ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಜಿಲ್ಲಾಡಳಿತ ಸಜ್ಜು

Last Updated 11 ಜನವರಿ 2017, 11:22 IST
ಅಕ್ಷರ ಗಾತ್ರ

ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ  ಹಾಗೂ ಮತದಾರರಿಗೆ ಆಮಿಷ ನೀಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಹಾಯಕ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದರು.

ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಯ ವ್ಯಾಪ್ತಿಯನ್ನು ಕ್ಷೇತ್ರ ಹೊಂದಿದೆ. ಜಿಲ್ಲೆಯಲ್ಲಿ 7508 ಮತದಾರರಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಚುನಾವಣೆ  ನಡೆಸಬೇಕು ಎಂದು ಹೇಳಿದರು.

ಪಾವಗಡದ ಸರ್ಕಾರಿ ಪದವಿಪೂರ್ವ ಕಾಲೇಜು, ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಗುಬ್ಬಿ, ಕೊರಟಗೆರೆ ತಾಲ್ಲೂಕು ಕಚೇರಿ ಹಾಗೂ  ಕುಣಿಗಲ್‌ನ ಮಹಾತ್ಮಗಾಂಧಿ ಪಿಯು ಕಾಲೇಜು, ತುಮಕೂರಿನ ಸರ್ಕಾರಿ ಜ್ಯೂನಿಯರ್‌ ಕಾಲೇಜಿನ ಹೊಸ ಕಟ್ಟಡದ 4 ಕೇಂದ್ರಗಳಲ್ಲಿ ಮತದಾನ ಕೇಂದ್ರ ಸೇರಿ ಒಟ್ಟು 13 ಮತದಾನ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಲು ಜ.17 ಕೊನೆಯ ದಿನವಾಗಿದೆ.  ನಾಮಪತ್ರಗಳ ಪರಿಶೀಲನೆಯು ಜ. 18 ರಂದು ನಡೆಯಲಿದೆ.  ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಜ.20 ಕಡೆಯ ದಿನವಾಗಿದೆ.  ಮತದಾನ ಫೆಬ್ರುವರಿ 3 ರಂದು ಬೆಳಿಗ್ಗೆ 8 ಗಂಟೆಯಿಂದ 4 ಗಂಟೆಯವರೆಗೂ ನಡೆಯಲಿದೆ.  ಮತ ಎಣಿಕೆಯು ಫೆ. 6 ರಂದು ಬೆಂಗಳೂರು ನಗರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿ ಅತ್ಯಧಿಕ ಮತದಾರರಿದ್ದಾರೆ. ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ವಿಚಕ್ಷಣ ದಳ ರಚಿಸಲಾಗಿದೆ.

ಸಂಬಂಧಿಸಿದ ಉಪವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಸಂಬಂಧಿಸಿದ ತಾಲ್ಲೂಕಿನ ತಹಶೀಲ್ದಾರ್, ಆರಕ್ಷಕ ನಿರೀಕ್ಷಕರು ಹಾಗೂ ಅಬಕಾರಿ ಉಪನಿರೀಕ್ಷಕರನ್ನು ಸದಸ್ಯರಾಗಿ ಮಾಡಲಾಗಿದೆ. ಈ ಸಮಿತಿಯು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಲಿದೆ ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ಅಹಿತಕರ ಘಟನೆಗಳು, ಅಕ್ರಮ ನಡೆಯದಂತೆ ತಡೆಯಲು ಅಗತ್ಯ ಮುಂಜಾಗ್ರತ ಕ್ರಮಗಳನ್ನು ಹಾಗೂ ಭದ್ರತೆ ಕಲ್ಪಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅವರಿಗೆ  ಸೂಚಿಸಿದರು.

ಯಾವುದೇ ಬಗೆಯ ಮದ್ಯವನ್ನು  ಹಂಚಿಕೆ ಮತ್ತು ಶೇಖರಣೆ ಮಾಡದಂತೆ ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಬಕಾರಿ ಅಧಿಕಾರಿಗಳಿಗೆ  ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT