ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವದುರ್ಗ ಎಪಿಎಂಸಿ ವಿಲೀನ ಬೇಡ’

Last Updated 12 ಜನವರಿ 2017, 10:45 IST
ಅಕ್ಷರ ಗಾತ್ರ

ರಾಯಚೂರು: ದೇವದುರ್ಗ ಎಪಿಎಂಸಿಯನ್ನು ರಾಯಚೂರಿನ ಎಪಿಎಂಸಿ ಜೊತೆಗೆ ವಿಲೀನ ಮಾಡುವಂತೆ ಸಂಸದ ಬಿ.ವಿ.ನಾಯಕ ಅವರು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿರುವುದು ಖಂಡನೀಯ. ಅವರು ಕೂಡಲೇ ಈ ಪತ್ರವನ್ನು ಹಿಂಪಡೆಯಬೇಕು ಮತ್ತು ಎಪಿಎಂಸಿಗೆ ಚುನಾವಣೆ ನಡೆಸಬೇಕು ಎಂದು ಜನಸಂಗ್ರಾಮ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿ.ಎ.ಮಾಲಿಪಾಟೀಲ್‌ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1980ರಲ್ಲಿ ಈ ಎಪಿಎಂಸಿ ರಚನೆಯಾಗಿದ್ದು; ಈ ಹಿಂದೆ ಕೂಡ ರಾಯಚೂರು ಎಂಪಿಎಂಸಿ ಜೊತೆಗೆ ವಿಲೀನ ಮಾಡಲಾಗಿತ್ತು. ನಂತರ ರೈತರ ಒತ್ತಾಯದ ಮೇರೆಗೆ ಅದನ್ನು ಪ್ರತ್ಯೇಕ ಮಾಡಲಾಯಿತು. ಈ ಎಪಿಎಂಸಿಗೆ ವಾರ್ಷಿಕ ₹ 89 ಲಕ್ಷ ಆದಾಯವಿದ್ದರೂ, ಲಾಭದಾಯಕವಾಗಿ ನಡೆಯುತ್ತಿಲ್ಲ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಈಗ ಅದನ್ನು ಮತ್ತೆ ರಾಯಚೂರು ಎಪಿಎಂಸಿ ಜೊತೆ ವಿಲೀನ ಮಾಡುವ ಪ್ರಕ್ರಿಯೆ ನಡೆಯುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ ಎಂದರು.

ದೇವದುರ್ಗದ ಎಂಪಿಎಂಸಿ 36 ಎಕರೆ ಜಾಗದಲ್ಲಿ 112 ನಿವೇಶನಗಳನ್ನು ವ್ಯಾಪಾರಸ್ಥರ ಹೆಸರಿನಲ್ಲಿ ವರ್ತಕರ ಪರವಾನಗಿ ಹೊಂದಿಲ್ಲದವರಿಗೂ ನೀಡಲಾಗಿದೆ. ಸಂಸದ ಬಿ.ವಿ.ನಾಯಕ, ಅವರ ಸೋದರ ರಾಜಶೇಖರ ನಾಯಕ, ಶಾಸಕ ಬಸವರಾಜ ಪಾಟೀಲ ಇಟಗಿ ಅವರ ಹೆಸರಿನಲ್ಲೂ ತಲಾ ಎರಡು ನಿವೇಶನಗಳಿವೆ ಎಂದು ಆರೋಪಿಸಿದರು.

ವರ್ತಕರಲ್ಲದವರಿಗೆ ಜಾಗ ಮಂಜೂರು ಮಾಡಿರುವ ಬಗ್ಗೆ ತನಿಖೆ ನಡೆಸಬೇಕು ಮತ್ತು ಇಂತಹ ಜಾಗವನ್ನು ಡಿನೋಟಿಫೈ ಮಾಡಿ ನೈಜ ಪರವಾನಗಿ ಹೊಂದಿರುವ ವರ್ತಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಎಪಿಎಂಸಿ ಆವರಣದಲ್ಲಿ ದೊಡ್ಡ ಗೋದಾಮು, ರಸ್ತೆ, ಚರಂಡಿಗಳು ನಿರ್ಮಾಣವಾಗಿದ್ದರೂ ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ದುರಸ್ತಿಯ ನೆಪದಲ್ಲಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಎಪಿಎಂಸಿಯ ಕೆಲವು ವರ್ತಕರು ಮತ್ತು ವೇಬ್ರಿಡ್ಜ್‌ ಮಾಲೀಕರು ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಪ್ರತಿ ಲೋಡ್‌ನಲ್ಲಿ ಒಂದೂರವರೆ ಕ್ವಿಂಟಲ್‌ಗಳಷ್ಟು ಕಡಿಮೆ ತೂಕವನ್ನು ತೋರಿಸಿ ವಂಚನೆ ಮಾಡಲಾಗುತ್ತಿದೆ ಎಂದು ದೂರಿದರು.

ರೈತ ಮುಖಂಡ ಭೀಮರಾಯ ಜರದಬಂಡಿ ಮಾತನಾಡಿ, ದೇವದುರ್ಗದ ಎಪಿಎಂಸಿಗೆ 2012ರಿಂದ ನಾಮನಿರ್ದೇಶಕರನ್ನು ನೇಮಕಮಾಡಲಾಗುತ್ತಿದೆಯೇ ಹೊರತು ಚುನಾವಣೆ ನಡೆಸಿಲ್ಲ. ಆದ್ದರಿಂದ ಬಿ.ವಿ.ನಾಯಕ ಅವರ ಮನವಿಗೆ ತಾವು ಆಕ್ಷೇಪ ಸಲ್ಲಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿರುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸಮಾಲಿ ಪಾಟೀಲ್, ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಯಪ್ಪಸ್ವಾಮಿ, ಜನಸಂಗ್ರಾಮ ಪರಿಷತ್‌ನ ವಿಶ್ವನಾಥರೆಡ್ಡಿ, ಜಾನ್‌ ವೆಸ್ಲಿ, ಜನಶಕ್ತಿ ಸಂಘಟನೆಯ ಮಾರೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT