ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವನಗರಿ’ಯಲ್ಲಿ ದೂಳಿನ ದರ್ಬಾರ್‌

ಏನು ಕಾರಣ? ಹೇಗೆ ನಿಯಂತ್ರಣ?
Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ

ದಾವಣಗೆರೆ: ಎಂಬತ್ತರ ದಶಕದಲ್ಲಿ ನಗರದ ರಸ್ತೆಗಳಲ್ಲಿ ಸಾಲುಮರಗಳು ಕಂಗೊಳಿಸುತ್ತಿದ್ದವು. ದಾರಿಹೋಕರಿಗೆ ನೆರಳಿನ ಜೊತೆಗೆ ಶುದ್ಧ ತಂಗಾಳಿಯನ್ನೂ ನೀಡುತ್ತಿದ್ದವು. ಸುತ್ತಲಿನ ಹಳ್ಳಿಗಳ ಜನ ‘ದೇವನಗರಿ’ಗೆ ಬಂದು ಡಾಂಬರು ರಸ್ತೆಗಳಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದರು.

ಈಗ ಕಾಲ ಬದಲಾಗಿದೆ. ಅಭಿವೃದ್ಧಿಯ ಗರಗಸಕ್ಕೆ ಸಿಲುಕಿ ಸಾಲುಮರಗಳೆಲ್ಲ ನೆಲಕಚ್ಚಿವೆ. ಅದರ ಸ್ಥಾನವನ್ನು ಸಿಮೆಂಟ್‌ ರಸ್ತೆಗಳು ಆಕ್ರಮಿಸಿವೆ. ಇನ್ನೂ ಆಕ್ರಮಿಸುತ್ತಿವೆ. ಹಲವೆಡೆ ರಸ್ತೆ ನಿರ್ಮಾಣದ್ದೇ ಸದ್ದು! ‘ಸ್ಮಾರ್ಟ್‌ ಸಿಟಿ’ ಪಟ್ಟಕ್ಕೇರಲು ಸಜ್ಜಾಗುತ್ತಿರುವ ‘ದೇವನಗರಿ’ ಪಥದಲ್ಲಿ ದೂಳಿನದ್ದೇ ದರ್ಬಾರು. ಜೊತೆಗೆ ದಿನೇ ದಿನೇ ಹೆಚ್ಚುತ್ತಿರುವ ವಾಹನಗಳು ಉಗುಳುತ್ತಿರುವ ಇಂಗಾಲದ ಡೈಆಕ್ಸೈಡ್‌, ಇನ್ನೊಂದೆಡೆ ಹಳೆ ದಾವಣಗೆರೆ ಭಾಗದಲ್ಲಿ ಮಂಡಕ್ಕಿ ಭಟ್ಟಿಗಳಿಂದ ಹೊರ ಹೊಮ್ಮುತ್ತಿರುವ ದಟ್ಟ ಹೊಗೆ. ಇದರಿಂದಾಗಿ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಎಲ್ಲೆ ಮೀರಿದೆ. ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದಲ್ಲಿ ಮಾಲಿನ್ಯದ ಮಟ್ಟವನ್ನು ಅಳೆಯಲು ಎರಡು ಸ್ಥಳಗಳಲ್ಲಿ ಪರಿಶೀಲನಾ ಕೇಂದ್ರಗಳನ್ನು ನಿರ್ಮಿಸಿದೆ. ಜನವಸತಿ ಪ್ರದೇಶವಾದ ದೇವರಾಜ ಅರಸು ಬಡಾವಣೆಯಲ್ಲಿರುವ ಮಂಡಳಿಯ ಪ್ರಾದೇಶಿಕ ಕಚೇರಿಯಲ್ಲಿ ಹಾಗೂ ವಾಣಿಜ್ಯ ಪ್ರದೇಶವಾದ ಪಿ.ಬಿ. ರಸ್ತೆಯ ಗಾಂಧಿ ವೃತ್ತದ ಬಳಿಯ ಮೋತಿ ಟಾಕೀಸ್‌ ಬಳಿ ಪರಿಶೀಲನಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

‘ಪಿ.ಬಿ. ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಆರಂಭಗೊಳ್ಳುವ ಮೊದಲು, ನಾಲ್ಕೈದು ವರ್ಷಗಳ ಹಿಂದೆ ಮೋತಿ ಟಾಕೀಸ್‌ ಬಳಿ ದೂಳಿನ ಪ್ರಮಾಣ ಸರಾಸರಿ 60ರಿಂದ 70 ಮೈಕ್ರೊ ಗ್ರಾಂ ಕ್ಯೂಬಿಕ್‌ ಮೀಟರ್‌ ಕಂಡು ಬರುತ್ತಿತ್ತು. ನಗರದಲ್ಲಿ ಸಿಮೆಂಟ್‌ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಹಾಗೂ ಈ ಮಾರ್ಗದಲ್ಲಿ ಭಾರಿ ವಾಹನಗಳು ರಸ್ತೆ ನಿರ್ಮಾಣಕ್ಕೆ ಮಣ್ಣು, ಸಿಮೆಂಟ್‌ ಸೇರಿದಂತೆ ಅಗತ್ಯ ಸಾಮಗ್ರಿ ಸಾಗಿಸುತ್ತಿರುವುದರಿಂದ ಇಲ್ಲಿ ದೂಳಿನ ಪ್ರಮಾಣ ಹೆಚ್ಚಾಗಿದೆ. ದೇವರಾಜ ಅರಸು ಬಡಾವಣೆಯಲ್ಲಿರುವ ನಮ್ಮ ಕಚೇರಿ ಬಳಿ ದೂಳಿನ ಪ್ರಮಾಣ ಈಗಲೂ ಸರಾಸರಿ 60 ಮೈಕ್ರೊ ಗ್ರಾಂ ಕ್ಯೂಬಿಕ್‌ ಮೀಟರ್‌ ಮಾತ್ರ ಇದೆ. ನಗರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಹೆಚ್ಚುತ್ತಿರುವುದರಿಂದ ದೂಳಿನ ಪ್ರಮಾಣವೂ ಹೆಚ್ಚಾಗುತ್ತಿದೆ’ ಎಂದು ವಿಶ್ಲೇಷಿಸುತ್ತಾರೆ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಕೆ.ಎಸ್‌.ಮಂಜುನಾಥ್‌.
‘ದಾವಣಗೆರೆಯಲ್ಲಿ ಮರಳು ಮಿಶ್ರಿತ ಮಣ್ಣಿದೆ. ರಸ್ತೆಗಳ ಪಕ್ಕ ಗಿಡ–ಮರಗಳು ಇಲ್ಲದೇ ಇರುವುದರಿಂದ ದೂಳಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ’ ಎಂದು ಮಂಜುನಾಥ್‌ ಅಭಿಪ್ರಾಯಪಡುತ್ತಾರೆ.

ಸಿಮೆಂಟ್‌ ರಸ್ತೆ ನಿರ್ಮಿಸಿದ ತಕ್ಷಣವೇ ಫುಟ್‌ಪಾತ್‌ ಸಿದ್ಧಪಡಿಸುತ್ತಿಲ್ಲ. ಅಕ್ಕಪಕ್ಕದ ಮಣ್ಣು ರಸ್ತೆಗೆ ಬಂದು ವಾಹನ ಹೋದಾಗಲೆಲ್ಲ ದೂಳು ಹಾರುತ್ತಿದೆ. ಮಳೆ ನೀರು ರಸ್ತೆಯಿಂದ ಸುಗಮವಾಗಿ ಹರಿದುಹೋಗಲು ಕೆಲವೆಡೆ ಚರಂಡಿ ವ್ಯವಸ್ಥೆಯನ್ನೂ ಸರಿಯಾಗಿ ನಿರ್ಮಿಸಿಲ್ಲ. ಮಹಾನಗರ ಪಾಲಿಕೆ ಬಳಿಯಿರುವ ದೂಳು ಸೆಳೆದುಕೊಳ್ಳುವ ಯಂತ್ರವೂ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಜನ ದೂಳಿನಿಂದ ತಪ್ಪಿಸಿಕೊಳ್ಳಲು ಮೂಗು ಮುಚ್ಚಿಕೊಂಡು ಅಥವಾ ಮುಖಗವಸು ಹಾಕಿಕೊಂಡೇ ತಿರುಗಾಡುವಂತಾಗಿದೆ.

‘ಸಿಮೆಂಟ್‌ ರಸ್ತೆ ನಿರ್ಮಾಣಗೊಂಡ ತಕ್ಷಣವೇ ಅದನ್ನು ನೀರಿನಿಂದ ತೊಳೆದು ದೂಳು ಇಲ್ಲದಂತೆ ಮಾಡಬೇಕು. ಆದರೆ ನಗರದಲ್ಲಿ ಆ ಕೆಲಸ ನಡೆದಿಲ್ಲ. ಮಕ್ಕಳು ಹಾಗೂ  ವಯಸ್ಸಾದವರು ದೂಳಿನಿಂದಾಗಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ’ ಎನ್ನುತ್ತಾರೆ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ನಾಗರಾಜ ಆಚಾರ್‌.

‘ಸಿಂಗಪುರದಲ್ಲಿ ರಸ್ತೆಯ ಪಕ್ಕ ಕ್ರಮವಾಗಿ ಲಾನ್‌, ಗಿಡ–ಮರ, ಲಾನ್‌, ಕೊನೆಯಲ್ಲಿ ಚರಂಡಿ ನಿರ್ಮಿಸಲಾಗುತ್ತದೆ. ಹೀಗಾಗಿ ಅಲ್ಲಿ ದೂಳಿನ ಸಮಸ್ಯೆ ಇಲ್ಲ. ನಗರದಲ್ಲಿ ಸಿಮೆಂಟ್‌ ರಸ್ತೆಯ ಪಕ್ಕ ಕೊನೆಯ ಪಕ್ಷ ಸಾಲುಮರಗಳನ್ನಾದರೂ ಬೆಳೆಸಿದ್ದರೆ ದೂಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿತ್ತು’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ನಗರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅಸ್ತಮಾ ರೋಗದಿಂದ ಬಳಲುತ್ತಿರುವರ ಸಂಖ್ಯೆ ಶೇ 30ರಷ್ಟು ಹೆಚ್ಚಾಗಿದೆ. ಮನೆ ಎದುರು ಒಂದು ಮರ ಇದ್ದರೆ, ಮನೆಯೊಳಗೆ ಒಂದು ಆಮ್ಲಜನಕದ ಸಿಲಿಂಡರ್‌ ಇಟ್ಟುಕೊಂಡಂತೆ. ಉದ್ಯಾನಗಳಲ್ಲಿ ಲಾನ್‌ ಬೆಳೆಸುವ ಬದಲು ಆಮ್ಲಜನಕವನ್ನು ಹೆಚ್ಚಾಗಿ ನೀಡುವ ಗಿಡ–ಮರಗಳನ್ನು ಬೆಳೆಸಬೇಕು’ ಎನ್ನುತ್ತಾರೆ ಡಾ. ಬಿ.ಎಂ.ವಿಶ್ವನಾಥ್‌.

‘1974ರಲ್ಲಿ ಕಾಮ್ರೇಡ್‌ ಪಂಪಾಪತಿ ಅವರು ನಗರಸಭೆ ಅಧ್ಯಕ್ಷರಾಗಿದ್ದಾಗ ನಗರದ ವಿವಿಧೆಡೆ ಸಾಲು ಮರಗಳನ್ನು ನೆಡಿಸಿದ್ದರು. ಆದರೆ, ರಸ್ತೆ ಅಗಲೀಕರಣದ ಹೆಸರಿನಲ್ಲಿ ಅವುಗಳನ್ನು ಕಡಿದುಹಾಕಲಾಗಿದೆ. ಈಗ ಗಿಡಮರಗಳನ್ನು ಬೆಳೆಸಲು ಪಾಲಿಕೆ ಅನುದಾನ ನೀಡುತ್ತಿಲ್ಲ. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದೆ’ ಎಂದು ಪಾಲಿಕೆಯ ಸದಸ್ಯ ಎಚ್‌.ಜಿ.ಉಮೇಶ್‌ ವಿಷಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT