ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಕ್ಕೆ ಕಿವಿಗೊಡದ ಸರ್ಕಾರ: ರೈತರ ಆರೋಪ

ನಂಜನಗೂಡಿನ ಬರ ಪ್ರದೇಶಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡರ ತಂಡ
Last Updated 16 ಜನವರಿ 2017, 6:45 IST
ಅಕ್ಷರ ಗಾತ್ರ

ಮೈಸೂರು: ‘ನಂಜನಗೂಡಿನಲ್ಲಿ ಎರಡು ವರ್ಷಗಳಿಂದಲೂ ಭೀಕರ ಬರ ಪರಿಸ್ಥಿತಿ ಇದ್ದರೂ, ಸ್ಥಳೀಯ ಆಡಳಿತ ಹಾಗೂ ರಾಜ್ಯ ಸರ್ಕಾರ ನಮ್ಮ ಸಮಸ್ಯೆಯನ್ನು ಆಲಿಸುತ್ತಲೇ ಇಲ್ಲ’ ಎಂದು ಸ್ಥಳೀಯ ರೈತರು ಆರೋಪಿಸಿದರು.

ಜಿಲ್ಲೆಯ ನಂಜನಗೂಡಿನ ಬರಪೀಡಿತ ಭಾಗಗಳಿಗೆ ಭಾನುವಾರ ಭೇಟಿ ನೀಡಿದ ಬಿಜೆಪಿ ಮುಖಂಡರ ಜತೆಗೆ ರೈತರು ಸಮಸ್ಯೆ ಹಂಚಿಕೊಂಡರು.
ದೊಡ್ಡ ಕವಲಂದೆ ಹೋಬಳಿಯ ನೇರಳೆ ಗ್ರಾಮಕ್ಕೆ ಭೇಟಿ ನೀಡಿದ ಮುಖಂಡರಾದ ಎಸ್‌.ಸುರೇಶ್‌­ಕುಮಾರ್‌, ಸಿ.ಎಚ್‌.ವಿಜಯಶಂಕರ್‌, ಎಂ.ಶಿವಣ್ಣ, ಪ್ರತಾಪಸಿಂಹ, ತೇಜಸ್ವಿನಿ ರಮೇಶ್‌, ಬಿ.ಜೆ.ಪುಟ್ಟಸ್ವಾಮಿ ರೈತರ ಸಮಸ್ಯೆ ಆಲಿಸಿದರು. ಬರ ಪರಿಸ್ಥಿತಿ ಅಧ್ಯಯನ ನಡೆಸಿ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿ.ಎಚ್‌.ವಿಜಯಶಂಕರ್‌, ‘ಬರ ಪರಿಹಾರದ ವೈಜ್ಞಾನಿಕ ಅಧ್ಯಯನ ಆಗಬೇಕು. ರೈತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಸ್ಥಳೀಯ ಆಡಳಿತ ಚುರುಕುಗೊಳಿಸುವುದು. ರಾಜ್ಯ ಸರ್ಕಾರಕ್ಕೆ ವಸ್ತುನಿಷ್ಠ ಪರಿಸ್ಥಿತಿ ಮನದಟ್ಟು ಮಾಡಿಕೊಟ್ಟು, ರೈತರಿಗೆ ಆಗಿರುವ ಸಮಸ್ಯೆ ಪರಿಹಾರ ಆಗುವಂತೆ ನೋಡಿಕೊಳ್ಳುವುದು ಈ ಪ್ರವಾಸದ ಉದ್ದೇಶ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಬಿತ್ತನೆ ಆಗಿಲ್ಲ. ಬರಕ್ಕಾಗಿ ಸರ್ಕಾರದಿಂದ ಯಾವುದೇ ಕ್ರಮವಿಲ್ಲ. ಮೇವು ಬ್ಯಾಂಕ್‌ ಕೆಲಸ ಮಾಡುತ್ತಿಲ್ಲ. ದುಡಿಯುವ ಕೈಗಳಿಗೆ ಉದ್ಯೋಗ ಭರವಸೆ ಯೋಜನೆಗಳ ಕಾಮಗಾರಿ ಆರಂಭ­ವಾಗಿಲ್ಲ. ಗುಳೆ ಹೋಗುವವರನ್ನು ತಡೆಯುವ ಕ್ರಮ ಇಲ್ಲ. ಬೆಳೆಹಾನಿ ಪರಿಹಾರ ಇಲ್ಲ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಇಲ್ಲ. ಸರ್ಕಾರ ನಿದ್ರಿಸುತ್ತಿದ್ದು, ಬಡಿದೆಬ್ಬಿಸುವ ಕೆಲಸ ಮಾಡುತ್ತೇವೆ’ ಎಂದು ಹೇಳರು.

ಅನೇಕ ನಿಗಮಗಳು ಬರ ಪರಿಹಾರ ಕಾರ್ಯದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿವೆ.  ಅಂಬೇಡ್ಕರ್‌, ವಾಲ್ಮೀಕಿ, ಹಿಂದುಳಿದ ನಿಗಮಗಳು ಸವಲತ್ತುಗಳನ್ನು ಕೇವಲ ಕಾಂಗ್ರೆಸ್‌ ಬೆಂಬಲಿಗರಿಗೆ ನೀಡುತ್ತಿವೆ ಎಂದು ಆರೋಪಿಸಿದರು.

ನಂತರ, ತಂಡವು ದೊಡ್ಡ ಕವಲಂದೆಯ ಮೇವು ಸಂಗ್ರಹಣೆ ಗೋದಾಮು, ಸಮೀಪದ ಕೊಂಗೆರೆ ಹಾಗೂ ಚುಂಚಹಳ್ಳಿ ಕೆರೆಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿತು.

‘ನೋವಿಗೆ  ಸ್ಪಂದಿಸದ  ಸರ್ಕಾರ’
ಮೈಸೂರು: ಜಿಲ್ಲೆಯಾದ್ಯಂತ ಮುಂಗಾರು ವಿಫಲವಾಗಿ ಭೀಕರ ಬರಪರಿಸ್ಥಿತಿ ಇದ್ದರೂ, ರಾಜ್ಯ ಸರ್ಕಾರವು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ರೈತ ಮೋರ್ಚಾದ ಅಧ್ಯಕ್ಷ ಸಿ.ಎಚ್‌.ವಿಜಯಶಂಕರ್‌ ಆರೋಪಿಸಿದರು.

ಜಿಲ್ಲೆಯ ವಿವಿಧೆಡೆ ಬರ ಅಧ್ಯಯನ ತಂಡವು ಪರಿಶೀಲನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಂತ ಜಿಲ್ಲೆಯಲ್ಲೇ ಉದ್ಯೋಗ ಭರವಸೆ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಜಾನುವಾರುಗಳಿಗೆ ಮೇವಿನ ಕೊರತೆ ಇದ್ದರೂ ಗೋಶಾಲೆಗಳನ್ನು ತೆರೆದಿಲ್ಲ. ಇದರ ಪರಿಣಾಮವಾಗಿ ಗ್ರಾಮೀಣ ಭಾಗಗಳ ಜನರು ಪರಿತಪಿಸುತ್ತಿದ್ದಾರೆ. ಅವರಿಗೆ ಕೆಲಸ ಹುಡುಕಿಕೊಂಡು ಗುಳೇ ಹೋಗುವ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ಭೀಕರವಾಗಿದ್ದು, ಪರಿಹಾರಕ್ಕಾಗಿ ಯಾವುದೇ ಗಂಭೀರ ಚಿಂತನೆ ನಡೆಸಿಲ್ಲ ಎಂದು ಟೀಕಿಸಿದರು.

ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ಕೆ.ಎಸ್.ಈಶ್ವರಪ್ಪ ಅವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮೂಲಕ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಇವರ ನಡೆ ಹೀಗೇ ಮುಂದುವರಿದರೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸುವುದು ಕಷ್ಟವಾಗುತ್ತದೆ. ಈಶ್ವರಪ್ಪ ಅವರ ಕೂಡಲೇ ನಮ್ಮ ನಡವಳಿಕೆ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT