ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ ಆ್ಯಪ್‌ ಕೇಂದ್ರ ಉದ್ಘಾಟನೆ

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡೇಟಾ ಸಂಗ್ರಹ ಸಾಫ್ಟ್‌ವೇರ್‌ ಕಂಪೆನಿ ‘ನೆಟ್‌ ಆ್ಯಪ್‌’ನ ವಿಶ್ವ ದರ್ಜೆಯ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಮುಖ್ಯಮಂತ್ರಿ
ಸಿದ್ದರಾಮಯ್ಯ ಬುಧವಾರ ಉದ್ಘಾಟಿಸಿದರು.

‘ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ವಹಿವಾಟಿಗೆ ಮುಕ್ತ ವಾತಾವರಣ ಕಲ್ಪಿಸಿದ ಕಾರಣ ಜಾಗತಿಕ ಕಂಪೆನಿಗಳು ಬೆಂಗಳೂರಿನಲ್ಲಿ  ಪೈಪೋಟಿ ಮೇಲೆ ಕೌಶಲ, ಸಂಶೋಧನೆ, ಅಭಿವೃದ್ಧಿ ಕೇಂದ್ರ ಸ್ಥಾಪಿಸುತ್ತಿವೆ’ ಎಂದರು.

‘ಬೆಂಗಳೂರಿನಲ್ಲಿ ಆರಂಭವಾಗಿರುವ ವಿಶ್ವದರ್ಜೆಯ ‘ನೆಟ್‌ ಆ್ಯಪ್‌’ ಡೇಟಾ ಸಂಗ್ರಹ ಕೇಂದ್ರ ‘ಹೈಬ್ರೀಡ್‌ ಕ್ಲೌಡ್‌’  ತಂತ್ರಜ್ಞಾನ ಯುಗದ ಮಾದರಿ ಕೇಂದ್ರ ವಾಗಲಿದೆ’ ಎಂದು ನೆಟ್‌ ಆ್ಯಪ್‌ ಅಧ್ಯಕ್ಷ ಹಾಗೂ ಸಿಇಒ ಜಾರ್ಜ್‌ ಕುರಿಯನ್‌ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರಾದ ಆರ್‌.ವಿ. ದೇಶಪಾಂಡೆ, ಕೆ. ಜೆ. ಜಾರ್ಜ್‌, ‘ನೆಟ್‌ ಆ್ಯಪ್‌’ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ದೀಪಕ್‌ ವಿಶ್ವೇಶ್ವರಯ್ಯ.  ಭಾರತ ಮತ್ತು ಸಾರ್ಕ್‌ ವಿಭಾಗದ ಅಧ್ಯಕ್ಷ ಅನಿಲ್‌ ವಲ್ಲೂರಿ ವೇದಿಕೆಯಲ್ಲಿದ್ದರು.

ವಿಶ್ವದರ್ಜೆಯ ಕೇಂದ್ರ: ವೈಟ್‌ಫೀಲ್ಡ್‌ನ ಹೂಡಿ ರಸ್ತೆಯಲ್ಲಿ 15 ಎಕರೆ ವಿಶಾಲ ಜಾಗದಲ್ಲಿ ಈ ಕೇಂದ್ರ ತಲೆ ಎತ್ತಿದೆ. 10 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ₹1 ಸಾವಿರ ಕೋಟಿ  ವೆಚ್ಚದ ಕಟ್ಟಡದಲ್ಲಿ 13 ಮಹಡಿಗಳಿವೆ.

ಸಂಶೋಧನಾ ಕೇಂದ್ರ ಸ್ಥಾಪಿಸುವ ಬಗ್ಗೆ ಸಂಸ್ಥೆಯು 2012ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಎರಡು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣ ಆರಂಭವಾಗಿತ್ತು.

ಸುಸಜ್ಜಿತ ಕಟ್ಟಡದಲ್ಲಿ ಸಿಬ್ಬಂದಿಗೆ ವಿಶ್ವ ದರ್ಜೆಯ ಸೌಲಭ್ಯ ಕಲ್ಪಿಸಲಾಗಿದೆ. ಅತ್ಯುತ್ತಮ ಕೆಲಸದ ವಾತಾವರಣ, ಮನೋರಂಜನೆ, ಥಿಯೇಟರ್‌, ಜಾಗತಿಕ ಅಭಿವೃದ್ಧಿ ಹಾಗೂ ವ್ಯಾಪಾರಿ ಕಾರ್ಯಾಚರಣೆ  ಮಾಹಿತಿ ಕೋಶ ಇಲ್ಲಿವೆ. ಈ ಕೇಂದ್ರದಲ್ಲಿ 2,000ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.

ದೇಶದ  ಆರ್ಥಿಕ ಬೆಳವಣಿಗೆ  ನಿರ್ಧರಿಸುವ  ಬೆಂಗಳೂರು!
‘ಮುಂದಿನ 15 ವರ್ಷಗಳಲ್ಲಿ ಬೆಂಗಳೂರು ದೇಶದ ಆರ್ಥಿಕತೆ ನಿರ್ಧರಿಸುವ ಮಟ್ಟಕ್ಕೆ ಬೆಳೆಯಲಿದೆ’ ಎಂದು ನೆಟ್‌ ಆ್ಯಪ್‌ ಅಧ್ಯಕ್ಷ ಜಾರ್ಜ್‌ ಕುರಿಯನ್‌ ಭವಿಷ್ಯ ನುಡಿದರು.

‘ಇದೇ ವೇಳೆ ಅಮೆರಿಕದ ಸಿಲಿಕಾನ್‌ ವ್ಯಾಲಿಯನ್ನು ಕೂಡ ಹಿಮ್ಮೆಟ್ಟಿಸಲಿದೆ.  ನಗದು ಆರ್ಥಿಕ ವ್ಯವಸ್ಥೆಯ ಬದಲು ಡಿಜಿಟಲ್‌ ಆರ್ಥಿಕ ಯುಗ ಆರಂಭವಾಗಲಿದ್ದು, ‘ಡೇಟಾ’, ಕರೆನ್ಸಿಯ ಪಾತ್ರ ವಹಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT