ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕಗಳೇಕೆ ವಿವಾದಕ್ಕೆ ಈಡಾಗುತ್ತವೆ?

Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ

ಪ್ರತಿ ಬಾರಿ ಹೊಸ ಸರ್ಕಾರ ಬಂದಾಗಲೂ ಪಠ್ಯಪುಸ್ತಕಗಳ ಕುರಿತು ವಾದ–ವಿವಾದಗಳು ಏಳುತ್ತವೆ. ಒಂದು ರೀತಿಯ ವಿಚಾರಗಳು ಮತ್ತೊಂದು ಗುಂಪಿಗೆ ಪಥ್ಯವಲ್ಲವೆಂದು ಅಥವಾ ಕೆಲವು ರೀತಿಯ ವಿಚಾರಗಳನ್ನು ಮಕ್ಕಳಿಗೆ ಹೇಳುವುದು ಸಮಂಜಸವಲ್ಲವೆಂದು ಪ್ರತಿ ಬಾರಿಯೂ ಒಂದಲ್ಲ ಒಂದು ಗುಂಪಿನ ಜನರು ತಕರಾರು ಎಬ್ಬಿಸುತ್ತಾರೆ.

ಪ್ರತಿ ಗುಂಪಿನ ಜನರೂ ತಮ್ಮ ವಾದಗಳಿಗೆ ಐತಿಹಾಸಿಕ ಪುರಾವೆಗಳನ್ನು ನೀಡುತ್ತಾರೆ ಮತ್ತು ಎದುರಾಳಿ ಗುಂಪುಗಳು ಈ ದೇಶದ ಸಾಂಸ್ಕೃತಿಕ ಏಕತೆಯನ್ನೋ, ಬಹುತ್ವವನ್ನೋ ಅಥವಾ ಇನ್ನು ಯಾವುದಾದರೂ ಒಂದು ಆದರ್ಶವನ್ನೋ ನಿರ್ನಾಮ ಮಾಡಲು ಹೊರಟಿವೆ ಎಂದು ಸಾಕ್ಷಿ ಸಮೇತ ವಾದಿಸುತ್ತಾರೆ. ಸಾಮಾನ್ಯವಾಗಿ ಗಣಿತ, ವಿಜ್ಞಾನದಂತಹ ವಿಷಯಗಳಲ್ಲಿ ಇಂತಹ ತಕರಾರು ಸ್ವಲ್ಪ ಕಡಿಮೆ. ಆದರೆ, ಸಮಾಜವಿಜ್ಞಾನ, ಇತಿಹಾಸ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಈ ವಿವಾದ ಸ್ವಲ್ಪ ಹೆಚ್ಚು.

ಆದರೆ, ಅದಕ್ಕೆ ಕಾರಣ ವಿಜ್ಞಾನಗಳೆಲ್ಲಾ ‘ವಸ್ತುನಿಷ್ಠ’ (ಅಂದರೆ ಆಬ್ಜೆಕ್ಟಿವ್) ಜ್ಞಾನಗಳು, ಆದರೆ ಸಮಾಜವಿಜ್ಞಾನ ಮತ್ತು ಇತಿಹಾಸ ‘ವ್ಯಕ್ತಿನಿಷ್ಠ’ (ಅಂದರೆ ಸಬ್ಜೆಕ್ಟಿವ್) ಜ್ಞಾನಗಳು ಎಂದು ಹೇಳಲು ಬರುವುದಿಲ್ಲ. ಜ್ಞಾನ ಎಂದಮೇಲೆ ಅದಕ್ಕೆ ತಕ್ಕಮಟ್ಟಿಗಿನ ವಸ್ತುನಿಷ್ಠತೆ ಇರಲೇಬೇಕು. ನಮಗೆ ಅನ್ನಿಸುವುದೆಲ್ಲಾ, ನಮಗೆ ಅನ್ನಿಸಿದ ರೀತಿಯಲ್ಲೆಲ್ಲಾ ಜ್ಞಾನವಾಗಿಬಿಡಲು ಸಾಧ್ಯವಿಲ್ಲ.

ಹಾಗೆ ಆಗುವುದು ನಿಜವೇ ಆದರೆ, ನಾವು ಸಮಾಜವಿಜ್ಞಾನ, ಇತಿಹಾಸ ಮುಂತಾದ ವಸ್ತುನಿಷ್ಠವಲ್ಲದ ಜ್ಞಾನಗಳನ್ನು ಶಾಲೆಗಳಲ್ಲಿ ಕಲಿಸುವುದನ್ನೇ ಬಿಟ್ಟುಬಿಡಬೇಕು ಅಷ್ಟೆ! ಏಕೆಂದರೆ, ವಸ್ತುನಿಷ್ಠತೆ ಇಲ್ಲದ್ದನ್ನು ಕಲಿಸಲು ಬೇಕಾದ ಪ್ರೊಸೀಜರ್‌ಗಳೂ ಇರುವುದಿಲ್ಲವಷ್ಟೆ? ಹಾಗೆ ಸಾಧಾರಣೀಕೃತ ವಿಧಿವಿಧಾನಗಳಿಗೆ ಯಾವುದನ್ನು ಒಗ್ಗಿಸಲು ಬರುವುದಿಲ್ಲವೋ ಅದನ್ನೇ ತಾನೆ ವ್ಯಕ್ತಿನಿಷ್ಠ ಎಂದು ಕರೆಯುವುದು? ಸಂಗೀತವನ್ನು ಕಲಿಸಬಹುದು.

ಏಕೆಂದರೆ ಅದಕ್ಕೆ ನಿರ್ದಿಷ್ಟ ವಿಧಿವಿಧಾನಗಳಿವೆ. ಅಷ್ಟೇ ಅಲ್ಲದೇ, ‘ಕಲ್ಯಾಣಿ ರಾಗ’ವೆಂದರೆ, ಅಥವಾ ‘ಸಿ ಮೇಜರ್ ಸ್ಕೇಲ್’ ಎಂದರೆ ವಸ್ತುನಿಷ್ಠವಾಗಿ ಇಂಥದ್ದೇ ಎಂಬ ಅರ್ಥವಿದೆ. ಹೀಗಾಗಿ, ಈ ಅರ್ಥದಲ್ಲಿ ಸಂಗೀತವೂ ಬಹಳ ವಸ್ತುನಿಷ್ಠವೇ. ಅಂದಮೇಲೆ, ಇತಿಹಾಸ ಅಥವಾ ಸಮಾಜವಿಜ್ಞಾನವನ್ನು ವಸ್ತುನಿಷ್ಠವಲ್ಲ ಎಂದು ವಾದಿಸಲು ಹೋದರೆ, ಅವು ಕಲಿಯಲು ಯೋಗ್ಯವಾದ, ಅಥವಾ ಕಲಿಯಲು ಸಾಧ್ಯವಾದ ಜ್ಞಾನವೇ ಅಲ್ಲ ಎಂದು ಒಪ್ಪಿಕೊಂಡಂತೆಯೇ. ಅದು ನೆಗಡಿಯನ್ನು ನಿವಾರಿಸಲು ಹೋಗಿ ಮೂಗನ್ನೇ ಕತ್ತರಿಸಿದಂತೆ. ಅದಕ್ಕಾಗಿಯೇ ಹೇಳಿದ್ದು, ವಸ್ತುನಿಷ್ಠ-ವ್ಯಕ್ತಿನಿಷ್ಠ ಎನ್ನುವ ವಿಭೇದದಿಂದ ಈ ಸಮಸ್ಯೆಯನ್ನು ನೋಡಲು ಬರುವುದಿಲ್ಲ ಎಂದು.

ಹಾಗಾದರೆ ಈ ಸಮಸ್ಯೆಯನ್ನು ನಿಭಾಯಿಸುವ ಸರಿಯಾದ ರೀತಿ ಯಾವುದು? ಇಂತಹ ವಿವಾದಗಳು ಆಗದೇ ಇರುವಂತೆ ಮಾಡುವುದು ಅಸಾಧವೇ ಇರಬಹುದು. ಆದರೆ ಈ ವಿವಾದಗಳಾದಾಗ ಅದನ್ನು ಪರಿಹರಿಸುವ ಸಲುವಾಗಿ ವಿಶ್ಲೇಷಣೆಯ ಒಂದು ಸ್ಥೂಲ ಚೌಕಟ್ಟನ್ನಾದರೂ ಹಾಕಿಕೊಳ್ಳಲು ಸಾಧ್ಯವಾಗಬೇಕು. ಹಾಗೆ ಮಾಡಬೇಕೆಂದರೆ ಮೊದಲು ಪಠ್ಯಪುಸ್ತಕಗಳ ರಚನೆ ಮತ್ತು ಅವುಗಳ ಉದ್ದೇಶಗಳ ಬಗ್ಗೆಯೇ ಒಂದಷ್ಟು ಸಾಮಾನ್ಯ ವಿಚಾರಗಳನ್ನು ಸ್ಥಾಪಿಸಬೇಕು.

ಒಂದು ಕ್ಷೇತ್ರದ ಜ್ಞಾನಕ್ಕೆ ಸಾಮಾನ್ಯವಾಗಿ ಎರಡು ಮುಖಗಳಿರುತ್ತವೆ. ಒಂದು ಆ ಕ್ಷೇತ್ರದಲ್ಲಿ ಸತ್ಯವೆಂದು ಸ್ಥಾಪಿತವಾಗಿರುವ ಸಂಗತಿಗಳು. ಉದಾಹರಣೆಗೆ, ‘ಜೀವಪ್ರಭೇದಗಳಿಗೆ ಕಾರಣ ಜೀವವಿಕಾಸ’ ಅಥವಾ ‘ವಸ್ತುಗಳ ಚಲನಶೀಲತೆ ಗುರುತ್ವಾಕರ್ಷಣದ ನಿಯಮಕ್ಕೆ ಅನುಗುಣವಾಗಿರುತ್ತದೆ’ ಎನ್ನುವ ವಾಕ್ಯಗಳೆಲ್ಲ ಇಂತಹ ಸತ್ಯಗಳು. ಇದಲ್ಲದೇ ಒಂದು ಕ್ಷೇತ್ರದಲ್ಲಿ ಸಾಮಾನ್ಯವಾಗಿ ಸತ್ಯಗಳನ್ನು ಒಪ್ಪಿಕೊಳ್ಳಲು, ಪರೀಕ್ಷಿಸಲು, ವಿಮರ್ಶಿಸಲು, ನಿರಾಕರಿಸಲು ಅಥವಾ ಹೊಸ ಸತ್ಯಗಳನ್ನು ಕಂಡುಹಿಡಿಯಲು ಬಳಸುವ ಒಂದಷ್ಟು ವಿಧಿವಿಧಾನಗಳು ಇರುತ್ತವೆ.

ಅಥವಾ ಕೆಲವೊಮ್ಮೆ ಸಾಹಿತ್ಯ, ಕಲೆ, ಕಾನೂನು, ಇಂಜಿನಿಯರಿಂಗ್ ಇಂತಹ ಕ್ಷೇತ್ರಗಳಲ್ಲಿ ಕೆಲವು ವಸ್ತುಗಳ ಮೌಲ್ಯಮಾಪನ ಮಾಡಲು, ಗುಣಾವಗುಣಗಳನ್ನು ತಾಳೆ ಮಾಡಲು ಅವುಗಳಿಗೆ ಒಂದು ಪರಂಪರೆಯ ಅಡಿಯಲ್ಲಿ ಬೆಲೆ ಕಟ್ಟಲು ಬಳಸುವ ಮಾಪನಗಳು ಇರುತ್ತವೆ.

ಇದನ್ನೇ ಒಂದು ಸರಳ ಸೂತ್ರರೂಪದಲ್ಲಿ ಹೇಳೋಣ. ಒಂದು ಕ್ಷೇತ್ರದ ಜ್ಞಾನ ಎರಡು ರೂಪಗಳಲ್ಲಿರುತ್ತದೆ: ಸತ್ಯಗಳು ಮತ್ತು ವಿಧಾನಗಳು. ಈ ರೀತಿಯ ವ್ಯತ್ಯಾಸವನ್ನು ಮಾಡುವುದರ ಮುಖ್ಯ ಉದ್ದೇಶವೇ ಈ ಎರಡು ರೂಪಗಳಿಗೂ ಇರುವ ಸಂಬಂಧವೇನು ಎಂದು ತಿಳಿದುಕೊಳ್ಳುವುದು. ಮೊದಲನೆಯದಾಗಿ, ಈ ಎರಡೂ ವಿಚಾರಗಳು ಸದಾ ಪರಸ್ಪರ ಪ್ರಭಾವದಿಂದ ಬದಲಾವಣೆಗೆ ಪಕ್ಕಾಗುತ್ತಿರುವಂಥವು. ಕಾಲಾಂತರದಲ್ಲಿ, ಕೆಲವೊಮ್ಮೆ ಒಂದೇ ತಲೆಮಾರಿನ ಒಳಗೆಯೇ, ಒಂದು ಕ್ಷೇತ್ರದ ಸತ್ಯಗಳು ಮತ್ತು ವಿಧಾನಗಳು ಗುರುತಿಸಲು ಸಾಧ್ಯವಾಗದಂತೆ ಬದಲಾಗಬಹುದು.

ಉದಾಹರಣೆಗೆ,1980–90ರ ನಂತರದ ಸಾಹಿತ್ಯ ಅಧ್ಯಯನ ಕ್ಷೇತ್ರವನ್ನು ನೋಡುವ ಹಳೆಯ ತಲೆಮಾರಿನ ಸಾಹಿತ್ಯವಿದ್ಯಾರ್ಥಿಗಳಿಗೆ ಮತ್ತು ಸಾಹಿತ್ಯದ ಪ್ರೊಫೆಸರುಗಳಿಗೆ ಇದು ತಮ್ಮದೇ ಕ್ಷೇತ್ರ ಎಂದು ಗುರುತೂ ಸಿಗದಂತೆ ಅದು ಬದಲಾಗಿತ್ತು. ಸತ್ಯ ಮತ್ತು ವಿಧಾನಕ್ಕೆ ಸಂಬಂಧಪಟ್ಟ ಮತ್ತೊಂದು ಮುಖ್ಯ ಅಂಶವೆಂದರೆ, ಸತ್ಯಗಳು ವಿಧಾನಗಳ ಮೇಲೆ ಅವಲಂಬಿತವಾಗಿರುತ್ತವೆ ಎನ್ನುವುದು.

ಸಮುದ್ರಮಟ್ಟದಲ್ಲಿ ನೀರು ಆವಿಯಾಗುವ ಮಟ್ಟ 100 ಡಿಗ್ರಿ ಸೆಲ್ಸಿಯಸ್ ಎನ್ನುವುದೂ ಮತ್ತು ಭಾರತದಲ್ಲಿ ಬ್ರಿಟಿಷರ ಆಡಳಿತ ಹಿಂದೂ-ಮುಸ್ಲಿಂ ಸಮುದಾಯಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿತು ಎನ್ನುವುದೂ ನಿರ್ದಿಷ್ಟ ವಿಧಾನದ ಸಂಶೋಧನೆಯ, ಮಾಪನದ, ವ್ಯಾಖ್ಯಾನದ ಪ್ರಕ್ರಿಯೆಯ ಭಾಗವಾಗಿ ಸಾಧಿತವಾದ ಸತ್ಯಗಳೇ ಹೊರತೂ ಈ ವಿಧಾನಗಳ ಹೊರಗೆ, ನೇರಾನೇರವಾಗಿ ಸತ್ಯಗಳನ್ನು ಸ್ಥಾಪಿಸಲು ಬರುವುದಿಲ್ಲ.

ಹಾಗೆಂದ ಮಾತ್ರಕ್ಕೆ ಸತ್ಯದ ಘನತೆಗೇನೂ ಕುಂದುಂಟಾಗುವುದಿಲ್ಲ ಅಥವಾ ಸತ್ಯಗಳು ಕಡಿಮೆ ಸತ್ಯಗಳೇನೂ ಆಗುವುದಿಲ್ಲ. ಆದರೆ ನಿರ್ದಿಷ್ಟ ವಿಧಾನಗಳ ಆಚೆಗೆ ಇರುವ ಪರಿಶುದ್ಧ ಸತ್ಯಗಳು ಎನ್ನುವ ಪರಿಕಲ್ಪನೆ ಅಸಂಬದ್ಧವಾದದ್ದು ಎನ್ನುವುದಷ್ಟೇ ಇಲ್ಲಿನ ಅರ್ಥ.

ಬರಿಯ ವೈಜ್ಞಾನಿಕ ಸಂಶೋಧನೆಯಿಂದ ಸ್ಥಾಪಿತವಾದ ರೀತಿಯ ಸತ್ಯಗಳಷ್ಟೇ ಅಲ್ಲ. ಯಾವ ರೀತಿಯ ಸತ್ಯಗಳಾದರೂ (facts ಎನ್ನುವ ಅರ್ಥದಲ್ಲಿ) ಯಾವುದಾದರೊಂದು ವಿಧಾನದ (methods ಎನ್ನುವ ಅರ್ಥದಲ್ಲಿ) ಮೂಲಕವೇ ಸ್ಥಾಪಿತವಾಗಿರಬೇಕೇ ಹೊರತೂ, ಸ್ವತಂತ್ರವಾಗಿ, ಸ್ವತಃಸಿದ್ಧವಾದ, ಸ್ವಯಂಗೋಚರವಾದ ಸತ್ಯಗಳು ಎನ್ನುವಂಥದ್ದು ಇಲ್ಲ.

(ತರ್ಕದಲ್ಲಿ ಮತ್ತು ಗಣಿತದಲ್ಲಿ ಸ್ವತಃಸಿದ್ಧವಾದ ಸತ್ಯಗಳು ಅಥವಾ ಅನಲಿಟಿಕ್ ಸತ್ಯಗಳು, ಅಥವಾ ಟಾಟಲಾಜಿಕಲ್ ಎನ್ನುವ ರೀತಿಯ ಸತ್ಯಗಳಿವೆ; ಸ್ವತಃಸಿದ್ಧವಲ್ಲದ, ಅಂದರೆ ಸಿಂಥೆಟಿಕ್ ಆದ ಸತ್ಯಗಳಿಗೆ ವಿರುದ್ಧವಾಗಿ ಎಂದೂ ಕೆಲವರು ಹೇಳುತ್ತಾರೆ. ಉದಾಹರಣೆಗೆ, ತಂದೆಯರೆಲ್ಲಾ ಗಂಡಸರು ಎನ್ನುವ ವಿಚಾರ ಸ್ವತಃಸಿದ್ಧವೇ ಹೊರತೂ ಅದನ್ನು ಒಪ್ಪಿಕೊಳ್ಳುವುದಕ್ಕೆ ಇನ್ನೊಂದು ಬಾರಿ ತಂದೆಯರನ್ನೂ ಗಂಡಸರನ್ನೂ ನೋಡಿ ಪರೀಕ್ಷಿಸುವ ಅಗತ್ಯವಿಲ್ಲ. ಆದರೆ, ಇವುಗಳೂ ಕೂಡ ಯಾವುದೋ ತಾರ್ಕಿಕ ವಿಧಾನದ ಅನ್ವಯ ಸಾಧಿತವಾದದ್ದೇ). ನಮ್ಮ ನಿತ್ಯಜೀವನದಲ್ಲಿ ನಾವು ಸಲೀಸಾಗಿ ಒಪ್ಪಬಹುದಾದ ಸತ್ಯಗಳೂ ಈ ರೀತಿಯವೇ.

ಆದರೆ ಅದನ್ನು ಸ್ಥಾಪಿಸುವ ವಿಧಾನದ ಬಗ್ಗೆ ಸಾಮಾನ್ಯವಾಗಿ ಯಾವ ತಕರಾರೂ ಏಳದಿರುವುದರಿಂದ, ಮತ್ತು ಅಂತಹ ವಿಧಾನಗಳು ಒಂದು ರೀತಿ ಸರಳ ಸಾಮಾನ್ಯಜ್ಞಾನಗಳು ಎಂದು ಆಗಿಬಿಟ್ಟಿರುವುದರಿಂದ, ಸತ್ಯಗಳೆಲ್ಲ ನಿರ್ದಿಷ್ಟ ವಿಧಾನಗಳ ಮೂಲಕ ಸ್ಥಾಪಿತವಾದದ್ದು ಎಂದು ಪ್ರತಿ ಬಾರಿಯೂ ನೆನಪಿಸಿಕೊಳ್ಳುವ ಅಗತ್ಯ ಬೀಳುವುದಿಲ್ಲ ಅಷ್ಟೆ. ಅಂದಮೇಲೆ, ಈ ವಿಚಾರವನ್ನೂ ಹೀಗೂ ಹೇಳಬಹುದು. ಒಂದು ವಿಚಾರ ಸತ್ಯವೆಂದು ಒಪ್ಪಿತವಾಗಿದೆ ಎಂದರೆ ಅರ್ಥ, ಅದನ್ನು ಸತ್ಯವೆಂದು ನಿರ್ಧರಿಸುವುದಕ್ಕೆ ಬಳಸಬೇಕಾದ ವಿಧಾನಗಳ ಬಗ್ಗೆಯೂ ಒಮ್ಮತ ಇದೆ ಎಂದು. 

ಈಗ ಮತ್ತೊಂದು ಭೇದವನ್ನು ಮಾಡಬಹುದು. ಸಾಮಾನ್ಯವಾಗಿ, ಒಂದು ಜ್ಞಾನಕ್ಷೇತ್ರದ ಸತ್ಯಗಳ ಮೊತ್ತವನ್ನು ಒಂದು ವಿಶ್ವಕೋಶದ ರೂಪದಲ್ಲಿ ಜೋಡಿಸಲಾಗುತ್ತದೆ. ಒಂದು ವಿಶ್ವಕೋಶವನ್ನು ನೋಡುತ್ತಿದ್ದೇವೆಂದರೆ ಅರ್ಥ, ಒಂದು ಕ್ಷೇತ್ರದ ಈವರೆಗಿನ ಎಲ್ಲ ಸ್ಥಾಪಿತ ಸತ್ಯಗಳ ಒಟ್ಟು ಮೊತ್ತವನ್ನು ಅವುಗಳ ತಾರ್ಕಿಕ ವಿನ್ಯಾಸಕ್ಕೆ ಅನುಗುಣವಾಗಿ, ಒಂದು ಬೆಳವಣಿಗೆಯ ಕ್ರಮದಲ್ಲಿ ನೋಡುತ್ತಿದ್ದೇವೆ ಎಂದರ್ಥ. ಆದರೆ, ಒಂದು ಒಬ್ಬ ವಿದ್ಯಾರ್ಥಿಗೆ ಬೇಕಿರುವುದು ಇದಲ್ಲ. ಒಬ್ಬ ವಿದ್ಯಾರ್ಥಿ ಒಂದು ಜ್ಞಾನಕ್ಷೇತ್ರದ ಪಕ್ಷಿನೋಟಕ್ಕಾಗಿ ಅಧ್ಯಯನ ಮಾಡುತ್ತಿಲ್ಲ.

ಅವನು ಅಧ್ಯಯನ ಮಾಡುತ್ತಿರುವುದು ಆ ಜ್ಞಾನಕ್ಷೇತ್ರದಲ್ಲಿ ತನ್ನನ್ನು ತಾನು ನಿಪುಣನಂತೆ ತೊಡಗಿಸಿಕೊಳ್ಳಲು, ತಾನೂ ಆ ಕ್ಷೇತ್ರದ ತಜ್ಞರಂತೆ ಹೊಸ ಸತ್ಯಗಳನ್ನು ಹುಡುಕಲು ಅಥವಾ ಸ್ಥಾಪಿತ ಸತ್ಯಗಳ ನಿಜವಾದ ಮೌಲ್ಯವೇನು ಎಂದು ಅಳೆಯಲು. ಅದರರ್ಥ, ಪಕ್ಷಿನೋಟದ ರೀತಿಯ ಜ್ಞಾನವು ವಿದ್ಯಾರ್ಥಿಗಳಿಗೆ ಅನಗತ್ಯ ಎಂದೇನೂ ಅಲ್ಲ. ಆದರೆ ಅದು ಶಾಲಾ–ಕಾಲೇಜು ಶಿಕ್ಷಣದ ಮೊದಲ ಗುರಿಯಲ್ಲ ಎಂದಷ್ಟೆ.

ಹಾಗಾದರೆ, ಒಬ್ಬ ವಿದ್ಯಾರ್ಥಿಗೆ ಬೇಕಿರುವುದು ಒಂದು ಜ್ಞಾನಕ್ಷೇತ್ರವನ್ನು ಅದರ ವಿಧಾನಗಳ ಮೂಲಕ ಅರಿತುಕೊಳ್ಳುವ ಕ್ರಮ. ಇದನ್ನು ಮಾಡುವುದು ಹೇಗೆ? ಇದಕ್ಕೆ ಎರಡು ರೀತಿಯ ಅಂಶಗಳು ಅಗತ್ಯ. ಒಂದು ಈ ವಿಧಾನಗಳನ್ನು ಸರಿಯಾಗಿ ಬಳಸುವ ಅನುಭವ ಹೊಂದಿರುವ ಮತ್ತು ಆ ಅನುಭವವನ್ನು ಸರಿಯಾಗಿ ಕಲಿಸಲು ಬರುವ ಒಬ್ಬ ವ್ಯಕ್ತಿ, ಅಂದರೆ ‘ಶಿಕ್ಷಕ’. ಮತ್ತೊಂದು ಈ ವಿಧಾನಗಳನ್ನು ಕಲಿಯಲು ಉಪಯುಕ್ತವಾಗುವ ಒಂದು ಕೈಪಿಡಿ. ಅಂದರೆ ‘ಪಠ್ಯಪುಸ್ತಕ’. ಹೀಗಾಗಿಯೇ, ಪಠ್ಯಪುಸ್ತಕಗಳು ವಿಶ್ವಕೋಶಗಳಲ್ಲ.

ವಿಶ್ವಕೋಶಗಳ ಕೆಲಸವೇ ಬೇರೆ; ಪಠ್ಯಪುಸ್ತಕಗಳ ಕೆಲಸವೇ ಬೇರೆ. ಅದರರ್ಥ, ಸತ್ಯಗಳು ಮತ್ತು ವಿಧಾನಗಳು ಹಾಗೆ ಬೇಕೆಂದಾಗ ಬೇರ್ಪಡಿಸಬಹುದಾದ ರೀತಿಯಲ್ಲಿ ಇರುತ್ತವೆ ಎಂದೇನೂ ಅಲ್ಲ. ನಿಜಕ್ಕೂ ನೋಡಿದರೆ, ಸತ್ಯ ಮತ್ತು ವಿಧಾನದ ನಡುವಿನ ಈ ಭೇದವನ್ನು ಬಳಸಿಕೊಂಡು ವಿಧಾನಗಳನ್ನು ಒಂದು ಪುಸ್ತಕದ ಒಳಗೂ, ಸತ್ಯಗಳನ್ನು ಇನ್ನೊಂದು ಪುಸ್ತಕದ ಒಳಗೂ ತುಂಬಲು ಬರುವುದಿಲ್ಲ. ಈ ಭೇದ ಒಂದು ತಾರ್ಕಿಕ ಭೇದವಷ್ಟೆ.

ಒಂದು ಪುಸ್ತಕವನ್ನು ಅಥವಾ ಒಂದು ಜ್ಞಾನಕ್ಷೇತ್ರವನ್ನು ಯಾವಾಗ ಹೇಗೆ ನೋಡಬೇಕು ಎನ್ನುವ ಭೇದವನ್ನು ತಿಳಿಯುವುದಕ್ಕಾಗಿ ಈ ವ್ಯತ್ಯಾಸ ಅಗತ್ಯವೇ ಹೊರತು ಇದಕ್ಕೆ ಇನ್ನು ಯಾವ ಹೆಚ್ಚಿನ ಪ್ರಯೋಜನವನ್ನೂ ಆರೋಪಿಸುವುದಕ್ಕೆ ಬರುವುದಿಲ್ಲ.

ಆದರೆ, ಪಠ್ಯಪುಸ್ತಕಗಳಲ್ಲಿ ಆಗಾಗ ಆಗುವ ವಿವಾದಗಳಿಗೆ ಈ ಭೇದವನ್ನು ಕಡೆಗಣಿಸುವುದೇ ಒಂದು ದೊಡ್ಡ ಕಾರಣ. ಒಂದು ಸತ್ಯವನ್ನು ಸತ್ಯವೆಂದು ಅಳೆಯಲು ಬೇಕಾದ ವಿಧಾನಗಳು ಏನು ಎಂದೇ ಗೊತ್ತಿರದ ಒಬ್ಬ ವಿದ್ಯಾರ್ಥಿಗೆ ‘ಈ ಜಾತಿಯವರು ಆ ಜಾತಿಯವರನ್ನು ಕೊಂದರು’ ಎಂದೋ, ‘ಈ ವ್ಯಕ್ತಿ ಮತಾಂಧನೆಂದೋ’, ‘ಆ ವ್ಯಕ್ತಿ ದೇಶಭಕ್ತನೆಂದೋ’, ‘ಈ ಧರ್ಮದವರು ಜಾತಿವಾದಿಗಳೆಂದೋ’, ‘ಆ ಧರ್ಮದವರು ಭಯೋತ್ಪಾದಕರೆಂದೋ’,  ಬಿಡಿಬಿಡಿ ಸತ್ಯಗಳನ್ನು, ಅಥವಾ ಬಿಡಿಬಿಡಿಯಾಗಿ ಸತ್ಯವೆಂದು ತೋರುವ ಅಂಶಗಳನ್ನು ಹೇಳಿಕೊಟ್ಟರೆ ಸ್ವಾಭಾವಿಕವಾಗಿಯೇ ಅನರ್ಥಕ್ಕೆ ಎಡೆಮಾಡಿಕೊಡುತ್ತದೆ. ಒಂದು ಕೋಮಿನವರಿಗೆ, ತಮ್ಮ ಕೋಮಿನ ಬಗ್ಗೆ ಹೀನಾಯವಾಗಿ ತೋರಿಸಲಾಗುತ್ತಿದೆ ಎಂದು ಅನ್ನಿಸುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ, ಐತಿಹಾಸಿಕ ಸತ್ಯಗಳನ್ನು ಒಂದು ಸಂದರ್ಭದಲ್ಲಿಟ್ಟು ವ್ಯಾಖ್ಯಾನ ಮಾಡಬೇಕಾದ ಕಸುಬನ್ನು ಕಲಿಸುವ ಬದಲು, ಮತ್ತು ಅದಕ್ಕಿಂತ ಮುನ್ನವೇ, ಮೂಗು ಹಿಡಿದು ಬಾಯಿಗೆ ಔಷಧ ಸುರಿದಂತೆ ಇದು ಕಾಣಿಸುತ್ತದೆ. ಪಠ್ಯಪುಸ್ತಕಗಳನ್ನು ಬರೆಯುವವರೂ ಕೂಡ ಇದರ ಅರಿವಿಲ್ಲದೇ ತಮ್ಮಿಷ್ಟದ ರೀತಿಯ ಒಂದಷ್ಟು ಸತ್ಯಗಳನ್ನು ಹೇಳುವ ಪಾಠಗಳನ್ನು ತುಂಬಿದರೆ ಆಯಿತು ಎನ್ನುವ ಮನಃಸ್ಥಿತಿಯಲ್ಲೇ ಪಠ್ಯಪುಸ್ತಕಗಳನ್ನು ರಚಿಸುತ್ತಾರೆ.

ವಿಜ್ಞಾನದಲ್ಲಿ ಈ ಸಮಸ್ಯೆ ಬರದಿರುವುದಕ್ಕೆ ಕಾರಣ, ಅಲ್ಲಿ ಹೆಚ್ಚಾಗಿ ಬಿಡಿಬಿಡಿ ಸತ್ಯಗಳನ್ನು ಹೇಳಿಕೊಡುವ ಬದಲು, ಒಂದು ವಿಚಾರವನ್ನು ಸತ್ಯವೆಂದು ಹೇಳುವುದಕ್ಕೆ ಯಾವಯಾವ ಕ್ರಮಗಳನ್ನು ಅನುಸರಿಸಬೇಕು, ಯಾವಯಾವ ಲೆಕ್ಕಾಚಾರಗಳನ್ನು ಕಲಿಯಬೇಕು, ಯಾವಯಾವ ವಿಧಾನಗಳನ್ನು ತಿಳಿದುಕೊಳ್ಳಬೇಕು ಎನ್ನುವ ಕಡೆ ಗಮನ ನೀಡಲಾಗಿರುತ್ತದೆ. ಅದರ ಬದಲು ಸಮಾಜವಿಜ್ಞಾನದ ಹೆಚ್ಚಿನ ಪಠ್ಯಪುಸ್ತಕಗಳು ಒಂದು ಅರೆಬರೆ ವಿಶ್ವಕೋಶದ ರೀತಿ ಇರುತ್ತವೆ. ಹೀಗೆ ಇರುವುದರಿಂದ ಸ್ವಾಭಾವಿಕವಾಗಿಯೇ ಸಮಸ್ಯೆಗಳೇಳುತ್ತವೆ.

ಮೊದಲನೆಯ ಸಮಸ್ಯೆ, ಅದು ಪಠ್ಯಪುಸ್ತಕವಾಗಬೇಕಾದ್ದು ವಿಶ್ವಕೋಶವಾಗಿರುವುದು. ಅಂದರೆ, ವಿಧಾನಗಳ ಹಂಗಿಲ್ಲದೇ ಬಿಡಿಬಿಡಿಯಾಗಿ ಸತ್ಯಗಳನ್ನು ಹೇಳುತ್ತಿರುವುದು. ಎರಡನೆಯ ಸಮಸ್ಯೆ, ಅದು ಅರೆಬರೆ ವಿಶ್ವಕೋಶವಾಗಿರುವುದು. ಅಂದರೆ, ನೀವು ಅದರಲ್ಲಿ ಸೇರಿಸಿಲ್ಲದ, ನಿಮಗೆ ಇಷ್ಟವಿಲ್ಲದ, ಆದರೆ ನಮಗೆ ಮುಖ್ಯವೆಂದು ಅನ್ನಿಸುವ ಇನ್ನೊಂದಷ್ಟು ಸತ್ಯಗಳನ್ನೂ ಯಾಕೆ ಸೇರಿಸಬಾರದು ಎಂದು ನಿಮ್ಮನ್ನು ವಿರೋಧಿಸುವವರು ಹಟ ಹಿಡಿಯುವುದು.

ಪಠ್ಯಪುಸ್ತಕಕ್ಕೂ ವಿಶ್ವಕೋಶಕ್ಕೂ ಇರುವ ವ್ಯತ್ಯಾಸವನ್ನು ಸರಿಯಾಗಿ ಅರಿತರೆ, ಮತ್ತು ಆ ವ್ಯತ್ಯಾಸದ ಹಿಂದಿರುವ ಸತ್ಯ ಮತ್ತು ವಿಧಾನಗಳ ನಡುವಿನ ತಾರ್ಕಿಕ ಭೇದವನ್ನು ಅರಿತರೆ, ನಮ್ಮ ಪಠ್ಯಪುಸ್ತಕದ ವಿವಾದಗಳಿಗೆ ಸ್ವಲ್ಪ ಪರಿಣಾಮಕಾರಿ ಮುಲಾಮು ಸಿಗಬಹುದೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT