ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶಿಯ ಉಪಗ್ರಹಗಳ ಉಡಾವಣೆ’

Last Updated 18 ಜನವರಿ 2017, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-2 ನೌಕೆಯನ್ನು 2018ಕ್ಕೆ ಉಡಾವಣೆ ಮಾಡಲಾಗುತ್ತದೆ’ ಎಂದು ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿ ಅನಿಲ್‌ ಭಾರದ್ವಾಜ್‌ ತಿಳಿಸಿದರು.

ನ್ಯಾಷನಲ್‌ ಕಾಲೇಜಿನಲ್ಲಿ ಬೆಂಗಳೂರು ವಿಜ್ಞಾನ ಕೇಂದ್ರ ಗುರುವಾರ  ಹಮ್ಮಿಕೊಂಡಿದ್ದ ಬಾಹ್ಯಾಕಾಶ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಚಂದ್ರಯಾನ–2 ನೌಕೆ ಅನೇಕ ವೈವಿಧ್ಯಗಳಿಂದ ಕೂಡಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಚಂದ್ರನ ಧ್ರುವ ಪ್ರದೇಶದಲ್ಲಿ ಉಪಗ್ರಹವನ್ನು ಇಳಿಸಲು ಯೋಜಿಸಲಾಗಿದೆ’ ಎಂದರು.

2019ಕ್ಕೆ ಸೌರಯಾನ: ‘ಭೂಮಿಯ ಜತೆಗೆ ಸಮಾನಾಂತರವಾಗಿ ಚಲಿಸಿ ಸೂರ್ಯನಲ್ಲಿ ಆಗುತ್ತಿರುವ ಪ್ರಕ್ರಿಯೆಗಳ ಅಧ್ಯಯನಕ್ಕಾಗಿ ಆದಿತ್ಯ ಎಲ್‌ 1 ಉಪಗ್ರಹ ಸಿದ್ಧಗೊಳಿಸಲಾಗುತ್ತಿದ್ದು, 2019ಕ್ಕೆ ಉಡಾವಣೆ ಮಾಡಲು ಯೋಜಿಸಲಾಗಿದೆ’ ಎಂದು ವಿವರಿಸಿದರು.

‘2020ಕ್ಕೆ ಮಂಗಳಯಾನ–2 ಮತ್ತು  ಶುಕ್ರಯಾನ ಯೋಜಿಸಲಾಗಿದೆ. 26 ತಿಂಗಳ ನಂತರ ಮಂಗಳ ಗ್ರಹ ಭೂಮಿಗೆ ಹತ್ತಿರವಾಗುತ್ತದೆ ಮತ್ತು 18 ತಿಂಗಳ ನಂತರ ಶುಕ್ರ ಭೂಮಿಗೆ ಹತ್ತಿರವಾಗುತ್ತದೆ. ಹಾಗಾಗಿ ನಿರ್ದಿಷ್ಟ ಅವಧಿಯಲ್ಲಿ ಈ ಯೋಜನೆಗಳನ್ನು ಪೂರೈಸಬೇಕಿದೆ’ ಎಂದು ಹೇಳಿದರು.

ಮಂಗಳಯಾನ ಯಶಸ್ವಿ: ‘ಮಂಗಳಯಾನ’ (ಮಾರ್ಸ್‌ ಆರ್ಬಿಟರ್‌ ಮಿಷನ್‌– ಮಾಮ್‌) ನೌಕೆಯಲ್ಲಿ ಇನ್ನೂ ಇಂಧನ ಉಳಿದುಕೊಂಡಿದೆ. ನೌಕೆಯ ಇತರೆಲ್ಲ ವ್ಯವಸ್ಥೆಗಳು ಚೆನ್ನಾಗಿ ಕೆಲಸ ಮಾಡುತ್ತಿವೆ. ಹಾಗಾಗಿ ಅದು ಇನ್ನೂ ಆರು ತಿಂಗಳು ಕಾರ್ಯ ನಿರ್ವಹಿಸಲಿದೆ. ಇದರಿಂದ ಅಲ್ಲಿನ ನಾಲ್ಕೂ ಋತುಗಳ ಬಗ್ಗೆ ತಿಳಿಯಲು ಸಾಧ್ಯ’ ಎಂದರು. 

‘ಭೂಮಿ ಮತ್ತು ಮಂಗಳ ಗ್ರಹದಲ್ಲಿ ಅನೇಕ ವ್ಯತ್ಯಾಸಗಳಿವೆ. 365 ದಿನಕ್ಕೆ ಇಲ್ಲಿ ಒಂದು ವರ್ಷವಾದರೆ ಅಲ್ಲಿ 686 ದಿನಗಳು ಅಂದರೆ ಭೂಮಿಯಲ್ಲಿ ಎರಡು ವರ್ಷಕ್ಕೆ ಅಲ್ಲಿ ಒಂದು ವರ್ಷವಾಗುತ್ತದೆ.  ಮಂಗಳನಲ್ಲಿ ಸೂರ್ಯನ ಬೆಳಕು ಕಡಿಮೆ.  ಅಲ್ಲದೆ, ಅಲ್ಲಿ ಹೆಚ್ಚು ಇಂಗಾಲ ಆವರಿಸಿಕೊಂಡಿದೆ’ ಎಂದರು.

ಮತ್ತೊಂದು ಉಡ್ಡಯನ ವೇದಿಕೆ: ‘ಶ್ರೀಹರಿಕೋಟದಲ್ಲಿ  ಸದ್ಯ ಎರಡು ಉಡಾವಣೆ ವೇದಿಕೆಗಳಿದ್ದು, ಶೀಘ್ರದಲ್ಲಿ ಮತ್ತೊಂದು ವೇದಿಕೆಯನ್ನು ನಿರ್ಮಿಸಲಾಗುತ್ತದೆ. ಉಪಗ್ರಹಗಳ ಉಡಾವಣೆಗಳ  ಸಂಖ್ಯೆ ಏರಿಕೆಯಾಗುತ್ತಿದ್ದು, ವೇದಿಕೆಯ ಅಗತ್ಯ ಹೆಚ್ಚಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT