ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಞಾತವಾಸದಿಂದ ಹೊರಬಂದ ‘ಪಂಟ’

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

‘ಮೂರು ವರ್ಷದಿಂದ ನಾನು ಚಿತ್ರರಂಗದಿಂದ ದೂರ ಇದ್ದೆ. ನನ್ನ ಅಜ್ಞಾತವಾಸವನ್ನು ದೂರ ಮಾಡಿದ್ದು ಅಭಿಜಿತ್’ ಎಂದು ಎಸ್‌. ನಾರಾಯಣ್ ಗಂಭೀರ ದನಿಯಲ್ಲಿ ಹೇಳಿದಾಗ, ಗದ್ದಲದ ಗೂಡಾಗಿದ್ದ ಕಾರ್ಯಕ್ರಮದಲ್ಲಿ ಮೌನ ಆವರಿಸಿಕೊಂಡಿತು.

ಕೆಲವು ಬೆಳವಣಿಗೆಗಳಿಂದ ಬೇಸತ್ತು, ‘ಇನ್ನು ಮುಂದೆ ನಾನು ಸಿನಿಮಾ ಮಾಡುವುದಿಲ್ಲ’ ಎಂದು ತಮ್ಮ ಸಿನಿಯಾನಕ್ಕೆ ಪೂರ್ಣವಿರಾಮ ಹಾಕಿಕೊಂಡಿದ್ದ ಅವರು, ‘ನಾ ಪಂಟ ಕಣೋ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮತ್ತೆ ಸಕ್ರಿಯರಾಗಿದ್ದಾರೆ. ಅದಕ್ಕೆ ಕಾರಣ, ಅಭಿಜಿತ್.

ಇದೀಗ ‘ಪಂಟ’ ಚಿತ್ರದ ಟೀಸರ್ ಮತ್ತು ಆಡಿಯೊ ಸಿ.ಡಿ ಬಿಡುಗಡೆ ಸಂಭ್ರಮದಲ್ಲಿದ್ದ ಅವರು, ತಾವು ಮತ್ತೆ ನಿರ್ದೇಶನದತ್ತ ವಾಲಿದ್ದಕ್ಕೆ ಕಾರಣರಾದವರಿಗೆ ಕೃತಜ್ಞತೆ ಹೇಳುವ ಮೂಲಕ ಮಾತು ಆರಂಭಿಸಿದರು. ‘ಅಭಿಜಿತ್ ಅವರಿಂದಾಗಿ ಆಂಧ್ರಪ್ರದೇಶ ಮೂಲದ ಕಡಿಯಾಲ ಸುಬ್ರಮಣ್ಯ ಅವರಿಗೆ ಈ ಚಿತ್ರವನ್ನು ಮಾಡಿಕೊಡುವ ಅವಕಾಶ ಸಿಕ್ಕಿತು.

ಇದರ ಬೆನ್ನಲ್ಲೇ, ರಾಕ್‌ಲೈನ್ ವೆಂಕಟೇಶ್ ಅವರು ತಮ್ಮ ಬ್ಯಾನರ್‌ನಲ್ಲಿ ‘ಮನಸು ಮಲ್ಲಿಗೆ’ ಸಿನಿಮಾ ಕೊಟ್ಟರು. ಈ ಎರಡೂ ಚಿತ್ರಗಳು ಇನ್ನೂ 25 ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡುವಷ್ಟು ಉತ್ಸಾಹ ತುಂಬಿವೆ’ ಎಂದಾಗ ಅವರ ಕಣ್ಣಗಳು ಹೊಳೆಯುತ್ತಿದ್ದವು.

‘ಚಿತ್ರದಲ್ಲಿ ಎರಡು ಹಾಡುಗಳಿವೆ. ಈ ಕಥೆಗೆ ಹಾಡುಗಳ ಅಗತ್ಯವೇ ಇರಲಿಲ್ಲ. ಆದರೆ, ಪ್ರೇಕ್ಷಕರಿಗೆ ಒಂದಾದರೂ ಹಾಡು ಇಲ್ಲದಿದ್ದರೆ ಹೇಗೆ? ಎಂದು ನಿರ್ಮಾಪಕರು ಹೇಳಿದ್ದರಿಂದ ಎರಡು ಹಾಡುಗಳನ್ನು ನಾನೇ ಬರೆದು, ಸಂಗೀತ ನಿರ್ದೇಶನವನ್ನೂ ಮಾಡಿದೆ. ಈ ಪೈಕಿ ಒಂದನ್ನು ಸುದೀಪ್ ಹಾಡಿದ್ದಾರೆ’ ಎಂದ ಅವರು, ಅದಕ್ಕಾಗಿ ತಾವು ಸುದೀಪ್ ಬೆನ್ನು ಬಿದ್ದ ಬಗೆಯನ್ನು ಹಾಸ್ಯ ಧಾಟಿಯಲ್ಲಿ ವಿವರಿಸಿದರು.

‘ಚಿತ್ರವನ್ನು ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇನೆ. ಯಾಕೆಂದರೆ, ಆ ತಿಂಗಳು ನನ್ನ ಪಾಲಿಗೆ ಅತ್ಯಂತ ವಿಶೇಷವಾದದ್ದು. ಫೆಬ್ರುವರಿ 11ಕ್ಕೆ ‘ಚೈತ್ರದ ಪ್ರೇಮಾಂಜಲಿ’ ಚಿತ್ರ ಬಿಡುಗಡೆಯಾಗಿ 25 ವರ್ಷವಾಗುತ್ತದೆ’ ಎಂದು ನಾರಾಯಣ್ ನೆನಪಿಸಿಕೊಂಡರು.

‘ಕನ್ನಡಿಗರು ಎಲ್ಲಾ ಭಾಷಿಕರನ್ನು ಪ್ರೀತಿಸುವ ಸಹೃದಯಿಗಳು. ಕನ್ನಡ ಚಿತ್ರರಂಗ ಹೊಸಬರನ್ನು ಪ್ರೋತ್ಸಾಹಿಸುವ ರೀತಿ, ಇಡೀ ಭಾರತೀಯ ಚಿತ್ರರಂಗಕ್ಕೆ ಮಾದರಿ.ಹಾಗಾಗಿ, ಮೊದಲ ಚಿತ್ರವನ್ನು ಇಲ್ಲೇ ನಿರ್ಮಿಸಬೇಕು ಎಂದು ನಿರ್ಧರಿಸಿದೆ. ನಾರಾಯಣ್ ಅವರಂತಹ ದೊಡ್ಡ ನಿರ್ದೇಶಕರ ಮೂಲಕ ನನ್ನ ಆಸೆ ಈಡೇರಿದೆ’ ಎಂದರು ನಿರ್ಮಾಪಕ ಸುಬ್ರಮಣ್ಯ. ಅವರು ತೆಲುಗಿನಲ್ಲಿ ಆಡಿದ ಮಾತುಗಳನ್ನು ಅಭಿಜಿತ್ ಕನ್ನಡದಲ್ಲಿ ದಾಟಿಸಿದರು.

‘ಆನಂದ್ ಆಡಿಯೊ’ ಹೊರತಂದಿರುವ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಿದ ರಾಕ್‌ಲೈನ್ ವೆಂಕಟೇಶ್, ‘ಕನ್ನಡದಲ್ಲಿ ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ನೀವು ಅಜ್ಞಾತವಾಸದಲ್ಲಿದ್ದೆ ಎಂದುಕೊಳ್ಳಬೇಡಿ. ಉತ್ತಮ ಆರೋಗ್ಯಕ್ಕಾಗಿ ದೇವರು ನಿಮಗೆ ಇಷ್ಟು ದಿನ ವಿಶ್ರಾಂತಿ ಕೊಟ್ಟಿದ್ದ ಎಂದುಕೊಳ್ಳಿ.

ನಿಮ್ಮ ಕೆಲಸದ ಶಿಸ್ತು, ನಿರ್ಮಾಪಕನ ಜವಾಬ್ದಾರಿಯನ್ನೂ ನಿಭಾಯಿಸುವ ರೀತಿ ಇಂದಿನ ಯುವ ನಿರ್ದೇಶಕರಿಗೆ ಮಾರ್ಗದರ್ಶಕವಾಗಿದೆ’ ಎಂದು ನಾರಾಯಣ್ ಅವರನ್ನು ಹೊಗಳಿದರು. ಚಿತ್ರಕ್ಕೆ ಅನೂಪ್ ನಾಯಕನಾಗಿದ್ದು, ರಿತೀಕ್ಷಾ ನಾಯಕಿ. ಅನೂಪ್‌ಗಿದು ಎರಡನೇ ಚಿತ್ರವಾದರೆ, ನಾಯಕಿಗೆ ಮೊದಲ ಚಿತ್ರ. ನೆಲಮಂಗಲದ ಶಾಸಕ ಶ್ರೀನಿವಾಸ್ ಮೂರ್ತಿ ಕೂಡ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT