಎಸೆಯುತ್ತಿದ್ದೆವು. ಆದರೆ, ಈಗ ಕೈ ಸೋಲುತ್ತಿದೆ’ ಎಂದು ಪತ್ರಿಕೆ ಹಾಕುವ ಹುಡುಗ ರಾಜು ಹೇಳಿದ.

‘ನಗರದ ಹೊರವಯಲದಲ್ಲಿ ಕುಳಿರ್ಗಾಳಿ ಹೆಚ್ಚಿದೆ. ಸ್ವೆಟರ್‌, ಜರ್ಕಿನ್, ಟೋಪಿ ಮರೆತು ಏನಾದರೂ ಮುಂಜಾನೆ ಅಥವಾ ರಾತ್ರಿ ಬೈಕ್‌ ಓಡಿಸಿದರೆ ಮೈನಡುಗುತ್ತದೆ’ ಎಂದು ಶಕ್ತಿನಗರ ಸಮೀಪ ಉದ್ದಿಮೆಯೊಂದರ ಕಾರ್ಮಿಕ ಗೋಪಾಲ ದೇಸಾಯಿ ಹೇಳಿದರು.

‘ಮಾಮೂಲಿ ದಿನಗಳಿಗಿಂತ ಹೆಚ್ಚು ಚಹಾ ಮಾರಾಟವೇನೂ ಆಗುತ್ತದೆ. ವ್ಯಾಪಾರ ನಡೆಸಬೇಕೆಂದರೆ ನಾವೂ ಚಳಿಗೆ ಕೊರೆಯಬೇಕು’ ಎಂದು ರಸ್ತೆಬದಿ ಚಹಾ ಮಾರಾಟ ಮಾಡುವ ವಿನೋದ್  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT