ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2016: ಜಿಲ್ಲೆಗೆ ಕಾಡಿದ ಹಲವು ನೆನಪುಗಳ ಹಿನ್ನೋಟ

ರಾಮನಗರ: ಬರದ ಬವಣೆಯಲ್ಲಿ ಬೆಂದ ಜನತೆ– ಮೇವಿಗೂ ಪರದಾಟ
Last Updated 31 ಡಿಸೆಂಬರ್ 2016, 6:56 IST
ಅಕ್ಷರ ಗಾತ್ರ

ರಾಮನಗರ: ವರ್ಷವಿಡೀ ಜನರನ್ನು ಕಾಡಿದ ಬರ, ಕಾವೇರಿ ಕಿಚ್ಚು ಹತ್ತಿಸಿದ ಸರಣಿ ಹೋರಾಟಗಳು, ವನ್ಯಜೀವಿ–ಮಾನವರ ನಿರಂತರ ಸಂಘರ್ಷ, ಎರಡು ತಿಂಗಳು ಎಲ್ಲರ ಗಮನ ಸೆಳೆದು ಮಣ್ಣಲ್ಲಿ ಮಣ್ಣಾದ ಸಿದ್ದ, ಮಾಸ್ತಿಗುಡಿ ಶೂಟಿಂಗ್‌ನ ದುರಂತ ಅಂತ್ಯ....

ಇದು ಈ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದ ಘಟನಾವಳಿಗಳ ಹೈಲೈಟ್ಸ್. ಈ ವರ್ಷ ಜಿಲ್ಲೆಯು ಅನೇಕ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಯಿತು. ಮುಖ್ಯವಾಗಿ ಬರದ ಬವಣೆಯಲ್ಲಿ ಜನರು ಬೆಂದು ನಿಟ್ಟುಸಿರು ಬಿಟ್ಟರು. ವರುಣ ಜನರನ್ನು ಇನ್ನಿಲ್ಲದಂತೆ ಕಾಡಿದ ಪರಿಣಾಮ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿವಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಜಿಲ್ಲೆಯ ನಾಲ್ಕೂ ತಾಲ್ಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರವು ಘೋಷಿಸಿತು.

ರಾಮನಗರವು ಕಳೆದ ಮೂರು ವರ್ಷಗಳಿಂದಲೂ ಸತತ ಬರಗಾಲದ ಪರಿಸ್ಥಿತಿ ಎದುರಿಸುತ್ತಲೇ ಬಂದಿದೆ. ಈ ವರ್ಷದ ಪರಿಸ್ಥಿತಿ ಮಾತ್ರ ಅದಕ್ಕಿಂತ ಭೀಕರವಾಗಿತ್ತು. ಜಿಲ್ಲೆಯ ಶೇ 62ರಷ್ಟು ಕೃಷಿ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗುತ್ತ ಬಂದಿದೆ. ಆದರೆ ಮಳೆಯ ಕೊರತೆಯಿಂದಾಗಿ ಪೈರು ಭೂಮಿಯಲ್ಲಿಯೇ ಸುಟ್ಟುಹೋಯಿತು.

ಪರಿಣಾಮ ಜನರಿಗೆ ಆಹಾರದ ಸಮಸ್ಯೆ ಎದುರಾಗಿದ್ದರೆ, ಜಾನುವಾರುಗಳಿಗೆ ಹುಲ್ಲು ಇಲ್ಲದಂತಾಯಿತು. ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಮಳೆಯ ತೀವ್ರ ಕೊರತೆಯಿಂದಾಗಿ ಶೇ 89ರಷ್ಟು ಬೆಳೆ ನಾಶವಾಯಿತು. ಇನ್ನೊಂದೆಡೆ ಕೆರೆ–ಕಟ್ಟೆಗಳು ಒಣಗಿ ಜನರು ನೀರಿಗಾಗಿ ಪರಿತಪಿಸುವಂತಾಯಿತು.

ಮೂರು ಸಮಿತಿಗಳ ಭೇಟಿ: ಜಿಲ್ಲೆಯಲ್ಲಿ ಈ ವರ್ಷ ಮುಂಗಾರಿನಲ್ಲಿ ಸುಮಾರು ₹80 ಕೋಟಿಯಷ್ಟು ಬೆಳೆ ಹಾನಿ ಅಂದಾಜಿಸಲಾಗಿದೆ. ಇಲ್ಲಿನ ನಷ್ಟವನ್ನು ಅಳೆದು–ತೂಗುವ ಸಲುವಾಗಿ ಮೂರು ಬಾರಿ ವಿವಿಧ ಸಮಿತಿಗಳು ಬಂದು ಹೋದವು. ಮೊದಲಿಗೆ ಕೇಂದ್ರ ಸರ್ಕಾರದ ಬರ ಪರಿಶೀಲನಾ ತಂಡವು ಬಂದರೆ, ನವೆಂಬರ್‌ 16ರಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ರೈತರ ಸ್ಥಿತಿಯನ್ನು ಕಣ್ಣಾರೆ ಕಂಡರು.

ಡಿಸೆಂಬರ್ 30ರಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಸಚಿವರಾದ ರಾಮಲಿಂಗ ರೆಡ್ಡಿ, ಡಿ.ಕೆ. ಶಿವಕುಮಾರ್‌ ನೇತೃತ್ವದ ಸಚಿವ ಸಂಪುಟ ಸಮಿತಿಯು ಮತ್ತೊಮ್ಮೆ ಅಧ್ಯಯನ ನಡೆಸಿದೆ. ಈ ಎಲ್ಲ ಅಧ್ಯಯನ ವರದಿಗಳ ಲಾಭ ಅನ್ನದಾತನಿಗೆ ಇನ್ನಷ್ಟೇ ಬರಬೇಕಿದೆ. ಬರ ನಿರ್ವಹಣೆಗೆ ಜಿಲ್ಲಾಡಳಿತವು ತನ್ನ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದು, ಸರ್ಕಾರಗಳಿಂದ ಇನ್ನಷ್ಟೇ ನೆರವು ಸಿಗಬೇಕಿದೆ.

ವನ್ಯಜೀವಿ–ಮಾನವ ಸಂಘರ್ಷ
ಜಿಲ್ಲೆಯಲ್ಲಿ ಆನೆ, ಚಿರತೆ, ಕರಡಿ ಹಾಗೂ ಮನುಷ್ಯರ ನಡುವೆ ನಿರಂತರ ಸಂಘರ್ಷ ನಡೆಯುತ್ತಲೇ ಬಂದಿದೆ. ಆದರೆ ಅದು ಈ ವರ್ಷ ಇನ್ನಷ್ಟು ತಾರಕಕ್ಕೆ ಏರಿತು. ಮುಖ್ಯವಾಗಿ ಆನೆಗಳ ದಾಳಿಯಿಂದಾಗಿ ಹಲವರು ಪ್ರಾಣ ಕಳೆದುಕೊಂಡರು. ನೂರಾರು ಎಕರೆ ಬೆಳೆ ನಷ್ಟವಾಯಿತು. ಮತ್ತೊಂದು ಕಡೆ ಸುಮಾರು 5 ಆನೆಗಳು ಅಸುನೀಗಿದವು.

ಮಾಗಡಿ, ಚನ್ನಪಟ್ಟಣ ಹಾಗೂ ಕನಕಪುರದ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ದಾಳಿಯಿಂದಾಗಿ ಈ ವರ್ಷ ಸುಮಾರು 7 ಜನರು ಪ್ರಾಣ ಕಳೆದುಕೊಂಡರು. ಅರಣ್ಯ ಪಾಲಕರೂ ಆನೆಯ ತುಳಿತಕ್ಕೆ ಸಿಕ್ಕು ಜೀವ ತೆತ್ತರು.  ಈ ನಡುವೆ ರೈತರು ಜಮೀನಿನ ಸುತ್ತ ಹಾಕಿದ ವಿದ್ಯುತ್‌ ತಂತಿಬೇಲಿಗೆ ಸಿಲುಕಿ ಎರಡು ಆನೆಗಳು ಅಸುನೀಗಿದರೆ, ಒಂದು ಗುಂಡೇಟು ತಿಂದು ಮಲಗಿತು.

ಮಾಗಡಿಯಲ್ಲಿ ರೌಂಡಿ ರಂಗ ಎಂಬ ಕಾಡಾನೆ ಎಬ್ಬಿಸಿದ ದಾಂದಲೆಗೆ ಕೊನೆಯಿಲ್ಲ. ಕಡೆಗೂ ಎಚ್ಚೆತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಡಿಸೆಂಬರ್‌ ತಿಂಗಳಾಂತ್ಯದಲ್ಲಿ ಕಾರ್ಯಾಚರಣೆ ಕೈಗೊಂಡು ‘ರೌಡಿ’ಯನ್ನು ಕಡೆಗೂ ಅರೆಸ್ಟ್‌ ಮಾಡಿದರು. ಹೀಗೆ ಒಟ್ಟು ಮೂರು ಆನೆಗಳನ್ನು ಸೆರೆ ಹಿಡಿಯಲಾಯಿತು. ಆದರೆ ಕನಕಪುರ ಭಾಗದಲ್ಲಿ ಗಜಪಡೆಯ ಉಪಟಳ ಮುಂದುವರಿದಿದ್ದು, ಕಾಡಾನೆಗಳೇ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಓಡಿಸಿಕೊಂಡು ಬಂದು ಬೆಚ್ಚಿಬೀಳಿಸಿದ ಪ್ರಸಂಗವೂ ನಡೆಯಿತು.

ಆನೆಯಷ್ಟು ಕಾಡದಿದ್ದರೂ, ಚಿರತೆಗಳೂ ತಕ್ಕಮಟ್ಟಿಗೆ ಜನರಲ್ಲಿ ಭೀತಿ ಹುಟ್ಟಿಸಿದವು. ಅದರಲ್ಲೂ ರಾಮನಗರ ತಾಲ್ಲೂಕಿನ ಕೈಲಾಂಚ ಮತ್ತು ಬಿಡದಿ ಹೋಬಳಿಗಳಲ್ಲಿ ರಾತ್ರಿ ಆಯಿತೆಂದರೆ ಜನ ಹೊರಗೆ ಓಡಾಡಲು ಹೆದರುವಂತಾಯಿತು. ತಿಂಗಳೊಂದರ ಅವಧಿಯಲ್ಲಿಯೇ 10 ಚಿರತೆಗಳು ಅರಣ್ಯ ಇಲಾಖೆಯ ಬೋನಿನಲ್ಲಿ ಬಂಧಿಯಾಗಿದ್ದು, ಅವುಗಳ ಹಾವಳಿಯನ್ನು ಬಿಂಬಿಸುವಂತಿತ್ತು. ಕಾಡು ಹಂದಿಗಳ ಹಾವಳಿಯೂ ತಕ್ಕ ಮಟ್ಟಿಗೆ ಇದ್ದು, ಅವುಗಳನ್ನು ಗುಂಡಿಕ್ಕಿ ಕೊಲ್ಲಲು ಸರ್ಕಾರವು ಅನುಮತಿ ನೀಡಿದ್ದು ರೈತರನ್ನು ಕೊಂಚ ನಿರಾಳವಾಗಿಸಿತು. ಈ ನಡುವೆ ಅರಣ್ಯ ಇಲಾಖೆಯಿಂದ ನೀಡಲಾಗುವ ಪರಿಹಾರವೂ ದುಪ್ಪಟ್ಟುಗೊಂಡು ಕೃಷಿಕರಲ್ಲಿ ಸಮಾಧಾನ ತಂದಿತು.

ಕಾವೇರಿ ಸರಣಿ ಪ್ರತಿಭಟನೆ
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ವಿರೋಧಿಸಿ ಕಾವೇರಿ ಕಣಿವೆಯ ಉಳಿದ ಜಿಲ್ಲೆಗಳಂತೆ ರಾಮನಗರದಲ್ಲಿಯೂ ಸಾಲು ಸಾಲು ಪ್ರತಿಭಟನೆಗಳು ನಡೆದವು. ಆಗಾಗ್ಗೆ ಬಂದ್‌ ಬಿಸಿ ತಟ್ಟಿತು. ಜನಸಾಮಾನ್ಯರು ಸ್ವಯಂಪ್ರೇರಿತರಾಗಿ  ಬೆಂಬಲ ನೀಡಿದರೆ, ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು. ಹಲವು ಕಡೆ ಕಲ್ಲು ತೂರಾಟ ನಡೆಯಿತು.

ಮೇಕೆದಾಟಿಗಾಗಿ ಬಂದ್
ರಾಮನಗರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕನಕಪುರ ತಾಲೂಕಿನ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ 2016ರಲ್ಲೂ ಕಾರ್ಯರೂಪಕ್ಕೆ ಬರಲಿಲ್ಲ. ಈ ಯೋಜನೆಯ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು.

ಜಿಲ್ಲಾ ಕಚೇರಿ ಸಂಕೀರ್ಣಕ್ಕೆ ಉದ್ಘಾಟನೆ ಭಾಗ್ಯ
ಕಳೆದ ಒಂದು ದಶಕದ ಕನಸಾಗಿದ್ದ ಜಿಲ್ಲಾ ಕಚೇರಿಗಳ ನೂತನ ಸಂಕೀರ್ಣವು ನ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಉದ್ಘಾಟನೆಯಾಯಿತು. ಇದಕ್ಕಾಗಿ ಈವರೆಗೆ ವ್ಯಯಿಸಲಾದ ಒಟ್ಟು ವೆಚ್ಚ ಸುಮಾರು ₹ 40 ಕೋಟಿ. ಸದ್ಯ ಕಂದಾಯ ಭವನದಲ್ಲಿನ ಕಚೇರಿಗಳು ನೂತನ ಭವನಕ್ಕೆ ಸ್ಥಳಾಂತರಗೊಂಡಿವೆ. ಹಳೆಯ ಕಟ್ಟಡ ರಾಜೀವಿ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಮೀಸಲಾಗಿದೆ.

ಇದಲ್ಲದೆ ರಾಮನಗರ –ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ, ಜಿಲ್ಲಾ ಪಂಚಾಯಿತಿ ಹೈಟೆಕ್ ಸಂಭಾಂಗಣ ಲೋಕಾರ್ಪಣೆಗೊಂಡವು.
ನವೆಂಬರ್ ೧೬ ರಂದು ನಡೆದ ಹಾಲು ಉತ್ಪಾದಕರ ಸಮಾವೇಶದಲ್ಲಿ ಸಿ.ಎಂ ಸಿದ್ದರಾಮಯ್ಯ ಹಾಲಿನ ಉತ್ಪನ್ನ ಘಟಕದ ಶಿಲಾನ್ಯಾಸ, ಬಮೂಲ್ ಕನಕಪುರ ಡೇರಿ ಸಂಕೀರ್ಣದ ಶಿಲಾನ್ಯಾಸವನ್ನು ನೆರವೇರಿಸಿದ್ದರು.

ತುಂಬಿದ ಕೆರೆಗಳು
2015ರಲ್ಲಿ ಆರಂಭವಾದ ಕಣ್ವ ಏತ ನೀರಾವರಿ ಕಾಮಗಾರಿ 2016ರ ಜನವರಿ ವೇಳೆಗೆ ಪೂರ್ಣಗೊಂಡಿತು. ಚನ್ನಪಟ್ಟಣ ತಾಲೂಕಿನ 50ಕ್ಕೂ ಹೆಚ್ಚು ಕೆರೆಗಳನ್ನು ಇಗ್ಗಲೂರು ಜಲಾಶಯದಿಂದ ಏತ ನೀರಾವರಿ ಮೂಲಕ ತುಂಬಿಸಲಾಯಿತು. ದಶಕಗಳ ನಂತರ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಲಾಯಿತು. ಶಾಸಕ ಸಿ.ಪಿ. ಯೋಗೇಶ್ ನಡೆಸಿದ ಈ ಪ್ರಯತ್ನ ಜನಮನ್ನಣೆ ಪಡೆಯಿತು.

ನೀರಾವರಿ ಮೂಲವಿಲ್ಲದೇ ಮಾಗಡಿ ತಾಲ್ಲೂಕು ಸಹ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿತ್ತು. ಇದಕ್ಕಾಗಿ ರೂಪಿಸಲಾಗಿದ್ದ ಶ್ರೀರಂಗ ಯೋಜನೆಗೆ ಜ.5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಹೇಮಾವತಿ ಜಲಾಶಯದಿಂದ ನೀರು ತಂದು ತಾಲ್ಲೂಕಿನ 380 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಸದ್ಯ ಪ್ರಗತಿಯಲ್ಲಿದೆ.

ಬೆಚ್ಚಿ ಬೀಳಿಸಿದ ಸಂಗತಿಗಳು
ಜನರ ಕುತೂಹಲ ಸೆಳೆದ, ಬೆಚ್ಚಿ ಬೀಳಿಸಿದ ಹಲವು ಘಟನೆಗಳು ಈ ವರ್ಷ ನಡೆದವು.  ಜನವರಿ 2ರಂದು ಚನ್ನಮಾರನಹಳ್ಳಿ ಸೇತುವೆ ಬಳಿ ಬಿರುಕು ಬಿಟ್ಟಿದ್ದ ರೈಲ್ವೆ ಹಳಿಯನ್ನು ಪತ್ತೆಹಚ್ಚಿದ ರೈಲ್ವೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ರೈಲ್ವೆ ಅನಾವುತವೊಂದು ತಪ್ಪಿತ್ತು.!
ಏಪ್ರಿಲ್ 9ರಂದು ರೈಡಿಂಗ್ ಮತ್ತು ಸೆಲ್ಫಿ ಕ್ರೇಜ್‌ನಿಂದ ಜೀಪನ್ನು ರೈಲ್ವೇ ಹಳಿ ದಾಟಿಸುವ ದುಸ್ಸಾಹಸದಲ್ಲಿ ಜೀಪ್ ರೈಲ್ವೇ ಟ್ರ್ಯಾಕ್ ನಡುವೆ ಸಿಲುಕಿ ದಂಪತಿ ಪರದಾಡಿದ್ದರು. ಈ ವೇಳೆ ರೈಲು ಬರುತ್ತಿದ್ದಾಗ ಜೀಪ್‌ನಿಂದ ಹೊರ ಜಿಗಿದು ಸ್ಥಳದಿಂದ ಕಾಲ್ಕಿತ್ತಿದ್ದ ಘಟನೆ ಬಸವನಪುರ– ಮಾಯಾಗಾನಹಳ್ಳಿ ನಡುವೆ ರೈಲ್ವೇ ಟ್ರ್ಯಾಕ್ ಬಳಿ ನಡೆದಿತ್ತು. 

ಚಿನ್ನಾಭರಣ ದರೋಡೆ, ಪತಿ, ಮಗಳಿಂದಲೇ ತಾಯಿಯ ಹತ್ಯೆ, ಚನ್ನಪಟ್ಟಣ ತಹಶೀಲ್ದಾರ್‌ ತಾಯಿಯ ಕಗ್ಗೊಲೆ.. ಇನ್ನೂ ಹತ್ತಾರು ಅಪಘಾತ ಪ್ರಕರಣಗಳು ನಡೆದವು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ರಸ್ತೆ ವಿಭಜಕ ದಾಟಿ ವಾಹನಗಳು ನುಗ್ಗಿದ ಪರಿಣಾಮ 7ಮಂದಿ ಪ್ರಾಣ ಕಳೆದುಕೊಂಡಿದ್ದರು. ಅಧಿಕಾರಿಗಳು ಕಡೆಗೂ ಎಚ್ಚೆತ್ತು ಹೆದ್ದಾರಿ ಅಭಿವೃದ್ಧಿ, ಸುರಕ್ಷತೆಗೆ ಒತ್ತು  ನೀಡಿದರು.

ರಾಜಕೀಯದ ಏಳು–ಬೀಳು
ಫೆಬ್ರುವರಿಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಮತ್ತು ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳು ಸಮರವನ್ನೇ ಸಾರಿದ್ದವು. ಫೆ. 13ರಂದು ನಡೆದ ಜಿ.ಪಂ. ಸಾರ್ವತ್ರಿಕ ಚುನಾವಣೆಯಲ್ಲಿ 22 ಸ್ಥಾನಗಳ ಪೈಕಿ ಕಾಂಗ್ರೆಸ್ 16 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಬಳಿಕ ಅಧ್ಯಕ್ಷರಾಗಿ ಚನ್ನಪಟ್ಟಣ ಶಾಸಕ ಯೋಗೇಶ್ವರ್ ಸಹೋದರ ಸಿ.ಪಿ ರಾಜೇಶ್, ಉಪಾಧ್ಯಕ್ಷೆಯಾಗಿ ಮಾಗಡಿಯ ದಿವ್ಯಾ ಗಂಗಾಧರ್ ಅವಿರೋಧವಾಗಿ ಆಯ್ಕೆಯಾದರು.

ನಾಲ್ಕು ತಾಲ್ಲೂಕು ಪಂಚಾಯಿತಿಗಳ ಪೈಕಿ 2 ಕಾಂಗ್ರೆಸ್ ಮತ್ತು 2 ಜೆಡಿಎಸ್ ವಶವಾಗಿತ್ತು. ಚನ್ನಪಟ್ಟಣ ಮತ್ತು ಕನಕಪುರ ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸಿದ್ದು, ರಾಮನಗರ ಮತ್ತು ಮಾಗಡಿಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಡದಿ ಪುರಸಭೆಯಾಗಿ ಘೋಷಣೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಧ್ಯಕ್ಷ–ಉಪಾಧ್ಯಕ್ಷ ಪಟ್ಟ ಒಲಿದು ಬಂದಿತು.

ಜಿಲ್ಲೆಯ ಸಾಂಪ್ರದಾಯಿಕ ಎದುರಾಳಿಗಳಾದ ಡಿ.ಕೆ. ಶಿವಕುಮಾರ್‌ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ಈ ವರ್ಷವೂ ಮುಂದುವರಿಯಿತು. ಎಚ್‌ಡಿಕೆ ಸೋದರನಂತಿದ್ದ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ವಿರುದ್ಧವೇ ತಿರುಗಿಬಿದ್ದದ್ದು ಗಮನ ಸೆಳೆಯುವಂತಹ ಅಂಶ. ಕಳೆದ ಆರು ತಿಂಗಳಿನಿಂದ ಈ ಇಬ್ಬರ ನಡುವಿನ ವಾಕ್ಸಮರವೂ ಗಮನ ಸೆಳೆಯುತ್ತಿದೆ.

ಈ ನಡುವೆ ರಾಜ್ಯಸಭೆ ಚುನಾವಣೆಯಲ್ಲಿ ಬಾಲಕೃಷ್ಣ ಹಣ ಪಡೆದು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ಆರೋಪ ಮಾಡಿದ್ದು, ಪ್ರಕರಣವು ಭ್ರಷ್ಟಾಚಾರ ನಿಗ್ರಹ ದಳದ ಮೆಟ್ಟಿಲೇರಿತು.

ನೋಟು ನಿಷೇಧಕ್ಕೆ ತತ್ತರ
ನವೆಂಬರ್‌ 8ರಂದು ದೇಶದಾದ್ಯಂತ₹500 ಹಾಗೂ 1000 ಮುಖಬೆಲೆ ನೋಟುಗಳ ರದ್ದತಿ ಪ್ರಕಟಿಸಿದ  ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ರಾಮನಗರ ಜಿಲ್ಲೆಯ ಜನರೂ ಪರದಾಡಿದರು.  ಸಾರ್ವಜನಿಕರು ಬ್ಯಾಂಕ್ ಹಾಗೂ ಎಟಿಎಂಗಳ ಎದುರು ಪ್ರತಿನಿತ್ಯ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಕೂಲಿ ಕಾರ್ಮಿಕರು ಹಾಗೂ ಮದ್ಯಮ ವರ್ಗದವರು ತೊಂದರೆ ಅನುಭವಿಸಿದರು.

ನಗದು ಕೊರತೆಯಿಂದ ವ್ಯಾಪಾರ ವಹಿವಾಟಿಗೆ ಹಿನ್ನಡೆಯಾಯಿತು. ಇಂದಿಗೂ ಸಹ ಪರಿಸ್ಥಿತಿ ಯತಾಸ್ಥಿತಿಗೆ ಬಂದಿಲ್ಲ. ಎಟಿಎಂ ಕೇಂದ್ರಗಳು ಇನ್ನಷ್ಟೇ ಬಾಗಿಲು ತೆರೆಯಬೇಕಿದೆ.

ರೇಷ್ಮೆ ನಂಬಿದವರ ಏಳು ಬೀಳು
ರೇಷ್ಮೆ ಕೃಷಿಗೆ ಹೆಸರುವಾಸಿಯಾದ ರಾಮನಗರದ ಕೃಷಿಕರು ಹಲವು ಸಂಕಷ್ಟ ಕಂಡರು. ಇ–ಹರಾಜಿನಲ್ಲಿನ ಗೊಂದಲಗಳಿಂದಾಗಿ ಗೂಡು ಮಾರುಕಟ್ಟೆಗಳಲ್ಲಿ ಆಗಾಗ್ಗೆ ಪ್ರತಿಭಟನೆಗಳು ನಡೆದವು. ರೈತರು ರಸ್ತೆಗೆ ಗೂಡು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಉಳಿದಂತೆ ರಣಹದ್ದು ಪಕ್ಷಿಧಾಮವನ್ನೊಳಗೊಂಡ ರಾಮದೇವರ ಬೆಟ್ಟ ಅರಣ್ಯ ಪ್ರದೇಶವನ್ನು ಜೂನ್‌ನಲ್ಲಿ ಪರಿಸರ ಸೂಕ್ಷ್ಮ ವಲಯ (ಇಕೋ ಸೆನ್ಸಿಟೀವ್ ಝೋನ್) ವನ್ನಾಗಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಘೋಷಿಸಿತು. ಅಕ್ಟೋಬರ್‌ನಲ್ಲಿ ನಗರ ಸಾರಿಗೆಗೆ ಚಾಲನೆ ನೀಡಲಾಗಿದ್ದು, 20 ಸುಸಜ್ಜಿತ ಬಸ್‌ಗಳು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ರಾಮನಗರದಿಂದ ಮಾಗಡಿ, ಚನ್ನಪಟ್ಟಣ, ಕನಕಪುರ, ಬಿಡದಿ ಮಾರ್ಗಗಳಲ್ಲಿ ಪ್ರಯಾಣಿಕರ ಒತ್ತಡ
ಕಡಿಮೆಯಾಗಿದೆ.

ಮಾಸ್ತಿಗುಡಿ ದುರಂತ
ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಟ ದುನಿಯಾ ವಿಜಯ್ ಅಭಿಯನದ ‘ಮಾಸ್ತಿಗುಡಿ’ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ನಡೆದ ದುರಂತ ರಾಜ್ಯವನ್ನೇ ಬೆಚ್ಚಿ ಬೀಳಿಸಿತು.

ಹೆಲಿಕಾಪ್ಟರ್‌ನಿಂದ ನೀರಿಗೆ ಜಿಗಿದ ಯುವ ನಟರಾದ ಉದಯ್ ಮತ್ತು ಅನಿಲ್ ಮೂರು ದಿನಗಳ ಬಳಿಕ ಶವವಾಗಿ ಪತ್ತೆಯಾದರು. ಶವಗಳ ಹುಡುಕಾಟಕ್ಕಾಗಿ ನಡೆದ ಕಾರ್ಯಾಚರಣೆಯನ್ನು ಕಾಣುವ ಸಲುವಾಗಿ ಬಂದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಚ್‌ ಮಾಡಬೇಕಾಯಿತು.

ಜೇನು ದಾಳಿ ವೇಳೆ ನೀರಿಗೆ ಜಿಗಿದಿದ್ದ ಯಲ್ಲಪ್ಪ ಎಂಬ ಯುವಕ ಸಹ ಬದುಕಿ ಬರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರತಂಡದ ಐವರ ವಿರುದ್ಧ ದೂರು ದಾಖಲಾಗಿದ್ದು, ಸದ್ಯ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT