ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಕ್ಕೀಡಾದ ಮಹಿಳೆಗೆ ಸಾಂತ್ವನ

ಮಹಿಳಾ, ಮಕ್ಕಳ ದೌರ್ಜನ್ಯ ತಡೆ ಸಮಿತಿ ಭೇಟಿ
Last Updated 17 ಜನವರಿ 2017, 9:19 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಐ ಉಮೇಶ್‌ನಿಂದ ಅತ್ಯಾಚಾರಕ್ಕೀಡಾದ ಮಹಿಳೆ ಹಾಗೂ ಅವರ ಕುಟುಂಬ ವರ್ಗದವರನ್ನು ಸೋಮವಾರ ರಾಜ್ಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಭೇಟಿ ಮಾಡಿ ಸಾಂತ್ವನ ಹೇಳಿದರು.
ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್,  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಡಿಎಸ್ಪಿ ಚಿದಾನಂದಸ್ವಾಮಿ ಅವರಿಂದ ಮಾಹಿತಿ ಪಡೆದರು.

ಭೇಟಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ, ‘ಅತ್ಯಾಚಾರಕ್ಕೀಡಾದ ಮಹಿಳೆಗೆ ಮೊದಲು ಚಿಕಿತ್ಸೆ ನೀಡಿದ ವೈದ್ಯರಿಂದಲೂ ಮಾಹಿತಿ ಪಡೆಯಲಾಗಿದೆ’ ಎಂದು ಹೇಳಿದರು.

‘ಪೊಲೀಸರು ತಕ್ಷಣ ಆರೋಪಿ ವಶಕ್ಕೆ ಪಡೆದು ಕ್ರಮ ಜರುಗಿಸಿದ್ದಾರೆ. ಅಷ್ಟೇ ವೇಗದಲ್ಲಿ ಕಾನೂನು ಪರಿಧಿಯಲ್ಲಿ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು. ಆರೋಪಿ ಹಿನ್ನೆಲೆಯ ಬಗ್ಗೆಯೂ ಪರಿಪೂರ್ಣ ತನಿಖೆ ಮಾಡಬೇಕು ಎಂದು ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಸ್ಥೈರ್ಯ ನಿಧಿಯಿಂದ ಸಂತ್ರಸ್ತ ಮಹಿಳೆಗೆ ಈಗಾಗಲೇ ಜಿಲ್ಲಾಧಿಕಾರಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ₹ 25 ಸಾವಿರ ನೀಡಿದ್ದಾರೆ. ಸರ್ಕಾರದಿಂದ ಇನ್ನೂ ₹ 3 ಲಕ್ಷ ಪರಿಹಾರ ಒದಗಿಸಲು ಅವಕಾಶವಿದೆ. ಅದನ್ನು ಒದಗಿಸಿಕೊಡಲು ಸೂಚಿಸಲಾಗಿದೆ’ ಎಂದರು.

‘ಇದೊಂದು ಬೇಲಿಯೇ ಎದ್ದು ಹೊಲ ಮೇಯ್ದಂತಹ ಘಟನೆಯಾಗಿದೆ. ಸಂತ್ರಸ್ತೆ ಮಾನಸಿಕ ಅಸ್ವಸ್ಥೆಯಾಗಿದ್ದು, ರಕ್ಷಣೆ ಕೊಡುವುದಾಗಿ ಹೇಳಿ ಅತ್ಯಾಚಾರ ನಡೆಸಿರುವುದನ್ನು ನಾಗರಿಕ ಸಮಾಜ ಖಂಡಿಸುತ್ತದೆ’ ಎಂದರು.

‘ಮಹಿಳೆ,ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಇನ್ನೂ ಪರಿಣಾಮಕಾರಿ ರೀತಿ ಜಾಗೃತಿ ಕಾರ್ಯಕ್ರಮಗಳು ಆಗಬೇಕು. ಇಂತಹ ಕೃತ್ಯಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಆಗುತ್ತಿಲ್ಲ. ದೇಶವ್ಯಾಪಿ ಆಗುತ್ತಿವೆ. ಇಂತಹ ಕೃತ್ಯ ನಡೆಸಿದವರ ಪೈಕಿ ಕೇವಲ 2.8ರಷ್ಟು ಮಂದಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಮತ್ತು ನ್ಯಾಯಾಲಯಗಳೂ ಗಂಭೀರ ಚಿಂತನೆ ನಡೆಸಬೇಕಾಗಿದೆ’ ಎಂದು ಹೇಳಿದರು.

ಸಮಿತಿ ಸದಸ್ಯರಾದ ಮೋಟಮ್ಮ,  ಶರಣಪ್ಪ ಮಟ್ಟೂರು, ಪ್ರಫುಲ್ಲಾ ಮಧುಕರ್, ವಿಮಲಾ, ಲೀಲಾ ಸಂಪಿಗೆ, ಪ್ರಭಾ ಇದ್ದರು.
ಜಿಲ್ಲಾಧಿಕಾರಿ ಭೇಟಿ: ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮತ್ತು ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ‘ತಜ್ಞ ವೈದ್ಯರಿಂದ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೀರ್ಘಾವಧಿಯಲ್ಲಿ ಸಂತ್ರಸ್ತೆಯ ಬದುಕಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸರ್ಕಾರ ಪರಿಹಾರ ಕ್ರಮ ಕೈಗೊಳ್ಳಲಿದೆ’ ಎಂದರು.

‘ಇಂತಹ ಕೃತ್ಯಗಳು ಎಲ್ಲೂ ನಡೆಯಬಾರದು. ಪೊಲೀಸ್ ವರಿಷ್ಠಾಧಿಕಾರಿ ತಕ್ಷಣ ಕ್ರಮ ಜರುಗಿಸಿದ್ದಾರೆ’ ಎಂದು ಹೇಳಿದರು.
ಸಂಜೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಗೆ ಸಾಂತ್ವನ ಹೇಳಿ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT