ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿಯತ್ತ ಯುವಕರ ಸೆಳೆವ ಯತ್ನ’

Last Updated 16 ಜನವರಿ 2017, 6:01 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದಲ್ಲಿ ಮಳೆಯಾಧಾರಿತ ಕೃಷಿ ನಡೆಸುತ್ತಿರುವ ರೈತರು ಸಂಕಷ್ಟದಲ್ಲಿದ್ದು, ಇವರ ನೆರವಿಗೆ ಧಾವಿಸಲು ₹ 5ಸಾವಿರ ಕೋಟಿ ವೆಚ್ಚದಲ್ಲಿ 67 ಕೆರೆ ತುಂಬುವ ಯೋಜನೆ ಗಳನ್ನು ಜಲಸಂಪನ್ಮೂಲ ಇಲಾಖೆಯಿಂದ ಅನುಷ್ಠಾನಗೊಳಿ ಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಸಿದ್ಧೇಶ್ವರ ಸಂಸ್ಥೆ ಭಾನುವಾರ ರಾತ್ರಿ ನಗರದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನೀಡಿದ ‘ವಿಜಯಪುರ ಜಿಲ್ಲೆಯ ಭಗೀರಥ’ ಬಿರುದು ಸ್ವೀಕರಿಸಿ ಮಾತನಾಡಿದ ಸಚಿವ, ಕೃಷಿಯಿಂದ ವಿಮುಖರಾಗುತ್ತಿರುವ ಯುವಕರನ್ನು ಮರಳಿ ಕೃಷಿ ಕ್ಷೇತ್ರಕ್ಕೆ ಕರೆತರಲು ಕೆರೆ ತುಂಬುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ನೀರಾವರಿ ಯೋಜನೆಗಳಿಗೆ ಭದ್ರ ಅಡಿಪಾಯ ಹಾಕಿರುವೆ. ಮುಂಬರುವ ಡಿಸೆಂಬರ್‌ನೊಳಗೆ ಜಿಲ್ಲೆಯ 184 ಕೆರೆ ತುಂಬುವೆ. ವಿವಿಧ ಏತ ನೀರಾವರಿ ಯೋಜನೆಗಳಡಿ 15 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವೆ.

ಮೂರು ಮುಕ್ಕಾಲು ವರ್ಷ ಅಹೋರಾತ್ರಿ ಶ್ರಮಿಸಿದ ನನಗೆ ಇನ್ನೂ ತೃಪ್ತಿ ಸಿಗದಾಗಿದೆ. ನನ್ನ ಅವಧಿಯಲ್ಲಿ ಕೈಗೆತ್ತಿಕೊಂಡ ಎಲ್ಲ ಯೋಜನೆ ಪೂರ್ಣಗೊಂಡು, ಕೆರೆಗಳಿಗೆ ನೀರು ತುಂಬಿ, ಅಂತರ್ಜಲ ಹೆಚ್ಚಳಗೊಂಡು, ರೈತರ ಭೂಮಿಯಲ್ಲಿ ಹಸಿರು ನಳನಳಿಸಿದಾಗ ಮಾತ್ರ ಮನಸ್ಸಿಗೆ ತೃಪ್ತಿ ದೊರಕಲಿದೆ ಎಂದು ಎಂ.ಬಿ.ಪಾಟೀಲ ಹೇಳಿದರು.

ಮುಖ್ಯಮಂತ್ರಿಯಾಗಿರುತ್ತಿದ್ದೆ..!
ವಿಧಾನ ಪರಿಷತ್ ಸದಸ್ಯ, ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಯತ್ನಾಳ ಈಚೆಗಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲರನ್ನು ತುಂಬಾ ಹೊಗಳುತ್ತಿ ದ್ದಾನೆ. ಖಾಲಿಯಿರುವ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಈ ರೀತಿ ವರ್ತಿಸುತ್ತಿದ್ದಾನೆ ಎಂಬ ಅನುಮಾನ ನಿಮಗ್ಯಾರಿಗೂ ಬೇಡ. ಅಧಿಕಾರಕ್ಕಾಗಿ ಲಾಬಿ ಮಾಡುವ ಮನುಷ್ಯ ನಾನಾಗಿದ್ದರೆ, ಯಡಿಯೂರಪ್ಪ ನಂತರ ಬಿಜೆಪಿ ಮುಖ್ಯಮಂತ್ರಿ ನಾನೇ ಆಗಿರುತ್ತಿದ್ದೆ’ ಎನ್ನುವ ಮೂಲಕ ತಮ್ಮದೇ ಶೈಲಿಯ ಜವಾರಿ ಡೈಲಾಗ್‌ ಹೇಳುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಜನಸ್ತೋಮ ನಗೆಗಡಲಲ್ಲಿ ತೇಲಿತು.

ಈ ಹಿಂದಿನಿಂದಲೂ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದ ನಾಯಕರು ನೀರು ನೀಡುವ ಬದಲು ದಾರು ಅಂಗಡಿ ತೆರೆದು ತಮ್ಮ ಅಭಿವೃದ್ಧಿ ಕಂಡುಕೊಂಡಿದ್ದಾರೆ. ಇಂತಹವರ ಬಗ್ಗೆ ಎಚ್ಚರದಿಂದಿರಿ. 15 ದಿನದ ಸುಖಕ್ಕೆ ನಿಮ್ಮನ್ನು ಮಾರಿಕೊಳ್ಳಬೇಡಿ ಎಂದು ಚುನಾವಣಾ ಪೂರ್ವ ಭಾಷಣವನ್ನು ಯತ್ನಾಳ ಇದೇ ವೇದಿಕೆಯಲ್ಲಿ ನಡೆಸಿದರು.

ಸಿದ್ಧೇಶ್ವರ ರತ್ನ ಪ್ರಶಸ್ತಿ ಪುರಸ್ಕೃತರು: ಬಸನಗೌಡ ಮಲಕನಗೌಡ ಪಾಟೀಲ (ಶಿಕ್ಷಣ), ಎಂ.ಎನ್.ವಾಲಿ (ಸಾಹಿತ್ಯ), ರಾಜೇಶ್ವರಿ ಗಾಯಕವಾಡ (ಕ್ರೀಡೆ), ಸಂಗಮೇಶ ಟಿ.ಚೂರಿ (ಪತ್ರಿಕೋದ್ಯಮ), ಡೊಳ್ಳಿನ ಪದದ ಗಾಯಕ ಸುರೇಶ ರಾಮಚಂದ್ರ ಜೋಶಿ (ಕಲೆ), ಅಶೋಕ ಬಿಂದುರಾವ ಕುಲಕರ್ಣಿ (ಕೃಷಿ) ಅವರಿಗೆ ಸಿದ್ಧೇಶ್ವರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಚಿವ ವಿನಯ ಕುಲಕರ್ಣಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಪ್ರೊ.ರಾಜು ಆಲಗೂರ, ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಸಿದ್ಧೇಶ್ವರ ಸಂಸ್ಥೆ ಚೇರ್‌ಮನ್ ಬಸಯ್ಯ ಹಿರೇಮಠ, ಜಾತ್ರಾ ಸಮಿತಿ ಅಧ್ಯಕ್ಷ ಎಸ್.ಎಚ್.ನಾಡಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT