ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡು ಕೊಟ್ರು ಖರ್ಚಾಗಿಲ್ಲ, ಏನ್‌ ಕೆಲ್ಸಾ ಮಾಡ್ತೀರಿ

ಸಣ್ಣ ನೀರಾವರಿ ಇಲಾಖೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ
Last Updated 18 ಜನವರಿ 2017, 5:58 IST
ಅಕ್ಷರ ಗಾತ್ರ

ಬೀದರ್: ರಾಜ್ಯ ಸರ್ಕಾರ ಸೆಪ್ಟೆಂಬರ್‌ನಲ್ಲಿ ಬೀದರ್ ಜಿಲ್ಲೆಗೆ ಯೋಜನೇತರ ಅನುದಾನವಾಗಿ ನಾಲ್ಕು ಕೋಟಿ  ಬಿಡುಗಡೆ ಮಾಡಿದೆ. ಜನವರಿ ಮುಗಿಯುತ್ತ ಬಂತು. ದುಡ್ಡು ಕೊಟ್ರು ಖರ್ಚಾಗಿಲ್ಲ, ನೀವು ಏನ್‌ ಕೆಲ್ಸಾ ಮಾಡ್ತೀರಿ ಎಂದು ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಣ್ಣ ನೀರಾವರಿ ಇಲಾಖೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ಕಾಲಮಿತಿಯಲ್ಲಿ ಸಣ್ಣ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಎರಡು ತಿಂಗಳಲ್ಲಿ ಹಣ ಖರ್ಚು ಮಾಡದಿದ್ದರೆ ಅದು ಮರಳಿ ಹೋಗಲಿದೆ. ಜನರ ಬೇಕು ಬೇಡಿಕೆಗಳನ್ನು ಅರಿತು ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ನಿರ್ವಹಣೆ ವೆಚ್ಚ ಮತ್ತಿತರ ಕಾರ್ಯಗಳಿಗೆ ಸರ್ಕಾರ ₹ 4 ಕೋಟಿ ಕೊಟ್ಟರೂ ಬಳಸದಿದ್ದರೆ ಹೇಗೆ. ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ ತಕ್ಷಣ ಈ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಹಣ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಣ್ಣ ನೀರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಸೂರ್ಯಕಾಂತ ಕಲ್ಯಾಣ, ಖಾನಾಪುರ ಹಾಗೂ ಚಾಂಬೋಳದ ಏತ ನೀರಾವರಿ ಯೋಜನೆಗಳು ಬೇಡಿಕೆ ಇಲ್ಲದ ಕಾರಣ ನಿಷ್ಕ್ರೀಯಗೊಂಡಿವೆ ಎಂದು ಸ ಭೆಗೆ ಮಾಹಿತಿ ನೀಡಿದಾಗ ಕೆರಳಿದ ಸಚಿವರು ‘ಬೇಡಿಕೆ ಇಲ್ಲ  ಅಂದರೆ ಏನ್ರಿ’ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.

₹ 45 ಕೋಟಿ ಬಾಕಿ: ಜಿಲ್ಲೆಯಲ್ಲಿ 73 ಕೆರೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಲಾಗಿದೆ. ಪರಿಹಾರವಾಗಿ ರೈತರಿಗೆ ₹ 45 ಕೋಟಿ ಕೊಡಬೇಕಿದೆ. ಕೇಂದ್ರ ಸರ್ಕಾರ ಹೊಸ ಕಾಯ್ದೆ ರೂಪಿಸಿದ ನಂತರ ಪರಿಹಾರ ಮೊತ್ತವನ್ನು ಪರಿಷ್ಕರಣೆ ಮಾಡಿ ಮುಖ್ಯ ಎಂಜಿನಿಯರ್‌ ಮೂಲಕ ಸಂಬಂಧಪಟ್ಟವರಿಗೆ ಪರಿಹಾರ ಪಾವತಿಸಲಾಗುವುದು ಎಂದು ಸಚಿವ ಜಯಚಂದ್ರ ತಿಳಿಸಿದರು.

ಜಿಲ್ಲೆಯಲ್ಲಿ 11 ಕೆರೆಗಳ 438 ಹೆಕ್ಟೇರ್‌ ಪ್ರದೇಶದ ಪೈಕಿ 71.25 ಹೆಕ್ಟೇರ್‌ ಪ್ರದೇಶ ಒತ್ತುವರಿಯಾಗಿದೆ. ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಿ ಗಡಿ ಗುರುತು ಮಾಡುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ನಾಲ್ಕು ಕೆರೆಗಳು ಒಡೆದಿವೆ. ಕೆರೆಗಳ ಪುನರ್‌ ನಿರ್ಮಾಣಕ್ಕೆ ಅಂದಾಜು ₹ 5.60 ಕೋಟಿ ಅಗತ್ಯವಿದೆ. ಆಲೂರ–ಬೇಲೂರ ಕೆರೆ ದುರಸ್ತಿಗೆ ₹ 40 ಲಕ್ಷ ಅಗತ್ಯವಿದ್ದು, ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ, ಹೆಚ್ಚಿನ ಹಣ ಒದಗಿಸಿದರೆ ಕೆರೆಗಳ ಪುನರ್‌ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ₹194 ಕೋಟಿ ಬೆಳೆ ನಷ್ಟವಾಗಿದೆ. ರಾಜ್ಯ ಸರ್ಕಾರ ₹ 27 ಕೋಟಿ ಬಿಡುಗಡೆ ಮಾಡಿದೆ. ರೈತರಿಗೆ ತಾಂತ್ರಿಕ ಕಾರಣಗಳಿಂದಾಗಿ ಪರಿಹಾರ ಮೊತ್ತ ಪಾವತಿಸಿಲ್ಲ.  ಕೇಂದ್ರ ಸರ್ಕಾರ ಹಣ  ಬಿಡುಗಡೆ ಮಾಡಿದ ತಕ್ಷಣ ರೈತರಿಗೆ ಪರಿಹಾರ ಹಣ ವಿತರಿಸಲಾಗುವುದು ಎಂದರು.

₹ 1 ಕೋಟಿ ವಿದ್ಯುತ್‌ ಬಿಲ್‌ ಬಾಕಿ
ಬೀದರ್‌:
ಸೋನಾಳ–ಹೊರಂಡಿ ಬ್ಯಾರೇಜ್‌ ಯೋಜನೆಯ ಒಂದು ಕೋಟಿ ರೂಪಾಯಿ ವಿದ್ಯುತ್‌ ಬಿಲ್‌ ಬಾಕಿ ಪಾವತಿಸಬೇಕಿದೆ. ಎರಡು ಸಾವಿರ ಎಕರೆ ಪ್ರದೇಶದ ರೈತರು ಈ ಯೋಜನೆಯಿಂದ ನೀರು ಬಳಸಬಹುದಾಗಿದೆ. ಡಿಸೆಂಬರ್‌ ವರೆಗೂ ಇಲ್ಲಿ ನೀರು ಲಭ್ಯವಿರುತ್ತದೆ. ಜನವರಿಯಲ್ಲಿ ನೀರು ಬತ್ತುತ್ತದೆ. ಪ್ರಸಕ್ತ ವರ್ಷ ಮಳೆ ಚೆನ್ನಾಗಿ ಬಂದಿರುವ ಕಾರಣ ಈಗಲೂ ನೀರು ಇದೆ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸೂರ್ಯಕಾಂತ ಕಲ್ಯಾಣ ತಿಳಿಸಿದರು.

ಯೋಜನೆ ಪೂರ್ಣಗೊಳಿಸಲು ಸೂಚನೆ

2016–2017ನೇ ಸಾಲಿನಲ್ಲಿ ಹೊಸ ಯೋಜನೆಗಳನ್ನು ರೂಪಿಸಿ ಒಪ್ಪಿಗೆ ಪಡೆಯಬೇಕು. ಮಾರ್ಚ್‌ ಒಳಗೆ ಕಾಮಗಾರಿ ಆರಂಭಿಸಬೇಕು. ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಟೆಂಡರ್‌ನಲ್ಲಿ ಕಡಿಮೆ ದರ ನಿಗದಿಪಡಿಸಿ ಕಾಮಗಾರಿಯ ಗುಣಮಟ್ಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ಟಿ.ಬಿ ಜಯಚಂದ್ರ ಸೂಚನೆ ನೀಡಿದರು.

ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಶಿಂದೆ, ಜಿಲ್ಲಾ ಪಂಚಾಯಿತಿ ಸಿಇಒ ಆರ್. ಸೆಲ್ವಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಷಣ್ಮುಖ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT