ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ–ಸಾಹಸದ ಕಸರತ್ತು

ಲೀ
Last Updated 13 ಜನವರಿ 2017, 12:13 IST
ಅಕ್ಷರ ಗಾತ್ರ

ಲೀ
ನಿರ್ಮಾಪಕರು: ಸಾರಥಿ ಸತೀಶ್, ದರ್ಶನ್ ಕೃಷ್ಣ, ಎಸ್.ಬಿ. ವಿನಯ್
ನಿರ್ದೇಶಕ: ಎಚ್.ಎಂ. ಶ್ರೀನಂದನ್
ತಾರಾಗಣ: ಸುಮಂತ್ ಶೈಲೇಂದ್ರ, ನಭಾ ನಟೇಶ್, ಸ್ನೇಹಾ ನಮನಂದಿ, ಅಚ್ಯುತಕುಮಾರ್,  ರಂಗಾಯಣ ರಘು

ಕಸದ ತೊಟ್ಟಿ ಪಕ್ಕ ಮಲಗಿದ ಚಾರ್ಲಿ ಅಲ್ಲೇ ಅನ್ನ ಹುಡುಕುತ್ತಾನೆ. ನಾಯಿಗಳ ಜೊತೆ ಕಿತ್ತಾಡಿಕೊಂಡು ಊಟ ಮಾಡುತ್ತಾನೆ. ತನಗೆ ಊಟ ಕೊಟ್ಟು ಪ್ರಚಾರ ಪಡೆಯಲು ಬರುವ ಹುಡುಗಿಯೊಬ್ಬಳ ತೊಡೆ ಕಚ್ಚುತ್ತಾನೆ. ಮೊದಲ ದೃಶ್ಯ ‘ರಕ್ತಕಣ್ಣೀರು’ ಚಿತ್ರದ ಮೋಹನ್ ಪಾತ್ರವನ್ನು ನೆನಪಿಸಿದರೆ, ಎರಡನೇ ದೃಶ್ಯವು ಹುಚ್ಚುತನದ ಪರಮಾವಧಿ. ಅಲ್ಲಿಂದ ಚಾರ್ಲಿಯ ಫ್ಲ್ಯಾಷ್‌ಬ್ಯಾಕ್ ಕಥೆ ಶುರು. ಈ ಕಥೆ ಹೇಳುವುದು – ನಾಯಿ, ಕತ್ತೆಗಳು.

ಚಾರ್ಲಿ (ಸುಮಂತ್) ಊರಿನ ಮಕ್ಕಳಿಗೆ ‘ಮಾರ್ಷಲ್ ಆರ್ಟ್ಸ್’ ಕಲೆಯನ್ನು ಕಲಿಸುವ ತರಬೇತುದಾರ. ಆತನಿಗೂ ಲೀಲಾಳಿಗೂ (ನಭಾ) ಪ್ರೀತಿ ಹುಟ್ಟುತ್ತದೆ. ಧರ್ಮದ ಹಿನ್ನೆಲೆಯಲ್ಲಿ ಇವರಿಬ್ಬರ ಮದುವೆಗೆ ಎರಡೂ ಕುಟುಂಬಗಳು ಒಪ್ಪುವುದಿಲ್ಲ. ಅದೇ ಕಾರಣಕ್ಕೆ ಕುಟುಂಬಗಳ ನಡುವೆ ಮಾರಾಮಾರಿ ಆಗುತ್ತಿದ್ದರೆ, ಪ್ರೇಮಿಗಳಿಬ್ಬರು ನಗರಕ್ಕೆ ಹೋಗಿ ರಿಜಿಸ್ಟರ್ ಮದುವೆ ಆಗುವ ಯೋಜನೆ ಹಾಕುತ್ತಾರೆ. ಮದುವೆಗೆ ಬರುವ ನೂರಾರು ವಿಘ್ನಗಳನ್ನು ಇವರು ಹೇಗೆ ಮೀರುತ್ತಾರೆ ಎಂಬುದು ಕಥೆಯ ಸಾರ. ಮಾರ್ಷಲ್ ಆರ್ಟ್ಸ್ ಅಂದಮೇಲೆ ಹೊಡೆದಾಟದ ಸನ್ನಿವೇಶಗಳಿರುವುದು ಅವಶ್ಯ.

ಮಾರ್ಷಲ್ ಆರ್ಟ್ಸ್, ಧರ್ಮ ಭೇದ, ಭೂಗತ ಜಗತ್ತು, ಭಿಕ್ಷುಕರ ಮಾಫಿಯಾ, ಪೊಲೀಸರ ಲಂಚಕೋರತನ ಇಷ್ಟೆಲ್ಲವನ್ನು ಸುತ್ತಿಕೊಂಡ ನಿರ್ದೇಶಕ ಶ್ರೀನಂದನ್ ತಾವು ನಿಜವಾಗಿ ಹೇಳಬೇಕಾದ್ದನ್ನು ಮರೆತುಬಿಟ್ಟಿದ್ದಾರೆ. ಪದೇ ಪದೇ ಫ್ಲ್ಯಾಷ್‌ಬ್ಯಾಕ್ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕಥೆ, ಚಿತ್ರಕಥೆ, ಸಂಗೀತ (ಆನಂದ ರಾಜವಿಕ್ರಮ್), ಹಿನ್ನೆಲೆ ಸಂಗೀತ (ಗುರುಕಿರಣ್), ಛಾಯಾಗ್ರಹಣ (ಎಂ.ಯು. ನಂದಕುಮಾರ್) ಯಾವುದೂ ಒಂದರ ತಪ್ಪನ್ನು ಇನ್ನೊಂದು ಸರಿದೂಗಿಸಲು ಸಫಲವಾಗಿಲ್ಲ.

ಸುಮಂತ್‌ಗೆ ಹೋಲಿಸಿದರೆ ನಭಾ, ಸ್ನೇಹಾಗೆ ಸಿಕ್ಕ ಅವಕಾಶ ಕಡಿಮೆಯೇ. ಅಷ್ಟೇ ಸಮಯದಲ್ಲಿ ನಟನೆಯ ಮೂಲಕ ಪ್ರೇಕ್ಷಕನ ಸ್ಮೃತಿಪಟಲದಲ್ಲಿ ಅಚ್ಚೊತ್ತುವ ಛಾಪು ಅವರ ನಟನೆಯಲ್ಲಿಲ್ಲ. ಸುಮಂತ್ ಕೂಡ ಬುದ್ಧಿಮಾಂದ್ಯನಾಗಿ, ಮಾರ್ಷಲ್ ಆರ್ಟ್ಸ್ ಗುರುವಾಗಿ ಸಮರ್ಥ ಅಭಿನಯ ನೀಡುವಲ್ಲಿ ಇನ್ನೂ ಪರಿಣಾಮಕಾರಿ ಆಗಬೇಕಿತ್ತು. ಚಾರ್ಲಿ ಪದದ ಕೊನೆಯ ಅಕ್ಷರ ಲೀ, ಲೀಲಾ ಹೆಸರಿನ ಮೊದಲ ಅಕ್ಷರ ಲೀ. ಅದೇ ಕಾರಣಕ್ಕೆ ‘ನನ್ನಲೀ ಮೊದಲು... ನಿನ್ನಲೀ ಕೊನೆ...’ ಎಂಬ ಉಪ ಶೀರ್ಷಿಕೆ ಇಡಲಾಗಿದೆಯೇ ಹೊರತು ಚಿತ್ರದಂತೆ ಅದಕ್ಕೂ ಹೆಚ್ಚಿನ ಅರ್ಥವೇನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT