ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಹಣ ಸದ್ಬಳಕೆಯಾದರೆ ಅಭಿವೃದ್ಧಿ

ಸರ್ಕಾರದ ಹಣ ಸದ್ಬಳಕೆಯಾದರೆ ಅಭಿವೃದ್ಧಿ
Last Updated 10 ಜನವರಿ 2017, 10:00 IST
ಅಕ್ಷರ ಗಾತ್ರ
ಬಸವಕಲ್ಯಾಣ: ‘ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದ ಸದ್ಬಳಕೆಯಾದರೆ ಎಲ್ಲೆಡೆ ಸಂಪೂರ್ಣ ಅಭಿವೃದ್ಧಿ ಕಾಣಬಹುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಹಿತಿ ತಂತ್ರಜ್ಞಾನ ಮತ್ತು ಉದ್ಯೋಗ ಸಮಿತಿ ರಾಜ್ಯ ಘಟಕದ ಸಂಚಾಲಕಿ ಕಾಂತಿಶೆಟ್ಟಿ ಹೇಳಿದರು.
 
ತಾಲ್ಲೂಕಿನ ಹುಲಸೂರನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸೋಮವಾರ ನಡೆದ ಕಲ್ಯಾಣ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಪ್ರಾದೇಶಿಕ ಅಸಮಾನತೆ ಗೋಷ್ಠಿಯಲ್ಲಿ ಅವರು ಮಾತನಾಡಿದರು.
 
‘ರಾಜ್ಯದಲ್ಲಿ ಕೆಲವೆಡೆ ಅಭಿವೃದ್ಧಿಯಲ್ಲಿ ತಾರತಮ್ಯ ಆಗಿದೆ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷವೂ ಕಾರಣವಾಗಿದೆ. ನಾಡಿನ ಸಮಗ್ರ ಅಭಿವೃದ್ಧಿ ಆಗಬೆಕು. ನಿರುದ್ಯೋಗಿಯಾದ ಕನ್ನಡಿಗರಿಗೆ ಉದ್ಯೋಗ ದೊರಕಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ಇದಕ್ಕಾಗಿ ಸರೋಜನಿ ಮಹಿಷಿ ಸಮಿತಿ ರಚಿಸಲಾಗಿತ್ತು. ಆ ವರದಿ ಜಾರಿ ಆಗುವುದು ಅತ್ಯಂತ ಅವಶ್ಯಕವಾಗಿದೆ’ ಎಂದರು.
 
‘ಕೈಗಾರಿಕೋದ್ಯಮಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಉದ್ಯಮಗಳನ್ನು ಬರೀ ಅನ್ಯರೆ ಸ್ಥಾಪಿಸುತ್ತಿದ್ದಾರೆ. ಕನ್ನಡಿಗರು ಇದಕ್ಕಾಗಿ ಮುಂದೆ ಬಂದರೆ ಸರ್ಕಾರ ಸಕಲ ಸೌಲಭ್ಯಗಳನ್ನು ನೀಡಬೇಕು. ಇದಕ್ಕಾಗಿ ವಿವಿಧ ಸಂಘಟನೆಯವರು ಪ್ರಯತ್ನಿಸಬೇಕಾಗಿದೆ’ ಎಂದರು.
 
ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಸಮಿತಿ ಸದಸ್ಯ ಡಾ.ರಝಾಕ್ ಉಸ್ತಾದ್ ಮಾತನಾಡಿ, ‘ಸಂವಿಧಾನದ 371(ಜೆ) ಕಲಂ ಅನುಷ್ಠಾನದಲ್ಲಿ ಅನೇಕ ಅಡೆತಡೆಗಳಿವೆ. ಇದನ್ನು ಸರಿಪಡಿಸಿ ಜನರಿಗೆ ಹೆಚ್ಚಿನ ಅನುಕೂಲ ಆಗುವಂತೆ ನೋಡಿಕೊಳ್ಳಬೇಕಾಗಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳೆಯಲು ಈ ಭಾಗದವರಿಗೆ ಸಹಕರಿಸುವ ಅಗತ್ಯವಿದೆ’ ಎಂದು ಹೇಳಿದರು.
 
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ವಿಭಾಗೀಯ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ ಮಾತನಾಡಿ, ‘ಈ ಭಾಗ ಹಿಂದುಳಿಯಲು ಇಲ್ಲಿನ ಜನಪ್ರತಿನಿಧಿಗಳೇ ಕಾರಣರಾಗಿದ್ದಾರೆ. ಇತ್ತೀಚಿಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಇಲ್ಲಿನ ಯಾವೊಬ್ಬ ಶಾಸಕ ಕೂಡ ಜನರ ಸಮಸ್ಯೆಗಳ ಬಗ್ಗೆ ದನಿ ಎತ್ತದಿರುವುದು ದುರ್ದೈವದ ಸಂಗತಿ’ ಎಂದು ವಿಷಾದಿಸಿದರು.
 
‘371(ಜೆ) ಜಾರಿಗಾಗಿ ಯಾವುದೇ ಹಾನಿ ಮಾಡದೆ ಶಾಂತಿಯುತವಾಗಿ ಹೋರಾಟ ನಡೆಸಲಾಯಿತು. ಆದರೆ, ಇದಕ್ಕಾಗಿ ಹೋರಾಡಿದವರೇ ಬೇರೆ. ಸನ್ಮಾನ ಮಾಡಿಸಿಕೊಂಡು ಮೆರೆಯುತ್ತಿರುವವರೇ ಬೇರೆಯಾಗಿದ್ದಾರೆ’ ಎಂದರು.
 
ಸಮ್ಮೇಳನಾಧ್ಯಕ್ಷ ಡಾ.ಚನ್ನಣ್ಣ ವಾಲಿಕಾರ, ಶಿವಾನಂದ ಸ್ವಾಮೀಜಿ, ಸಾಯಗಾಂವ ಶಿವಾನಂದ ದೇವರು, ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮ ಕಲ್ಮಠ, ರಾಜಶೇಖರ ಅಂಗಡಿ, ಸುರೇಶ ಚನ್ನಶೆಟ್ಟಿ, ಡಾ.ಬಸವರಾಜ ಬಲ್ಲೂರ, ಎಂ.ಎಸ್.ಮನೋಹರ, ರುದ್ರಮಣಿ ಮಠಪತಿ, ದೇವೀಂದ್ರ ಬರಗಾಲೆ , ಧನರಾಜ ರಾಜೋಳೆ ಉಪಸ್ಥಿತರಿದ್ದರು. ಡಾ.ಫಕಿರಪ್ಪ ವಜ್ರಬಂಡಿ, ಡಾ.ಶರಣಪ್ಪ ನಿಡಶೇಷಿ, ರೇವಣಪ್ಪ ಪಾಟೀಲ, ಶಕುಂತಲಾ ತಂಬಾಕೆ ಅವರನ್ನು ಸನ್ಮಾನಿಸಲಾಯಿತು. ಶಾಂತಲಿಂಗ ಮಠಪತಿ ನಿರೂಪಿಸಿ, ಕೆ.ಜಿ.ಶರಣಪ್ಪ ವಂದಿಸಿದರು.
 
**
ಬಿ.ನಾರಾಯಣ ವಿರುದ್ಧ ಘೋಷಣೆ
ಬಸವಕಲ್ಯಾಣ: ತಾಲ್ಲೂಕಿನ ಹುಲಸೂರನಲ್ಲಿ ಕಲ್ಯಾಣ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಬಿ.ನಾರಾಯಣ ಅವರ ವಿರುದ್ಧ ಯುವಕರು ಧಿಕ್ಕಾರ ಕೂಗಿದ ಘಟನೆ ಭಾನುವಾರ ನಡೆದಿದೆ.
 
ಬಿ.ನಾರಾಯಣ ಅವರು ಕೆಲ ದಿನಗಳ ಹಿಂದೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿದ ಯುವಕರು ಆಕ್ರೋಶಗೊಂಡು ಧಿಕ್ಕಾರ ಕೂಗಿದರು ಎನ್ನಲಾಗಿದೆ. 
 
ಸಮ್ಮೇಳನಾಧ್ಯಕ್ಷರು ಭಾಷಣ ಮಾಡುತ್ತಿದ್ದಾಗ ಬಿ.ನಾರಾಯಣ ಅವರು ವೇದಿಕೆಯಲ್ಲಿ ಕುಳಿತಿರುವುದನ್ನು ಕಂಡ ಯುವಕರು ಧಿಢೀರನೆ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಆಗ ಸಭಿಕರಿಗೆ ಏನು ನಡೆಯುತ್ತಿದೆ ಎಂಬುದು ತಿಳಿಯದೆ ಗೊಂದಲ ಉಂಟಾಯಿತು.
 
ಆಗ ನಾರಾಯಣ ಅವರು ತಕ್ಷಣ ವೇದಿಕೆಯಿಂದ ಇಳಿದು ಹೋದರಾದರೂ ಯುವಕರು ಬೆಂಬಿಡದೆ ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. 
ಆಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.
 
**
ಸಮ್ಮೇಳನದಲ್ಲಿ ಇಂದು
ಕನ್ನಡ ಸಾಹಿತ್ಯ ಮತ್ತು ಪ್ರಬುದ್ಧ ಅಂತರ ಸಂಬಂಧಗಳು ಗೋಷ್ಠಿ: ಸಾನಿಧ್ಯ– ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರು, ನೇತೃತ್ವ –ಶಿವಾನಂದ ದೇವರು, ಉದ್ಘಾಟನೆ– ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಗ್ರಂಥ ಬಿಡುಗಡೆ– ಸಂಸದೆ ಶೋಭಾ ಕರಂದ್ಲಾಜೆ, ಅಧ್ಯಕ್ಷತೆ–ಸಂಸದ ಭಗವಂತ ಖೂಬಾ, ಬೆಳಿಗ್ಗೆ 11
 
ಕನ್ನಡ ಸಾಹಿತ್ಯದ ಅನನ್ಯತೆಗಳು ಗೋಷ್ಠಿ: ಆಶಯ ನುಡಿ –ಶಿವಲಿಂಗ ಹೆಡೆ, ಉಪನ್ಯಾಸ– ಭೀಮಾಶಂಕರ ಬಿರಾದಾರ, ರಜಿಯಾ ಬಳಬಟ್ಟೆ, ಅಧ್ಯಕ್ಷತೆ– ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ, ಮಧ್ಯಾಹ್ನ 1.30
 
ಭೂಮಿ ಚಿಂತನಗೋಷ್ಠಿ: ಆಶಯನುಡಿ– ಡಾ.ಸಿ.ಆರ್.ಕೊಂಡಾ ಬೀದರ್, ಉಪನ್ಯಾಸ– ಸುಭಾಷ ನೇಳಗೆ, ಮಲ್ಲಣ್ಣ ನಾಗರಾಳ ಬಾಗಲಕೋಟೆ, ಅಧ್ಯಕ್ಷತೆ– ಕೃಷಿ ವಿಜ್ಞಾನಿ ರವಿ ದೇಶಮುಖ, ಮಧ್ಯಾಹ್ನ 3.30
 
ಬಹಿರಂಗ ಅಧಿವೇಶನ: ಅಧ್ಯಕ್ಷತೆ –ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗೊತ್ತುವಳಿ ಮಂಡನೆ– ಡಾ.ಬಸವರಾಜ ಬಲ್ಲೂರ, ಸಂಜೆ 5.30,
 
ಸಮಾರೋಪ ಸಮಾರಂಭ: ಸಾನಿಧ್ಯ– ಭಾತಂಬ್ರಾ ಶಿವಯೋಗೇಶ್ವರ ಸ್ವಾಮೀಜಿ, ನೇತೃತ್ವ –ಗುರುಬಸವ ಪಟ್ಟದ್ದೇವರು ಭಾಲ್ಕಿ, ಉದ್ಘಾಟನೆ– ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಅಧ್ಯಕ್ಷತೆ– ಶಾಸಕ ಮಲ್ಲಿಕಾರ್ಜುನ ಖೂಬಾ, ಸಮ್ಮೇಳನಾಧ್ಯಕ್ಷರ ನುಡಿ– ಡಾ.ಚನ್ನಣ್ಣ ವಾಲಿಕಾರ, ಅತಿಥಿಗಳು– ಮಹಾರಾಷ್ಟ್ರದ ಸಚಿವ ಸಂಭಾಜಿರಾವ ಪಾಟೀಲ ನೀಲಂಗೆಕರ್, ಜಿ.ಪಂ ಅಧ್ಯಕ್ಷೆ ಭಾರತಬಾಯಿ ಕೊಡಂಬಲ್, ಸಂಜೆ 6
 
**
‘ಜಾತಿ ಉಳಿಸಲು ಪೀಠ ಸ್ಥಾಪನೆಯಾದವು...’
ಬಸವಕಲ್ಯಾಣ: ‘ಬಸವಣ್ಣ ನೀವು ಜಾತಿ ಅಳಿಸಲು ಚಳವಳಿ ನಡೆಸಿದಿರಿ, ಜಾತಿ ಉಳಿಸಲು ಮಠ, ಪೀಠಗಳು ಸ್ಥಾಪನೆಯಾದವು’ –ಇವು ಗಂಗಾವತಿಯ ಯುವಕವಿ ಶಿವಕುಮಾರ ಮಾಲಿ ಪಾಟೀಲ ಅವರ ಕವನದ ಸಾಲುಗಳು.
 
ತಾಲ್ಲೂಕಿನ ಹುಲಸೂರನಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅವರು ಕವನ ವಾಚಿಸಿದರು.
 
‘ಕ್ಷಮಿಸಿರಿ’ ಎಂಬ ಕವನ ಓದಿದ ಅವರು ಇಂದಿನ ವ್ಯವಸ್ಥೆಯನ್ನು ಕಂಡು ಮತ್ತೆ ಹುಟ್ಟಿ ಬನ್ನಿ ಬಸವಣ್ಣ ಎನ್ನಲು ತಮಗೆ ಅರ್ಹತೆ ಇಲ್ಲ ಎಂಬ ಹತಾಶೆಯೂ ವ್ಯಕ್ತಪಡಿಸಿದರು.
 
ಉಪನ್ಯಾಸಕಿ ಶಿವಲೀಲಾ ಮಠಪತಿ ಅವರು ಅತ್ಯಾಚಾರ ಕವನ ಓದಿದರು. ಅತ್ಯಾಚಾರ ಇದು ದುಷ್ಟರ ವಿಚಾರ, ಇಲ್ಲಿ ಡಾ.ಅಂಬೇಡ್ಕರ್ ಅವರ ಕಾನೂನು, ಗಾಂಧಿ ನೀಡಿದ ಸ್ವಾತಂತ್ರ್ಯ, ಸುಭಾಶ್ಚಂದ್ರ ಬೋಸರ ಕ್ರಾಂತಿ ಯಾವುದೂ ಕೆಲಸ ಮಾಡುತ್ತಿಲ್ಲ. ರಾಜಕಾರಣಿಗಳು, ಮೇಲಧಿಕಾರಿಗಳಿಂದ ಹಾಗೂ ಪುಂಡರಿಂದ ಮಹಿಳೆಯರ ಅತ್ಯಾಚಾರ ನಡೆದೇ ಇದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
 
ಶ್ರೀಕಾಂತ ಮದರಗಾಂವಕರ್ ‘ಲೆಕ್ಕ ಕೊಡಬೇಕಿದೆ’ ಎಂಬ ಕವನವನ್ನು ಓದಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಆದರೂ ಜೀವನದಲ್ಲೊಮ್ಮೆ ಲೆಕ್ಕ ಕೊಡಬೇಕಾಗಿದೆ. ಈಚೆಗೆ ₹500, ₹1 ಸಾವಿರದ ನೋಟುಗಳು ನೋಡನೋಡುತ್ತಲೇ ಕೈ ಬದಲಾದವು. ಅನ್ಯಾಯದಿಂದ ಕೆಲವರಿಗೆ ಅನುಕೂಲ ಆದರೂ ಲೆಕ್ಕ ಕೊಡಲೇಬೇಕು ಎಂದು ಅವರು ತಮ್ಮ ಕವನದ ಮೂಲಕ ಹೇಳಿದರು.
 
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ ಮಾತನಾಡಿ, ಧರ್ಮ, ಅನ್ಯಾಯ, ಅತ್ಯಾಚಾರದ, ಪ್ರೇಮ, ಸ್ನೇಹದ ಕವಿತೆಗಳನ್ನು ಎಲ್ಲರೂ ಬರೆಯುವವರಾಗಿದ್ದಾರೆ. ನಿರಂತರ ಅಧ್ಯಯನದಿಂದ ಬರವಣಿಗೆಯಲ್ಲಿ ಇನ್ನಷ್ಟು ಪ್ರಬುದ್ಧತೆಯನ್ನು ತರಬಹುದು ಎಂದರು.
 
ಕನ್ನಡ ಸಾಹಿತ್ಯ ಪರಿಷತ್ತಿನ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಸವಪ್ರಭು ಬೆಟ್ಟದೂರ್, ಶೇಖರಗೌಡ ಪಾಟೀಲ, ಹಂಸಕವಿ, ಸುರೇಶ ಸಿಂಗನಾಳ ಮಾತನಾಡಿದರು.
 
ವೀರೇಶ ಶೆಟ್ಟರ್, ಎಂ.ಪಿ.ಮುದಾಳೆ, ವೀರಣ್ಣ ಕಲಕೇರಿ, ಬಸವೇಶ್ವರಿ ದೇಗಲೂರೆ ಮುಂತಾದವರು ಕವನ ವಾಚಿಸಿದರು. ವಸಂತ ಹುಣಸನಾಳೆ ಸ್ವಾಗತಿಸಿದರು. ಶ್ರೀದೇವಿ ಹೂಗಾರ ನಿರೂಪಿಸಿದರು.
 
ಡಾ.ಗವಿಸಿದ್ದಪ್ಪ ಪಾಟೀಲ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಸಾಹಿತ್ಯದ ಅನನ್ಯತೆ ಗೋಷ್ಠಿ ಮತ್ತು ಸಮ್ಮೇಳನಾಧ್ಯಕ್ಷರ ಬದುಕು ಬರಹ ಗೋಷ್ಠಿಯೂ ನಡೆಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT