ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಪತ್ರ ಹೊರಡಿಸಲು ಆಗ್ರಹ

ನೋಟು ಅಪಮೌಲ್ಯ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ
Last Updated 10 ಜನವರಿ 2017, 8:58 IST
ಅಕ್ಷರ ಗಾತ್ರ
ಕೊಪ್ಪಳ: ಗರಿಷ್ಠ ಮುಖಬೆಲೆಯ ನೋಟುಗಳ ಅಪಮೌಲ್ಯದ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ ಸೋಮವಾರ ನಗರದಲ್ಲಿ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಯಿತು. 
 
ನೋಟು ಅಪಮೌಲ್ಯದ ಹಿಂದಿನ ಸತ್ಯ ಬಹಿರಂಗಪಡಿಸಬೇಕು. 2016ರ ನ. 8ರಿಂದ ಇಂದಿನವರೆಗೆ ಎಷ್ಟು ಕಪ್ಪುಹಣವನ್ನು ಪತ್ತೆಹಚ್ಚಲಾಗಿದೆ? ಆರ್ಥಿಕ ನಷ್ಟದ ಪ್ರಮಾಣ, ಉದ್ಯೋಗ ಮತ್ತು ಜೀವನಾಧಾರ, ಪ್ರಾಣ ನಷ್ಟವಾದ ಬಗ್ಗೆ ವಿವರ ನೀಡಬೇಕು ಎಂದು ಪ್ರತಿಭಟನಾನಿರತ ಕಾರ್ಯಕರ್ತರು ಒತ್ತಾಯಿಸಿದರು. 
 
ಜೀವಕಳೆದುಕೊಂಡವರಿಗೆ ಸರ್ಕಾರ ಪರಿಹಾರ ನೀಡಬೇಕು. ನೋಟುಗಳ ಅಪಮೌಲ್ಯ ಜಾರಿಗೊಳಿಸುವ ಮೊದಲು ಯಾವ ಸಿದ್ಧತೆ, ಸಮಾಲೋಚನೆ ನಡೆಸಲಾಗಿತ್ತು ಎಂದು ಪ್ರಶ್ನಿಸಿದ ಕಾರ್ಯಕರ್ತರು ನ. 8ರ ಹಿಂದಿನ 6 ತಿಂಗಳಲ್ಲಿ ಹಣಕಾಸು ಸಂಸ್ಥೆಗಳಲ್ಲಿ ₹ 25 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವವರ ಹೆಸರು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.
 
ಹಣ ಹಿಂದಕ್ಕೆ ಪಡೆಯಲು ಹಾಕಿರುವ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಬೇಕು. ನಿರ್ಬಂಧ ಹಾಕಿದ ದಿನದಿಂದ ಎಲ್ಲ ಠೇವಣಿದಾರರಿಗೆ ಶೇ 18 ವಿಶೇಷ ಬಡ್ಡಿ ನೀಡಬೇಕು. ಡಿಜಿಟಲ್‌ ವ್ಯವಹಾರಗಳ ಮೇಲೆ ವಿಧಿಸಲಾಗಿರುವ ಎಲ್ಲ ಶುಲ್ಕಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. 
 
ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ಆಹಾರ ಧಾನ್ಯಗಳ ಬೆಲೆಯನ್ನು ಅರ್ಧದಷ್ಟು ಕಡಿಮೆಗೊಳಿಸಬೇಕು. ಎಲ್ಲ ಹಿಂಗಾರು ಬೆಳೆಗಳ ಉತ್ಪನ್ನಗಳಿಗೆ ಶೇ 20ರಷ್ಟು ಬೋನಸ್‌  ಹೆಚ್ಚುವರಿಯಾಗಿ ನೀಡಬೇಕು. ನೋಟು ಅಪಮೌಲ್ಯದಿಂದ ತೊಂದರೆ ಅನುಭವಿಸಿದ ಬಿಪಿಎಲ್‌ ಕುಟುಂಬದ ಪ್ರತಿ ಮಹಿಳೆಯ ಖಾತೆಗೆ ₹ 20 ಸಾವಿರವನ್ನು ಪರಿಹಾರ ರೂಪದಲ್ಲಿ ವಿತರಿಸಬೇಕು. ಉದ್ಯೋಗ ಖಾತರಿಯ ಯೋಜನೆ ಅಡಿ ನೀಡಲಾಗುವ ಕೆಲಸದ ವೇತನವನ್ನು ಹೆಚ್ಚಿಸಬೇಕು. ಕೆಲಸ ಕಳೆದುಕೊಂಡವರನ್ನು ಗುರುತಿಸಲು ವಿಶೇಷ ಆಂದೋಲನ ರೂಪಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
 
ಸಣ್ಣ ವ್ಯಾಪಾರಿಗಳಿಗೆ ಶೇ 50ರಷ್ಟು ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆ ವಿನಾಯಿತಿ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. 
 
ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಬಿ.ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ವಕ್ತಾರ ಅಕ್ಬರ್‌ ಪಾಷಾ ಪಲ್ಟನ್‌ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT