ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನಲೀ ನಿನ್ನಲೀ ಇದು ಎಲ್ಲರ ‘ಲೀ’

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

ದರ್ಶನ್, ಜಗ್ಗೇಶ್ ಅವರಂಥ ತಾರಾ ವರ್ಚಸ್ಸಿನ ಕಲಾವಿದರನ್ನಿಟ್ಟುಕೊಂಡು ‘ಅಗ್ರಜ’ ಸಿನಿಮಾ ನಿರ್ದೇಶಿಸಿದ ನಂತರವೂ ಎರಡು–ಎರಡೂವರೆ ವರ್ಷಗಳ ಬಿಡುವು ಪಡೆದವರು ಎಚ್.ಎಂ. ಶ್ರೀನಂದನ್. ಈಗ ಅವರು ತಾರಾಮೋಹ ತೊರೆದು ಕಥೆಯನ್ನು ಪ್ರೀತಿಸಿದ್ದಾರೆ. ನಾಯಕನಿಗಿಂತ ಹೆಚ್ಚಾಗಿ ಕಥೆಯನ್ನು ನಂಬಿ ಆ್ಯಕ್ಷನ್–ಕಟ್ ಹೇಳಿದ್ದಾರೆ. ಅವರ ಹೊಸ ಸಿನಿಮಾ ‘ಲೀ’ ಇಂದು (ಜ.13) ತೆರೆಕಾಣುತ್ತಿದೆ.

ಚಿತ್ರೀಕರಣ ಶುರುವಾದ ಲೆಕ್ಕದಲ್ಲಿ ‘ಲೀ’ ಬೇಗನೇ ಬಿಡುಗಡೆ ಹಂತಕ್ಕೆ ಬಂದಿದೆ. ‘ಲೀ’ ಅಕ್ಷರವನ್ನೇ ಶೀರ್ಷಿಕೆಯನ್ನಾಗಿ ಮಾಡಿಕೊಂಡಿರುವುದರ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಇದೆ. ಅದಕ್ಕೆ ಪೂರಕವಾಗಿ ‘ನನ್ನಲೀ ಮೊದಲು... ನಿನ್ನಲೀ ಕೊನೆ...’ ಎಂಬ ಉಪ ಶೀರ್ಷಿಕೆಯನ್ನು ನೀಡಲಾಗಿದೆ. ಆರಂಭದಲ್ಲಿ, ಲೀ ಎಂಬುದು ಒಂದು ವರ್ಣಮಾಲೆಯಷ್ಟೇ ಎಂದು ಹೇಳಿದ ನಿರ್ದೇಶಕ ಶ್ರೀನಂದನ್, ನಂತರ ಶೀರ್ಷಿಕೆಗೂ ಕಥೆಯೊಂದಿಗೂ ಇರುವ ಸಂಬಂಧವನ್ನು ಬಿಟ್ಟುಕೊಡುತ್ತ ಹೋದರು.

‘‘ಲೀ’ ಪದವು ನಾಯಕ ಹಾಗೂ ನಾಯಕಿಯ ಪಾತ್ರಕ್ಕೆ, ಚಿತ್ರಕಥೆಗೆ ಸೂಕ್ತವಾಗಿದೆ. ಈ ಅಕ್ಷರದ ಸುತ್ತವೇ ಕಥೆ ಹೆಣೆದುಕೊಂಡಿದೆ. ಹೆಸರಿನಲ್ಲಿ, ಸಂಬಂಧಗಳಲ್ಲಿ ಈ ಅಕ್ಷರ ಪ್ರಸ್ತಾಪವಾಗುತ್ತದೆ. ಪ್ರೀತಿಗೆ ಕಾರಣವಾಗಿರುತ್ತದೆ. ಚಿತ್ರಕಥೆಯ ಬೇರೆ ಬೇರೆ ಸ್ತರಗಳಲ್ಲಿ ‘ಲೀ’ ಕಾಣಿಸಿಕೊಳ್ಳುತ್ತದೆ’ ಎನ್ನುತ್ತಾರೆ ಶ್ರೀನಂದನ್. ಹಾಗೆಂದು ಅವರೇನೂ ಮೊದಲು ಶೀರ್ಷಿಕೆ ಆಯ್ದುಕೊಂಡು ನಂತರ ಕಥೆ ರಚಿಸಿಲ್ಲ. ಕಥೆ ರಚನೆಯಾದ ನಂತರವೇ ಅದಕ್ಕೆ ಶೀರ್ಷಿಕೆಯನ್ನು ಹೊಂದಿಸಿದ್ದಾರೆ. ಯಾವುದೋ ಒಂದು ನೈಜ ಪ್ರೇಮಕಥೆಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಅದಕ್ಕೆ ಸಿನಿಮೀಯ ಅಂಶಗಳನ್ನು ಹೊಸೆದಿದ್ದಾರೆ.

‘ಲೀ’ ಎಂದರೆ ಇದು ಬ್ರೂಸ್‌ಲೀ ಅವರಿಂದ ಪ್ರೇರಿತವಾದ ಕಥೆಯೇ ಎಂಬ ಪ್ರಶ್ನೆಗೆ – ‘ಬ್ರೂಸ್ ಲೀ ಅವರಿಂದ ಪ್ರೇರಣೆ ಪಡೆದು ಮಾಡಿದ ಸಿನಿಮಾ ಇದಲ್ಲ. ಆದರೆ ಬ್ರೂಸ್ ಲೀ ನೆನಪುಗಳಂತೂ ಚಿತ್ರದಲ್ಲಿ ಇವೆ. ನಾಯಕ ಬ್ರೂಸ್ ಲೀ ಅಭಿಮಾನಿ. ಅಲ್ಲದೇ ಲೀ ಎಂಬ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಆತ ತರಬೇತುದಾರ ಆಗಿರುತ್ತಾನೆ’ ಎನ್ನುತ್ತಾರೆ.

ಪಾತ್ರಧಾರಿಗಿಂತ ಪಾತ್ರವೇ ಮುಖ್ಯ ಎಂಬುದು ನಿರ್ದೇಶಕರ ನಂಬಿಕೆ. ಹಾಗಾಗಿ ಚಿತ್ರದ ನಾಯಕನ ಪಾತ್ರಕ್ಕೆ ತಾರಾ ವರ್ಚಸ್ಸಿನ ನಟ ಬೇಡ, ಪಾತ್ರದ ಸಿದ್ಧತೆಗೆ ಸಾಕಷ್ಟು ಸಮಯ ನೀಡಬೇಕು ಎಂದುಕೊಂಡು ಅವರು ಸುಮಂತ್ ಶೈಲೇಂದ್ರ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸುಮಂತ್‌ಗೆ ಮಾರ್ಷಲ್ ಆರ್ಟ್ಸ್ ಕಲಿಕೆಯ ಶಿಬಿರವನ್ನೂ ಮಾಡಿಸಿದ್ದಾರೆ. ಪಾತ್ರಕ್ಕೆ ಎಷ್ಟು ಅವಶ್ಯವೋ ಅಷ್ಟು ಮಾರ್ಷಲ್ ಆರ್ಟ್ಸ್ ಕಲಿತಿದ್ದಾರೆ ಸುಮಂತ್. ನಭಾ ನಟೇಶ್ ಮತ್ತು ಸ್ನೇಹಾ ಚಿತ್ರದ ನಾಯಕಿಯರು. ಇಬ್ಬರೂ ನಾಯಕಿಯರಿಗೆ ಚಿತ್ರದಲ್ಲಿ ಸಾಕಷ್ಟು ಮಹತ್ವವಿದೆ ಎನ್ನುವ ನಿರ್ದೇಶಕರು, ಪಾತ್ರಗಳಿಗೆ ಹೊಂದಿಕೆ ಆಗುವಂತೆ ಸುಚೇಂದ್ರಪ್ರಸಾದ್, ಸಾಧುಕೋಕಿಲ, ಅಚ್ಯುತಕುಮಾರ್, ಚಿಕ್ಕಣ್ಣ, ತಬಲಾ ನಾಣಿ ಅವರನ್ನೆಲ್ಲ ತಾರಾಬಳಗಕ್ಕೆ ಸೇರಿಸಿಕೊಂಡಿದ್ದಾರೆ.

ಕಥೆಯನ್ನು ಹಿಮ್ಮುಖವಾಗಿ ಹೇಳಿಕೊಂಡು ಬರುವ ತಂತ್ರವನ್ನು ಈ ಚಿತ್ರದಲ್ಲಿ ಅನುಸರಿಸಲಾಗಿದೆ. ಮೊದಲ ಅರ್ಧ ನೋಡಿದರೆ ಸಿನಿಮಾ ಏನು ಎಂದು ತಿಳಿಯುವುದಿಲ್ಲ.ಹಾಗಾಗಿ ಇಡೀ ಸಿನಿಮಾ ನೋಡಲೇಬೇಕು ಎನ್ನುವುದು ಶ್ರೀನಂದನ್ ಮಾತು. ‘ಏನೋ ಗಿಮಿಕ್ ಮಾಡುವ ಉದ್ದೇಶಕ್ಕೆ ಹೀಗೆ ಮಾಡಿಲ್ಲ. ಬದಲಾಗಿ ನಾಯಕನ ಪಾತ್ರಕ್ಕೆ ಎರಡು ಮೂರು ಛಾಯೆಗಳಿವೆ. ಅವೆಲ್ಲ ಯಾಕೆ ಹಾಗೆ ಬರುತ್ತವೆ’ ಎಂಬುದನ್ನು ಸಮರ್ಥವಾಗಿ ಹೇಳಲು ಈ ತಂತ್ರ ಬೇಕಿತ್ತು ಎಂಬುದು ಅವರ ಸಮರ್ಥನೆ.

‘ಅಗ್ರಜ’ ನಂತರ ಬೇರೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಸಿಕ್ಕರೂ, ಆ ಕಥೆಗಳಲ್ಲಿ ಸ್ಪಷ್ಟತೆ ಇಲ್ಲದ ಕಾರಣಕ್ಕೆ ಶ್ರೀನಂದನ್ ಅವುಗಳನ್ನು ಒಪ್ಪಿಕೊಳ್ಳಲಿಲ್ಲ. ತಮ್ಮದೇ ಕೆಲವು ಕಥೆಗಳಿದ್ದರೂ ಕೊಂಚ ಭಿನ್ನವಾಗಿ ಏನನ್ನಾದರೂ ಪ್ರಯತ್ನಿಸಬೇಕು ಎಂಬ ಕಾರಣಕ್ಕೆ ಅವರು, ಕಾಲಾವಕಾಶ ತೆಗೆದುಕೊಂಡು ಈಗ ಪ್ರೇಕ್ಷಕ ಪ್ರಭುವಿನ ಎದುರು ಹಾಜರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT