ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ಸ್ಯಕ್ಷಾಮ: ಇನ್‌ಸ್ಪೆಕ್ಟರ್‌ಗಳ ನೇಮಕ

Last Updated 11 ಜನವರಿ 2017, 8:53 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅತಿಯಾದ ಸಮುದ್ರ ಮೀನುಗಾರಿಕೆಯಿಂದ ಮೀನಿನ ಸಂತತಿ ಕ್ಷೀಣಿಸುತ್ತಿದ್ದು, ಇದರ ಸಂರಕ್ಷಣೆಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.

ಒಳನಾಡು ಮೀನುಗಾರಿಕೆಗೆ ರಾಜ್ಯದಲ್ಲಿ ಸಾಕಷ್ಟು ಅವಕಾಶಗಳಿದ್ದರೂ, ನಿರೀಕ್ಷಿತ ಪ್ರಮಾಣದ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಸಮುದ್ರ ಮೀನುಗಾರಿಕೆಯ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಗಿದೆ. ಇದರಿಂದ ಕರಾವಳಿಯಲ್ಲಿ ಮತ್ಸ್ಯಕ್ಷಾಮ ತಲೆದೋರುವ ಆತಂಕ ಎದುರಾಗಿದೆ.

ಕರಾವಳಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಮೀನುಗಳನ್ನು ಹಿಡಿಯುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಕೆಲವು ಮೀನುಗಳ ಸಂತತಿ ನಾಶ­ವಾಗುವ ಭೀತಿ ಇದೆ. 

ಸಂತತಿ ಸಂರಕ್ಷಣೆಯ ನಿಟ್ಟಿನಲ್ಲಿ ಮರಿ ಮೀನು­ಗಳು ಮತ್ತು ಮೊಟ್ಟೆ ಇಡಲು ಸಿದ್ಧವಾದ ಮೀನು ಹಿಡಿಯುವುದನ್ನು ನಿಷೇಧಿಸುವ ಕಾನೂನು ಜಾರಿಗೊಳಿಸ­ಲೇಬೇಕಾದ ಅನಿವಾರ್ಯತೆ ಎದುರಾಗಿದೆ. 

ಸಂಸ್ಕರಣ ಘಟಕಗಳಲ್ಲಿ ತಪಾಸಣೆ:
ಮರಿ ಮೀನು ಹಾಗೂ ಮೊಟ್ಟೆ ಇಡಲು ಸಿದ್ಧವಾದ ಮೀನುಗಳನ್ನು ಹಿಡಿಯದೇ ಇರುವಂತೆ ನೋಡಿ­ಕೊಳ್ಳಲು ಇನ್‌ಸ್ಪೆಕ್ಟರ್‌ಗಳ ನೇಮಕ ಮಾಡಿಕೊಳ್ಳುವ ವಿಚಾರ ಸರ್ಕಾರದ ಮುಂದಿದೆ. ಸಮುದ್ರದಿಂದ ಹಿಡಿಯುವ ಮೀನಿನ ಪೈಕಿ ಶೇ80ರಷ್ಟು ಸಂಸ್ಕರಣಾ ಘಟಕಗಳಿಗೆ ಹೋಗುತ್ತದೆ. ಉಳಿದ ಶೇ 20ರಷ್ಟು ಮೀನು ಸ್ಥಳೀಯವಾಗಿ ತಿನ್ನಲು ಉಪಯೋಗವಾಗುತ್ತದೆ. ಸಂಸ್ಕರಣಾ ಘಟಕಗಳಿಗೆ ಹೋಗುವ ಮೀನುಗಳಲ್ಲಿ ಮರಿ ಮೀನುಗಳು ಮತ್ತು ಮೊಟ್ಟೆ ಇಡಲು ಸಿದ್ಧವಾದ ಮೀನುಗಳು ಇರಲೇ­ಬಾರದು. ಈ ದಿಸೆಯಲ್ಲಿ ಎಲ್ಲ ಸಂಸ್ಕರಣ ಘಟಕಗಳಲ್ಲಿ ತಪಾಸಣೆ ನಡೆಸಲು ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡುವ ಉದ್ದೇಶವಿದೆ.

‘ಈ ಇನ್‌ಸ್ಪೆಕ್ಟರ್‌ಗಳನ್ನು ಸರ್ಕಾರ ನೇಮಕ ಮಾಡಲಿದ್ದು, ಅವರಿಗೆ ವೇತನ-­ವನ್ನು ಸಂಸ್ಕರಣಾ ಘಟಕಗಳು ಪಾವತಿಸಬೇಕಾಗುತ್ತದೆ. ಇಂತಹ ಕಾನೂನಿಗೆ ಸಂಬಂಧಿಸಿ ಕರಡು ತಯಾರಿಸಲು ಮಿನುಗಾರಿಕಾ ಇಲಾಖೆಗೆ ಸೂಚಿಸಿದ್ದು, ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ’ ಎಂದು ಮೀನುಗಾರಿಕೆ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳುತ್ತಾರೆ.

ಮೀನುಗಾರಿಕೆ ಸಚಿವರ ಸಭೆ:
ಪಶ್ಚಿಮ ಹಾಗೂ ಪೂರ್ವ ಕರಾವಳಿ ರಾಜ್ಯಗಳ ಮೀನುಗಾರಿಕೆ ಸಚಿವರ ಸಭೆಯನ್ನು ಇದೇ ತಿಂಗಳ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಕರೆಯಲಾಗಿದೆ ಎಂದು ಪ್ರಮೋದ್‌ ತಿಳಿಸಿದ್ದಾರೆ. ಸಮುದ್ರದಲ್ಲಿ ಮೀನಿನ ಸಂಪತ್ತು ರಕ್ಷಣೆ ಮಾಡುವುದು ಅತ್ಯಂತ ಅವಶ್ಯಕ­ವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವರ ಜತೆ ಚರ್ಚಿಸಲಾಗಿತ್ತು. ಅದಕ್ಕೆ ಪೂರಕವಾಗಿ ಕರಾವಳಿ ರಾಜ್ಯಗಳ ಮೀನುಗಾರಿಕೆ ಸಚಿವರ ಸಭೆ ಕರೆಯಲಾಗಿದೆ. ಈ ಸಭೆಗೆ ಕೇಂದ್ರ ಗೃಹ, ವಾಣಿಜ್ಯ ಹಾಗೂ ಕೃಷಿ ಸಚಿವರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT