ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಶೇಷಗಳಡಿ ಸಿಲುಕಿದರೆ ಹುಡುಕಬಲ್ಲದು ಈ ರೋಬೊ

Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

23  ವರ್ಷಗಳ ಹಿಂದೆ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಗಂಗಾರಾಂ ಕಟ್ಟಡ ಕುಸಿದು ಬಿದ್ದ ಸಮಯ. ಈ ಘಟನೆಯಲ್ಲಿ 123 ಜನರು ಸಾವಿಗೀಡಾದರು. ಮಾಲೀಕರ ಮಗನ ಶವವನ್ನೇ 30ನೇ ದಿನದಂದು ಹೊರತೆಗೆಯಲು ಸಾಧ್ಯವಾಯಿತು. ಅಂದು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದವರು ಎಲ್ಲಿರುವರೆಂದು ಹುಡುಕುವುದೇ ದುಸ್ತರವಾಗಿದ್ದರಿಂದ ಅವರಿಗೆ ಸಕಾಲದಲ್ಲಿ ಸಹಾಯ ಒದಗಿಸುವುದೇ ಪ್ರಮುಖ ಸವಾಲಾಗಿತ್ತು.

ಇಂಥ ಘಟನೆಗಳು ಒಂದೆರಡಲ್ಲ. ಇಂದಿಗೂ ನಡೆಯುತ್ತಲೇ  ಇವೆ. ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದಿದ್ದರೂ ಕಟ್ಟಡಗಳು ಕುಸಿದು ಬೀಳುವುದು, ಅದರಡಿಯಲ್ಲಿ ಸಿಲುಕಿ ಒಂದಷ್ಟು ಮಂದಿಯ ಸಾವು ಸಂಭವಿಸುವುದು ಮಾತ್ರ ತಪ್ಪಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಸಹಾಯ ಒದಗಿಸಿದರೆ ಇಂಥ ಅವಘಡಗಳಲ್ಲಿನ ಸಾವು ನೋವನ್ನು ತಪ್ಪಿಸಬಹುದೇ? ಈ ಆಲೋಚನೆಯನ್ನೇ ಗಂಭೀರವಾಗಿ ತೆಗೆದುಕೊಂಡು ಪ್ರಯೋಗಕ್ಕೆ ಇಳಿದವರು ಬೆಂಗಳೂರಿನ ಕೌಶಿಕ್ ಜಯರಾಂ.

ಇಂತಹ ಅನಾಹುತಗಳಾದಲ್ಲಿ, ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡವರನ್ನು ಹುಡುಕುಲು ಸಹಾಯ ಮಾಡುವ ರೋಬೊ ಮಾದರಿಯನ್ನು ಆವಿಷ್ಕರಿಸಲು ಮುಂದಾದರು ಕೌಶಿಕ್.

ಕೌಶಿಕ್, ಬೆಂಗಳೂರಿನವರೇ ಆದ ಜಯರಾಂ ಹಾಗೂ ವಿಜಯಲಕ್ಷ್ಮಿ ದಂಪತಿಯ ಮಗ. ವಿದ್ಯಾಭ್ಯಾಸದಲ್ಲಿ ಸದಾ ಮುಂದಿರುತ್ತಿದ್ದ ಕೌಶಿಕ್, ಅಖಿಲ ಭಾರತ ಮಟ್ಟದ ಎನ್‌ಟಿಎಸ್‌ಇ ಸ್ಕಾಲರ್‌ಶಿಪ್ ಪಡೆದಿದ್ದರು. ಇನ್ಫೊಸಿಸ್ ಸಂಸ್ಥೆಯ‘ಕ್ಯಾಚ್ ದೆಮ್ ಯಂಗ್’ ಯೋಜನೆಯಡಿಯಲ್ಲಿ ಆಯ್ಕೆಗೊಂಡಿದ್ದಾಗ ಬ್ರಿಟನ್‌ನ ಅಂದಿನ ಪ್ರಧಾನಿ ಟೋನಿ ಬ್ಲೇರ್ ಅವರೊಂದಿಗೆ ಸಂವಾದ ನಡೆಸುವ ಅವಕಾಶವನ್ನೂ ತಮ್ಮದಾಗಿಸಿಕೊಂಡಿದ್ದರು ಕೌಶಿಕ್. ತಾಂತ್ರಿಕ ಶಿಕ್ಷಣದಲ್ಲಿ ಆಸಕ್ತಿ ಹೊಂದಿದ್ದ ಕೌಶಿಕ್, ಪಿಯುಸಿ ನಂತರ ಐಐಟಿ ಜೆಇಇ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಐಐಟಿ – ಬಾಂಬೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಹಾಗೂ ಮ್ಯಾನುಫ್ಯಾಕ್ಚರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಸಮಾಜಕ್ಕೆ ಉಪಯೋಗವಾದರೆ ಮಾತ್ರ ಶಿಕ್ಷಣಕ್ಕೆ ಸಾರ್ಥಕತೆ ಎಂಬುದನ್ನು ಕಂಡುಕೊಂಡಿದ್ದ ಕೌಶಿಕ್ ಅವರಿಗೆ, ತಾವೂ ಸಮಾಜಮುಖಿ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕೆಂಬ ಹಂಬಲವೂ ಇತ್ತು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಈಗ ಪೋಸ್ಟ್ ಡಾಕ್ಟರಲ್ ಸಂಶೋಧನೆಯಲ್ಲಿ ತೊಡಗಿರುವ ಕೌಶಿಕ್, ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಪದವಿಗಾಗಿ ಸಂಶೋಧನೆಯನ್ನು ಕೈಗೊಂಡರು. ಕಟ್ಟಡ ಕುಸಿತದಿಂದ ಆಗುತ್ತಿರುವ ಸಾವುನೋವು, ಆ ಸಂದರ್ಭದಲ್ಲಿ ವಿಫಲವಾಗುವ ಪ್ರಯತ್ನಗಳು, ಸಮಯದ ನಿರ್ವಹಣೆ, ಸಿಲುಕಿರುವವರ ರಕ್ಷಣೆಯ ಕುರಿತು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೌಶಿಕ್ ಅವರಿಗೆ, ಈ ವಿಷಯದಲ್ಲಿ ಸಹಾಯವಾಗುವಂಥ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕೆಂಬ ಮನಸ್ಸಾಯಿತು.

ಹತ್ತರೊಳಗೊಂದು ಎನ್ನಿಸಿಕೊಳ್ಳದೇ, ಈಗಿನ ಕಾಲಮಾನಕ್ಕೆ ಒಪ್ಪುವ, ಸ್ವಲ್ಪ ಭಿನ್ನ ಎನಿಸುವ ತಂತ್ರಜ್ಞಾನದ ಮಾದರಿಯನ್ನು ರೂಪಿಸುವ ಕುರಿತು ಆಲೋಚಿಸಿದರು. ಇದರ ಫಲವಾಗಿ ರೂಪು ತಳೆದದ್ದೇ ಈ ರೋಬೊ ಮಾದರಿ.

ಈ ರೋಬೊಗೆ ಕೌಶಿಕ್ ಬಳಸಿಕೊಂಡಿದ್ದು ಜಿರಲೆಯ ದೇಹ ರಚನೆಯನ್ನು. ಹೀಗೆ ಜಿರಲೆ ದೇಹ ರಚನೆಯನ್ನು ಅಳವಡಿಸಿಕೊಳ್ಳಲೂ ಒಂದು ಕಾರಣವಿದೆ. ಅತಿ ಕಿರಿದಾದ ಸಂದುಗೊಂದುಗಳಲ್ಲಿಯೂ ತೂರಬಲ್ಲ ಜಿರಲೆಯ ಸಾಮರ್ಥ್ಯವನ್ನೇ ತಮ್ಮ ತಂತ್ರಜ್ಞಾನಕ್ಕೂ ಅಳವಡಿಸಿಕೊಂಡರೆ ಕೆಲಸ ಸುಲಭ ಎಂಬುದು ಈ ತಂತ್ರಜ್ಞಾನದ ಹಿಂದಿನ ತಿರುಳಾಗಿತ್ತು. ಇದೇ ಹಿನ್ನೆಲೆಯಲ್ಲಿ ಜಿರಲೆಯಂತೆಯೇ ಕವಚವಿರುವ ಒಂದು ರೋಬೊ ಮಾದರಿಯನ್ನು ಸಿದ್ಧಪಡಿಸಿದರು.

ಈ ರೋಬೊದಲ್ಲಿ ಸೆನ್ಸರ್ ಅಳವಡಿಸಲಾಗಿರುತ್ತದೆ. ಕಟ್ಟಡ ಕುಸಿದ ಸಂದರ್ಭ, ಈ ರೋಬೊ ಬಿಟ್ಟರೆ, ಎಂಥ ಸಂದುಗೊಂದುಗಳಲ್ಲೂ ನುಗ್ಗಿ, ಬದುಕಿರುವವರ ಮಾಹಿತಿ ನೀಡುವಂತೆ ರೂಪಿಸಲಾಗಿದೆ.

‘ಕಟ್ಟಡದ ಅವಶೇಷಗಳ ಸಂದಿಗೊಂದಿಗಳಲ್ಲಿ ಸಿಲುಕಿಕೊಂಡಿರುವವರನ್ನು ಗುರುತಿಸಿ ಅವರನ್ನು ಮೇಲೆ ತರುವಂತೆ ಆಜ್ಞೆ ಹೊರಡಿಸಬಲ್ಲದು ಈ ರೋಬೊ. ಜಿರಲೆಯು ತನ್ನ ಅಂಗಾಂಗಗಳನ್ನು ಬಳಸಿಕೊಳ್ಳುವ ರೀತಿಯನ್ನು ಮೆಕಾನಿಕಲ್ ಎಂಜಿನಿಯರಿಂಗ್‌ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಈ ತಂತ್ರಜ್ಞಾನ ಸಮರ್ಥವಾಗಿ ಕೆಲಸ ಮಾಡುತ್ತದೆ ಎನ್ನಿಸಿತು. ಅದಕ್ಕೇ ಈ ಮಾದರಿಯನ್ನು ಅಳವಡಿಸಿಕೊಳ್ಳಲಾಯಿತು’ ಎನ್ನುತ್ತಾರೆ ಕೌಶಿಕ್.

ಕೌಶಿಕ್ ಅಭಿವೃದ್ಧಿಪಡಿಸಿರುವ ಈ ರೋಬೊ ಅಪಾರ ಮಟ್ಟದ ಭಾರವನ್ನು ತಡೆದುಕೊಳ್ಳಬಹುದಾಗಿದ್ದು, ತನ್ನ ಎತ್ತರದ ಅರ್ಧ ಭಾಗಕ್ಕಿಂತ ಕಿರಿದಾದ ಸಂದಿಗಳಲ್ಲಿ ತೂರಬಹುದಾಗಿರುತ್ತದೆ. ಈ ರೋಬೊವನ್ನು ಕ್ರಾಮ್ (CRAM: Compressible Robot with Articulated Mechanisms)ಎಂದು ಕರೆಯಲಾಗಿದೆ. ಇದನ್ನು ಸಂಪೂರ್ಣವಾಗಿ ಬಳಕೆಗೆ ತರಲು ಇನ್ನೂ ಹಲವಾರು ಹಂತಗಳನ್ನು ದಾಟಬೇಕಿದ್ದರೂ ಬಹು ಶೀಘ್ರದಲ್ಲಿಯೇ ಕಾರ್ಯಶೀಲ ಮಾದರಿಯನ್ನು ರೂಪಿಸುವ ವಿಶ್ವಾಸವನ್ನು ಹೊಂದಿದ್ದಾರೆ ಕೌಶಿಕ್.

ಈ ಸಂಶೋಧನೆಯನ್ನು ವಿಶ್ವಮಟ್ಟದಲ್ಲಿ  ಗುರುತಿಸಲಾಗಿದ್ದು 450ಕ್ಕೂ ಹೆಚ್ಚು ಜಾಲತಾಣಗಳಲ್ಲಿ ಈ ಆವಿಷ್ಕಾರದ ಬಗ್ಗೆಯ ಚರ್ಚೆಗಳು ಈಗ ನಡೆಯುತ್ತಿವೆ.
- ರವೀಂದ್ರನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT