ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ತತ್ವದಿಂದ ಕಲ್ಯಾಣ ರಾಜ್ಯ ಸಾಧ್ಯ

ಶರಣ ಮೇಳ ಕಾರ್ಯಕ್ರಮದಲ್ಲಿ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅಭಿಮತ
Last Updated 13 ಜನವರಿ 2017, 5:46 IST
ಅಕ್ಷರ ಗಾತ್ರ
ಕೂಡಲಸಂಗಮ: ದೇಶದಲ್ಲಿ ಇಂದು ಎಲ್ಲೆಡೆ ರಾರಾಜಿಸುತ್ತಿರುವ ಭ್ರಷ್ಟಾಚಾರ, ಅನ್ಯಾಯ, ಅತ್ಯಾಚಾರ ಮತ್ತು ಹಿಂಸೆಯನ್ನು ತೊಲಗಿಸಿ ಜಾತಿ, ವರ್ಗ, ವರ್ಣರಹಿತ, ಧರ್ಮ ಸಹಿತ ದೈವೀರಾಜ (ಕಲ್ಯಾಣ ರಾಜ್ಯ) ನಿರ್ಮಾಣ ಮಾಡಬೇಕಾದರೆ ಬಸವತತ್ತ್ವ ಎಲ್ಲೆಡೆ ಪಸರಿಸಬೇಕಾದ ಅಗತ್ಯವಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.
 
ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದಲ್ಲಿ ನಡೆದ 30ನೇ ಶರಣ ಮೇಳದ 2 ದಿನದ ರಾಷ್ಟ್ರೀಯ ಬಸವ ದಳದ 30ನೇ ಅಧಿವೇಶನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. 
 
ಸಂಸ್ಕಾರ ಪಡೆದು ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಂಡು ಸಮಾಜಕ್ಕಾಗಿ, ಧರ್ಮಕ್ಕಾಗಿ ದುಡಿಯುವ ಯುವಕರು ಸಿದ್ಧರಾಗಬೇಕು. ಅಂಥ ಯುವಕರ ತಂಡವೇ ರಾಷ್ಟ್ರೀಯ ಬಸವ ದಳ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕೇರಳ,ಗೋವಾ ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ನಮ್ಮ ರಾಷ್ಟ್ರೀಯ ಬಸವ ದಳದ ಶಾಖೆಗಳು ಇವೆ. ಇಂದು ದೇಶದಲ್ಲಿ 1200 ರಾಷ್ಟ್ರೀಯ ಬಸವ ದಳದ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ ಈ ಸಂಘಟನೆಯು ಜಾತ್ಯತೀತ, ಪಕ್ಷಾತೀತ ಸಂಘಟನೆಯಾಗಿದೆ ಎಂದು ಹೇಳಿದರು.
 
 ಸಮಾರಂಭದ ಉದ್ಘಾಟನೆಯನ್ನು ಬೆಂಗಳೂರು ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡರು ನೇರವೇರಿಸಿ ಮಾತನಾಡಿ, ರಾಷ್ಟ್ರಪ್ರಜ್ಷೆ, ಧರ್ಮ ಶ್ರದ್ಧೆ ಹೊಂದಿರುವ ಯುವಕರ ಪಡೆ ರಾಷ್ಟ್ರೀಯ ಬಸವ ದಳವಾಗಿದ್ದು ಇಲ್ಲಿಯ ಯುವಕರು ಅತ್ಯಂತ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಶರಣ ಮೇಳದಂತಹ ಕಾರ್ಯಕ್ರಮಗಳು ಯುವಕರಲ್ಲಿ ಸಂಸ್ಕಾರ, ಧರ್ಮ ನಿಷ್ಠೆ, ದೇಶ ಪ್ರೇಮ ಮೂಡಿಸುತ್ತದೆ ಎಂದು ಹೇಳಿದರು.
 
ಬಸವ ಧ್ವಜಾರೋಹಣವನ್ನು ಬಂಡೆಪ್ಪನಹಳ್ಳಿ ಮಹಾದೇವಿ ಪಾಟೀಲ ಮಾಡಿದರು. ಚನ್ನಬಸವಾನಂದ ಸ್ವಾಮೀಜಿ, ಬೆಂಗಳೂರು ಬಸವ ಮಂಟಪದ ಬಸವಕುಮಾರ ಸ್ವಾಮೀಜಿ, ಚನ್ನಬಸವರಾಜ ಸ್ವಾಮೀಜಿ, ಹೈದ್ರಾಬಾದ ಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಮಾತೆ ಸತ್ಯಾದೇವಿ,ಮುಧೋಳದ ಕೆ.ಟಿ.ಸಾರವಾಡ,ರಾಜ್ಯ ರಾಷ್ಟ್ರೀಯ ಬಸವ ದಳದ ಪ್ರಧಾನ ಸಂಚಾಲಕ ಕೆ.ವಿರೇಶ, ಗೋವಾ ರಾಜ್ಯದ ಪೊಂಡಾ ಕಾರ್ಮಸ್ ಕಾಲೇಜನ ಪ್ರಭುಲಿಂಗ ಬಂಡಿ, ಶಿವಕುಮಾರ ಬಣಗಾರ ಮುಂತಾದವರು ಇದ್ದರು. 
 
‘ಲಿಂಗಾಯತ ಧರ್ಮಕ್ಕೆ ಮಾನ್ಯತೆ: ಬೆಂಬಲ ನೀಡದ ರಾಜಕಾರಣಿಗಳು’
ಲಿಂಗಾಯತ ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಪಡೆದು ಶಾಸಕ, ಸಚಿವರಾದ ರಾಜಕಾರಣಿಗಳು ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸದೇ ಇರುವುದು ದುರಂತ ಎಂದು ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನ ಪೀಠದ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
 
ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟದ ರೂಪರೇಷೆಯ ಚಿಂತನಗೋಷ್ಠಿ ಸಮಾರಂಭದ ಅತಿಥಿಯಾಗಿ ಮಾತನಾಡಿ, ಬಸವ ಸಂಘಟನೆಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಯಾವ ವಿಧಾನ ಪರಿಷತ್‌, ಸಂಸತ್‌ ಸದಸ್ಯನ ಬೆಂಬಲವೂ ಸಿಕ್ಕಿಲ್ಲ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಿ ಎಂದು ರಾಜ್ಯದ ಯಾವ ಸಂಸತ್‌ ಸದಸ್ಯರೂ ಪ್ರಧಾನಿಗೆ ಶಿಫಾರಸು ಪತ್ರ ಬರೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
 
ರಾಷ್ಟ್ರೀಯ ಬಸವ ದಳದ ಸಂಘಟಕರು ರಾಜ್ಯದ ಸಂಸತ್‌ ಸದಸ್ಯರ ಮನೆಯ ಎದುರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಿ ಎಂಬ ಶಿಫಾರಸು ಪತ್ರ ಕೊಡುವವರೆಗೆ ಮೌನ ಪ್ರತಿಭಟನೆಯನ್ನು ಮಾಡಬೇಕು. ಮಾನ್ಯತೆಗಾಗಿ ಸಂಸತ್ತಿನ ಒಳಗೆ, ಹೊರಗೆ ಯಾವ ರಾಜಕೀಯ ಪಕ್ಷ ಹೊರಾಟ ಮಾಡಲು ಪ್ರಯತ್ನಿಸುತ್ತದೆ ಎಂದು ಚುಣಾವಣಾ ಪ್ರಣಾಳಿಕೆಯಲ್ಲಿ ಸೇರಿಸುತ್ತದ್ದೆಯೋ ಅಂತಹ ಪಕ್ಷದ ಅಭ್ಯರ್ಥಿಗೆ ಪಕ್ಷಾತೀತವಾಗಿ ರಾಷ್ಟ್ರೀಯ ಬಸವ ದಳದ ಸಂಘಟನೆಗಳು ಬೆಂಬಲ ಸೂಚಿಸಬೇಕು ಎಂದು ಕೋರಿದರು.
 
***
ಕೇಂದ್ರಕ್ಕೆ  ನಿಯೋಗ– ಮಾತೆ ಮಹಾದೇವಿ
ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಮಾತನಾಡಿ, ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಅದಕ್ಕೆ ಸಿಗಬೇಕಾಗಿರುವ ಸ್ಥಾನಮಾನಗಳು ಸಿಗಬೇಕು. ಈ ದಿಸೆಯಲ್ಲಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಶೀಘ್ರದಲ್ಲಿಯೇ ಪ್ರಧಾನಿಗಳನ್ನು ಒತ್ತಾಯಿಸಲು ಕೇಂದ್ರಕ್ಕೆ ನಿಯೋಗ ಕೊಡೊಯ್ಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT