ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಪಳಾದಲ್ಲಿ ಮೂಲ ಸೌಕರ್ಯ ಕೊರತೆ

Last Updated 17 ಜನವರಿ 2017, 6:15 IST
ಅಕ್ಷರ ಗಾತ್ರ

ಭಾಲ್ಕಿ: ಗ್ರಾಮದ ಬಹುತೇಕ ಕಡೆ ಹೊಲಸು ನೀರು ಹರಿದು ಹೋಗಲು ನಾಲೆ, ಸುಗಮ ಓಡಾಟಕ್ಕೆ ಉತ್ತಮ ರಸ್ತೆ ಇಲ್ಲದಿರುವುದರಿಂದ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಊರ ಸಮೀಪದ ರಸ್ತೆ ಇಕ್ಕೆಲ ಶೌಚದ ಜಾಗ­ವಾಗಿದ್ದು, ಜನರು ಸಾಂಕ್ರಾಮಿಕ ರೋದ ಭೀತಿಯಲ್ಲಿ ಬದುಕು ದೂಡುತ್ತಿದ್ದಾರೆ.

ಇದು ತಾಲ್ಲೂಕು ಕೇಂದ್ರದಿಂದ ಹತ್ತು ಕಿಲೋ ಮೀಟರ್‌ ದೂರದಲ್ಲಿರುವ ಹುಪಳಾ ಗ್ರಾಮದ ನೈಜ ಚಿತ್ರಣ. ಈ ಗ್ರಾಮ ಅಂಬೇಸಾಂಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಸುಮಾರು ಐದು ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಹಾಗಾಗಿ, ಗ್ರಾಮ ವಾಸಿಗಳು ಪ್ರತಿನಿತ್ಯ ಜನಪ್ರತಿನಿಧಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾರೆ.

ಊರಿನ ಬಹುತೇಕ ಓಣಿಗಳಲ್ಲಿ ಸಿ.ಸಿ ರಸ್ತೆ ನಿರ್ಮಿಸಿಲ್ಲ. ಕೆಲ ಕಡೆಗಳಲ್ಲಿ ಮಾತ್ರ ರಸ್ತೆ ನಿರ್ಮಿಸಲಾಗಿದೆ. ನಮ್ಮ ಮನೆಗಳಿಗೆ ತೆರಳಲು ಹರಸಾಹಸ ಪಡಬೇಕಾಗುತ್ತದೆ. ಹಗಲು ಹೊತ್ತಿನಲ್ಲಿ ಹೇಗಾದರೂ ನಡೆದುಕೊಂಡು ಹೋಗಬಹುದು. ಆದರೆ, ರಾತ್ರಿ ಸಮಯದಲ್ಲಿ ಹೋಗಲು ತುಂಬಾ ತೊಂದರೆಯಾಗುತ್ತದೆ.

ಅನೇಕ ಸಾರಿ ಮಕ್ಕಳು, ವೃದ್ಧರು ಕೆಸರಿನಲ್ಲಿ ಬಿದ್ದು ಸಣ್ಣಪುಟ್ಟ ಗಾಯಗಳನ್ನು ಮಾಡಿ­ಕೊಂಡಿದ್ದಾರೆ ಎನ್ನುತ್ತಾರೆ ತಾನಾಜಿ ಭಾಲ್ಕೆ.
ಮನೆ, ಚರಂಡಿಗಳ ಹೊಲಸು, ಮಳೆ ನೀರು ಹರಿದು ಹೋಗಲು ನಾಲೆಗಳೇ ಇಲ್ಲ. ಇದರಿಂದ ಚರಂಡಿ ನೀರು ಮನೆ, ಕೊಳವೆ ಬಾವಿ ಸುತ್ತ ಸಂಗ್ರಹವಾಗುತ್ತಿದೆ. ಹಾಗಾಗಿ, ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಡೆಂಗಿ, ಕಾಲರಾ, ಚಿಕುನ್‌ಗುನ್ಯಾ, ಮಲೇರಿಯಾ ಸೇರಿದಂತೆ ಇತರ ರೋಗಗಳ ಭೀತಿ ನಮ್ಮನ್ನು ಆವರಿಸಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಖಿಂಡಿ ಬಡಾವಣೆಯ ವಾಸಿಗಳು.

ಎಲ್ಲ ಸಮಸ್ಯೆಗಳು ಪಂಚಾಯಿತಿ ಅಧಿಕಾರಿ, ಜನ ಪ್ರತಿನಿಧಿಗಳ ಗಮನಕ್ಕಿ­ದ್ದರೂ ಎಲ್ಲೆಡೆ ರಸ್ತೆ, ನಾಲೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಕನಿಷ್ಠ ಪಕ್ಷ ಹೊಲಸು ಇರುವ ಕಡೆಗಳಲ್ಲಿ ಆಗಾಗ್ಗೆ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಲು ಮುಂದಾಗುತ್ತಿಲ್ಲ ಎಂದೂ ಜನರು ದೂರುತ್ತಾರೆ.

ಶೌಚಾಲಯ ಸಮಸ್ಯೆ: ಗ್ರಾಮದಲ್ಲಿ ಸಾರ್ವ­ಜನಿಕ ಶೌಚಾಲಯ ಇಲ್ಲ. ಮನೆ­ಗೊಂದು ಶೌಚಾಲಯ ನಿರ್ಮಾಣಕ್ಕೂ ಉತ್ತೇಜನ ನೀಡಿಲ್ಲ. ಗ್ರಾಮಸ್ಥರು ಬಯಲಿ­ನಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಗಂಡಸರು ಹೇಗಾದರೂ ಮಾಡಬಹುದು. ಹೆಣ್ಣು ಮಕ್ಕಳ ಕಷ್ಟ ಹೇಳತೀರದಂತಾಗಿದೆ ಎನ್ನುವುದು ಹೆಣ್ಣು ಮಕ್ಕಳ ಅಳಲು.

*
ಎರಡ್ಮೂರು ವರ್ಷಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸುಣ್ಣಬಣ್ಣ ಕಂಡಿಲ್ಲ. ಎರಡು ಕೋಣೆಗಳು ಬಿರುಕು ಬಿಟ್ಟಿವೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾಗಿ ಬೇಕಾಗಿರುವ ಆಟದ ಮೈದಾನ ಇಲ್ಲ. ಶಾಲೆಗೆ ಕಾಂಪೌಂಡ್‌ ಇರದಿರುವುದರಿಂದ ನಾಯಿ, ದನಗಳ ಉಪಟಳ ಹೆಚ್ಚಾಗಿದೆ ಎನ್ನುತ್ತಾರೆ ಪಾಲಕರು.
–ಬಸವರಾಜ್‌ ಎಸ್‌.ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT