ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆ ಪುನರ್‌ನಿರ್ಮಾಣಕ್ಕೆ ನಿರ್ಧಾರ

ಹಳೆಯ ಸೇತುವೆ ಕೆಡವಲು ತೀರ್ಮಾನ, ₹ 12.30 ಕೋಟಿ ವೆಚ್ಚ ಭರಿಸಲಿರುವ ರೈಲ್ವೆ ಇಲಾಖೆ
Last Updated 5 ಜನವರಿ 2017, 10:40 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಖಾನಾಪುರ ರಸ್ತೆಯಲ್ಲಿ ಬ್ರಿಟಿಷರು ನಿರ್ಮಿಸಿದ್ದ ರೈಲ್ವೆ ಮೇಲ್ಸೇತುವೆಯನ್ನು ಕೆಡವಿ ಪುನರ್‌ ನಿರ್ಮಿಸಲು ರೈಲ್ವೆ ಇಲಾಖೆ ಹಾಗೂ ಮಹಾನಗರ ಪಾಲಿಕೆ ನಿರ್ಧರಿಸಿವೆ. ಕಾಮಗಾರಿಗಾಗಿ  ₹ 12.30 ಕೋಟಿ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ. ಸೇತುವೆ ವಿಸ್ತರಿಸಲು ಬೇಕಾದ ಅಕ್ಕಪಕ್ಕದ ಜಾಗವನ್ನು ಪಾಲಿಕೆ ಒದಗಿಸಿಕೊಡಲಿದೆ.  ಕಾಮಗಾರಿ ಶೀಘ್ರವೇ ಆರಂಭ ಗೊಳ್ಳಲಿದ್ದು, 11 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಅಧಿಕಾರಿಗಳ ಪರಿಶೀಲನೆ: ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದ ಉಪ ಮುಖ್ಯ ಎಂಜಿನಿಯರ್‌ ಅಮರಗುಂಡಪ್ಪ, ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ,  ಪಾಲಿಕೆಯ ಹಿರಿಯ ಎಂಜಿನಿಯರ್‌ ಆರ್.ಎಸ್. ನಾಯಕ, ಲಕ್ಷ್ಮಿ ಸುಳಗೇಕರ ಇತರ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.  ರೈಲ್ವೆ ಮೇಲ್ಸೇತುವೆಯ ಸ್ಥಿತಿ, ಸಂಚಾರಕ್ಕೆ ಪರ್ಯಾಯ ಅವಕಾಶಗಳ ಬಗ್ಗೆ ಚರ್ಚೆ ನಡೆಸಿದರು.

ನೂರು ವರ್ಷದ ಹಳೆಯ ಸೇತುವೆ: ಅಂದಾಜು 100 ವರ್ಷಗಳ ಹಿಂದೆ ಈ ಸೇತುವೆಯನ್ನು ಬ್ರಿಟಿಷರು ನಿರ್ಮಿಸಿದ್ದರು. ಈಗಲೂ ಅತ್ಯಂತ ಗಟ್ಟಿಮುಟ್ಟಾಗಿದೆ. ಇತ್ತೀಚೆಗೆ ರೈಲ್ವೆ ಸುರಕ್ಷಾ ವಿಭಾಗದ ಎಂಜಿನಿಯರ್‌ಗಳು ಸೇತುವೆಯ ದೃಢತೆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು.

ಖಾನಾಪುರ ರಸ್ತೆ ಚತುಷ್ಪಥ ರಸ್ತೆಯಾಗಿ ಮಾರ್ಪಾಡಾಗುತ್ತಿರುವುದು, ದ್ವಿಪಥ ರೈಲು ಹಳಿ ನಿರ್ಮಾಣ ಮಾಡಬೇಕಾಗಿರುವುದು ಹಾಗೂ ರೈಲ್ವೆಗಿಂತ ಕನಿಷ್ಠ 6.25 ಮೀಟರ್‌ ಎತ್ತರದಲ್ಲಿ ಸೇತುವೆ (ಸದ್ಯಕ್ಕೆ ರೈಲ್ವೆಯಿಂದ ಕೇವಲ 4 ಮೀಟರ್‌ ಎತ್ತರದಲ್ಲಿದೆ) ಇರಬೇಕಾಗಿರುವ ಕಾರಣ ಮೇಲ್ಸೇತುವೆಯನ್ನು ಕೆಡವಿ, ಪುನರ್‌ ನಿರ್ಮಿಸಬೇಕಾಗಿದೆ ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದ ಉಪ ಮುಖ್ಯ ಎಂಜಿನಿಯರ್‌ ಅಮರಗುಂಡಪ್ಪ ತಿಳಿಸಿದರು.

11 ತಿಂಗಳೊಳಗೆ ಪೂರ್ಣ: ರೈಲ್ವೆ ಇಲಾಖೆಯು ಈ ಯೋಜನೆಗೆ ₹ 12.30 ಕೋಟಿ  ಅನುದಾನ ನೀಡಿದೆ. ಮುಂದಿನ 11 ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳಲಿದೆ. ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಅವರು ಹೇಳಿದರು.

ಟಿಳಕವಾಡಿಯ 3ನೇ ರೈಲ್ವೆಗೇಟ್‌ ಬಳಿ ಕೂಡ ಮೇಲ್ಸೇತುವೆ ನಿರ್ಮಿಸಲಿದ್ದೇವೆ. ಇದಕ್ಕಾಗಿ ₹ 23 ಕೋಟಿ ವೆಚ್ಚವಾಗಲಿದೆ. ಈ ವೆಚ್ವವನ್ನು ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರ ಶೇ 50:50 ಭರಿಸಲಿವೆ. ನಂತರದ ದಿನ ಗಳಲ್ಲಿ 1ನೇ ಗೇಟ್‌ ಹಾಗೂ 2ನೇ ಗೇಟ್‌ ಬಳಿಯೂ ಇಂತಹದ್ದೇ ಮೇಲ್ಸೇತುವೆ ಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT