ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಕ್ತ, ತಹಶೀಲ್ದಾರ್‌ ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಅರ್ಕಾವತಿ ನದಿಗೆ ಕನಕಪುರ ಪೇಟೆ ಕೆರೆ ನೀರು
Last Updated 12 ಜನವರಿ 2017, 10:13 IST
ಅಕ್ಷರ ಗಾತ್ರ
ಕನಕಪುರ: ‘ನಗರದ ಪೇಟೆ ಕೆರೆಯಲ್ಲಿನ ನೀರನ್ನು ನಗರಸಭೆ ಆಯುಕ್ತ ಮತ್ತು ತಹಶೀಲ್ದಾರ್‌  ಅಕ್ರಮವಾಗಿ ಅರ್ಕಾವತಿ ನದಿಗೆ ಬಿಟ್ಟಿದ್ದಾರೆ’ ಎಂದು ಆರ್‌.ಟಿ.ಐ. ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್‌ ಆರೋಪಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. 
 
‘ಕೆರೆಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ನಿವೇಶನಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ತಹಶೀಲ್ದಾರ್‌ ಆರ್‌.ಯೋಗಾನಂದ ಮತ್ತು ನಗರಸಭೆ ಆಯುಕ್ತ ಡಿ.ರಮೇಶ್‌ ಅವರು ಕಾನೂನನ್ನು ಉಲ್ಲಂಘಿಸಿ ಕೆರೆಯ ನೀರನ್ನು ಹೊರಕ್ಕೆ ಬಿಟ್ಟಿರುತ್ತಾರೆ. ಈ ವೇಳೆ ಕೆರೆಯ ಏರಿ ಮತ್ತು ಗಡಿಯನ್ನು ನಾಶ ಮಾಡಿದ್ದಾರೆ’ ಎಂದು ದೂರಿದರು.
 
ದೂರಿನ ಪ್ರತಿಯನ್ನು ಪತ್ರಿಕೆಗೆ ನೀಡಿರುವ ಅವರು ಮಾತನಾಡಿ, ‘ಹಿಂದೆ ಪೇಟೆ ಕೆರೆಯಲ್ಲಿ ನಿವೇಶನ ಮಾಡುವ ಉದ್ದೇಶದಿಂದ ಕೆರೆಯ ಏರಿಯನ್ನು ಒಡೆದು ನೀರನ್ನು ಅರ್ಕಾವತಿ ನದಿಗೆ ಬಿಡಲಾಗಿತ್ತು. ಅದನ್ನು ಸರಿಪಡಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು’ ಎಂದರು. 
 
‘ಜಿಲ್ಲಾಡಳಿತ ಆದೇಶ ನೀಡಿದ ಬಳಿಕ ಕೆರೆಯ ಏರಿಯನ್ನು ಮುಚ್ಚಲಾಗಿತ್ತು. ನಂತರ ಸುಮಾರು 2 ಅಡಿಗಳಿಗೂ ಹೆಚ್ಚು ನೀರು ಕೆರೆಯಲ್ಲಿ ಸಂಗ್ರಹವಾಗಿತ್ತು’ ಎಂದು ತಿಳಿಸಿದರು. 
 
‘ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಒಡೆದಿರುವ ಕೆರೆಯ ಏರಿಯನ್ನು ಮುಚ್ಚಿ, ಅರ್ಕಾವತಿ ನದಿ ವರೆಗೆ ತೆಗೆದಿರುವ ಕಾಲುವೆಯನ್ನು ಮುಚ್ಚಿಸಬೇಕು’ ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT