ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಬ್ಯಾಟ್‌: ಬಡವರಿಗೆ ಬದುಕುವ ದಾರಿ

Last Updated 2 ಜನವರಿ 2017, 10:06 IST
ಅಕ್ಷರ ಗಾತ್ರ

ಗಂಗಾವತಿ:  ಏಳು ವರ್ಷಗಳಿಂದ ಸತತವಾಗಿ ನಗರಕ್ಕೆ ಬರುತ್ತಿರುವ ಮಹಾರಾಷ್ಟ್ರದ ದೌಲಿಯಾ ಜಿಲ್ಲೆಯ 30 ಸದಸ್ಯರನ್ನು ಹೊಂದಿರುವ ಈ ಕುಟುಂಬ ಕ್ರಿಕೆಟ್‌ ಬ್ಯಾಟುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಹೊತ್ತಿನ ಊಟ ಕಂಡುಕೊಳ್ಳುತ್ತಿದೆ.

ನಗರದ ಕೊಪ್ಪಳ ರಸ್ತೆಯ ಪಾಡಗುತ್ತಿ ಗಾರ್ಡನ್ ಸಮೀಪದ ರಸ್ತೆಯ ಬದಿ ಗುಡಾರ ಹಾಕಿ. ಆರೇಳು ತಿಂಗಳು ಇಲ್ಲಿಯೇ ತಂಗಿ ಬ್ಯಾಟುಗಳನ್ನು ಮಾರಾಟ ಮಾಡುತ್ತಾರೆ.ಅಡುಗೆ ಮನೆ, ಸ್ನಾನದ ಕೋಣೆ, ಮಲಗುವ ಕೊಠಡಿ, ವಿಶ್ರಾಂತಿ ಸ್ಥಳ, ಶೌಚ, ಬ್ಯಾಟ್ ತಯಾರಿಸುವ ಸ್ಥಳ, ಮಕ್ಕಳ ಆಟದ ಮೈದಾನ, ಎಳೆಯ ಮಕ್ಕಳ ಜೋಲಿ ಎಲ್ಲವೂ ಈ ಕುಟುಂಬಕ್ಕೆ ಬೀದಿ ಬದಿಯ ಸ್ಥಳವೇ ಆಸರೆಯಂತಾಗಿದೆ. ಸೀವನ್ ಎಂಬ ವಿಶೇಷ ಹಾಗೂ ಭಾರರಹಿತ ಕಟ್ಟಿಗೆಯಿಂದ ಬ್ಯಾಟ್‌ಗಳನ್ನು ತಯಾರಿಸುವ ಈ ಕುಟುಂಬದ ಸದಸ್ಯರು ಕನಿಷ್ಠ ₹70ರಿಂದ ಗರಿಷ್ಠ ₹250 ಮೊತ್ತಕ್ಕೆ ಒಂದೊಂದು ಬ್ಯಾಟ್ ಮಾರಾಟ ಮಾಡುತ್ತಾರೆ. 

ಒಮ್ಮೆ ತವರು ಬಿಟ್ಟರೆ ಮಕ್ಕಳು, ಮರಿಯೊಂದಿಗೆ ಏಳೆಂಟು ತಿಂಗಳು  ಇವರು, ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ, ಇಳಕಲ್, ಬಳ್ಳಾರಿ, ಗದಗ ಮೊದಲಾದ ಜಿಲ್ಲೆಯಲ್ಲಿ ಸಂಚರಿಸುತ್ತಾರೆ.

‘ಒಮ್ಮೆ ಬಂದರೆ ಒಂದರಿಂದ ಒಂದೂವರೆ ಲಕ್ಷ ವ್ಯವಹಾರ ಮಾಡುತ್ತೇವೆ. ಹಲವು ತಿಂಗಳ ಬಳಿಕ ಮತ್ತೆ ತವರಿಗೆ ಮರಳುತ್ತೇವೆ. ನಿತ್ಯ ಎಂಟು ನೂರರಿಂದ ಒಂದು ಸಾವಿರ ಮೊತ್ತದ ವ್ಯವಹಾರವಾಗುತ್ತದೆ’ ಎಂದು ಬ್ಯಾಟ್ ತಯಾರಕ ಅಶೋಕ ಪವಾರ ಹೇಳುತ್ತಾರೆ.

ವಿಶ್ವಕಪ್ ಕ್ರಿಕೆಟ್ ಇದ್ದಾಗ ತಮ್ಮ ವ್ಯಾಪಾರ ಜೋರಾಗಿರುತ್ತದೆ. ನಿತ್ಯ ನೂರಾರು ಬ್ಯಾಟ್ ಮಾರುತ್ತೇವೆ. ಆದರೆ ಇತರ ದಿನಗಳಲ್ಲಿ ಕುಟುಂಬದ ಎಲ್ಲ ಸದಸ್ಯರು ಶ್ರಮಿಸಿದರೂ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗುತ್ತದೆ ಎಂದು ಮತ್ತೊಬ್ಬ ವ್ಯಾಪಾರಿ ಪ್ರಕಾಶ ಪವಾರ್ ಹೇಳಿದರು.

ಆರರಿಂದ 14 ವಯಸ್ಸಿನೊಳಗಿನ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶ ನೀಡಿವೆ. ಆದರೆ ಶಿಕ್ಷಣ ವಂಚಿತ ಸುಮಾರು ಐದಕ್ಕೂ ಹೆಚ್ಚು ಮಕ್ಕಳು ಇವರ ಕುಟುಂಬದಲ್ಲಿವೆ. ವರ್ಷದಲ್ಲಿ ಕೇವಲ ಮೂರರಿಂದ ನಾಲ್ಕು ತಿಂಗಳು ಮಾತ್ರ ಮಕ್ಕಳ ಶಾಲೆಯ ಮುಖ ನೋಡುತ್ತವೆ ಎಂದು ಸುನಿತಾ ಪವಾರ್ ಹೇಳಿದರು.

ಕೇವಲ ಅನುದಾನ ಬಾಚಿಕೊಳ್ಳುವ ಉದ್ದೇಶಕ್ಕೆ ಮಕ್ಕಳ ಹಕ್ಕುಗಳ ಬಗ್ಗೆ, ಶಿಕ್ಷಣದ ಬಗ್ಗೆ ಕಾಟಾಚಾರಕ್ಕೆ ಗ್ರಾಮಗಳಲ್ಲಿ ಸಭೆ ನಡೆಸುವ ಕೆಲ ಸರ್ಕಾರೇತರ ಸಂಘ, ಸಂಸ್ಥೆಗಳು ಇಂತಹ ಮಕ್ಕಳ ಬಗ್ಗೆ ಗಮನ ಹರಿಸಬೇಕಿದೆ. ಶಿಕ್ಷಣ ಇಲಾಖೆ ಹಾಗೂ ಯುನಿಸೆಫ್ ನಂತ ಸಂಸ್ಥೆಗಳು ಮಕ್ಕಳ ಶಿಕ್ಷಣಕ್ಕೆ ಯತ್ನಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT