ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡೊ ಸಂತ್ರಸ್ತರ ನೋವಿಗೆ ಸ್ಪಂದಿಸಿ

ಸಂಪಾದಕೀಯ
Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ
ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಗ್ರಾಮದ ಬಳಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಡೊಸಲ್ಫಾನ್ ಪೀಡಿತರು ಕುಟುಂಬದಲ್ಲಿ ಒಬ್ಬರಿದ್ದರೂ ಅದರಿಂದ ಅನುಭವಿಸಬೇಕಾದ ಯಾತನೆ ಬಹುಶಃ ನೋವುಂಡವರಿಗೇ ತಿಳಿಯುವಂತಹದ್ದು. ಮೂವರು ಪುತ್ರರ ಪೈಕಿ ಒಬ್ಬಾತ ಎಂಡೊಸಲ್ಫಾನ್ ಪೀಡಿತನಾಗಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದದ್ದು  ಇಡೀ ಕುಟುಂಬದ  ಸದಸ್ಯರಲ್ಲೂ ಖಿನ್ನತೆ, ಒತ್ತಡ ಸೃಷ್ಟಿಸಿ ಆತ್ಮಸ್ಥೈರ್ಯವನ್ನೇ ನಾಶ ಮಾಡಿದ್ದು ದುರದೃಷ್ಟಕರ. ಜೊತೆಗೆ ಮಗನ ಆರೋಗ್ಯ ಸರಿಮಾಡಲು ದುಡಿದಿದ್ದೆಲ್ಲವನ್ನೂ ಚಿಕಿತ್ಸೆಗೆ ಸುರಿದು ಹತಾಶ ಸ್ಥಿತಿ ತಲುಪುವಂತೆ ಆಗಿದ್ದೂ ಈ ಸಾಮೂಹಿಕ ಆತ್ಮಹತ್ಯೆಗೆ ಕಾರಣವಾಗಿರಬಹುದು.
 
ಈ ದಾರುಣ ಪ್ರಕರಣ, ಈ ನತದೃಷ್ಟರ ಕುರಿತಾಗಿ ಸರ್ಕಾರದ ಕಣ್ಣು ತೆರೆಸಬೇಕು. ‘ಎಂಡೊ ಸಂತ್ರಸ್ತರಿಗೆ ಸರ್ಕಾರ ಮಾಸಾಶನ ನೀಡುತ್ತಿದೆ. ಇನ್ನೂ ಹೆಚ್ಚಿನ ಸೌಕರ್ಯ ಒದಗಿಸಲು ಸರ್ಕಾರ ಸಿದ್ದ. ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ’ ಎಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುಖ್ಯಮಂತ್ರಿಯವರು ಪ್ರತಿಕ್ರಿಯಿಸಿದ್ದಾರೆ.  ಆದರೆ ಎಂಡೊ ಸಂತ್ರಸ್ತರಿಗೆ ನೆರವಾಗುವಲ್ಲಿ ವಿಳಂಬ ನೀತಿ ಅನುಸರಿಸಿದ್ದು ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಎಂಡೊ ವಿರೋಧಿ ಹೋರಾಟಗಾರರು ಹೇಳಿದ್ದಾರೆ. ಜೊತೆಗೆ  ಸಂತ್ರಸ್ತರ ಆರೈಕೆ ಮಾಡುವವರಿಲ್ಲದ ಸ್ಥಿತಿ ಇದೆ.
 
ಕೊಯಿಲದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪಿಸುವ ಚಿಂತನೆಯಷ್ಟೇ ನಡೆದಿದೆ. ಕೊಯಿಲದಲ್ಲಿರುವ ಮತ್ತು ಕೊಕ್ಕಡದಲ್ಲಿರುವ ಪಾಲನಾ ಕೇಂದ್ರಗಳಲ್ಲಿ  ಆರೈಕೆ ಮಾಡಲು ಬೇಕಾದಷ್ಟು  ಅಗತ್ಯ ಸಿಬ್ಬಂದಿ ಇಲ್ಲ  ಎಂಬಂತಹ ಸಂತ್ರಸ್ತರ ಪಾಲಕರ ಅಳಲನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರದ ಧನಸಹಾಯದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ (ಎಸ್‌ಕೆಡಿಆರ್‌ಡಿಪಿ) ಇವು ಕಾರ್ಯ ನಿರ್ವಹಿಸುತ್ತಿವೆ. ಪಾಲನಾ ಕೇಂದ್ರಗಳನ್ನು ಶೀಘ್ರ ಶಾಶ್ವತ ಪುನರ್ವಸತಿ ಕೇಂದ್ರಗಳಾಗಿ ರೂಪಿಸಬೇಕು, ಇಲ್ಲಿ ಸವಲತ್ತುಗಳು ಎಲ್ಲಾ ಸಂತ್ರಸ್ತರನ್ನೂ ತಲುಪಿಲ್ಲ ಎಂಬ ವಿಚಾರಕ್ಕೆ ಆದ್ಯತೆ ನೀಡಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಆರೈಕೆದಾರರ ಮಾನಸಿಕ ಒತ್ತಡ ಹಗುರ ಮಾಡುವ ಕಾರ್ಯಕ್ರಮವನ್ನು ಸರ್ಕಾರ ಮತ್ತು ಸಂಘ ಸಂಸ್ಥೆಗಳು ರೂಪಿಸಬೇಕು. 
 
ಸುಮಾರು ಮೂರು ದಶಕಗಳಿಂದ ಭಾರತೀಯ ಕೃಷಿಲೋಕದಲ್ಲಿ ಎಂಡೊಸಲ್ಫಾನ್ ಬಳಕೆ ಇದೆ. ಆದರೆ ಅದರ ಅಪಾಯಕಾರಿ ಪರಿಣಾಮಗಳು ಕಳೆದ ಒಂದೂವರೆ ದಶಕದಿಂದಷ್ಟೇ ಗೋಚರವಾಗತೊಡಗಿದವು. ಈ ಕೀಟನಾಶಕದಿಂದಾದ ಪರಿಣಾಮಗಳು ಭಾರತ ಹಾಗೂ ವಿವಿಧ ರಾಷ್ಟ್ರಗಳ ಬಳಕೆದಾರರ ಘೋರ ಅನುಭವಗಳಿಂದ ಆಗ ಬೆಳಕಿಗೆ ಬಂತು.  ರಾಜ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಂದಿ ಎಂಡೊ ಸಂತ್ರಸ್ತರಿದ್ದಾರೆ. ಅದರಲ್ಲೂ  ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಮೂರು ಸಾವಿರಕ್ಕೂ ಅಧಿಕ ಸಂತ್ರಸ್ತರಿದ್ದಾರೆ. ತೊಂದರೆ ಕಾಣಿಸಿಕೊಂಡ 10 ವರ್ಷಗಳ ನಂತರ ಅಂದರೆ 2010ರಿಂದಷ್ಟೇ ಈ ಸಂತ್ರಸ್ತರಿಗೆ ಪರಿಹಾರ ಕಾರ್ಯಕ್ರಮಗಳ  ಚರ್ಚೆಗಳು ನಡೆಯಲಾರಂಭಿಸಿದವು.  
 
ಈ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್ ಸಹ  ವಹಿಸಿದ ಕಾಳಜಿ, ಪರಿಹಾರ ಕಾರ್ಯಾಚರಣೆಗೆ ಚುರುಕು ಮುಟ್ಟಿಸಿತ್ತು. ಈ ಸಮಸ್ಯೆ ಬಗ್ಗೆ ಆಡಳಿತಯಂತ್ರ ಹೆಚ್ಚು ಸಂವೇದನಾಶೀಲವಾಗುವುದು ಅಗತ್ಯ. ಗೇರು ಹೂಗಳನ್ನು ಬಾಧಿಸುವ ಕೀಟಗಳ ನಾಶಕ್ಕೆ ಹೆಲಿಕಾಪ್ಟರ್ ಮೂಲಕ ಸಿಂಪಡಿಸುವ ಎಂಡೊಸಲ್ಫಾನ್‌ನಿಂದಾಗಿ ಸುತ್ತಮುತ್ತಲ ವಾತಾವರಣವೇ ಕಲುಷಿತವಾಗಿರುವುದು ಆತಂಕಕಾರಿಯಾದುದು. ಇದು ನಿಧಾನವಿಷವಾಗಿ ಪೀಳಿಗೆಗಳಿಗೆ ವರ್ಗಾವಣೆಗೊಂಡು ಹುಟ್ಟುವ ಮಕ್ಕಳಲ್ಲಿ ವೈಕಲ್ಯಗಳು ಕಾಣಿಸಿಕೊಳ್ಳುತ್ತಿರುವುದು ಶೋಚನೀಯ. ಇದಕ್ಕೆ ಎಂಡೊಸಲ್ಫಾನ್ ಕಾರಣ ಎಂಬುದನ್ನು ಅನೇಕ ಸಮೀಕ್ಷೆಗಳು ದೃಢಪಡಿಸಿವೆ. ಹೀಗಾಗಿ ಕೀಟನಾಶಕ ಕಂಪೆನಿಗಳ ಹಿತಾಸಕ್ತಿ ಇಲ್ಲಿ ಮುಖ್ಯವಾಗಬಾರದು. ಜನರ  ನೋವುಗಳಿಗೆ ಸರ್ಕಾರ ಸ್ಪಂದಿಸಬೇಕು.  ಕೃಷಿಯಲ್ಲಿ ಡಿಡಿಟಿ ಬಳಕೆಯನ್ನು ಭಾರತ ನಿಲ್ಲಿಸಿದೆ.  ಹಾಗೆಯೇ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಎಂಡೊಸಲ್ಫಾನ್ ನಿಷೇಧಕ್ಕೂ  ಇಚ್ಛಾಶಕ್ತಿ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT