ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ವರ್ಗಾವಣೆ ವಿಧಾನಗಳಿಗೆ ಮರುಜೀವ!

ಚುರುಕುಗೊಂಡ ಎನ್‌ಇಎಫ್‌ಟಿ, ಆರ್‌ಟಿಜಿಎಸ್, ಐಎಂಬಿಎಸ್‌ ವಿಧಾನಗಳು
Last Updated 9 ಜನವರಿ 2017, 5:21 IST
ಅಕ್ಷರ ಗಾತ್ರ

ಚಿತ್ರದುರ್ಗ: ನೋಟು ರದ್ದತಿ ಮತ್ತು ವಹಿವಾಟು ಮಿತಿ ನಿಗದಿಪಡಿಸಿದ ನಂತರ ಬ್ಯಾಂಕ್‌ಗಳಲ್ಲಿ ದಶಕಗಳಿಂದ ಚಾಲ್ತಿಯಲ್ಲಿದ್ದರೂ ಗ್ರಾಹಕರಿಂದ ದೂರ ಉಳಿದಿದ್ದ ಹಣ ವರ್ಗಾವಣೆ ವಿಧಾನಗಳಿಗೆ ಮರುಜೀವ ಬಂದಿದೆ !

ಬ್ಯಾಂಕ್‌ನಲ್ಲಿ ಹಣ ವರ್ಗಾಯಿಸಲು ಜಾರಿಯಲ್ಲಿದ್ದ ಎನ್ಇಎಫ್‌ಟಿ, ಆರ್‌ಟಿಜಿಎಸ್ (Real Time Gross Settlement), ಐಎಂ ಬಿಎಸ್ (Internet and Mobile Banking Service), ಡೆಬಿಟ್ ಕಾರ್ಡ್ ಸ್ವೈಪಿಂಗ್, ಚೆಕ್, ಡಿಡಿ, ಎಂಟಿ...

ಹೀಗೆ ಹಲವು ವಿಧಾನಗಳನ್ನು ಗ್ರಾಹಕರು ಬಳಕೆ ಮಾಡ ಲಾರಂಭಿ ಸಿದ್ದಾರೆ. ಬ್ಯಾಂಕ್ ಅಧಿಕಾರಿಗಳು ರಿಸರ್ವ್ ಬ್ಯಾಂಕ್ ನಿರ್ದೇಶನ ಹಾಗೂ ಕೇಂದ್ರ ಸರ್ಕಾರದ ಆದೇಶದಂತೆ ನಗದು ರಹಿತ ವಹಿವಾಟು ಪ್ರಚಾರಕ್ಕಾಗಿ ಮುತುವರ್ಜಿ ವಹಿಸಿ ಈ ವಿಧಾನಗಳ ಬಳಕೆಗೆ ಉತ್ತೇಜಿಸುತ್ತಿದ್ದಾರೆ. ಪರಿಣಾಮ ಬ್ಯಾಂಕ್‌ಗಳಲ್ಲಿ ನಗದು ಪಾವತಿಸುವ ಯಂತ್ರಗಳು ಬಂದಿವೆ. ಖಾತೆದಾರರು ತಮ್ಮ ತಮ್ಮ ಖಾತೆಗಳ ಬ್ಯಾಲೆನ್ಸ್ ಹಣ ಪರಿಶೀಲಿಸಲು, ಪಾಸ್ ಪುಸ್ತಕ ಮುದ್ರಣ ಮಾಡಿಕೊಳ್ಳುವಂತಹ ‘ಕಿಯೋಸ್ಕ್‌’ ಯಂತ್ರಗಳು ಬ್ಯಾಂಕ್ ಆವರಣದಲ್ಲಿ ಸ್ಥಾನ ಪಡೆದಿವೆ.

ಎನ್ ಇ ಎಫ್ ಟಿ ವಹಿವಾಟು ಹೆಚ್ಚಳ: ಹಣ ವರ್ಗಾವಣೆಗೆ ಸುಲಭವಿಧಾನ ಎನ್ನಿಸಿದ್ದ ನೆಫ್ಟ್ (NEFT -National Electronic Fund Transfer) ಅನ್ನು ಮೊದಲು ಸಣ್ಣ ಪುಟ್ಟ ವ್ಯಾಪಾರಸ್ಥರು ಹಾಗೂ ಸುಶಿಕ್ಷಿತ ಹಾಗೂ ವೇತನ ಪಡೆಯುವ ಸರ್ಕಾರಿ ನೌಕರರು ಬಳಸುತ್ತಿದ್ದರು. ನೋಟು ರದ್ದತಿ ಮತ್ತು ಹಣ ವಹಿವಾಟಿನ ಮೇಲಿನ ನಿರ್ಬಂಧದ ನಂತರ ಗೃಹಿಣಿಯರು, ಪೆಟ್ಟಿ ಶಾಪ್ ಮಾಲೀಕರು ಸೇರಿದಂತೆ ಸಾಮಾನ್ಯ ಗ್ರಾಹಕ ವರ್ಗವೂ ‘ನೆಫ್ಟ್’ ಬಳಕೆ ಮಾಡು ತ್ತಿದೆ. ನ.8ಕ್ಕೆ ಮುನ್ನ ಎನ್‌ಇಎಫ್‌ಟಿ ಬಳಸುತ್ತಿದ್ದ ಗ್ರಾಹಕರ ಸಂಖ್ಯೆ ಈಗ ಮೂರು ಪಟ್ಟು ಆಗಿದೆ.

‘ಅಕ್ಟೋಬರ್ ತಿಂಗಳಿನ ವಹಿವಾಟಿನ ಪ್ರಕಾರ ಒಂದು ದಿನಕ್ಕೆ ಸರಾಸರಿ ನೆಫ್ಟ್‌ ಮೂಲಕ 27 ಮಂದಿ ಹಣ ವರ್ಗಾವಣೆ ಮಾಡಿದ್ದಾರೆ. ನೋಟು ರದ್ದತಿ ನಂತರ  ನಿತ್ಯ ಸರಾಸರಿ 70ರಿಂದ 80ರಷ್ಟು ಮಂದಿ ನೆಫ್ಟ್‌ ಬಳಸಿದ್ದಾರೆ. ತಿಂಗಳ ಮೊದಲ 10 ದಿನಗಳಲ್ಲಿ ನೆಫ್ಟ್‌ ವ್ಯವಹಾರ 100ರ ಗಡಿ ದಾಟಿರುವ ಉದಾಹರಣೆಗಳಿವೆ’ ಎನ್ನುತ್ತಾರೆ ನಗರದ ಕಾರ್ಪೊರೇಷನ್ ಬ್ಯಾಂಕ್ ವ್ಯವಸ್ಥಾಪಕ ಆನಂದಮೂರ್ತಿ ಮತ್ತು ಸಿಬ್ಬಂದಿ ವಿರೇಶ್.

ಕರ್ನಾಟಕ ಬ್ಯಾಂಕ್‌ನಲ್ಲಿ  ಇತರೆ ಬ್ಯಾಂಕ್‌ಗಳಿಗಿಂತ ಹೆಚ್ಚು ನೆಫ್ಟ್‌ ಮತ್ತು ಆರ್‌ಟಿಜಿಎಸ್ ಬಳಕೆಯಾಗುತ್ತಿದೆಯಂತೆ. ಬ್ಯಾಂಕ್‌ ಸಿಬ್ಬಂದಿ ನೀಡಿದ ಮಾಹಿತಿ ಪ್ರಕಾರ ‘ದಿನವೊಂದಕ್ಕೆ ಕನಿಷ್ಠ 80ಕ್ಕೂ ಹೆಚ್ಚು ಮಂದಿ ನೆಫ್ಟ್‌ ಮೂಲಕ ವಹಿವಾಟು ಮಾಡುತ್ತಿದ್ದಾರೆ’. ಈ ಪ್ರಮಾಣ  ಕೆನರಾ ಬ್ಯಾಂಕ್, ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಸೇರಿದಂತೆ ಖಾಸಗಿ ಬ್ಯಾಂಕ್‌ಗಳಲ್ಲೂ ನಡೆಯುತ್ತಿದೆ.

₹ 2 ಲಕ್ಷದವರೆಗೆ ವಹಿವಾಟು ಸುಲಭ : ಪ್ರತಿ ಗ್ರಾಹಕರು ಒಂದು ದಿನಕ್ಕೆ ₹ 2 ಲಕ್ಷದವರೆಗೆ ಎನ್‌ಇಎಫ್‌ಟಿ ಮೂಲಕ ಹಣ ವರ್ಗಾಯಿಸಲು ಅವಕಾಶವಿದೆ. ಅದಕ್ಕಿಂತ ಹೆಚ್ಚಾದರೆ ಆರ್‌ಟಿಜಿಎಸ್ ವಿಧಾನ ಬಳಸಬೇಕು.

ನೆಫ್ಟ್ ಬಳಸುವುದರಿಂದ, ಹಣದ ವಹಿವಾಟಿಗೆ ಲೆಕ್ಕ ಸಿಗುವ ಜತೆಗೆ, ಹಣ ಒಂದೆರಡು ಗಂಟೆಯಲ್ಲಿ ವರ್ಗಾವಣೆ ಯಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು, ಈ ವಿಧಾನಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತಿದ್ದಾರೆ ಎನ್ನುವುದು ಬ್ಯಾಂಕ್ ಅಧಿಕಾರಿಗಳ ಸಾಮಾನ್ಯ ಅಭಿಪ್ರಾಯವಾಗಿದೆ. ಹಿಂದೆ ನೆಫ್ಟ್‌ ಅರ್ಜಿ ಮಾಡುವುದು ತುಸು ಕಿರಿಕಿರಿ ಯಾಗು ತ್ತಿತ್ತು. ಈಗ ಕೆಲವು ಬ್ಯಾಂಕ್‌ಗಳಲ್ಲಿ ನಿಗದಿತ ನಮೂನೆಯ ಅರ್ಜಿಯನ್ನು ಒಂದಷ್ಟು ಸರಳ ಗೊಳಿಸಿದ್ದಾರೆ. ಇನ್ನೂ ಸರಳಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.

ದಿನಕ್ಕೆ ನಾಲ್ಕೈದು ತಂಡಗಳಲ್ಲಿ ನೆಫ್ಟ್‌ ಮೂಲಕ ಹಣ ವರ್ಗಾವಣೆಯಾಗುತ್ತದೆ. ಬ್ಯಾಂಕ್ ಅವಧಿ ಮುಗಿದರೂ ಸಂಜೆ 7 ಗಂಟೆಯವರೆಗೂ ನೆಫ್ಟ್ ಕಾರ್ಯನಿರ್ವ­ಹಿಸುತ್ತಿ­ರು­ತ್ತದೆ. ನೆಫ್ಟ್ ಮೂಲಕ ಹಣ ವರ್ಗಾಯಿಸುವ ಗ್ರಾಹಕರು, ಹಣ ವರ್ಗಾವಣೆ ಮಾಡುವ ವ್ಯಕ್ತಿಯ ಸಂಪೂರ್ಣ ಬ್ಯಾಂಕ್‌ ಖಾತೆ ಸಂಖ್ಯೆ (13 ಡಿಜಿಟ್ ಅಥವಾ ಪೂರ್ಣ ಸಂಖ್ಯೆ), ಐಎಫ್‌ಎಸ್‌ಸಿ ಕೋಡ್, ಬ್ಯಾಂಕ್ ಹೆಸರು, ಶಾಖೆಯ ಹೆಸರು, ಶಾಖೆಯ ಕೋಡ್‌ ಇಟ್ಟುಕೊಂಡಿದ್ದರೆ ಸಾಕು. ಎರಡು ಮೂರು ಗಂಟೆಯಲ್ಲಿ ಹಣ ವರ್ಗಾವಣೆ ಮಾಡಬಹುದು. ಬಹುತೇಕ ಬ್ಯಾಂಕ್‌ಗಳಲ್ಲಿ ಇದೇ ಪ್ರಕ್ರಿಯೆ ಇದೆ. ಸದ್ಯಕ್ಕೆ 2 ಲಕ್ಷದವರೆಗೆ ₹ 3,₹ 6, ₹ 20 ರೂಪಾಯಿ ಕಮಿಷನ್‌ ತೆಗೆದು ಕೊಳ್ಳ ಲಾಗುತ್ತಿದೆ. ಇದನ್ನು ಮತ್ತಷ್ಟು ಸರಳ ಗೊಳಿಸಬೇಕೆಂಬ ಬೇಡಿಕೆಯೂ ಇದೆ.

ಒಟ್ಟಾರೆ ನಗದು ರಹಿತ ವಹಿವಾಟಿನಿಂದಾಗಿ ಬ್ಯಾಂಕ್‌ಗಳಲ್ಲಿದ್ದ ಹಣ ವರ್ಗಾವಣೆ ಸೌಲಭ್ಯಗಳಿಗೆ ಮರು ಜೀವ ಬಂದಂತಾಗಿದೆ.
ಒಂದು ಕಡೆಯಿಂದ ಗ್ರಾಹಕರು ಬಳಸಲು ಆರಂಭಿಸಿದ್ದರೆ, ಇನ್ನೊಂದು ಕಡೆಯಿಂದ ಬ್ಯಾಂಕ್‌ ಅಧಿಕಾರಿಗಳು ಹಣ ವರ್ಗಾವಣೆ  ವಿಧಾನಗಳನ್ನು ಉತ್ತೇಜಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT