ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ರಿಪೇರಿಯಾಗುವ ರಸ್ತೆ

Last Updated 2 ಜನವರಿ 2017, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಜನರಿಗೂ ಮತ್ತು ಸಿಮೆಂಟ್‌ಗೂ ಗಾಢ ನಂಟು. ಒಂದರ್ಥದಲ್ಲಿ ಅವಿನಾಭಾವ ಸಂಬಂಧ. ಇಲ್ಲಿನ ಜನರೊಂದಿಗೆ ಸಿಮೆಂಟ್ ಒಡನಾಟ ಯಾವ ಪರಿ ಇದೆಯೆಂದರೆ, ಕಣ್ಣು ಹಾಯಿಸಿದ ಕಡೆಯಲೆಲ್ಲ ಸಿಮೆಂಟ್‌ಗೆ ಸಂಬಂಧಿಸಿದ ಪೂರಕ ಅಂಶಗಳು ಕಾಣಸಿಗುತ್ತವೆ.

ಎಸಿಸಿ ಸಿಮೆಂಟ್ ಕಾರ್ಖಾನೆಯು ಗ್ರಾಮದ ಹತ್ತಿರ ಇರುವ ಕಾರಣ ಅದರ ಪ್ರಭಾವ ತುಸು ಹೆಚ್ಚೇ ಇದೆ. ಇನ್ನೂ ಸರಳವಾಗಿ ಹೇಳುವುದಾದರ, ರೈಲ್ವೆ ನಿಲ್ದಾಣದ ಸಮೀಪದಲ್ಲೇ ಸಿಮೆಂಟ್ ಕಾರ್ಖಾನೆಯಿದ್ದು, ಗ್ರಾಮದ ಪ್ರವೇಶದ್ವಾರದಲ್ಲೇ ಅದು ಕಾಣುತ್ತದೆ.

ಬರ, ಕೃಷಿ ಸಮಸ್ಯೆ ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ಆಗಾಗ್ಗೆ ಸುದ್ದಿಯಾಗುವ ತೊಂಡೇಬಾವಿ, ಈ ಬಾರಿ ವಿಶಿಷ್ಟ ಸಾಧನೆಗೆ ಪ್ರಸಿದ್ಧಿ ಗಳಿಸಿದೆ. ವಿಭಿನ್ನ ಮಾದರಿಯ ಬ್ಲೆಂಡೆಡ್ (ಸ್ಟೀಲ್ ಮತ್ತು ಇನ್ನಿತರ ಅಂಶಗಳ ಮಿಶ್ರಣ) ಸಿಮೆಂಟ್ ಮತ್ತು ಫೈಬರ್ ಮಿಶ್ರಿತ ರಸ್ತೆ ನಿರ್ಮಿಸಲಾಗಿದೆ. ದೀರ್ಘಕಾಲದವರೆಗೆ ರಸ್ತೆ ಹದಗೆಡದಿರುವುದು ಇದರ ವಿಶೇಷ.

ಒಂದು ವೇಳೆ ಸಣ್ಣಪ್ರಮಾಣದ ಬಿರುಕು ಕಂಡರೂ ಅದು ಸ್ವಯಂ ದುರಸ್ತಿ ಮಾಡಿಕೊಳ್ಳುತ್ತದೆ. ರಸ್ತೆಯ ಈ ವಿಶೇಷತೆಗೆ ‘ನ್ಯಾನೊ ಫೈಬರ್ ತಂತ್ರಜ್ಞಾನ’ ಸಹಕಾರಿಯಾಗಿದೆ. ಈ ಸಾಧನೆ ಬರೀ ಬಾಯಿಮಾತುಗಳ ಭರವಸೆ ಅಥವಾ ಆಶಾಭಾವನೆಗೆ ಸೀಮಿತಗೊಳಿಸದೇ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗಿದೆ. ಅದು ಯಶಸ್ವಿಯಾಗಿದೆ.

2011ರ ಜನಗಣತಿ ಪ್ರಕಾರ, ತೊಂಡೇಬಾವಿಯಲ್ಲಿ 1,148 ಕುಟುಂಬಗಳಿವೆ. ಒಟ್ಟು 4,791 ಜನರ ಪೈಕಿ 2404 ಪುರುಷರು ಮತ್ತು 2387 ಮಹಿಳೆಯರು ಇದ್ದಾರೆ. ಸಾಕ್ಷರತಾ ಪ್ರಮಾಣ ಶೇ 72.24 ಇದೆ. ಬಹುತೇಕ ಮಂದಿ ಕೃಷಿಕರಾಗಿದ್ದು, ಕೆಲವರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರು ಸಮೀಪದಲ್ಲಿದ್ದರೂ ಅದರ ಗೊಡವೆಗೆ ಹೋಗದೇ ಮತ್ತು ಅದರ ನೆರಳನ್ನು ತಾಗಿಸಿಕೊಳ್ಳದೇ ತನ್ನ ಪಾಡಿಗೆ ತಾನು ಬದುಕುತ್ತಿರುವ ಗ್ರಾಮವಿದು. ಮೂಲಸೌಲಭ್ಯಗಳ ಕೊರತೆಯೂ ಇದೆ. ಅವುಗಳಲ್ಲಿ ರಸ್ತೆಯೂ ಪ್ರಮುಖವಾದದ್ದು.

ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗ್ರಾಮದ ರಸ್ತೆ ದುಃಸ್ಥಿತಿ ತಲುಪಿರುವುದಕ್ಕೆ ಗ್ರಾಮಸ್ಥರಲ್ಲಿ ಬೇಸರವಿತ್ತು. ಬಳಕೆಗೆ ಯೋಗ್ಯವಲ್ಲದ ರಸ್ತೆಯಲ್ಲಿ ನಡೆಯುವುದು, ವಾಹನ ಚಾಲನೆ ಮಾಡುವುದು ಹೇಗೆ ಎಂಬ ಪ್ರಶ್ನೆ ಅವರಿಗೆ ಸದಾ ಕಾಡುತಿತ್ತು. ಅದಕ್ಕೆ ಅವರಿಗೆ ಉತ್ತರ ಎಂಬಂತೆ ಕಡಿಮೆ ವೆಚ್ಚದ ಅಚ್ಚುಕಟ್ಟಾದ ರಸ್ತೆ ಕಡಿಮೆ ಅವಧಿಯಲ್ಲಿ ಸಿದ್ಧಗೊಂಡಿದೆ. ಈ ಕುರಿತು ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ ಎಂಬ ಭರವಸೆಯೂ ಸಿಕ್ಕಿದೆ.

ಈ ರಸ್ತೆ ಒಂದೆರಡು ತಿಂಗಳಲ್ಲಿ ಸಿದ್ಧವಾದುದ್ದಲ್ಲ. ಇದರ ಹಿಂದೆ ಆಸಕ್ತಿಮಯ ಕತೆಯಿದೆ. ಪುಟ್ಟ ಗ್ರಾಮದ ಈ ರಸ್ತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮಹತ್ವ ಗಳಿಸಿದೆ. ಕೆನಡಾದ ಐಸಿ-ಇಂಪಾಕ್ಟ್ಸ್ ಸಂಸ್ಥೆಯ (ಸಮುದಾಯಗಳ ಅಭಿವೃದ್ಧಿ ಉದ್ದೇಶಿತ ಭಾರತ ಮತ್ತು ಕೆನಡಾ ಸರ್ಕಾರಗಳ ಸ್ವಯಂಸೇವಾ ಸಂಸ್ಥೆ) ಸಹಯೋಗದಲ್ಲಿ ಎಸಿಸಿ ಸಿಮೆಂಟ್ ಕಾರ್ಖಾನೆ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳು ಜೊತೆಗೂಡಿ ಈ ರಸ್ತೆ ಸಿದ್ಧಪಡಿಸಿವೆ.

ಸತತ ಎರಡು ವರ್ಷಗಳ ಚರ್ಚೆ, ಸಂವಾದ, ಸಾಧಕ-ಬಾಧಕ, ಅವಶ್ಯಕತೆ ಮತ್ತು ಆದ್ಯತೆ ಎಲ್ಲವನ್ನೂ ಪರಿಶೀಲಿಸಿ ಮತ್ತು ಸ್ಥಳೀಯರ ಸಹಮತದೊಂದಿಗೆ ಸುಮಾರು 550 ಮೀಟರ್ ಉದ್ದನೆಯ ಬ್ಲೆಂಡೆಡ್ ಸಿಮೆಂಟ್ ಮತ್ತು ಫೈಬರ್ ಮಿಶ್ರಿತ ರಸ್ತೆ ನಿರ್ಮಿಸಲಾಗಿದೆ. ರಸ್ತೆಗೆ ಸಂಬಂಧಿಸಿದಂತೆ 2014ರಲ್ಲಿ ಆರಂಭಗೊಂಡ ಚರ್ಚೆ, ಚಟುವಟಿಕೆ ಮತ್ತು ಪ್ರಯೋಗ ಪರೀಕ್ಷೆ 2016ರ ಅಕ್ಟೋಬರ್ ವೇಳೆಗೆ ಸಾರ್ಥಕತೆ ಕಂಡಿದೆ. ಉತ್ತಮ ರಸ್ತೆ ನಿರ್ಮಾಣ ಪ್ರಯೋಗ ಯಶಸ್ವಿಯಾದ ಬಗ್ಗೆ ರಸ್ತೆ ನಿರ್ಮಿಸಿದ ಸಂಸ್ಥೆಗಳಿಗೆ ಅಲ್ಲದೇ ಸ್ಥಳೀಯ ಜನರಲ್ಲೂ ಸಂತಸ ಮೂಡಿಸಿದೆ.

2014ರಲ್ಲಿ ತೊಂಡೇಬಾವಿಗೆ ಮೊದಲ ಬಾರಿ ಭೇಟಿ ನೀಡಿದ ಐಸಿ-ಇಂಪಾಕ್ಟ್ಸ್ ಸಂಸ್ಥೆಯ ತಂಡದ ತಜ್ಞರು ಗ್ರಾಮಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯರೊಡನೆ ಚರ್ಚಿಸಿದರು. ರಸ್ತೆಗೆ ಸಂಬಂಧಿಸಿದ ಅವರ ಅಹವಾಲು ಆಲಿಸಿದರು. ಅವರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು. ಅವರ ಸಹಕಾರದೊಂದಿಗೆ 2015ರ ಅಕ್ಟೋಬರ್ ತಿಂಗಳ 15 ದಿನಗಳ ಅವಧಿಯಲ್ಲಿ ಬ್ಲೆಂಡೆಡ್ ಸಿಮೆಂಟ್ ಮತ್ತು ಫೈಬರ್ ಮಿಶ್ರಿತ ರಸ್ತೆ ನಿರ್ಮಿಸಿದರು.

ಇಷ್ಟು ಮಾಡಿದರೆ ಸಾಲದು. ರಸ್ತೆಯು ಮಳೆ ಮತ್ತು ಬಿಸಿಲನ್ನು ಹೇಗೆ ತಡೆದುಕೊಳ್ಳುತ್ತದೆ? ವಾಹನಗಳ ಸಂಚಾರ ಸುಗಮವಾಗುವುದೇ? ಎಂಬುದು ಸೇರಿದಂತೆ ಇನ್ನಿತರ ಪ್ರಶ್ನೆಗಳು ಅವರಲ್ಲಿದ್ದವು. ಅದನ್ನೂ ಪರಿಹರಿಸಿಕೊಳ್ಳಲು ತೀರ್ಮಾನಿಸಿದ ಅವರು ಒಂದು ವರ್ಷ ಪೂರ್ತಿ ರಸ್ತೆ ಪರೀಕ್ಷಿಸಿದರು. ಎಲ್ಲಾ ರೀತಿಯ ಪ್ರಯೋಗ ಮಾಡಿದರು. ಯಾವುದೇ ರೀತಿಯ ಸಮಸ್ಯೆ ತಲೆದೋರದಿರುವುದು ಕಂಡು ವಿಶಿಷ್ಟ ರಸ್ತೆ ಪ್ರಯೋಗ ಯಶಸ್ವಿಯಾದ ಬಗ್ಗೆ ಸಂತಸಪಟ್ಟರು.

ಬರೀ ಸಿಮೆಂಟ್ ಬಳಕೆಯಾಗಿದ್ದರೆ, ಈ ರಸ್ತೆ ವಿಶೇಷ ಅನ್ನಿಸುತ್ತಿರಲಿಲ್ಲ. ರಸ್ತೆ ನಿರ್ಮಾಣಕ್ಕೆ ಬ್ಲೆಂಡೆಡ್ ಸಿಮೆಂಟ್ ಅಲ್ಲದೇ ಉಷ್ಣ ವಿದ್ಯುತ್ ಕಾರ್ಖಾನೆಯ ಬೂದಿ ದೂಳು, ಸ್ಟೀಲ್‌, ಪಾಲಿಸ್ಟರ್ ಮತ್ತು ಕೊಪಾಲಿಮರ್ ಫೈಬರ್ ಬಳಸಲಾಗಿದೆ. ಸಿಮೆಂಟ್‌, ಖನಿಜ ಮರಳು, ಸ್ಟೀಲ್ ಫೈಬರ್ ಮುಂತಾದವನ್ನು ಬಳಸಲಾಗಿದೆ. 25 ಡಿಗ್ರಿ ತಾಪಮಾನದಲ್ಲಿ 28 ದಿನಗಳ ದಿನಗಳ ಕಾಲ ನೀರು ಹಾಯಿಸಿ ರಸ್ತೆಯನ್ನು ಇನ್ನಷ್ಟು ಗಟ್ಟಿಗೊಳಿಸಲಾಗಿದೆ. ಸಾಮಾನ್ಯ ರಸ್ತೆಗಿಂತ ವಿಭಿನ್ನವಾದ ರಸ್ತೆ ಮಾಡಲಾಗಿದೆ.

‘ರಸ್ತೆ ನಿರ್ಮಾಣಕ್ಕೆ ಎಸಿಸಿ ಸಿಮೆಂಟ್ ಸಂಸ್ಥೆಯು ಸಿಮೆಂಟ್ ನೀಡಿದರೆ, ಕೆನಡಾ ಮತ್ತು ಭಾರತೀಯ ಮೂಲದ ಹಲವು ಸಂಸ್ಥೆಗಳು ಅಗತ್ಯ ಸಾಮಗ್ರಿ ನೀಡಿವೆ. ಮೈಸೂರು ವಿಶ್ವವಿದ್ಯಾಲಯ, ಭಾರತೀಯ ಎಂಜಿನಿಯರಿಂಗ್‌ ಸಂಸ್ಥೆ, ರಿಲಾಯನ್ಸ್‌ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ತಮ್ಮದೇ ಆದ ಕೊಡುಗೆ ಸಲ್ಲಿಸಿವೆ. ಐಸಿ-ಇಂಪಾಕ್ಟ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಕುಮಾರ್ ಬಂಥಿಯಾ ಈ ರಸ್ತೆ ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ’ ಎಂದು ಎಸಿಸಿ ಸಿಮೆಂಟ್ ಸಂಸ್ಥೆಯ ಅಧಿಕಾರಿಗಳು ಹೇಳುತ್ತಾರೆ.

‘ಸಾಮಾನ್ಯ ರೀತಿಯಲ್ಲಿ ನಿರ್ಮಿಸಲಾದ ಸಿಮೆಂಟ್ ಒಂದೆರಡು ವರ್ಷಗಳಲ್ಲಿ ಗುಣಮಟ್ಟ ಕಳೆದುಕೊಳ್ಳುತ್ತವೆ. ಹೆಚ್ಚು ಬಾಳಿಕೆ ಬರುವುದಿಲ್ಲ. ಆದರೆ ಸ್ಟೀಲ್ ಮತ್ತು ಇನ್ನಿತರ ಅಂಶವುಳ್ಳ ಬ್ಲೆಂಡೆಡ್ ಸಿಮೆಂಟ್ ಜೊತೆಗೆ ಫೈಬರ್ ಅಂಶ ಮಿಶ್ರಣಗೊಳಿಸಿ ನಿರ್ಮಿಸಿರುವ ಕಾರಣ ಈ ರಸ್ತೆ ಕನಿಷ್ಠ 15 ರಿಂದ 20 ವರ್ಷ ಬಾಳಿಕೆ ಬರುತ್ತದೆ. ನ್ಯಾನೊ ಫೈಬರ್ ಅಂಶದ ಲೇಪನದಿಂದ ಜಲಸಂಚಯನ ವೃದ್ಧಿಸುತ್ತದೆ.

ನೀರಿನ ಅಂಶದ ಕೊರತೆಯಿಂದ ರಸ್ತೆಯ ಮೇಲ್ಪದರದಲ್ಲಿ ಬಿರುಕು ಮೂಡಿದರೂ ಒಳಪದರದಲ್ಲಿ ನೀರಿನ ಅಂಶವು ಹೀರಿಕೊಂಡು ಬಿರುಕು ಮುಚ್ಚುತ್ತದೆ. ಹೀಗಾಗಿ ರಸ್ತೆಗೆ ಯಾವುದೇ ಹಾನಿಯಾಗುವುದಿಲ್ಲ. ಹೀಗೆ ನೈಸರ್ಗಿಕವಾಗಿ ಸ್ವಯಂ ದುರಸ್ತಿಯಾಗುತ್ತದೆ’ ಎಂಬುದು ಅವರ ವಿಶ್ವಾಸ.

ಸಾಮಾನ್ಯ ಸಿಮೆಂಟ್‌ ರಸ್ತೆ ನಿರ್ಮಿಸಲು ₹30 ಲಕ್ಷ ಬೇಕು. ಆದರೆ ಈ ಬ್ಲೆಂಡೆಡ್‌ ಸಿಮೆಂಟ್‌ ಮತ್ತು ಫೈಬರ್‌ ರಸ್ತೆಯನ್ನು ₹20 ಲಕ್ಷದಿಂದ ₹25 ಲಕ್ಷದ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂಬುದು ಗಮನಾರ್ಹ ಅಂಶ.

‘ಇಂತಹ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೇಶದಲ್ಲಿ ರಸ್ತೆ ನಿರ್ಮಿಸಿದರೆ, ಅವು  ದೀರ್ಘಕಾಲ ಬಾಳಿಕೆ ಬರುತ್ತವೆ. ಹಣ, ಶ್ರಮ, ಸಮಯ ಎಲ್ಲವೂ ಉಳಿತಾಯವಾಗಿ ಹೆಚ್ಚು ಉಪಯುಕ್ತ ಆಗುತ್ತದೆ. ಗ್ರಾಮದಲ್ಲಿ ವಿನೂತನ ರಸ್ತೆ ನಿರ್ಮಾಣಗೊಂಡಿರುವುದು ನಮಗೆಲ್ಲ ಸಂತಸ ಉಂಟು ಮಾಡಿದೆ. ಈ ರಸ್ತೆಯೇ ಎಲ್ಲರಿಗೂ ಮಾದರಿಯಾಗಬೇಕಿದೆ’ ಎಂದು ಗ್ರಾಮದ ಮುಖಂಡ ನಾಗರಾಜ್ ಹೇಳುತ್ತಾರೆ. 

‘ಹಸಿರುಮನೆ ಪರಿಣಾಮ ಬೀರುವಲ್ಲಿ ಸಿಮೆಂಟ್‌ನದ್ದು ಪ್ರಮುಖ ಪಾತ್ರವಿದೆ. ಅತಿಯಾದ ಸಿಮೆಂಟ್ ಉತ್ಪನ್ನದಿಂದ ಇಂಗಾಲದ ಹೊರಸೂಸುವಿಕೆಗೆ ಕಾರಣವಾಗುತ್ತದೆ. ಪರಿಸರದ ಮೇಲೆಯೂ ಪರಿಣಾಮ ಬೀರುತ್ತದೆ. ಬೇರೆ ಬೇರೆ ಸಮಸ್ಯೆಗೂ ಕಾರಣವಾಗುತ್ತದೆ. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಪರಿಸರಸ್ನೇಹಿ ರಸ್ತೆ ನಿರ್ಮಿಸಲಾಗಿದೆ’ ಎಂದು ತಜ್ಞರು ಹೇಳುತ್ತಾರೆ.

ಪೂರಕ ಮಾಹಿತಿ: ಟಿ.ಎನ್‌.ನಂಜುಂಡಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT