ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌– ಕಾಂಗ್ರೆಸ್‌ ಪಕ್ಷಗಳ ರಾಜಕೀಯಕ್ಕೆ ಮತ್ತೊಂದು ಬಲಿ

ಬನ್ನೂರು ವಿಭಾಗದಲ್ಲಿ ಶಾಸಕರಿಂದ ಅಭಿವೃದ್ಧಿ ಕಾಮಗಾರಿ
Last Updated 2 ಜನವರಿ 2017, 10:42 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ತಾಲ್ಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಜೆಡಿಎಸ್‌ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಇದಕ್ಕೆ ಪ್ರತೀಕಾರವಾಗಿ ಆರೋಪಿಗಳ ಮನೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇಡೀ ಗ್ರಾಮದಲ್ಲಿ ತ್ವೇಷಮಯ ವಾತಾವರಣ ಉಂಟಾಗಿದ್ದು, ಪೊಲೀಸ್‌ ಸರ್ಪಗಾವಲು ಇದೆ.

ಗ್ರಾಮದ ರಾಜೇಗೌಡ ಎಂಬುವವರ ಪುತ್ರ ಹರೀಶ್ ಅಲಿಯಾಸ್ ಗುಂಡ (32) ಕೊಲೆಯಾದ ವ್ಯಕ್ತಿ. ಗ್ರಾಮದ ಮುಖ್ಯರಸ್ತೆಯಲ್ಲಿ ಇರುವ ನ್ಯಾಯಬೆಲೆ ಅಂಗಡಿಯ ಬಳಿ ಇವರು ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದರು. ರಾತ್ರಿ 12 ರಿಂದ 1 ಗಂಟೆಯ ಸಮಯದಲ್ಲಿ ಗುಂಪೊಂದು ಹರೀಶ್‌್ ಮೇಲೆ ಏಕಾಏಕಿ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿಹಾಕಿತು. ಗುಂಪು ತಕ್ಷಣ ಕತ್ತಲಲ್ಲಿ ಪರಾರಿಯಾಯಿತು.

ಹತ್ಯೆಗೀಡಾದ ಹರೀಶ್‌ ಅವರು ಜೆಡಿಎಸ್‌ ಮುಖಂಡ ಹಾಗೂ ತಾ.ಪಂ ಸದಸ್ಯ ವಿಜಯಕುಮಾರ್ ಅವರ ಭಾವನ ಪುತ್ರ. ಮೃತನಿಗೆ ಒಂದೂವರೆ ವರ್ಷದ ಮಗು ಇದೆ.ಸುದ್ದಿ ತಿಳಿದ ಹರೀಶ್‌ ಕಡೆಯವರು ಆರೋಪಿಗಳೆಂದು ಗುರುತಿಸಿದ ಕೆಲವರ ಮನೆ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದರು.

ಮನೆಯ ಬಾಗಿಲು ಕಿಟಕಿ ಮುರಿದು ಹಾಕಿದರು. ಹೊರಗೆ ನಿಲ್ಲಿಸಿದ್ದ ಟೈರ್ ಗಾಡಿ, ಆಟೊ, ಗೂಡ್ಸ್ ಆಟೊ ಮತ್ತು ಕಾರಿಗೂ ಬೆಂಕಿ ಹಚ್ಚಿದರು. ಮನೆ ಹಾಗೂ ಎಲ್ಲ ವಾಹನಗಳು ಭಾಗಶಃ ಸುಟ್ಟಿವೆ. ಇದರಿಂದ ಇಡೀ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ.

ಮುರುಕನಹಳ್ಳಿ ಗ್ರಾಮಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್‌ ಹೆಚ್ಚುವರಿ ವರಿಷ್ಠಾಧಿಕಾರಿ ಸವಿತಾ ಮತ್ತು ಮೈಸೂರು ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್, ಸಿಪಿಐ ವೆಂಕಟೇಶಯ್ಯ   ಉದ್ರಿಕ್ತರನ್ನು ಸಮಾಧಾನಪಡಿಸಿದರು.

ನಂತರ ಶವವನ್ನು ಕೆ.ಆರ್.ಪೇಟೆಗೆ ಸಾಗಿಸಿ, ಅಲ್ಲಿಂದ ಶಾಂತಿ ಮತ್ತು ಭದ್ರತೆಯ ದೃಷ್ಟಿಯಿಂದ ಮೈಸೂರಿಗೆ ಸಾಗಿಸಲಾಯಿತು. ದಕ್ಷಿಣ ವಲಯ ಐಜಿಪಿ ಬಿ.ಕೆ.ಸಿಂಗ್,  ಡಿವೈಎಸ್‌ಪಿ ಜನಾರ್ದನ್, ಹಾಸನ ಜಿಲ್ಲಾ ಎಸ್ಪಿ ರಾಹುಲ್‌ಕುಮಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ದ್ವೇಷದ ಬೆಂಕಿಗೆ ಆಹುತಿಯಾದ ಗ್ರಾ.ಪಂ ಮಾಜಿ ಸದಸ್ಯ ಎಂ.ಸಿ.ಕುಮಾರ್ ಮತ್ತು ಕಾಂಗ್ರೆಸ್ ಮುಖಂಡ ವೆಂಕಟೇಶ್ ಅವರ ಮನೆಗಳು, ವಾಹನಗಳನ್ನು ಐಜಿಪಿ ವೀಕ್ಷಿಸಿದರು. ಘಟನೆಯಲ್ಲಿ ಹಲ್ಲೆಗೊಳಗಾದ ಕೃಷ್ಣೇಗೌಡ ಎಂಬುವವರಿಂದ ಮಾಹಿತಿ ಪಡೆದರು.

ಪರ– ವಿರೋಧ ಪ್ರತಿಕ್ರಿಯೆ: ‘ಇದೊಂದು ವ್ಯವಸ್ಥಿತ ಸಂಚು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅವರ ಮುಖಂಡರ ಕುಮ್ಮಕ್ಕಿನಿಂದ ಹತ್ಯೆ ಮಾಡಿದ್ದಾರೆ. ರಾಜಕೀಯವಾಗಿ ಬೆಳೆಯುತ್ತಿದ್ದ ಹರೀಶನನ್ನು ಮುಗಿಸಿದ್ದಾರೆ. ಗ್ರಾಮದಲ್ಲಿ ಅಶಾಂತಿ ಉಂಟು ಮಾಡಲು ಈ ಸಂಚು ನಡೆಸಲಾಗಿದೆ.

ಕೊಲೆ ಆರೋಪಿಗಳಾದ ರಕ್ಷಿತ್ (25) ಮತ್ತು ಯೋಗೇಶ್ (28) ಅವರನ್ನು ಕೂಡಲೇ   ಬಂಧಿಸಬೇಕು’ ಎಂದು ಜೆಡಿಎಸ್ ಮುಖಂಡ ಹಾಗೂ ತಾ.ಪಂ ಸ್ಥಾಯಿಸಮಿತಿ ಅಧ್ಯಕ್ಷ ವಿಜಯಕುಮಾರ್ ಆಗ್ರಹಿಸಿದರು.ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಇದ್ದು, ಶಾಂತಿ ಮತ್ತು ಭದ್ರೆತೆಗಾಗಿ ಐದು ಡಿಎಆರ್ ತುಕಡಿ ಸೇರಿದಂತೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT