ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಒಡಲಿನ ಬಟ್ಟಲು

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

ಸಹಸ್ರಾರು ವಿದೇಶಿ ಹಕ್ಕಿಗಳಿಗೆ ಆಶ್ರಯತಾಣವಾಗಿದ್ದ ಗದುಗಿನಿಂದ ಮಾಗಡಿ ಕೆರೆ ಈಗ ಮೌನ ಧರಿಸಿದೆ. ಆರು ದಶಕಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಕೆರೆ ಸಂಪೂರ್ಣ ಒಣಗಿದ್ದು, ಈ ವಿದೇಶಿ ಸುಂದರಿಯರು ಪರಿತಪಿಸುವಂತಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಅಕ್ಟೋಬರ್‌ನಿಂದಲೇ ಹಕ್ಕಿಗಳು ಇಲ್ಲಿ ವಲಸೆ ಬಂದಿವೆ. ಆದರೆ ಒಣಗಿ ನಿಂತ ಕೆರೆ ನೋಡಿ ಬೇರೆ ನೆಲೆ ಕಂಡುಕೊಳ್ಳತೊಡಗಿವೆ. ಸಾವಿರಾರು ಮೈಲುಗಳು ದೂರ ಕ್ರಮಿಸಿ ಹಿಮಾಲಯ ಪರ್ವತ, ಸಪ್ತ ಸಾಗರದಾಟಿ ಬಂದ ಬಾರ್‌ಹೆಡೆಡ್ ಗೂಸ್ (ಪಟ್ಟತಲೆ ಹೆಬ್ಬಾತು) ಪ್ರತಿವರ್ಷ ಬಂದರೆ, ಸಿಳ್ಳೆ ಬಾತು, ಚಲುಕ ಬಾತು, ವರಟೆ ಬಾತು, ಸೂಜಿಬಾಲದ ಬಾತುಗಳು ಟಿಬೆಟ್‌ನಿಂದ ಬರುತ್ತವೆ.

ಅದರೆ ಈ ವರ್ಷ ಮುಂಗಾರು ಹಿಂಗಾರು ಮಳೆಗಳು ಕೈಕೊಟ್ಟಿದರಿಂದ ಇವುಗಳು ಬೇರೆ ಕಡೆ ವಲಸೆ ಹೋಗಿದ್ದು, ಪಕ್ಷಿ ಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ. ಕೆರೆಯ ಮೇಲೆ ವಿಶೇಷ ಅಕ್ಕರೆ ಇರುವ ಪಕ್ಷಿಗಳಿಗೆ ಇಲ್ಲಿನ ಶೀತೋಷ್ಣ ವಾತಾವರಣ ಎಂದರೆ ಭಾರಿ ಅಚ್ಚುಮೆಚ್ಚು. ಆಹಾರ, ವಂಶಾಭಿವೃದ್ಧಿಪಡಿಸಲು ಅನುಕೂಲಕರವಾದ ಜಾಗವಿರುವುದರಿಂದ ಅವು ಇಲ್ಲಿಗೆ ಬರುತ್ತವೆ. ಅಕ್ಟೋಬರ್‌ನಲ್ಲಿ ಬರುವ ಹಕ್ಕಿಗಳು ವಂಶಾಭಿವೃದ್ಧಿ ಮಾಡಿಕೊಂಡು ಮಾರ್ಚ್‌ವರೆಗೆ ಇರುತ್ತಿದ್ದವು. 

‘ಸುಮಾರು 8 ವರ್ಷದ ಹುಡುಗನಿದ್ದಾಗ ಮಾತ್ರ ಕೆರೆ ಸಂರ್ಪೂಣ ಒಣಗಿತ್ತು. ನಾನು ನನ್ನ ಮಿತ್ರರು ಒಟ್ಟಿಗೆ ಸೇರಿ ಆಟವಾಡುತ್ತಿದ್ದೆವು’ ಎಂದು 75 ವರ್ಷದ ರಾಮಣ್ಣಗೌಡ ದೇವನಗೌಡ ಪಾಟೀಲ ಹೇಳಿದರು. ‘134 ಎಕರೆ ವಿಸ್ತಾರದ ಕೆರೆ ಹಲವು ಜಲಚರಗಳಿಗೆ ಆಶ್ರಯತಾಣವಾಗಿದೆ. ಆದರೆ 62 ವರ್ಷಗಳ ನಂತರ ಈ ಕೆರೆ ಈ ಪರಿ ಒಣಗಿದ್ದು ನಮಗೆ ಬೇಸರ ತಂದಿದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಪಕ್ಷಿ ವೀಕ್ಷಕ ಸೋಮಣ್ಣ ಶಿಪ್ಪ ಪಶುಪತಿಹಾಳ.

‘ನಮ್ಮೂರಿಗೂ ಈ ಹಕ್ಕಿಗಳಿಂದಲೇ ಹೆಸರು ಬಂದಿದೆ. ಇಲ್ಲವಾದರೆ ಮಾಗಡಿ ಕೆರೆ ಎಂದರೆ ಯಾರಿಗೆ ತಾನೆ ಗೊತ್ತಿರುತ್ತಿತ್ತು’ ಎಂದು ನಾಗಪ್ಪ ಕಮ್ಮಟ್ಟಿ ಉಪ್ಪಾರ ಬೇಸರಿಸಿದರೆ, ‘ಈ ರೀತಿ ನೀರಿನ ಕೊರತೆ ಎದುರಾದರೆ ಮುಂದೆ ಹಕ್ಕಿಗಳು ನಮ್ಮೂರಿಗೆ ಬರುವುದೇ ಇಲ್ಲ’ ಎಂದು ಊರಿನ ಹಿರಿಯ ದೇವಪ್ಪ ನಿಂಗಪ್ಪ ಕಮ್ಮಾರ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಕೆರೆ ಅಭಿವೃದ್ಧಿಗೆ ಮುಂದಾಗಿ ಕೆರೆಯ ಹೂಳು ತೆಗೆದರೆ ಬೇಸಿಗೆಯಲ್ಲೂ ನೀರಿನ ಅಭಾವವಾಗದು ಎಂದು ಅರಣ್ಯ ಸಂರಕ್ಷಣಾಧಿಕಾರಿ ವೀರೇಶ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT