ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸೌಂದರ್ಯಕ್ಕೆ ಧಕ್ಕೆ: ಅಧಿಕಾರಿಗಳ ಮೌನ

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬ್ಯಾನರ್, ಪೋಸ್ಟರ್‌ ಹಾವಳಿ ನಗರಸಭೆ ಆದಾಯಕ್ಕೆ ಕತ್ತರಿ
Last Updated 16 ಜನವರಿ 2017, 5:28 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌, ಜಾಹೀರಾತು ಫಲಕಗಳದ್ದೇ ಅಬ್ಬರ. ಸರ್ಕಾರಿ ಕಚೇರಿ, ಶಾಲಾ ಕಾಲೇಜು ಕಟ್ಟಡಗಳು, ಬಸ್‌ ನಿಲ್ದಾಣದ ತಡೆಗೋಡೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೆಲ್ಲಾ ಇವುಗಳದ್ದೇ ಕಾರುಬಾರು.

ಪ್ರಚಾರದ ಗೀಳಿಗೆ ಅಂಟಿಕೊಂಡಿರುವ ಕೆಲ ರಾಜಕಾರಣಿಗಳು ಹಾಗೂ ಅವರ ಬೆಂಬಲಿಗರ ಪಡೆಯು ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ಸಿಕ್ಕ ಸಿಕ್ಕಲೆಲ್ಲಾ ಬ್ಯಾನರ್‌, ಫ್ಲೆಕ್ಸ್‌ಗಳನ್ನು ಹಾಕಿದೆ. ಮತ್ತೊಂದೆಡೆ ಚಿತ್ರಮಂದಿರಗಳ ಕೆಲಸಗಾರರು ಸಾರ್ವಜನಿಕ ಸ್ಥಳಗಳಲ್ಲಿ ಚಲನಚಿತ್ರದ ಪೋಸ್ಟರ್‌ಗಳನ್ನು ಅಂಟಿಸಿ ನಗರದ ಅಂದಗೆಡಿಸಿದ್ದಾರೆ.

ರಾಜಕಾರಣಿಗಳ ಬೆಂಬಲಿಗರು ಪರಸ್ಪರ ಸ್ಪರ್ಧೆಗೆ ಇಳಿದವರಂತೆ ತಮ್ಮ ಮುಖಂಡರ ಭಾವಚಿತ್ರವಿರುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದಿದ್ದಾರೆ. ಇನ್ನು ಅಶ್ಲೀಲ ಭಂಗಿಯ ಚಲನಚಿತ್ರಗಳ ಪೋಸ್ಟರ್‌ಗಳನ್ನು ಅಂಟಿಸಿರುವ ಜಾಗದಲ್ಲಿ ಮಹಿಳೆಯರು, ಮಕ್ಕಳು ಓಡಾಡುವುದೇ ಕಷ್ಟವಾಗಿದೆ.

ನಗರಸಭೆಯು ಜಾಹೀರಾತು ಶುಲ್ಕದ ರೂಪದಲ್ಲಿ ವರ್ಷಕ್ಕೆ ಸುಮಾರು ₹ 5 ಲಕ್ಷ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. ಆದರೆ, ಖಾಸಗಿ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ನಗರದಲ್ಲಿ ನಿಯಮಬಾಹಿರವಾಗಿ ಪ್ರಚಾರ ಸಾಮಗ್ರಿಗಳನ್ನು ಹಾಕುವ ಮೂಲಕ ನಗರಸಭೆಗೆ ವಂಚಿಸುತ್ತಿದ್ದಾರೆ. ಅಧಿಕಾರಿಗಳ ಕಣ್ತಪ್ಪಿಸಿ ನಡೆಯುತ್ತಿರುವ ಈ ಅಕ್ರಮದಿಂದ ನಗರಸಭೆಗೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಜಾಹೀರಾತು ತೆರಿಗೆ ಖೋತಾ ಆಗುತ್ತಿದೆ.

ಅನುಮತಿ ಕಡ್ಡಾಯ: ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 133ರ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳು ನಗರದ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ, ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌ ಮತ್ತು ಪ್ರಚಾರ ಸಾಮಗ್ರಿಗಳನ್ನು ಹಾಕಬೇಕಾದರೆ ನಗರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಜತೆಗೆ ನಗರಸಭೆ ಸೂಚಿಸಿದ ಪ್ರಮಾಣದಲ್ಲಿ ಶುಲ್ಕ ಪಾವತಿಸಬೇಕು.

ಪ್ರಚಾರ ಸಾಮಗ್ರಿಯ ಗಾತ್ರ ಆಧರಿಸಿ ಶುಲ್ಕದ ಪ್ರಮಾಣ ನಿಗದಿಪಡಿಸಲಾಗುತ್ತದೆ. ಈ ಶುಲ್ಕವು ನಗರಸಭೆಯ ಆದಾಯ ಮೂಲವಾಗಿದೆ. ನಗರಸಭೆ ಅಧಿಕಾರಿಗಳ ಮಾಹಿತಿ ಪ್ರಕಾರ ನಗರದಲ್ಲಿ ಅನುಮತಿ ಪಡೆದು ಹಾಕಿರುವ ಪ್ರಚಾರ ಸಾಮಗ್ರಿಗಳ ಸಂಖ್ಯೆ ಕೇವಲ 150. ಈ ಸಂಖ್ಯೆಗೆ ಹೋಲಿಸಿದರೆ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಮತ್ತು ಜಾಹೀರಾತು ಫಲಕಗಳ ಸಂಖ್ಯೆಯು 10ರಿಂದ 20 ಪಟ್ಟು ಹೆಚ್ಚಿದೆ. ಶಾಲಾ ಕಾಲೇಜು ಕಟ್ಟಡ, ಬಸ್‌ ನಿಲ್ದಾಣದ ತಡೆಗೋಡೆಗಳ ಮೇಲಂತೂ ಚಲನಚಿತ್ರದ ಪೋಸ್ಟರ್‌ಗಳ ಹಾವಳಿ ಮಿತಿ ಮೀರಿದೆ.

ಈ ಬಗ್ಗೆ ಸಾರ್ವಜನಿಕರು ನಗರಸಭೆಗೆ ಹಲವು ಬಾರಿ ದೂರು ನೀಡಿ ಅನಧಿಕೃತ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ.

ಜೈಲು ಶಿಕ್ಷೆ: ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ 1981ರ ಅನ್ವಯ ನಗರಸಭೆಯ ಪೂರ್ವಾನುಮತಿ ಪಡೆಯದೆ ಪ್ರಚಾರ ಸಾಮಗ್ರಿಗಳನ್ನು ಹಾಕುವುದು ಶಿಕ್ಷಾರ್ಹ ಅಪರಾಧ. ಈ ಕಾಯ್ದೆಯ ಕಲಂ 3ರ ಪ್ರಕಾರ ಅನುಮತಿ ಇಲ್ಲದೆ ಪ್ರಚಾರ ಸಾಮಗ್ರಿಗಳನ್ನು ಹಾಕುವವರಿಗೆ 6 ತಿಂಗಳ ಜೈಲು ಶಿಕ್ಷೆ ಅಥವಾ ₹ 1 ಸಾವಿರ ದಂಡ ವಿಧಿಸಬಹುದು. ಇಲ್ಲವೇ ಜೈಲು ಶಿಕ್ಷೆ ಜತೆಗೆ ದಂಡವನ್ನೂ ವಿಧಿಸಬಹುದು. ಅಲ್ಲದೇ, ಅನಧಿಕೃತ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲು ಅವಕಾಶವಿದೆ.

ಆದರೆ, ನಗರಸಭೆ ಅಧಿಕಾರಿಗಳು ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆಯ ಅನುಷ್ಠಾನದಲ್ಲಿ ಎಡವಿದ್ದಾರೆ. ಸಂಘ ಸಂಸ್ಥೆಗಳ ವಿರೋಧ ಹಾಗೂ ರಾಜಕೀಯ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ಅನಧಿಕೃತ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸುತ್ತಿಲ್ಲ. ಮತ್ತೊಂದೆಡೆ ಕಾಲ ಕಾಲಕ್ಕೆ ಜಾಹೀರಾತು ತೆರಿಗೆ ವಸೂಲಿ ಮಾಡುವಲ್ಲೂ ಹಿಂದೆ ಬಿದ್ದಿದ್ದಾರೆ.

*
ಪ್ರಯೋಜನವಾಗಿಲ್ಲ
ಹೊಸ ವರ್ಷ ಅಥವಾ ಯಾವುದೇ ಹಬ್ಬ ಬಂತೆಂದರೆ ನಗರದಲ್ಲಿ ಪ್ರಚಾರ ಸಾಮಗ್ರಿಗಳ ಅಬ್ಬರ. ಕೆಲ ರಾಜಕಾರಣಿಗಳು ಹಾಗೂ ಅವರ ಬೆಂಬಲಿಗರ ಪ್ರಚಾರದ ಗೀಳಿನಿಂದ ನಗರದ ಅಂದಗೆಡುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ.
–ಗಿರಿ, ನಗರವಾಸಿ

*
ಗಮನ ಹರಿಸುತ್ತಿಲ್ಲ
ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಜಾಹೀರಾತು ಫಲಕಗಳ ಹಾವಳಿ ಮಿತಿ ಮೀರಿದ್ದು, ನಗರ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಅಶ್ಲೀಲ ಭಂಗಿಯ ಚಲನಚಿತ್ರಗಳ ಪೋಸ್ಟರ್‌ಗಳನ್ನು ಅಂಟಿಸಿರುವ ಕಡೆ ಮಹಿಳೆಯರು ಓಡಾಡುವುದೇ ಕಷ್ಟವಾಗಿದೆ. ನಿಯಮಬಾಹಿರವಾಗಿ ಹಾಕಿರುವ ಪ್ರಚಾರ ಸಾಮಗ್ರಿಗಳ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲ.
–ಕಲ್ಯಾಣ್‌, ನಗರವಾಸಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT