ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಆರ್ಥಿಕತೆ ನಿಯಂತ್ರಿಸುವ ಕ್ರಮ

Last Updated 27 ಡಿಸೆಂಬರ್ 2016, 20:17 IST
ಅಕ್ಷರ ಗಾತ್ರ

1980ರ ದಶಕದಲ್ಲಿ ಹಳ್ಳಿಯ ಬ್ಯಾಂಕ್‌ನಲ್ಲಿ ಸಾಲ ಮಂಜೂರಾದ ನಂತರ ಅಲ್ಲಿನ ವ್ಯವಸ್ಥಾಪಕ, ‘ಮುಂದಿನ ವಾರದ ಒಂದು ದಿನ ಬನ್ನಿ, ಕ್ಯಾಷ್‌ ತರಿಸಿ ಇಟ್ಟಿರುತ್ತೇನೆ’ ಎನ್ನುವ ಪದ್ಧತಿ ಇತ್ತಂತೆ. ‘ತಕ್ಷಣಕ್ಕೆ ಬೇಕಾದಷ್ಟು ಕ್ಯಾಷ್‌ ಇಲ್ಲ’ ಎನ್ನುವ ಸ್ಥಿತಿ 1990ರ ಪ್ರಾರಂಭದಲ್ಲೂ ಇತ್ತು. ಇವತ್ತು ನಾವು ಬ್ಯಾಂಕಿಗೆ ಹೋದಾಗಲೂ ನಗದು ಸಮಸ್ಯೆ ಇದೆ. 

ಕೆಲ ದಿನಗಳ ನಂತರ ಇದು ಸರಿ ಹೋಗಬಹುದು ಎಂದು ಅನೇಕರು ಅಂದುಕೊಂಡಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ. ನೋಟು ಮುದ್ರಿಸಲು ಸಮಯ ಸಿಕ್ಕ ಮಾತ್ರಕ್ಕೆ ನೋಟುಗಳು ಹೇರಳವಾಗಿ ಸಿಗಲಾರವು. ಬಂಡವಾಳದ ಮುಕ್ತ ಹರಿವಿನ ಆರ್ಥಿಕತೆಯ ಬೆಂಬಲವಿದ್ದಾಗ ಮಾತ್ರ ಹಣ ಹೇರಳವಾಗಿ ಸಿಗುತ್ತದೆ.

ಹಣದ ಪೂರೈಕೆ ಹೇರಳವಾಗುವಂತೆ ಮಾಡಿದವರು ಡಾ. ಮನಮೋಹನ್ ಸಿಂಗ್. 1991ರಲ್ಲಿ ಜಾರಿಗೊಳಿಸಿದ ಜಾಗತೀಕರಣದ ನೀತಿ, ಬಂಡವಾಳದ ಮುಕ್ತ ಹರಿವಿಗೆ ನೀಡಿದ ಅವಕಾಶದ ಪರಿಣಾಮವಾಗಿ ಹಣದ ಹರಿವೂ ಉಂಟಾಯಿತು. ಆದ್ದರಿಂದ ಹಳ್ಳಿಗಾಡಿನ ಬ್ಯಾಂಕಿನಲ್ಲೂ ‘ಕ್ಯಾಷ್‌ ಇವತ್ತು ಇಲ್ಲ’ ಎನ್ನುವ ಪರಿಸ್ಥಿತಿ ಇಲ್ಲವಾಯಿತು.

ಮುಂದೆ ಏನಾಗಲಿದೆ ಎಂದು ಆಗ ಸಿಂಗ್ ಬೆಂಬಲಿಗರು, ವಿರೋಧಿಗಳು ವಾದಿಸತೊಡಗಿದರೊ, ಅವು ಬಹುಮಟ್ಟಿಗೆ ಆದವು. ಹಣ ಗಳಿಸಿಕೊಳ್ಳಲು ಸಾವಿರ ದಾರಿಗಳು ತೆರೆದುಕೊಂಡವು. ಪ್ರಕೃತಿ ಸಂಪತ್ತಿನ ಮಹಾಲೂಟಿ, ಮನುಷ್ಯ ಸಂಬಂಧಗಳ ಕುಸಿತ, ಸಾಂಸ್ಕೃತಿಕ ಶಿಥಿಲ ಎಲ್ಲವೂ ಆದವು. ಎಲ್ಲಕ್ಕಿಂತ ಹೆಚ್ಚಾಗಿ ಹಣವನ್ನು ಎಗ್ಗಿಲ್ಲದಂತೆ ಬಳಸುವ, ಹಣಕ್ಕೆ ಬೆಲೆಯೇ ಇಲ್ಲದಂತೆ ವರ್ತಿಸುವ ಒಂದು ತಲೆಮಾರು ರೂಪುಗೊಂಡಿತು.

ಹಣದ ಮುಕ್ತ ಹರಿವಿಗೆ ಪೂರಕವಾದ ಸರ್ಕಾರಿ ನೀತಿ ಜಾರಿಗೆ ಬಂದಾಗ ಭ್ರಷ್ಟಾಚಾರ ಬೆಳೆಯಿತು. ಭ್ರಷ್ಟಾಚಾರ ನಿಯಂತ್ರಿಸುವ ಸರ್ಕಾರಿ ನೀತಿ ಜಾರಿಗೊಳಿಸಿದರೆ ಬಂಡವಾಳದ ಮುಕ್ತ ಹರಿವಿಗೂ ಧಕ್ಕೆ ಬರುತ್ತದೆ ಎಂದು, ಬಂಡವಾಳದ ಮುಕ್ತ ಹರಿವಿನ ನೀತಿಯನ್ನೇ ಮುಂದುವರಿಸಲಾಯಿತು. ಆದರೆ ತಮ್ಮ ನೀತಿಯಲ್ಲಿ ಎಲ್ಲೋ ತಪ್ಪಾಗಿದೆ ಎಂಬರ್ಥದ ಮಾತನ್ನು ಮನಮೋಹನ್ ಸಿಂಗ್ 2012ರ ಸುಮಾರಿನಲ್ಲಿ ಹೇಳಿದ್ದುಂಟು.

ಇವತ್ತು ಮನಮೋಹನ್‌ ಅವರನ್ನು ಬಹುತೇಕರು ಮಾಜಿ ಪ್ರಧಾನಿಯಾಗಿ ಗ್ರಹಿಸುತ್ತಾರೆ. ರಾಜಕೀಯವಾಗಿ ಅವರನ್ನು ದುರ್ಬಲರನ್ನಾಗಿ ಮಾಡಲಾಗಿತ್ತು, ನಿಜ. ಅವರ ಆರ್ಥಿಕ ನೀತಿಗೆ ವಿರೋಧವೂ ಇದೆ. ಆದರೆ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಅವರು ಸಶಕ್ತ ಹಣಕಾಸು ಸಚಿವರಾಗಿದ್ದರು. ಭಾರತದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು 25 ವರ್ಷಗಳ ಕಾಲ ನಿರ್ಧರಿಸಬಲ್ಲ ಆರ್ಥಿಕ ನೀತಿ ರೂಪಿಸಿದ್ದರು.

‘ಬಂಡವಾಳದ ಮುಕ್ತ ಹರಿವೇನೊ ಸರಿ, ಆದರೆ ಬಂಡವಾಳ ಹರಿಸುವುದು ಎಲ್ಲಿಗೆ’ ಎಂಬ ಪ್ರಶ್ನೆ ಎದುರಾದಾಗ ಅವರು ಆತ್ಮಾವಲೋಕನದ ಮಾತನ್ನು ಆಡಿದ್ದರು. 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ ಮುಂದಿಟ್ಟು ಬಂಡವಾಳ ಆಹ್ವಾನದ ನಾನಾ ಪ್ರಯತ್ನಗಳನ್ನು ಮಾಡುತ್ತಾ, ಸಿಂಗ್ ಅವರ ನೀತಿಯನ್ನು ಮುಂದುವರಿಸಲು ಇನ್ನಿಲ್ಲದಂತೆ ಪ್ರಯತ್ನಿಸಿತು. ಆದರೆ ವಾಸ್ತವಿಕ ಅನುಷ್ಠಾನದಲ್ಲಿ ಈ ಪರಿಕಲ್ಪನೆ ಸೋಲುತ್ತಾ ಹೋಯಿತು.

ಏಕೆಂದರೆ ಜಾಗತೀಕರಣದ ಹಿಂದೆ ಪ್ರಧಾನವಾಗಿ ಕೆಲಸ ಮಾಡಿದ್ದ ಅಮೆರಿಕದ ಆರ್ಥಿಕತೆಯೇ ಹೊಡೆತ ಅನುಭವಿಸತೊಡಗಿತ್ತು. ಒಬಾಮ ಆಡಳಿತದ ಅವಧಿಯಲ್ಲಿ ಪ್ರಾರಂಭವಾದ ಅಮೆರಿಕದ ಆರ್ಥಿಕ ಹತಾಶೆ ಈಗ ಟ್ರಂಪ್ ಆಡಳಿತಕ್ಕೆ ವರ್ಗಾವಣೆಯಾಗಲಿದೆ. ತನ್ನ ಆರ್ಥಿಕತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನಲ್ಲಿರುವ ವಿದೇಶಿ ಉದ್ಯೋಗಿಗಳನ್ನು ಹೊರ ಹಾಕುವುದು, ಬರಲಿರುವ ಟ್ರಂಪ್ ಆಡಳಿತಕ್ಕೆ ಅನಿವಾರ್ಯವಾಗಿದೆ.

ಮೋದಿ ಆಡಳಿತದ ಈಗಿನ ನಡೆಯನ್ನು ರಾಜಕೀಯ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳಲಾಗುತ್ತಿದೆಯೇ ಹೊರತು ಆರ್ಥಿಕ ದೃಷ್ಟಿಕೋನದಲ್ಲಿ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಇನ್ನೂ ಆರಂಭವಾದಂತಿಲ್ಲ.

ಸಿಂಗ್ ಸರಿಯಾಗಿಯೇ ಅರ್ಥೈಸಿರುವಂತೆ, ಈಗಿನ ಆರ್ಥಿಕ ಬೆಳವಣಿಗೆ ಭಾರತವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಏಕೆಂದರೆ ಆರ್ಥಿಕತೆಯನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವುದು ನಮ್ಮ  ಸಂದರ್ಭದ ಅನಿವಾರ್ಯವಾಗಿದೆ. ಭಾರತದ ಆರ್ಥಿಕ ಚಟುವಟಿಕೆಗಳು ಕ್ರಿಯಾಶೀಲವಾಗಬೇಕಾದರೆ ಈಗ ಆಗಿರುವ ರಾಕ್ಷಸ ಬೆಳವಣಿಗೆಯನ್ನು ಹಿಂದಕ್ಕಟ್ಟುವುದು ಒಂದು ರಾಷ್ಟ್ರೀಯ ಅನಿವಾರ್ಯ.

ಭಾರತೀಯ ಸಮಾಜದ ಸ್ವಭಾವ ದಿಢೀರ್‌ ಪರಿವರ್ತನೆಗೆ ಒಗ್ಗಿಕೊಳ್ಳುವಂಥದ್ದಲ್ಲ. ವಿಕಾಸಾತ್ಮಕ ವಿನ್ಯಾಸದಲ್ಲಿ ಬೆಳೆಯುವುದೇ ಅದರ ಸ್ವಭಾವ. ಅದಕ್ಕೆ ಸಾಕ್ಷಿ ಎಂದರೆ 1991ರಲ್ಲಿ ಮನಮೋಹನ್ ಸಿಂಗ್ ಏಕಾಏಕಿ   ಜಾರಿಗೊಳಿಸಿದ ಆರ್ಥಿಕ ನೀತಿಗೆ ಸಾಮಾಜಿಕವಾಗಿ ಒಗ್ಗಿಕೊಳ್ಳಲು ಭಾರತೀಯ ಸಮಾಜಕ್ಕೆ ಸಾಧ್ಯವಾಗಲೇ ಇಲ್ಲ.

ಒಂದು ವೇಳೆ ಅದು ಸಾಧ್ಯವಾಗಿರುತ್ತಿದ್ದರೆ ಆರ್ಥಿಕ ಅವಕಾಶಗಳನ್ನು ಯಥೇಚ್ಛವಾಗಿ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುವ ಸಾಮಾಜಿಕ ಪ್ರವೃತ್ತಿ ಕಾಣಿಸುತ್ತಿರಲಿಲ್ಲ. ಈ ಎರಡು ಕಾರಣಗಳಿಗಾಗಿ ಆರ್ಥಿಕವಾಗಿ ಅಸಂತುಲಿತ ಮಾದರಿ ಹೊಂದಿರುವ ಭಾರತವನ್ನು 1990ರ ದಶಕದಷ್ಟು ಹಿಂದಕ್ಕೆ ತಳ್ಳಿ, ನಂತರ ವಿಕಾಸಾತ್ಮಕ ವಿನ್ಯಾಸದಲ್ಲಿ ಮುಂದಕ್ಕೆ ತರಬೇಕಾಗುತ್ತದೆ.

ಸನ್ನಿವೇಶವನ್ನು ಸ್ವಲ್ಪ ತುಲನೆ ಮಾಡಿ ನೋಡಿದರೆ ಮೋದಿ ಆಡಳಿತದ ಹೆಜ್ಜೆಯ ದಿಕ್ಕು ಅರ್ಥವಾಗುತ್ತದೆ. ಸರ್ಕಾರಿ ವ್ಯವಸ್ಥೆ ಆಡಳಿತಾತ್ಮಕವಾಗಿ ಬಲಗೊಳ್ಳುತ್ತಿದೆ.ಮೇಲ್ನೋಟಕ್ಕೆ ಅದು ಗೋಚರಿಸುತ್ತಿರುವುದು ಆದಾಯ ತೆರಿಗೆ ಇಲಾಖೆಯ ಮುಖಾಂತರ.

ಮುಕ್ತ ಅರ್ಥ ವ್ಯವಸ್ಥೆ ಜಾರಿಗೆ ಬಂದಾಗ ಮೊದಲು ದುರ್ಬಲವಾದದ್ದು ಆದಾಯ ತೆರಿಗೆ ಇಲಾಖೆ. ಈಗ ಮೊದಲು ಬಲಗೊಳ್ಳುತ್ತಿರುವುದೂ ಈ ಇಲಾಖೆಯೇ. ಹಾಗೆ ನೋಡಿದರೆ ಮನಮೋಹನ್ ಆಡಳಿತದ ಕೊನೆಯ ವರ್ಷ ಮಾಧ್ಯಮಗಳಲ್ಲಿ ‘ನಿಮ್ಮ ಆದಾಯ ಎಷ್ಟೆಂದು ಆದಾಯ ತೆರಿಗೆ ಇಲಾಖೆಗೂ ಗೊತ್ತಿದೆ’ ಎಂಬ ಜಾಹೀರಾತು ಪ್ರಕಟವಾಗಲು ಪ್ರಾರಂಭವಾದ ವೇಳೆಗೇ ಇಲಾಖೆ ಚೈತನ್ಯಶೀಲವಾಗಲು ಪ್ರಾರಂಭವಾಗಿತ್ತು. ಇಲಾಖೆ ಬಲಗೊಳ್ಳುತ್ತಿದ್ದಂತೆಯೇ ರಾಕ್ಷಸನಂತೆ ಏರಿದ ಭೂಮಿ ಬೆಲೆ ಇಳಿಮುಖವಾಗಲು ಆರಂಭವಾಗಿತ್ತು.

ಮೋದಿ ಸರ್ಕಾರದ್ದು ಉದ್ದೇಶಪೂರ್ವಕ ಆರ್ಥಿಕ ಆಡಳಿತವೇ ಅಥವಾ ರಾಜಕೀಯಾತ್ಮಕ ನಡೆಯ ಪರಿಣಾಮವೇ ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ನರಸಿಂಹ ರಾವ್ ಆಡಳಿತವು ಸಿಂಗ್ ನೀತಿ ಅನುಷ್ಠಾನಕ್ಕೆ ತಂದ ನಂತರವಾದರೂ ತನ್ನ ಉದ್ದೇಶದ ಬಗ್ಗೆ ವಿವರಣೆಯನ್ನು ರಾಷ್ಟ್ರಕ್ಕೆ ನೀಡಿತ್ತು. ಈಗ ಅಂತಹ ವಿವರಣೆಯನ್ನು ಪ್ರಭುತ್ವ ನೀಡಿಲ್ಲ.

ಕೊಡಲಾಗಿರುವ ವಿವರಣೆ ‘ಭ್ರಷ್ಟರನ್ನು ಮಟ್ಟ ಹಾಕುವುದು’ ಎಂಬಷ್ಟಕ್ಕೇ ಸೀಮಿತವಾಗಿದೆ. ಆದರೆ ಒಂದು ಬೃಹತ್ ಆರ್ಥಿಕ ಕಾರ್ಯಕ್ರಮ ಭ್ರಷ್ಟರನ್ನು ಹಿಡಿಯುವುದಕ್ಕಷ್ಟೇ ಸೀಮಿತವಾಗಿರದು. ಬಹುಶಃ ಭ್ರಷ್ಟರನ್ನು ಹಿಡಿಯುವ ರಾಜಕೀಯಾತ್ಮಕ ಪ್ರಕ್ರಿಯೆಯ ಪೊರೆ ಕಳಚಿದ ನಂತರ ನೈಜ ಆರ್ಥಿಕ ಉದ್ದೇಶದ ವಿವರಣೆ ರಾಷ್ಟ್ರಕ್ಕೆ ಸಿಗಬಹುದು.

ಕೆಲ ನಿರ್ದಿಷ್ಟ ಕಾರಣಗಳಿಂದ ಭಾರತದಲ್ಲಿ ನಗದುರಹಿತ ಸಮಾಜ ನಿರ್ಮಾಣ ಅಸಾಧ್ಯ. ಇದು ಸಾಮಾನ್ಯರಿಗೇ ಗೊತ್ತಾಗುತ್ತದೆ. ಹಾಗಿರುವಾಗ ಸರ್ಕಾರಕ್ಕೆ ಗೊತ್ತಾಗುವುದಿಲ್ಲ ಎಂದು ಭಾವಿಸಲಾಗದು. ಅಂದರೆ ನಗದುರಹಿತ ಸಮಾಜದ ಪರಿಕಲ್ಪನೆ ಮೂಲಕ ಹೇಳುತ್ತಿರುವುದು ಆರ್ಥಿಕ ಚಟುವಟಿಕೆ ಕಡಿತಗೊಳಿಸುವ ಉದ್ದೇಶವಲ್ಲದೆ ಬೇರೇನು ಆಗಿರಲು ಸಾಧ್ಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT