ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಕೊಪ್ಪದಲ್ಲಿ ಬಿಗಡಾಯಿಸಿದ ನೀರಿನ ಸಮಸ್ಯೆ

Last Updated 18 ಜನವರಿ 2017, 5:05 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಕೊಪ್ಪದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಶುದ್ಧ ನೀರಿನ ಅಲಭ್ಯತೆಯಿಂದ ಶಾಲೆಯಲ್ಲಿ ಬಿಸಿಯೂಟ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಹಳ್ಳಿಕೊಪ್ಪ ಗ್ರಾಮಸ್ಥರು ಮಂಗಳವಾರ ಉಪವಿಭಾಗಾಅಧಿಕಾರಿಗೆ ಮನವಿ ಸಲ್ಲಿಸಿದರು.
50 ಮನೆಗಳಿರುವ ಗ್ರಾಮದಲ್ಲಿ 300ರಷ್ಟು ಜನಸಂಖ್ಯೆಯಿದೆ. ಇಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 60 ಮಕ್ಕಳು ಓದುತ್ತಿದ್ದಾರೆ. ನಾಲ್ಕು ಸರ್ಕಾರಿ ಬಾವಿಗಳಿವೆ. ಆದರೆ ಬಹುತೇಕ ಎಲ್ಲ ಬಾವಿಗಳಲ್ಲಿ ನೀರು ತಳ ಕಂಡಿದೆ. ಶಾಲೆಯ ಬಾವಿಯ ನೀರು ಸೇದಿದರೆ ಮಣ್ಣು ನೀರು ಬರುತ್ತದೆ. ಹೀಗಾಗಿ ಬಿಸಿಯೂಟ ತಯಾರಕರು ಅಡುಗೆ ಮಾಡುವುದನ್ನು ನಿಲ್ಲಿಸುವುದಾಗಿ ಹೇಳುತ್ತಿದ್ದಾರೆ ಎಂದು ಸ್ಥಳೀಯ ಅನಿಲ್ ನಾಯ್ಕ ಹೇಳಿದರು.

ಊರಿನಿಂದ ಸ್ವಲ್ಪ ದೂರದಲ್ಲಿರುವ ಬಾವಿಯಿಂದ ಜನರು ಪ್ರತಿದಿನ ಕುಡಿಯುವ ನೀರು ತರುತ್ತಾರೆ. ಕೆಲವು ಕೊಡ ನೀರು ಸೇದಿದ ನಂತರ ನೀರು ರಾಡಿಯಾಗಿ ಕುಡಿಯಲು ಬರುವುದಿಲ್ಲ. ಎರಡು ವರ್ಷಗಳಿಂದ ಸತತ ಬರ ಎದುರಿಸಿದ ಪರಿಣಾಮ ಬಾವಿಗಳು ಬತ್ತಿ ಹೋಗಿವೆ. ಜನ, ಜಾನುವಾರಿಗೆ ನೀರಿಲ್ಲದಂತಾಗಿದೆ ಎಂದು ಸ್ಥಳೀಯ ಮಹಿಳೆ ಶಾರದಾ ಹೇಳಿದರು.

‘ಕಳೆದ ವರ್ಷ ಬೇಸಿಗೆಯಲ್ಲಿ ಹಳ್ಳಿಕೊಪ್ಪಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜಾಗಿತ್ತು. ಇದನ್ನು ಗಮನಿಸಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೊಳವೆಬಾವಿ, ಪೈಪ್‌ಲೈನ್ ನಿರ್ಮಾಣಕ್ಕೆ ₹3.5 ಲಕ್ಷದ ಕಾಮಗಾರಿ ಮಂಜೂರು ಆಗಿತ್ತು. ಡಿಸೆಂಬರ್‌ನಲ್ಲಿ ಭೂಗರ್ಭಶಾಸ್ತ್ರಜ್ಞರು ಕೊಳವೆಬಾವಿಯ ಸ್ಥಳ ಗುರುತಿಸಿ ಹೋಗಿದ್ದರೂ ಇನ್ನೂವರೆಗೆ ಕಾಮಗಾರಿ ಆರಂಭವಾಗಿಲ್ಲ. ಗ್ರಾಮ ಪಂಚಾಯ್ತಿ ಮೂಲಕ ಇಲಾಖೆಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ.

ಎಲ್ಲ ಅಂಶಗಳನ್ನು ಪರಿಗಣಿಸಿ ಹಳ್ಳಿಕೊಪ್ಪದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಜನರ ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಅವರು ‘ಬುಧವಾರ (ಜ.18) ಸಂಬಂಧಪಟ್ಟ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ನೀರಿನ ಸಮಸ್ಯೆ ನಿವಾರಣೆಗೆ ಊರವರು ಮಳೆನೀರು ಸಂಗ್ರಹ, ಇಂಗಿಸುವಿಕೆ ಕಾರ್ಯವನ್ನು ವ್ಯಾಪಕವಾಗಿ ನಡೆಸಬೇಕು’ ಎಂದು ಹೇಳಿದರು.
ಗ್ರಾಮಸ್ಥರಾದ ಸಾವಿತ್ರಿ ವಿ, ಸಂತೋಷ ನಾಯ್ಕ, ಆನಂದ ನಾಯ್ಕ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT