ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ: ಸಂಧಾನ ವಿಫಲ

ಕುಡಿಯಲು ಮಾತ್ರ ನೀರು; ವ್ಯವಸಾಯಕ್ಕೆ ಬಳಸುವುದಿಲ್ಲ– ಸಿ.ಎಂ ಭರವಸೆ
Last Updated 26 ಡಿಸೆಂಬರ್ 2016, 19:50 IST
ಅಕ್ಷರ ಗಾತ್ರ

ಬೆಂಗಳೂರು: ಎತ್ತಿನಹೊಳೆ ಯೋಜನೆಗೆ ವ್ಯಕ್ತವಾಗುತ್ತಿರುವ ವಿರೋಧ ಶಮನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕರೆದಿದ್ದ ಜನಪ್ರತಿನಿಧಿಗಳ ಸಭೆ ವಿಫಲವಾಯಿತು. ಸಭೆಯಲ್ಲಿ ಒಮ್ಮತ ಮೂಡದಿದ್ದರಿಂದ ಬಿಜೆಪಿ ನಾಯಕರು ಮಧ್ಯದಲ್ಲೇ ಹೊರ ನಡೆದರು.

ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳನ್ನೂ ಒಳಗೊಳ್ಳುವ ಯೋಜನೆ ಕುರಿತು ವ್ಯಕ್ತವಾಗುತ್ತಿರುವ ಪರ ಮತ್ತು ವಿರೋಧದ ನಿಲುವಿನಿಂದಾಗಿ ಗೊಂದಲ ಸೃಷ್ಟಿಯಾಗಿದೆ.

ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ, ರಮಾನಾಥ ರೈ, ಟಿ.ಬಿ. ಜಯಚಂದ್ರ, ಯು.ಟಿ. ಖಾದರ್‌, ಸಂಸದ ನಳಿನ್‌ಕುಮಾರ್‌ ಕಟೀಲು ಸೇರಿದಂತೆ ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಶಾಸಕರು ಹಾಗೂ ಹೋರಾಟಗಾರರು  ಭಾಗವಹಿಸಿದ್ದರು.

ಯೋಜನೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದ ನೀರಾವರಿ ತಜ್ಞ ಪ್ರೊ. ರಾಮಪ್ರಸಾದ್‌ ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಲಭ್ಯವಿದೆ. ಮಳೆಗಾಲದಲ್ಲಿ ನಾಲ್ಕು ತಿಂಗಳು ಈ ಜಿಲ್ಲೆಗಳಿಗೆ ನೀರು ಹರಿಸಬಹುದು ಎಂದರು.

ಅನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ  ತೊಂದರೆ ಆಗುವುದಿಲ್ಲ.   ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ  ಕೆರೆಗಳಿಗೆ ನೀರು ತುಂಬಿಸುವುದಷ್ಟೇ ಯೋಜನೆಯ ಉದ್ದೇಶ. ವ್ಯವಸಾಯಕ್ಕೆ ನೀರು ಬಳಸುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಯೋಜನೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಜನಪ್ರತಿನಿಧಿಗಳು ಮತ್ತು ಹೋರಾಟಗಾರರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರು ಕೊಂಡೊಯ್ಯಲು ವಿರೋಧಿಸುವುದಿಲ್ಲ. ಆದರೆ, ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಸಂಗ್ರಹ ಸಾಧ್ಯವಿಲ್ಲ ಎಂದು ವಾದಿಸಿದರು.

ಎತ್ತಿನಹೊಳೆಯಲ್ಲಿ ನೀರು ಸಿಗುವುದಿಲ್ಲ ಎಂದು ಗೊತ್ತಿದ್ದರೂ ಕಾಮಗಾರಿ ಕೈಗೆತ್ತಿಕೊಂಡು ಹಣ ಪೋಲು ಮಾಡಲಾಗುತ್ತಿದೆ. ವಾಸ್ತವವಾಗಿ ಸಿಗುವುದು ಕೇವಲ 6 ಟಿಎಂಸಿ ಅಡಿ ಮಾತ್ರ. ಯೋಜನೆಯಿಂದ ಕುಮಾರಧಾರಾ ನದಿಗೆ ತೊಂದರೆ ಆಗುವುದಿಲ್ಲ ಎಂದು  ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಬಿಜೆಪಿ ಜನ ಪ್ರತಿನಿಧಿಗಳು ಮತ್ತು ಚಳವಳಿಗಾರರು ಆರೋಪಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ  ಮಾತಿನ ಚಕಮಕಿ ನಡೆಯಿತು.

ಬಿಜೆಪಿ ಸರ್ಕಾರವೇ ಯೋಜನೆಗೆ 2012ರಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಪರಿಸರ ಸಚಿವಾಲಯವೂ ಒಪ್ಪಿಗೆ ಕೊಟ್ಟಿದೆ ಎಂದು ಕಾಂಗ್ರೆಸ್‌ ಶಾಸಕರು ವಿವರಿಸಿದರು.  ಇದರಿಂದ ಸಭೆಯಲ್ಲಿ ಗೊಂದಲ ಉಂಟಾಗಿ  ಬಿಜೆಪಿ ಸದಸ್ಯರು ಹಾಗೂ ಹೋರಾಟಗಾರರು ಸಭೆಯಿಂದ ಹೊರ ನಡೆದರು.

ಗೊಂದಲ ಹುಟ್ಟಿಸಲು ಯತ್ನ: ಬಿಜೆಪಿಯವರ ಎಲ್ಲಾ ಪ್ರಶ್ನೆಗಳಿಗೂ ಸಭೆಯಲ್ಲಿ ಪ್ರೊ. ರಾಮಪ್ರಸಾದ್ ಉತ್ತರ ನೀಡಿದ್ದಾರೆ. ಆದರೂ ಬಿಜೆಪಿ ನಾಯಕರು ಗೊಂದಲ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅನಂತರ ಆರೋಪಿಸಿದರು.

ತಜ್ಞರ ವರದಿ ಆಧರಿಸಿಯೇ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆ ಕಾರ್ಯಸಾಧುವಲ್ಲ ಎಂದು ಕೆಲವರು ಹಾದಿ– ಬೀದಿಯಲ್ಲಿ ವರದಿ ಸಿದ್ಧಪಡಿಸಿ ಆರೋಪ ಮಾಡುತ್ತಿದ್ದಾರೆ. ಅದನ್ನು ಸರ್ಕಾರ ಒಪ್ಪುವುದಿಲ್ಲ ಎಂದು ಪಾಟೀಲ ಸ್ಪಷ್ಟಪಡಿಸಿದರು.
*
ಸಭೆಯ ಹೊರಗೂ ಜಟಾಪಟಿ
ಸಭೆಯಿಂದ ಹೊರ ಬಂದ ಸಂಸದ ನಳೀನ್‌ಕುಮಾರ್‌ ಕಟೀಲು ಮತ್ತು ಬಿಜೆಪಿಯ ಬಿ. ನಾಗರಾಜಶೆಟ್ಟಿ  ಅವರು ಆಹಾರ ಸಚಿವ ಯು.ಟಿ. ಖಾದರ್ ವಿರುದ್ಧ ಹರಿಹಾಯ್ದರು.

‘ಕರಾವಳಿ ಭಾಗದವರಾದ ನೀವು ಆ ಭಾಗದ ಜನರ ಹಿತಾಸಕ್ತಿ ಮರೆತು ಸರ್ಕಾರದ ಪರವಾಗಿ ಮಾತನಾಡುತ್ತಿದ್ದೀರಿ’ ಎಂದು ನಾಗರಾಜಶೆಟ್ಟಿ ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಎತ್ತಿನಹೊಳೆ ಯೋಜನೆ ಬಿಜೆಪಿ ಕೂಸು’ ಎಂದು ಖಾದರ್‌ ತಿರುಗೇಟು ನೀಡಿದರು. ಮೂವರು ತುಳು ಭಾಷೆಯಲ್ಲೆ ಪರಸ್ಪರ ವಾಕ್ಸಮರ ನಡೆಸಿದರು. ಮಂಗಳೂರಿನ ಹೋರಾಟಗಾರರು ಕೂಡ ಖಾದರ್ ಅವರನ್ನು ತಡೆದು ಪ್ರಶ್ನೆ ಮಾಡಿದರು. ‘ಯೋಜನೆ ಅನುಷ್ಠಾನಗೊಂಡರೆ ಜನ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.
*
ನಿಲುವಳಿ ಸೂಚನೆ ಮಂಡಿಸಲಿ:ರೈ
ಎತ್ತಿನಹೊಳೆ ಯೋಜನೆಗೆ ಮಾಧ್ಯಮಗಳ ಮುಂದೆ ವಿರೋಧ ವ್ಯಕ್ತಪಡಿಸುವ ಬಿಜೆಪಿ ಮುಖಂಡರು ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಲಿ ಎಂದು ಅರಣ್ಯ ಸಚಿವ ರಮಾನಾಥ ರೈ ಸವಾಲು ಹಾಕಿದರು.

ಬಿಜೆಪಿ ನಿಲುವಳಿ ಸೂಚನೆ ಮಂಡಿಸಿದರೆ ಮುಖ್ಯಮಂತ್ರಿ ಅವರ ಕಾಲು ಹಿಡಿದಾದರೂ ಯೋಜನೆ ನಿಲ್ಲಿಸುತ್ತೇವೆ ಎಂದು ಸಚಿವ ರೈ ತಿಳಿಸಿದರು.

ಬಿಜೆಪಿ ನಾಯಕರು ಎರಡು ತಲೆ ಹಾವಿದ್ದಂತೆ. ಕೋಲಾರದಲ್ಲಿ ಯೋಜನೆಯ ಪರ ಮಾತನಾಡುತ್ತಾರೆ.  ಕರಾವಳಿಯಲ್ಲಿ ಯೋಜನೆ ವಿರೋಧಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT