ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಹೊಸ ಭರವಸೆ ಸ್ಪಷ್ಟತೆಯ ಕೊರತೆ

ಸಂಪಾದಕೀಯ
Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವರ್ಷದ ಮುನ್ನಾ ದಿನ  ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೊಸಕಾಣ್ಕೆಗಳೇನೂ ಕಾಣಿಸದೆ ಜನರಲ್ಲಿ ನಿರಾಶೆ ಮೂಡಿಸಿತು. ಚುನಾವಣೆ ಮೇಲೆ ಕಣ್ಣಿಟ್ಟು ಮಾಡಿದ ನೀರಸ ರಾಜಕೀಯ ಪ್ರಚಾರ ಭಾಷಣದಂತೆ ಭಾಸವಾಯಿತು ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ. ನೋಟು ರದ್ದತಿಯಿಂದ ದೇಶಿ ಅರ್ಥ ವ್ಯವಸ್ಥೆ ಮತ್ತು ಜನಸಾಮಾನ್ಯರಿಗೆ ಆಗಿರುವ ಸಂಕಷ್ಟದ ಗಾಯಗಳಿಗೆ ಪ್ರಧಾನಿಯವರು ಮುಲಾಮು ಲೇಪಿಸಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಜನರ ಬವಣೆ ದೂರ ಮಾಡುವ, ಅವರಿಗೆ ಪರಿಹಾರ ಕಲ್ಪಿಸುವ ಸಾಂತ್ವನದ ಮಾತಿಗೂ ಶಬ್ದಗಳ ಬರ ಕಂಡು ಬಂದಿದೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಸ್ನೇಹಿತನಂತೆ, ಅವರ ಕಷ್ಟಗಳು ಕಡಿಮೆಯಾಗುವಂತೆ ತಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದಷ್ಟೇ ಮೋದಿ ಹೇಳಿದ್ದಾರೆ.
 
ಆರ್ಥಿಕತೆಯಲ್ಲಿ, ಜನರಲ್ಲಿ ಹುರುಪು ಮೂಡಿಸುವಲ್ಲಿ  ಮೋದಿ ಮಾತುಗಳು ಸಹಕಾರಿಯಾಗಿಲ್ಲ ಎಂಬುದು ಸ್ಪಷ್ಟ.  ಜೊತೆಗೆ ಬ್ಯಾಂಕ್‌ಗಳಿಂದ ನಗದು ಹಿಂದೆ ಪಡೆಯಲು ಹೇರಿರುವ ಮಿತಿ  ಸಡಿಲಿಕೆ ಬಗ್ಗೆ ಪ್ರಧಾನಿ ಯಾವುದೇ ಭರವಸೆ ನೀಡಲು ವಿಫಲರಾಗಿರುವುದು ಇನ್ನಷ್ಟು ನಿರಾಸೆ ಮೂಡಿಸುವಂತಹದ್ದು.  ನೋಟು ರದ್ದತಿಯಿಂದ ಪಾರ್ಶ್ವವಾಯು ಹೊಡೆದಂತೆ ಆಗಿರುವ ದೇಶಿ ಅರ್ಥ ವ್ಯವಸ್ಥೆಯ ಚೇತರಿಕೆಗೆ ದಿಟ್ಟ ಕ್ರಮ ಕೈಗೊಳ್ಳುವ ಬದಲಿಗೆ, ಸಂಕಷ್ಟಕ್ಕೆ ಒಳಗಾಗಿರುವ ಕೆಳ ಮಧ್ಯಮವರ್ಗ, ಬಡವರು ಮತ್ತು ಸೌಲಭ್ಯ ವಂಚಿತರ ಓಲೈಕೆ ಮೂಲಕ  ಬಿಜೆಪಿಯ ನೆಲೆ ಗಟ್ಟಿ ಮಾಡಲು  ಹೊರಟಂತೆ ಕಾಣುತ್ತಿದೆ. ಸಂಪತ್ತಿನ ಸಾಂಸ್ಕೃತಿಕ   ಸಂಕೇತವಾಗಿರುವ ನಗದು, ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಸಿಗದೆ ಜನರು  ಬರಿಗೈ ದಾಸರಾಗಿದ್ದಾರೆ.
 
ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ನೋಟಿಗಾಗಿ ಜನ ಪರದಾಡುತ್ತಿರುವುದು ಹಾಗೂ ಈ ಸ್ಥಿತಿ ಯಾವಾಗ ಕೊನೆಯಾಗಲಿದೆ ಎನ್ನುವಂತಹ ಜನರ ಭಾವನೆಗಳಿಗೆ ಪ್ರಧಾನಿ ಭಾಷಣದಲ್ಲಿ ಯಾವುದೇ ಪ್ರತಿಸ್ಪಂದನವಿಲ್ಲದಿರುವುದು ವೇದ್ಯ.  ನೋಟು ರದ್ದತಿ ನಂತರ  50 ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಎದೆತಟ್ಟಿಕೊಂಡು ಹೇಳಿದ್ದ ಪ್ರಧಾನಿ ಅವರಿಗೆ ತಮ್ಮ ಮಾತಿನ ಮೇಲೆ ಭರವಸೆಯೇ ಇಲ್ಲದಿರುವುದು ಸ್ಪಷ್ಟ. ಎಟಿಎಂ ಮತ್ತು ಬ್ಯಾಂಕ್‌ಗಳಿಂದ ಈಗಲೂ ಜನರು ತಮ್ಮ ದುಡಿಮೆಯ ಹಣವನ್ನು ಅಗತ್ಯಕ್ಕೆ ತಕ್ಕಂತೆ ಪಡೆಯಲು ಸಾಧ್ಯವಾಗುತ್ತಿಲ್ಲ. ಬಡವರಿಗೆ ಕಡಿಮೆ ಬಡ್ಡಿ ದರದ ಎರಡು ವಸತಿ ಯೋಜನೆ,  ಕೃಷಿ ಸಾಲಕ್ಕೆ ಬಡ್ಡಿ ವಿನಾಯ್ತಿ, ಗರ್ಭಿಣಿಯರಿಗೆ ಆರ್ಥಿಕ ನೆರವು, ಹಿರಿಯ ನಾಗರಿಕರ ಠೇವಣಿಗೆ ಹೆಚ್ಚಿನ ಬಡ್ಡಿಯಂತಹ ಜನಪ್ರಿಯ ಘೋಷಣೆಗಳ ಪ್ರಕಟಣೆಗಷ್ಟೇ ಭಾಷಣದ ಮಹತ್ವ ಸೀಮಿತವಾಗಿದೆ. ಗರ್ಭಿಣಿಯರಿಗೆ ಘೋಷಿಸಿರುವ ಹಣಕಾಸಿನ ನೆರವಿನಲ್ಲೂ  ತೀರಾ ಹೊಸತೇನೂ ಇಲ್ಲ. ಗರ್ಭಿಣಿಯರಿಗೆ ಹಣಕಾಸಿನ ನೆರವು ನೀಡುವುದು  ಆಹಾರ ಭದ್ರತಾ ಕಾಯಿದೆಯ ಭಾಗವಾಗಿದೆ.  ಅದನ್ನೇ ತಮ್ಮ ಭಾಷಣದಲ್ಲಿ ಪ್ರಧಾನಿಯವರು ಮತ್ತೆ ಹೇಳಿದ್ದಾರೆ. ಕಪ್ಪು ಹಣದ ವಿರುದ್ಧ ರಣಕಹಳೆ ಊದಿರುವುದಾಗಿ ಮೋದಿ ಅವರು  ಬೆನ್ನುತಟ್ಟಿಕೊಂಡಿದ್ದರು. ಆದರೆ  ಎಷ್ಟು ಪ್ರಮಾಣದ ಕಪ್ಪು ಹಣ ನಿವಾರಣೆ ಆಗಿದೆ, ನಿಷೇಧಿತ ನೋಟುಗಳು ಜಮೆಯಾಗಿರುವ ಮೊತ್ತ ಎಷ್ಟು ಎನ್ನುವುದಕ್ಕೆ ಲೆಕ್ಕವನ್ನೇ ಕೊಡದಿರುವುದು ವಿಪರ್ಯಾಸ. ನೋಟು ರದ್ದತಿಯ ವಿದ್ಯಮಾನದ ಬಗ್ಗೆ ಜನಮಾನಸದಲ್ಲಿ ಮೂಡಿರುವ ಅನೇಕ ಸಂದೇಹಗಳಿಗೆ ಉತ್ತರ ಸಿಗದಿರುವುದು ದುರದೃಷ್ಟಕರ. 
 
ನೋಟು ರದ್ದತಿಯ ಫಲಶ್ರುತಿ ಬಗ್ಗೆ  ಪ್ರಧಾನಿ ಭಾಷಣ ಖಚಿತವಾಗಿ ಏನನ್ನೂ ಹೇಳಿಲ್ಲ.  ಹಾಗೆಯೇ, ಬ್ಯಾಂಕ್‌ಗಳು ಸದ್ಯದಲ್ಲೇ ಸಾಮಾನ್ಯ ಸ್ಥಿತಿಗೆ ಮರಳಲಿವೆ ಎಂದು ಪ್ರಧಾನಿ ಹೇಳಿದ್ದರೂ, ಯಾವಾಗ ಎನ್ನುವುದನ್ನು  ವಿವರಿಸಿಲ್ಲ.  ಈ ಬಗ್ಗೆ ಪ್ರಧಾನಿಗೇ ಅನುಮಾನ ಇದ್ದಂತಿದೆ. ಕಪ್ಪುಹಣ ಮತ್ತು ಭ್ರಷ್ಟಾಚಾರದ ಬೇರುಗಳು ನಮ್ಮ ಚುನಾವಣಾ ರಾಜಕೀಯದಲ್ಲಿ ಆಳವಾಗಿ ಬೇರುಬಿಟ್ಟಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಂತಹ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ತೋರಿಕೆಯ ಮಾತು ಆಡಿರುವ ಪ್ರಧಾನಿ, ಕಾಳಧನದ ವಿರುದ್ಧ ಸರ್ಜಿಕಲ್‌ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದು ವಿರೋಧಾಭಾಸ.  ರಾಜಕೀಯ ಪಕ್ಷಗಳಿಗೆ  ದೇಣಿಗೆ ನೀಡುವ ವಿಚಾರದಲ್ಲಿ  ಪಾರದರ್ಶಕತೆ ತರುವ ವಿಚಾರದ ಬಗ್ಗೆ ಯಾವ ಪ್ರಕಟಣೆಯೂ ಇಲ್ಲ. ಹೀಗಾಗಿ ಕಪ್ಪುಹಣ ವಿರುದ್ಧದ ಹೋರಾಟ ಕುರಿತಾದ ಕಾಳಜಿಯನ್ನೇ ಪ್ರಶ್ನಿಸುವಂತಾಗಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT