ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ನಿರ್ಮಾಣ

ಗವಿಮಠ ಜಾತ್ರಾ ಮಹೋತ್ಸವ: ಭಕ್ತ ಹಿತಚಿಂತನ ಸಭೆ; ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಶಯ
Last Updated 16 ಜನವರಿ 2017, 7:23 IST
ಅಕ್ಷರ ಗಾತ್ರ

ಕೊಪ್ಪಳ: ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ನಿರ್ಮಾಣ ಆಗದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ನಗರದ ಗವಿಮಠ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿನ ಕೈಲಾಸ ಮಂಟಪದಲ್ಲಿ ಭಾನುವಾರ ನಡೆದ ಭಕ್ತ ಹಿತಚಿಂತನ ಸಭೆಯಲ್ಲಿ ಅವರು ಮಾತನಾಡಿದರು.

ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬರುವವರನ್ನು ಹಾರ ಹಾಕಿ ಸ್ವಾಗತಿಸುವ ಸಮಾಜ ಇಂದಿನದ್ದು. ಇದನ್ನು ಬದಲಾಯಿಸದಿದ್ದರೆ ನಮಗೆ ಉಳಿಗಾಲ ಇಲ್ಲ. ಲೋಕಾಯುಕ್ತ ಸಂಸ್ಥೆಗೆ ಬರುವ ಮುನ್ನ ಕೂಪಮಂಡೂಕನಂತಿದ್ದೆ. ಎಲ್ಲರೂ ಸುಖವಾಗಿದ್ದಾರೆ ಎಂದೇ ಭಾವಿಸಿದ್ದೆ. ಆದರೆ, ಆ ಸಂಸ್ಥೆಗೆ ಬಂದ ಬಳಿಕ ಜನ ಸಾಮಾನ್ಯರು ನೋವುಣ್ಣುತ್ತಿರುವುದು, ವ್ಯವಸ್ಥೆಯಿಂದಲೇ ನಡೆಯುವ ಅನ್ಯಾಯಗಳನ್ನು ಕಂಡೆ.

ಇತ್ತೀಚೆಗೆ ನಡೆದ ಲೋಕಸಭಾ ಅಧಿವೇಶನದಲ್ಲಿ ಮೌಲ್ಯಯುತ ಚರ್ಚೆಯೇ ನಡೆಯಲಿಲ್ಲ. ಬರೇ ಗೊಂದಲಗಳಲ್ಲಿ ಕಾಲಹರಣ ನಡೆಯಿತು. ನ್ಯಾಯ ವ್ಯವಸ್ಥೆಯಲ್ಲೂ ವಿನಾಕಾರಣ ವಿಳಂಬವಾಗುತ್ತಿದೆ. ತೀರ್ಪು ಬರುವಾಗ ಕಕ್ಷಿದಾರ ಬದುಕಿರುತ್ತಾನೋ ಇಲ್ಲವೋ ಎಂಬುದು ಸಂಶಯ ಎಂದು ವಿಷಾದ ವ್ಯಕ್ತಪಡಿಸಿದರು.

ನಿಂಬಾಳದ ಜಡೆಯ ಶಾಂತಲಿಂಗ ಸ್ವಾಮೀಜಿ, ಬಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ಮೈನಳ್ಳಿ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ತಿಕೋಟಾ ವಿರಕ್ತಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಹುನ್ನೂರು ಬಸವಜ್ಞಾನ ಗುರುಕುಲದ ಈಶ್ವರ ಮಂಟೂರು ಇದ್ದರು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಇದ್ದರು.

ಮಾಧ್ಯಮಗಳ ಮೇಲೆ ಬೇಸರ: ಪ್ರಜಾಪ್ರಭುತ್ವದ ಮೌಲ್ಯ­ಗಳನ್ನು ಎತ್ತಿ ಹಿಡಿಯಬೇಕಾದ ನಾಲ್ಕನೇ ಅಂಗ ಎಂದು ಕರೆಸಿ­ಕೊಳ್ಳುವ ಮಾಧ್ಯಮವೂ ಹಾದಿ ತಪ್ಪಿದೆ. ದುಡ್ಡು ತೆಗೆದುಕೊಂಡು ಸುಳ್ಳು ಸುದ್ದಿ ಪ್ರಕಟಿಸುವ ಮಟ್ಟಕ್ಕೆ ಇಳಿದಿವೆ. ಹಾಗಾದರೆ ಮೌಲ್ಯಗಳು ಎಲ್ಲಿಹೋದವು ಎಂದು ಸಂತೋಷ್‌ ಹೆಗ್ಡೆ ಪ್ರಶ್ನಿಸಿದರು.

ಮೌಲ್ಯದ ಅರ್ಥ ಬದಲು: ಮೌಲ್ಯದ ಅರ್ಥ ರೂಪಾಯಿ ಆಣೆ ಆಗಿಬಿಟ್ಟಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ವೇತನ ಪಡೆಯುವ ವೈದ್ಯರೂ ದುರಾಸೆಗೆ ಬಿದ್ದಿದ್ದಾರೆ. ಜೀವ ಉಳಿಸಿ ಮೌಲ್ಯ ಪಡೆಯುವ ಅದ್ಭುತ ಅವಕಾಶ ಅವರಿಗಿದೆ. ಆದರೆ, ಅವರೂ ಹಾದಿ ತಪ್ಪಿದ್ದಾರೆ ಎಂದು ನ್ಯಾ.ಹೆಗ್ಡೆ ವಿಷಾದಿಸಿದರು.

‘ಲೋಕಾಯುಕ್ತದ ಒಂದು ಕೈಯಲ್ಲೂ ಸಮಾಜ ತಿದ್ದಲು ಸಾಧ್ಯ’
ಕೊಪ್ಪಳ: ಲೋಕಾಯುಕ್ತದ ಒಂದು ಕೈ ಹೋದರೂ ಚಿಂತಿಲ್ಲ. ಇನ್ನೊಂದು ಕೈಯಲ್ಲಿ ಸಮಾಜವನ್ನು ತಿದ್ದಲು ಸಾಧ್ಯವಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ್‌ ಹೆಗ್ಡೆ ಹೇಳಿದರು.

ನಗರದ ಗವಿಮಠದ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ನಡೆದ ಭಕ್ತ ಹಿತಚಿಂತನ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಬಜೆಟ್‌ಗಿಂತ ಹೆಚ್ಚಿನ ಹಣ ಕೆಲವೇ ಅಧಿಕಾರಸ್ಥರ ಕೈಯಲ್ಲಿದೆ. 1950ರಲ್ಲಿ ₹ 52 ಲಕ್ಷದ ಜೀಪು ಹಗರಣ ನಡೆಯಿತು.

ಮತ್ತೆ ಮತ್ತೆ ನಡೆದ ಹಗರಣಗಳಲ್ಲಿ ಅಂಕಿಗಳ ಮುಂದೆ ಸೊನ್ನೆಗಳು ಏರುತ್ತಲೇ ಹೋದವು. 2ಜಿ ತರಂಗಾಂತರ ಹಂಚಿಕೆಯಲ್ಲಿ ₹1.76 ಲಕ್ಷ ಕೋಟಿ ಹಗರಣ ನಡೆಯಿತು. ಭ್ರಷ್ಟಾಚಾರಿಗಳು ಕುಡಿಯುವ ನೀರಿಗಾಗಿ ಮೀಸಲಾದ ಹಣವನ್ನೂ ಬಿಡಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಣ್ಣಾ ಹಜಾರೆ ಅವರು ಜನ ಲೋಕಪಾಲದ ಕರಡು ಮಸೂದೆ ಯನ್ನು ಬರೆದು ಕಳುಹಿಸಿದಾಗ ಸಂಸದರೊಬ್ಬರು ಯಾರ್ರೀ ನೀವು ಎಂದು ಪ್ರಶ್ನಿಸಿದ್ದರು. ನಮ್ಮಿಂದ ಆಯ್ಕೆಯಾದ ಪ್ರತಿನಿಧಿಯೊಬ್ಬ ನಮ್ಮನ್ನೇ ಯಾರು ಎಂದು ಕೇಳುತ್ತಾನೆ. ನಾನು ಆತ್ಮಚರಿತ್ರೆ ಬರೆದಿಲ್ಲ.
ಒಂದು ವೇಳೆ ಬರೆದರೆ ಅದರ ಶೀರ್ಷಿಕೆ ‘ಪ್ರಜಾಪ್ರಭುತ್ವದಲ್ಲಿ ನಾನು ಯಾರು?’ ಎಂದು ಇಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಪೌರಕಾರ್ಮಿಕರ  ಶ್ರಮದ ಕಾಯಕ
ಕ್ಷಣಕ್ಷಣಕ್ಕೂ ಬೇಡಿಕೆ ಬರುತ್ತಿದ್ದದ್ದು ಪೌರಕಾರ್ಮಿಕರಿಗೆ. ಜಾತ್ರಾ ಮೈದಾನ, ವಸ್ತುಪ್ರದರ್ಶನ ಮಳಿಗೆಗಳು, ದಾಸೋಹ ಭವನ,                                   ರಸ್ತೆ, ಮಠದ ಆವರಣ ಇಲ್ಲೆಲ್ಲಾ ಎಷ್ಟೇ ಸ್ವಚ್ಛ ಮಾಡಿದರೂ ಮತ್ತೆ ಅಷ್ಟೇ ಪ್ರಮಾಣದ ಕಸ ಸಂಗ್ರಹವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT