ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ: ಹೊಸ ವರ್ಷಕ್ಕೆ ರಕ್ತಸಿಕ್ತ ಮುನ್ನುಡಿ

ಸಾಂಟಾ ವೇಷದ ಉಗ್ರ * ಇಸ್ತಾಂಬುಲ್ ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ *16 ವಿದೇಶಿಯರೂ ಸೇರಿ 39 ಬಲಿ
Last Updated 1 ಜನವರಿ 2017, 20:17 IST
ಅಕ್ಷರ ಗಾತ್ರ

ಸಾಂಟಾ ವೇಷದ ಉಗ್ರ, ಇಸ್ತಾಂಬುಲ್ ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ, 16 ವಿದೇಶಿಯರೂ ಸೇರಿ 39 ಬಲಿ

*
ಇಸ್ತಾಂಬುಲ್:
ವರ್ಷವಿಡೀ ರಕ್ತಪಾತದಿಂದ ತತ್ತರಿಸಿದ್ದ ಟರ್ಕಿಯಲ್ಲಿ ವರ್ಷದ ಕೊನೆಯ ದಿನವೂ ರಕ್ತಪಾತವಾಗಿದೆ. ಸತತ ದಾಳಿಗಳಿಂದ ನಲುಗಿದ್ದ ಟರ್ಕಿ ಜನ ಸೂತಕದ ಮಧ್ಯೆ ಹೊಸ ವರ್ಷ 2017 ಅನ್ನು ಸ್ವಾಗತಿಸಿದ್ದಾರೆ.

ಕ್ಲಬ್‌ವೊಂದರಲ್ಲಿ ಹೊಸ ವರ್ಷ ಸ್ವಾಗತಿಸುವ ಸಂಭ್ರಮದಲ್ಲಿ ಇದ್ದ ಜನರ ಮೇಲೆ ಸಾಂಟಾಕ್ಲಾಸ್ ದಿರಿಸಿನಲ್ಲಿದ್ದ ಬಂದೂಕುಧಾರಿಯೊಬ್ಬ ಮನಸೋ ಇಚ್ಛೆ ನಡೆಸಿದ ಗುಂಡಿನ ದಾಳಿಯಲ್ಲಿ 39 ಜನರು ಪ್ರಾಣಕಳೆದುಕೊಂಡಿದ್ದಾರೆ.

ಇಬ್ಬರು ಭಾರತೀಯರೂ ಸೇರಿದಂತೆ ದಾಳಿಯಲ್ಲಿ 16 ವಿದೇಶಿಯ ಮೃತಪಟ್ಟಿದ್ದಾರೆ. 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ನಡೆದಾಗ ಕ್ಲಬ್‌ನಲ್ಲಿ ಸುಮಾರು 700 ಜನರು ಇದ್ದರು ಎನ್ನಲಾಗಿದೆ.

ರಾತ್ರಿ ಮೋಜಿಗೆ ಪ್ರಸಿದ್ಧವಾಗಿರುವ ರೀನಾ  ಕ್ಲಬ್ ದ್ವಾರದಲ್ಲಿ ನಿಂತಿದ್ದ ಒಬ್ಬ ಪೊಲೀಸ್ ಮತ್ತು ನಾಗರಿಕರೊಬ್ಬರನ್ನು ಹತ್ಯೆ ಮಾಡಿದ ಬಂದೂಕುಧಾರಿ, ಕ್ಲಬ್‌ ಒಳಗಡೆ ನುಗ್ಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿದ ಎಂದು ಒಳಾಡಳಿತ ಸಚಿವ ಸುಲೇಮಾನ್ ಸೊಯ್ಲು ಹೇಳಿದ್ದಾರೆ.

‘ದಾಳಿಕೋರ ತಪ್ಪಿಸಿಕೊಂಡಿದ್ದು, ಆತನನ್ನು ಸೆರೆ ಹಿಡಿಯಲು ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಆತನನ್ನು ಬಂಧಿಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ದಾಳಿಯಲ್ಲಿ ಸತ್ತವರ ಪೈಕಿ ಇದುವರೆಗೆ 21 ಜನರನ್ನು ಗುರುತಿಸಲಾಗಿದ್ದು, ಅವರಲ್ಲಿ 16 ಮಂದಿ ವಿದೇಶಿ ಪ್ರಜೆಗಳು. ಗಾಯಗೊಂಡಿರುವ 70 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಇಸ್ತಾಂಬುಲ್‌ ರಾಜ್ಯಪಾಲ ವಾಸಿಪ್ ಸಹಿನ್, ‘ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮುಗ್ಧರ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ ಮಹಾ ಕ್ರೂರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒರ್ಟಕೊಯ್‌ ಜಿಲ್ಲೆಯ ಅಂತರರಾಷ್ಟ್ರೀಯ ಜಲ ಮಾರ್ಗದ ಪಕ್ಕದಲ್ಲೇ ಕ್ಲಬ್ ಇದ್ದು, ದಾಳಿ ನಡೆದಾಗ ಜನರು ಗಾಬರಿಗೊಂಡು ನೀರಿಗೆ ಹಾರಿದ್ದಾರೆ. ಅವರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಬಂದೂಕುಧಾರಿಗಳು ಸಾಂಟಾಕ್ಲಾಸ್ ದಿರಿಸಿನಲ್ಲಿ  ಇದ್ದರು ಎಂದು ಹೇಳಲಾಗುತ್ತಿದ್ದರೂ, ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ.

ಸ್ಥಳೀಯ ಕಾಲಮಾನ ಬೆಳಗಿನ ಜಾವ 1.15ಕ್ಕೆ ದಾಳಿ ನಡೆದಿದೆ. ದಾಳಿ ಮಾಡಿದವರು ಅರೇಬಿಕ್ ಭಾಷೆ ಮಾತನಾಡುತ್ತಿದ್ದರು ಎಂದು  ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾಗಿ ಟಿವಿ ವಾಹಿನಿಗಳು ವರದಿ ಮಾಡಿವೆ.

ಇದು ಭಯೋತ್ಪಾದಕರ ದಾಳಿ ಎಂದು ಹೇಳಲಾಗುತ್ತಿದ್ದು, ವಿಶೇಷ ಪೊಲೀಸ್ ಪಡೆ ಕ್ಲಬ್‌ನಲ್ಲಿ ಶೋಧ ಮುಂದುವರಿಸಿದೆ. ಇದುವರೆಗೆ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತಿಲ್ಲ.

ಈ ಘಟನೆಯು 2015ರ ನವೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ಐಎಸ್‌ ಜಿಹಾದಿಗಳು ಗುಂಡಿನ ಮತ್ತು ಬಾಂಬ್ ದಾಳಿ ನಡೆಸಿ 130 ಜನರನ್ನು ಹತ್ಯೆ ಮಾಡಿದ ಘಟನೆಯನ್ನು ನೆನಪಿಸಿದೆ.

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ದಾಳಿ ನಡೆಯುವ ಸಾಧ್ಯತೆ ಇದ್ದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ವದ ಎಲ್ಲ ಪ್ರಮುಖ ನಗರಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

*
ಉಗ್ರರ ಅಟ್ಟಹಾಸ: 2016 ರಕ್ತಪಾತದ ವರ್ಷ
ಕುರ್ದಿಶ್ ಉಗ್ರರು ಮತ್ತು ಐಎಸ್ ಜಿಹಾದಿಗಳು 2016ರಲ್ಲಿ ಟರ್ಕಿಯ ಮೇಲೆ ಅನೇಕ ದಾಳಿ ನಡೆಸಿದ್ದಾರೆ. ದೇಶದ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಇಷ್ಟೊಂದು ದಾಳಿ ನಡೆದಿರುವುದು ಇದೇ ಮೊದಲು ಎಂದು ಅಧಿಕೃತ ಮೂಲಗಳು ತಿಳಿಸಿವೆ.
* ಇಸ್ತಾಂಬುಲ್‌ನ ಅಟಾಟುರ್ಕ್ ವಿಮಾನ ನಿಲ್ದಾಣದಲ್ಲಿ ಐಎಸ್ ಉಗ್ರರು ಜೂನ್‌ನಲ್ಲಿ ನಡೆಸಿದ ತ್ರಿವಳಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 47 ಜನರು ಮೃತಪಟ್ಟಿದ್ದರು.
* ಡಿಸೆಂಬರ್ 10ರಂದು ಇಸ್ತಾಂಬುಲ್‌ನಲ್ಲಿ  ಕುರ್ದಿಶ್ ಉಗ್ರಗಾಮಿಗಳು ನಡೆಸಿದ ಅವಳಿ ಬಾಂಬ್ ದಾಳಿಯಲ್ಲಿ 44 ಜನರು ಪ್ರಾಣ ಕಳೆದುಕೊಂಡಿದ್ದರು.
* ಡಿಸೆಂಬರ್‌ 20ರಂದು  ಅಂಕಾರಾದ ಕಲಾ ಗ್ಯಾಲರಿಯಲ್ಲಿ ಅಂಗರಕ್ಷಕನೊಬ್ಬ ರಷ್ಯಾದ ರಾಯಭಾರಿ ಆಂಡ್ರ್ಯೂ ಕರ್ಲೋವ್‌ ಅವರನ್ನು ಗುಂಡಿಟ್ಟು ಕೊಂದಿದ್ದ.

**
ಈ ಪೈಶಾಚಿಕ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತವೆ. ಟರ್ಕಿಯ ದುಃಖದಲ್ಲಿ ಭಾರತವೂ ಭಾಗಿಯಾಗಿದೆ
-ನರೇಂದ್ರ ಮೋದಿ, ಪ್ರಧಾನಿ

**
ಈ ದಾಳಿಯು ಅನಾಗರಿಕ ಕೃತ್ಯ, ಶ್ವೇತಭವನ ಇದನ್ನು ಖಂಡಿಸುತ್ತದೆ.
-ನೆಡ್ ಪ್ರೈಸ್, ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ

*
ಇಂತಹ ದಾಳಿಯಿಂದ ನಮ್ಮ ಒಗ್ಗಟ್ಟನ್ನು ಮುರಿಯಲು ಸಾಧ್ಯವಿಲ್ಲ, ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ.
-ಬೆಕಿರ್ ಬೊಜ್‌ದಾಗ್, ಟರ್ಕಿ ನ್ಯಾಯಾಂಗ ಸಚಿವ

**
ಇಸ್ತಾಂಬುಲ್‌ಗೆ 2017 ದುಃಖಕರ ಆರಂಭ
-ಜೆನ್ಸ್ ಸ್ಟಾಲ್ಟನ್‌ಬರ್ಗ್, ನ್ಯಾಟೊ ಮಹಾ ಪ್ರಧಾನ ಕಾರ್ಯದರ್ಶಿ.


*
ಅರಾಜಕತೆ ಸೃಷ್ಟಿಸುವ ಯತ್ನ

ಇಂತಹ ಹೇಯ ದಾಳಿ ಮಾಡುವ ಮೂಲಕ ಭಯೊತ್ಪಾದಕರು ಟರ್ಕಿಯಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಫಲಕಾರಿ ಆಗುವುದಿಲ್ಲ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT