ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪಡೆದ ರೈತರೇ ಪುಣ್ಯವಂತರು

Last Updated 9 ಜನವರಿ 2017, 4:58 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನಾದ್ಯಂತ ಕಳೆದ ಒಂದು ತಿಂಗಳಿಂದ ನಿರಂತರವಾಗಿ ನೀರಿಗಾಗಿ ಕೊಳವೆಬಾವಿಗಳನ್ನು ಕೊರೆಸುವ ಕಾರ್ಯ ಎಡೆಬಿಡದೆ ನಡೆಯುತ್ತಿದೆ. ಕೊಳವೆಬಾವಿಗಳಲ್ಲಿ ನೀರು ಪಡೆದವರೇ ಪುಣ್ಯವಂತರು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಸಂತೇಬೆನ್ನೂರು 1 ಮತ್ತು 2ನೇ ಹೋಬಳಿ, ಕಸಬಾ ಹೋಬಳಿಗಳಲ್ಲಿ ತೀವ್ರವಾದ ನೀರಿನ ಸಮಸ್ಯೆ ಉದ್ಭವಿಸಿದೆ. ಅಡಿಕೆ ತೋಟ ರಕ್ಷಿಸಿಕೊಳ್ಳಲು ಇದುವರೆಗೆ ಉಳಿಸಿದ್ದ ಹಣವನ್ನು ಕೊಳವೆಬಾವಿ ಕೊರೆಸುವುದಕ್ಕೆ ಖರ್ಚು ಮಾಡಿದ್ದಾರೆ. ಉಬ್ರಾಣಿ ಹೋಬಳಿಯಲ್ಲಿ ಭದ್ರಾ ನದಿಯ ನೀರನ್ನು ಈ ಭಾಗದ ಕೆರೆಗಳಿಗೆ ಪ್ರತಿ ವರ್ಷ ತುಂಬಿಸುತ್ತಿರುವುದರಿಂದ ಈ ಭಾಗದ ಅಡಿಕೆ ಬೆಳೆಗಾರರಿಗೆ ಅಷ್ಟೊಂದು ನೀರಿನ ಸಮಸ್ಯೆ ಉಂಟಾಗಿರುವುದಿಲ್ಲ. ಕಳೆದ ಎರಡು ವರ್ಷಗಳಿಂದ ಮಳೆ ಕೊರತೆಯಿಂದ ಸಂತೇಬೆನ್ನೂರು ಹಾಗೂ ಕಸಬಾ ಹೋಬಳಿಗಳ ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಉಂಟಾಗಿದೆ. ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ. 800ರಿಂದ 1,000 ಅಡಿ ಆಳಕ್ಕೆ ಕೊರೆಸಿದರೂ ಬಹುತೇಕ ಕಡೆ ಕೊಳವೆಬಾವಿಗಳಲ್ಲಿ ಒಂದು ಹನಿ ನೀರೂ ಲಭ್ಯವಾಗದೆ ಬರೀ ದೂಳು ಕಾಣಿಸಿಕೊಂಡಿದೆ.

ಕಾಕನೂರು, ದೇವರಹಳ್ಳಿ, ಬಿಲ್ಲಹಳ್ಳಿ, ಗುಳ್ಳೇಹಳ್ಳಿ, ಕೊಂಡದಹಳ್ಳಿ, ದೊಡ್ಡೇರಿಕಟ್ಟೆ, ಅರಳಿಕಟ್ಟೆ, ಹೊದಿಗೆರೆ, ಕೊರಟಿಕೆರೆ, ಶೆಟ್ಟಿಹಳ್ಳಿ, ಮಾದಾಪುರ, ದೋಣಿಹಳ್ಳಿ, ಮುದಿಗೆರೆ, ಚಿಕ್ಕೂಲಿಕೆರೆ, ದೊಡ್ಡಬ್ಬಿಗೆರೆ, ಸಿದ್ದನಮಠ, ಶಿವಕುಳೇನೂರು, ಕುಳೇನೂರು, ಚಿಕ್ಕಬೆನ್ನೂರು, ಚನ್ನಾಪುರ, ನುಗ್ಗಿಹಳ್ಳಿ, ನೀತಿಗೆರೆ, ಹಿರೇಗಂಗೂರು, ಚಿಕ್ಕಗಂಗೂರು, ಲಕ್ಷ್ಮೀಸಾಗರ, ಹೊನ್ನೇಮರದಹಳ್ಳಿ, ಹೊದಿಗೆರೆ, ಯರಗಟ್ಟಹಳ್ಳಿ, ನಾರಶೆಟ್ಟಿಹಳ್ಳಿ, ಅಜ್ಜಿಹಳ್ಳಿ, ಸುಣಿಗೆರೆ ಹಟ್ಟಿ, ಬುಳುಸಾಗರ, ಮಾದಾಪುರ, ಹಿರೇಉಡ ತಾಂಡ, ಅಣಪುರ, ನಲ್ಲೂರು, ಕಗತೂರು, ಅಕಳಕಟ್ಟೆ, ಬುಸ್ಸೇನಹಳ್ಳಿ ಮುಂತಾದ ಗ್ರಾಮಗಳಲ್ಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಹೊಸದಾಗಿ 800ರಿಂದ 1,000 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ ಒಂದು ಹನಿ ನೀರು ಬೀಳುತ್ತಿಲ್ಲ. ಈ ಗ್ರಾಮಗಳಲ್ಲಿ ಅಡಿಕೆ ತೋಟ ಉಳಿಸಿಕೊಳ್ಳಲು ಪ್ರತಿಯೊಬ್ಬ ರೈತ ತೋಟದಲ್ಲಿ ಕನಿಷ್ಠ ಆರೇಳು ಕೊಳವೆಬಾವಿ ಕೊರೆಯಿಸಿದ್ದಾರೆ.

ತಾಲ್ಲೂಕಿನ ಈ ಭಾಗದ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿಂದ ಕೊಳವೆಬಾವಿ ಕೊರೆಸಲು ರೈತರು ಸುಮಾರು ₹ 40 ಕೋಟಿಯಷ್ಟು ವೆಚ್ಚ ಮಾಡಿರಬಹುದು. ಈಗಾಗಲೇ ಸಾವಿರಕ್ಕೂ ಹೆಚ್ಚು ಕೊಳವೆಬಾವಿಗಳನ್ನು ರೈತರು ಕೊರೆಸಿದ್ದು, ಇನ್ನೂ ಕೊರೆಸುತ್ತಲೇ  ಇದ್ದಾರೆ. ಬೆರಳೆಣಿಕೆ ಯಷ್ಟು ಕೊಳವೆಬಾವಿಗಳಲ್ಲಿ ಮಾತ್ರ ನೀರು ಬಿದ್ದಿದೆ. ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

‘ಎಲ್ಲ ದೇವರ ಮೇಲೆ ಭಾರ ಹಾಕಿ ಕೊಳವೆಬಾವಿ ಕೊರೆಸುತ್ತಿದ್ದೇವೆ. ಮುಂದಿನ ಮುಂಗಾರು ಆರಂಭ ಗೊಳ್ಳುವವರೆಗೆ ತೋಟ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ತೋಟದಲ್ಲಿ ಐದು ಕೊಳವೆಬಾವಿ ಕೊರೆಸಿದರೂ ನೀರು ಬಿದ್ದಿಲ್ಲ. ₹ 3 ಲಕ್ಷ ಖರ್ಚು ಮಾಡಿದರೂ ನೀರು ಸಿಕ್ಕಿಲ್ಲ. ತೋಟ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದೇವೆ’ ಎಂದು ಕಾಕನೂರು ಗ್ರಾಮದ ರೈತರಾದ ಮಂಜುನಾಥ್ ಹಾಗೂ ರೇವಣಸಿದ್ದಪ್ಪ ಅಳಲು ತೋಡಿಕೊಂಡರು.
– ಎಚ್‌.ವಿ. ನಟರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT