ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನ ಪುಷ್ಪ ಬೆಳೆಗಾರರು ತೀವ್ರ ಸಂಕಷ್ಟದಲ್ಲಿ

‘ಬಟನ್‌ ರೋಸ್‌’ ರೋಗ, ಗಿಡದಲ್ಲಿ ಒಣಗುತ್ತಿದೆ ಗುಲಾಬಿ ಹೂವು
Last Updated 18 ಜನವರಿ 2017, 6:25 IST
ಅಕ್ಷರ ಗಾತ್ರ

ದೇವನಹಳ್ಳಿ: ರೋಗಬಾಧೆಯಿಂದ ಗಿಡದಲ್ಲೇ ಒಣಗುತ್ತಿರುವ ಗುಲಾಬಿ ಹೂವುಗಳು ಕಿತ್ತು ತಂದು ಒಂದೆಡೆ ಸುರಿದು ಸುಡುವುದಕ್ಕೆ ಸಿದ್ಧತೆ, ಪರ್ಯಾಯ ಕೃಷಿ ಕಂಡುಕೊಂಡ ಬೆಳೆಗಾರನಿಗೆ ಎದುರಾಗುತ್ತಿದೆ ರೋದನ. ಇದು ತಾಲ್ಲೂಕಿನಾದ್ಯಂತ ಗುಲಾಬಿ ಬೆಳೆಗಾರನಿಗೆ ಎದುರಾಗಿರುವ ಸಂಕಷ್ಟ.

ದೇವನಹಳ್ಳಿ ತಾಲ್ಲೂಕು ಮೂರು ವರ್ಷದಿಂದ ನಿರಂತರ ಬರಗಾಲದಿಂದ ತತ್ತರಿಸಿದೆ. ಕೊಳವೆ ಬಾವಿಯಲ್ಲಿನ  ಅಲ್ಪ ಸ್ವಲ್ಪ ನೀರನ್ನು ಜೋಪಾನವಾಗಿಸಿ ವಿವಿಧ ಬೆಳೆ ಬೆಳೆಯಲು ಮುಂದಾಗಿರುವ ರೈತರಿಗೆ ಆತಂಕದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಾಕ್ಷಿಯಾಗಿ 155 ಎಕರೆಯಲ್ಲಿ 626 ರೈತರು ಗುಲಾಬಿ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸಬಲರಾಗುವ ಕನಸು ಕಾಣುವ ಸಂದರ್ಭದಲ್ಲಿ ಪುಷ್ಪ ಬೆಳೆಗೆ ಬಂದಿರುವ ವಿವಿಧ ರೋಗಗಳು ಎದುರಾಗಿವೆ.
ಇವುಗಳನ್ನು ತಡೆಗಟ್ಟಲು ಸಾಧ್ಯವಾಗದೆ ಶುಭ ಕಾರ್ಯಗಳಿಗೆ ಉಪಯೋಗಿಸಬೇಕಾದ ಪುಷ್ಪಗಳನ್ನು ಸುಡುವ ಸ್ಥಿತಿ ನಿರ್ಮಾಣವಾಗಿದೆ.

ತೋಟಗಾರಿಕೆ ಇಲಾಖೆ ಮಾಹಿತಿಯಂತೆ ಪುಷ್ಪ ಸೇರಿದಂತೆ ಪ್ರತಿಯೊಂದು ತೋಟಗಾರಿಕಾ ಬೆಳೆಗಳು ಐದು ವರ್ಷಗಳಿಂದ ಶೇಕಡವಾರು ವಿಸ್ತೀರ್ಣ ಮತ್ತು ಉತ್ಪಾದನೆ ಇಳುವರಿಯಲ್ಲಿ ಗಣನೀಯವಾಗಿ ಇಳಿಮುಖವಾಗಿವೆ. ವಾಡಿಕೆ ಮಳೆ ಕೊರತೆ, ಅಂತರ್ಜಲ ಕುಸಿತ, ಉತ್ಪಾದನೆಗೆ ತಕ್ಕ ಬೆಲೆ ಇಲ್ಲದೆ ಇರುವುದು ಸೇರಿದಂತೆ ಅನೇಕ ಕಾರಣಗಳಿಂದ ಉತ್ಪಾದನೆ ಕಡಿಮೆಯಾಗುತ್ತಿದೆ.

ಜತೆಗೆ ರೈತರು ಬೆಳೆ ಬೆಳೆಯಲು ಮುಂದಾಗುತ್ತಿಲ್ಲ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ. ಪಾಲಿಹೌಸ್‌ನಲ್ಲಿ ಬೆಳೆಯಲಾಗುತ್ತಿರುವ ಪುಷ್ಪ ಹೊರತುಪಡಿಸಿ ಬಾಹ್ಯ ವಾತಾವರಣದಲ್ಲಿ ಬಹುತೇಕ ‘ಬಟನ್‌ ರೋಸ್‌’ ರೋಗ ತಗುಲಿದ್ದು ವಿವಿಧ ರೀತಿ ಔಷಧಿ ಸಿಂಪಡಿಸಿದರೂ ಅದು ಹತೋಟಿಗೆ ಬರುತ್ತಿಲ್ಲ. ಬುಡ ಸಮೇತ ಕಿತ್ತು ಹಾಕುವುದು ಸೂಕ್ತ. ಮಾರುಕಟ್ಟೆಯಲ್ಲಿ ಹತ್ತಾರು ಕೆ.ಜಿ ತೆಗೆದುಕೊಂಡು ಹೋದರೂ ಬಿಡಿಗಾಸಿಗೆ ಕೇಳುವವರಿಲ್ಲ. ರೋಗಬಾಧಿತ ಪುಷ್ಪಗಳನ್ನು ಯಾರು ಖರೀದಿಸುವುದಿಲ್ಲ ಎನ್ನುತ್ತಾರೆ ರೈತರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಬೆಳೆ ನಷ್ಟಪರಿಹಾರ ಬರಿ ಕೃಷಿ ಚಟುವಟಿಕೆಯಲ್ಲಿನ ಬೆಳೆಗೆ (ಉದಾ: ರಾಗಿ ಪ್ರತಿ ಗುಂಟೆಗೆ ₹ 65)  ಪರಿಹಾರ ಘೋಷಣೆ ಮಾಡಿದೆ. ತೋಟಗಾರಿಕಾ ಬೆಳೆಗಳಿಗೆ ಅತಿವೃಷ್ಟಿಗೆ ಸೀಮಿತಗೊಳಿಸಿದೆ. ಇಲ್ಲಿ ಕೊಳವೆ ಬಾವಿ ಕೊರೆಯಿಸಿ ಕೃಷಿ ಮಾಡಿ ಒಂದೆರಡು ತಿಂಗಳಲ್ಲಿ ಅಂತರ್ಜಲ ಬರಿದಾಗಿ ಬೆಳೆ ಒಣಗಿ ಹೋಗುತ್ತದೆ. ಹತ್ತಾರು ಲಕ್ಷ ಬಂಡವಾಳ ಹಾಕಿದ ರೈತರು ಚೇತರಿಕೆ ಕಾಣಲು ಎಷ್ಟು ವರ್ಷ ಬೇಕು.

ಇದಕ್ಕೆ ಸರ್ಕಾರ ಯಾವುದೇ ಪರಿಹಾರ ನೀಡಲ್ಲ. ನಸೀಬ್‌ ಗಟ್ಟಿ ಇದ್ದು ಬೆಳೆ ಬೆಳೆದರೂ ಉತ್ತಮ ಬೆಲೆ ಇರಲಿ ಕನಿಷ್ಠ ಬೆಲೆಯು ಸಿಗುವುದಿಲ್ಲ. ಪ್ರೋತ್ಸಾಹದಾಯಕ ಬೆಂಬಲ ಬೆಲೆಯು ಇಲ್ಲ ಎಂಬುದು ರೈತರ ಅಳಲು. ಕೇಂದ್ರ ಸರ್ಕಾರ ಭೀಮಾ ಫಸಲ್‌ ಯೋಜನೆಯಡಿ ಬೆರಳಣಿಕೆಯಷ್ಟೆ ಬೆಳೆಗಳಿಗೆ ಅವಕಾಶ ಮಾಡಿದೆ. ತೋಟಗಾರಿಕಾ ಪ್ರಮುಖ ಬೆಳೆಗಳನ್ನೇ ಹೊರಗಿಟ್ಟಿದೆ ಎಂಬುದು ರೈತರ ಅಳಲು.

*

ಯಾವ ಪುರುಷಾರ್ಥಕ್ಕೆ ಯೋಜನೆ ಮಾಡಬೇಕು. ಕೃಷಿ ಬೆಳೆಗಳಿಗೆ ಭೀಮಾ ಫಸಲ್‌ ಯೋಜನೆಯಡಿ ಒಂದು ನಯಾ ಪೈಸಾ ರೈತರ ಬ್ಯಾಂಕುಗಳ ಖಾತೆಗೆ ಬಂದಿಲ್ಲ , ಇವೆಲ್ಲ ನೀತಿಗೆಟ್ಟ ಸರ್ಕಾರಗಳು
- ಚಿಕ್ಕೇಗೌಡ, ಕೊಯಿರಾ ಗ್ರಾಮದ  ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT